ಇದು ಎಲ್ಲವನ್ನೂ ಧರ್ಮದ ಪರಿಧಿಗೆ ತಂದು ನಿಲ್ಲಿಸಿ, ಅಪ್ಪಟ ಪೂರ್ವಾಗ್ರಹಪೀಡಿತ ಮನಃಸ್ಥಿತಿಯಿಂದ ವಿಶ್ಲೇಷಿಸುವ ಕಾಲ. ಅಂಥಾ ವ್ಯಾಧಿಯೀಗ ಯಾವ ಸೋಂಕೂ ಇಲ್ಲದ ಕಲಾ ಜಗತ್ತಿಗೂ ಹಬ್ಬಿಕೊಂಡಿದೆ. ಇಂಥಾ ಹೊತ್ತಿನಲ್ಲಿಯೂ ಬ್ರಾತೃತ್ವ, ಕೋಮು ಸಾಮರಸ್ಯಗಳೆಲ್ಲ ಯಥಾ ಪ್ರಕಾರವಾಗಿ ಚಾಲ್ತಿಯಲ್ಲಿದೆ ಎಂದರೆ, ಅದಕ್ಕೆ ಈ ಮಣ್ಣಿನ ಗುಣವೆನ್ನದೆ ಬೇರ್ಯಾವ ವಿಶೇಷಣಗಳೂ ಸಿಗಲು ಸಾಧ್ಯವಿಲ್ಲ. ಎಲ್ಲ ಧರ್ಮಗಳಲ್ಲಿಯೂ ಅರ್ಬುದದಂತೆ ಆವರಿಸಿಕೊಂಡಿರುವ ಮೂಲಭೂತವಾದದ ನಡುವಲ್ಲಿಯೂ ಇಲ್ಲಿ ಮನಸುಗಳು ಒಂದಾಗುತ್ತವೆ. ಇಷ್ಟೆಲ್ಲವನ್ನೂ ಯಾಕೆ ಹೇಳಬೇಕಾಯಿತೆಂದರೆ, ಬನಾರಸ್ ಚಿತ್ರದ ಹೀರೋ ಝೈದ್ ಖಾನ್ ಇಂದು ಮಹಾಲಯ ಅಮವಾಸ್ಯೆಯ ನಿಮಿತ್ತ ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಕಾಳಮ್ಮನ ಆಶೀರ್ವಾದ ಪಡೆದುಕೊಂಡಿದ್ದಾರೆ.
ಈಗಾಗಲೇ ಮಾಯಗಂಗೆ ಹಾಡಿನ ಮೂಲಕ ಬನಾರಸ್ ಎಲ್ಲ ಪ್ರೇಕ್ಷಕರನ್ನೂ ತಲುಪಿಕೊಂಡಿದೆ. ಆ ಮೂಲಕವೇ ಬನಾರಸ್ ಮಹತ್ತರವಾದುದೇನನ್ನೋ ತನ್ನೊಡಲಲ್ಲಿಟ್ಟುಕೊಂಡಿದೆ ಎಂಬ ಗಾಢ ಭರವಸೆಯೊಂದು ಸರ್ವರಲ್ಲಿಯೂ ಮೂಡಿಕೊಂಡಿದೆ. ಇಂದು ಏಕಾಏಕಿ ಝೈದ್ ಖಾನ್ ಬಂಡಿ ಮಹಕಾಳಮ್ಮನ ಸನ್ನಿಧಾನದಲ್ಲಿ ಕಾಣಿಸಿಕೊಂಡಾಗ, ಅಲ್ಲಿ ನೆರೆದಿದ್ದ ಭಕ್ತಗಣ ಥ್ರಿಲ್ ಆದ ಪರಿ, ಅವರೆಲ್ಲರೂ ಝದ್ ಬಳಿ ಬಂದು ಪ್ರೀತಿ ತೋರಿಸಿದ ರೀತಿಗಳೆಲ್ಲವೂ ನಿಜಕ್ಕೂ ಅಮೂರ್ತ ಘಳಿಗೆಯೊಂದನ್ನು ಆ ದೈವೀಕ ವಾತಾವರಣದಲ್ಲಿ ಪಡಿಮೂಡಿಸಿದಂತಿತ್ತು. ಹಾಗೆ ಘೈದ್ ಖಾನ್ರನ್ನು ಸುತ್ತುವರೆದ ಮಂದಿಯ ಮನಸೊಳಗೆ ಜಾತಿ ಧರ್ಮಗಳ ಕಿಸುರಿರಲಿಲ್ಲ; ಅಲ್ಲಿ ಅಪ್ಪಟ ಕಲಾವಿದನೊಬ್ಬನೆಡೆಗಿನ ತಟವಟಗಳಿಲ್ಲದ ಅಭಿಮಾನವಿತ್ತು. ಅದುವೇ ಬನಾರಸ್ ಈಗಾಗಲೇ ರೀಚ್ ಆಗಿರುವ ರೀತಿಗೂ ಸಾಕ್ಷಿಯೆಂದರೆ ತಪ್ಪೇನಿಲ್ಲ!
ಅಷ್ಟಕ್ಕೂ ಝೈದ್ ಖಾನ್ ಎಂಬ ನಡೆದು ಬಂದಿರುವ ರೀತಿಯೇ ಹಾಗಿದೆ. ತಂದೆ ರಾಜಕಾರಣಿಯಾಗಿದ್ದರೂ ಆ ಪ್ರಭೆಯಾಚೆಗಿನ ಆಸಕ್ತಿ ಮೈಗೂಡಿಸಿಕೊಂಡಿರುವ ಝೈದ್, ಎಲ್ಲರೊಂದಿಗೂ ಕಲೆತು ಬಾಳುವ ಸ್ನೇಹಮಯ ಗುಣದೊಂದಿಗೇ ಎಲ್ಲರ ಪ್ರೀತಿ ಸಂಪಾದಿಸಿಕೊಂಡಿದ್ದಾರೆ. ದುರಂತವೆಂದರೆ, ಯಾವಾಗ ಜಮೀರ್ ಅಹ್ಮದ್ ಖಾನ್ ಈದ್ಗಾ ಮೈದಾನದ ವಿಚಾರದಲ್ಲಿ ರಾಜಕೀಯ ನಡೆ ಆರಂಭಿಸಿದರೋ, ಆಗ ಅದರ ಪರಿಣಾಮ ಝೈದ್ ಖಾನ್ ಸುತ್ತ ಸುಳಿಯಲಾರಂಭಿಸಿತ್ತು. ಹಾಗೆ ಧರ್ಮಾಧಾರಿತವಾಗಿ ಹ್ಞೂಂಕರಿಸಲಾರಂಭಿಸಿದ್ದ ಒಂದು ವರ್ಗಕ್ಕೆ ಬನಾರಸ್ ಚಿತ್ರವೇ ಗುರಿಯಂತಾಗಿ ಹೋಗಿತ್ತು. ಅದರ ಭಾಗವಾಗಿಯೇ ಒಂದಷ್ಟು ಅಪಪ್ರಚಾರಗಳು ನಡೆದವು. ನವನಾಯಕ ಝೈದ್ರ ಪ್ರಥಮ ಹೆಜ್ಜೆಯನ್ನೇ ಅದುರಿಸುವಂಥಾ ಘಟನಾವಳಿಗಳೂ ನಡೆದವು. ಅದೆಲ್ಲವನ್ನೂ ಸಮಚಿತ್ತದಿಂದ ಎದುರಿಸುವ ಮೂಲಕ ಝೈದ್ ತಾನೆಂಥಾ ಪ್ರೌಢಿಮೆ ಹೊಂದಿರೋ ಕಲಾವಿದ ಎಂಬುದನ್ನು ಜಾಹೀರು ಮಾಡಿದ್ದರು.
ಈ ಹುಡುಗನಿಗೆ ತನ್ನ ಗುರಿ ಸ್ಪಷ್ಟವಿದೆ. ತನ್ನ ತಂದೆಯ ಕಾರಣದಿಂದ ಎದುರಾಗೋ ರಾಜಕೀಯ ಕೇಂದ್ರಿತ ಪ್ರತಿರೋಧವನ್ನು, ತನ್ನಿಷ್ಟದ ಕಲೆಯಿಂದ ಹೇಗೆ ಬೇರ್ಪಡಿಸಿಕೊಂಡು ಮುಂದುವರೆಯಬೇಕೆಂಬುದೂ ಸ್ಪಷ್ಟವಿದೆ. ಅದಿಲ್ಲದೇ ಹೋಗಿದ್ದರೆ ಈ ಹಿಂದೆ ಗಣೇಶೋತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದ ಕ್ಷಣದಲ್ಲೆದುರಾದ ಪ್ರಸಂಗಗಳನ್ನು ಅಷ್ಟೊಂದು ಸಮಚಿತ್ತದಿಂದ ದಾಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅತ್ತ ಝೈದ್ ಗಣೇಶನ ಮುಂದೆ ಕೈ ಮುಗಿದು ನಿಂತರೆ, ಇತ್ತ ಕೆಲ ಧರ್ಮರಕ್ಷಕರ ಬುಡ ಭಗಭಗಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಅದು ಹೊಗೆಯಾಡಲಾರಂಭಿಸಿತ್ತು. ಅದ್ಯಾವುದರತ್ತಲೂ ಲಕ್ಷ್ಯ ಹರಿಸದ ಝೈದ್ ತಮ್ಮ ಪಾಡಿಗೆ ತಾವಿದ್ದರು. ಇದೀಗ ಬಂಡಿ ಮಹಕಾಳಮ್ಮನ ಸನ್ನಿಧಿಯಲ್ಲಿ ಕೈ ಮುಗಿದು ನಿಲ್ಲುವ ಮೂಲಕ, ಇದು ತಮ್ಮ ಬದುಕಿನ ಸಹಜ ನಡವಳಿಕೆ ಎಂಬ ಸಂದೇಶವನ್ನವರು ಸ್ಪಷ್ಟವಾಗಿಯೇ ದಾಟಿಸಿದ್ದಾರೆ.
ರಾಜಕೀಯ, ಅಜೆಂಡಾಪ್ರಣೀತ ಮನಸುಗಳು ಅದೇನೇ ಒದರಬಹುದು; ಈ ನೆಲದ ಮೂಲ ಗುಣಗಳನ್ನು ಎಂದಿಗೂ ಮುಕ್ಕಾಗಿಸಲಾಗುವುದಿಲ್ಲ. ಬಂಡಿ ಮಹಕಾಳಮ್ಮನ ಸನ್ನಿಧಾನದಲ್ಲಿ ನೆರೆದ ಮಂದಿ ಝೈದ್ರನ್ನು ನೋಡುತ್ತಲೇ ಅತ್ತ ಧಾವಿಸಿ ಬಂದರಲ್ಲಾ? ಆ ಎಲ್ಲ ಮನಸುಗಳಲ್ಲಿದ್ದದ್ದು ಅಭಿಮಾನದ ಪಸೆ ಮಾತ್ರ. ಅದರ ಮುಂದೆ ಜಾತಿ, ಧರ್ಮಗಳೆಲ್ಲವೂ ಗೌಣ. ಹೀಗೆ ಅತ್ಯಂತ ಮಾಗಿದ ಮನಃಸ್ಥಿತಿಯಿಂದ ಮುಂದುವರೆಯುತ್ತಿರುವ ಬನಾರಸ್ ಹೀರೋ ಝೈದ್ ಖಾನ್ ಎಲ್ಲರ ಮನಸೆಳೆದಿದ್ದಾರೆ. ಇನ್ನೇನು ನಾಳೆ ಬನಾರಸ್ನ ಟ್ರೈಲರ್ ಲಾಂಚ್ ಆಗಲಿದೆ. ಇದೇ ನವೆಂಬರ್ ನಾಲಕ್ಕರಂದು ಝೈದ್ ಪ್ಯಾನಿಂಡಿಯಾ ಮಟ್ಟದಲ್ಲಿ ಹೀರೋ ಆಗಿ ಲಠಾಂಚ್ ಆಗಲಿದ್ದಾರೆ. ಪ್ರಧಾನವಾಗಿ ಅವರ ಹಿಂದೆ ಖಂಡಿತವಾಗಿಯೂ ಎಲ್ಲ ಜನಸಮುದಾಯದ ಪ್ರೀತಿ, ಮಹಾಕಾಳಮ್ಮನ ಆಶೀರ್ವಾದವೂ ಇದ್ದೇ ಇರುತ್ತದೆ. ಬನಾರಸ್ ಹೀರೋ ಗೆಲ್ಲೋದಕ್ಕೆ ಬೇರಿನ್ನೇನು ಬೇಕು?