ನಮ್ಮಲ್ಲಿನ ನಂಬಿಕೆಗಳೇ ಅಸಂಗತವಾದವುಗಳು. ಕುಂತರೆ, ನಿಂತರ, ಕೆಮ್ಮಿದರೆ, ಕಣ್ಣು ರೆಪ್ಪೆ ಹೊಡೆದುಕೊಂಡರೆ, ನರಗಳು ಬಡಿದುಕೊಂಡರೂ ಅದಕ್ಕೆ ಒಂದೊಂದು ಶಕುನಗಳಿದ್ದಾವೆ. ಎಡಗಣ್ಣು ಅದುರಿದರೆ ಏನಾಗುತ್ತೆ? ಬಲಗಣ್ಣು ಅದುರಿದರೆ ಯಾವ್ಯಾವ ಫಲಾಫಲಗಳು ಸಿಗುತ್ತವೆ ಎಂಬಲ್ಲಿಯವರೆಗೆ ಎಲ್ಲದಕ್ಕೂ ಒಂದಷ್ಟು ವಿವರಣೆಗಳಿದ್ದಾವೆ. ಅವುಗಳಲ್ಲಿ ಒಂದಷ್ಟು ಸಿಲ್ಲಿಯಾಗಿ, ಮತ್ತೊಂದಷ್ಟು ಮೂರ್ಖತನದ ಪರಮಾವಧಿಯಾಗಿಯೂ ಕಾಣಿಸುತ್ತವೆ. ಹಾಗಿರುವಾಗ ಅರಿವೇ ಇಲ್ಲದಂತೆ ಆಗಾಗ ಕಾಣಿಸಿಕೊಳ್ಳುವ ಆಕಳಿಕೆಗೆ ಅರ್ಥ, ಶಕುನಗಳು ಇಲ್ಲದಿರಲು ಹೇಗೆ ಸಾಧ್ಯ?
ಈ ಆಕಳಿಕೆಯ ಬಗ್ಗೆಯಂತೂ ಕನಸಿನ ಬಗ್ಗೆ ಇರುವಷ್ಟೇ ರಂಗು ರಂಗಾದ ವಿವರಣೆಗಳು, ನಂಬಿಕೆಗಳಿದ್ದಾವೆ. ಸಾಮಾನ್ಯವಾಗಿ ಆಲಸ್ಯದಂಥಾ ಘಳಿಗೆಯಲ್ಲಿ, ಆಯಾಸವಾದ ಸಮಯದಲ್ಲಿ, ಬೋರು ಹೊಡೆದಂಥಾ ಸಂದರ್ಭಗಳಲ್ಲಿ ಆಕಳಿಕೆ ಬರುತ್ತೆ. ಕೆಲ ಮಂದಿ ಹೀಗಾದಾಗೆಲ್ಲ ತಮ್ಮನ್ನು ಯಾರೋ ನೆನೆಸಿಕೊಳ್ಳುತ್ತಿದ್ದಾರೆಂದು ಭ್ರಮಿಸ್ತಾರೆ. ಯಾರೋ ನಮ್ಮ ಬಗ್ಗೆ ಹೆಚ್ಚಾಗಿ ಮಾತಾಡುತ್ತಿದ್ದರೆ ಮಾತ್ರವೇ ಆಕಳಿಕೆ ಬರುತ್ತದೆ ಎಂಬಂಥ ನಂಬಿಕೆಗಳೂ ನಮ್ಮಲ್ಲಿದೆ. ಇಂಥಾ ಶಕುನಗಳಲ್ಲಿ ಅದೆಷ್ಟು ನಿಜವಿದೆಯೋ, ಸುಳ್ಳುಗಳಿವೆಯೋ ಭಗವಂತನೇ ಬಲ್ಲ.
ಥಾ ನಂಬಿಕೆಗಳ ಬಗ್ಗೆ ವೈಜ್ಞಾನಿಕವಾಗಿ ವಿವರಣೆಗಳು ಇರಲೇ ಬೇಕಲ್ಲ. ಹಾಗಾದ್ರೆ ಇದರ ಬಗ್ಗೆ ವಿಜ್ಞಾನ ಏನು ಹೇಳುತ್ತೆ ಅಂತ ನೋದ ಹೋದ್ರೆ ಒಂದಷ್ಟು ವಿಚಾರಗಳು ಹೊರ ಬೀಳುತ್ತವೆ. ವಿಜ್ಞಾನಿಗಳೇ ಹೇಳೋ ಪ್ರಕಾರ ಈಗ ಹಾಸು ಹೊಕ್ಕಾಗಿರೋ ನಂಬಿಕೆಗಳಿಗೂ ಆಕಳಿಕೆ ಅನ್ನೋ ಸಹಜ ಪ್ರಕ್ರಿಯೆಗೂ ಎತ್ತಣಿಂದೆತ್ತಣ ಸಂಬಂಧವೂ ಇಲ್ಲ. ಅದರಿಂದ ದೇಹಕ್ಕಂತೂ ತುಂಬಾನೇ ಉಪಯೋಗವಿದೆ. ಅದರ ಸಾರಾಂಶವೇ ಆಕಳಿಸಿದಾಗೆಲ್ಲ ನಮ್ಮನ್ನ ಯಾರೋ ನೆನೆಸಿಕೊಳ್ತಿದ್ದಾರೆ ಅಂದುಕೊಳ್ಳೋದರಲ್ಲಿ, ಅದು ಯಾರಾಗಿರಬಹುದು ಅಂತ ಜುಟ್ಟು ಕೆದರಿಕೊಳ್ಳೋದರಲ್ಲಾಗಲಿ ಅರ್ಥವಿಲ್ಲ. ಆದರೆ ಆಕಳಿಸುತ್ತಿರೋದರಿಂದ ದೇಹದ ಉಷ್ಣಾಂಶ ಸರಿಯಾದ ಸ್ಥಿತಿಯಲ್ಲಿರುತ್ತದೆಯಂತೆ. ಹಾಗಂತ ವಿಜ್ಞಾನಿಗಳೇ ಹೇಳುತ್ತಾರೆ.
ಹಾಗೊಂದು ವೇಳೆ ನಮ್ಮನ್ನು ಯಾರೋ ಪುಣ್ಯಾತ್ಮರು ನೆನೆಸಿಕೊಂಡು ನಮ್ಮ ಬಗ್ಗೆ ಮಾತಾಡಿದರೆ ಆಕಳಿಕೆ ಬರುತ್ತೆ ಅಂತಿಟ್ಟುಕೊಳ್ಳೋಣ. ಅದು ನಿಜವೇ ಆಗಿದ್ದರೆ ಸೆಲೆಬ್ರಿಟಿಗಳ ಪಾಡೇನಾಗಬೇಕಿತ್ತು? ತುಂಬಾ ಫೇಮಸ್ ಆಗಿರುವವರು, ಸಿನಿಮಾ ನಟ ನಟಿಯರ ಬಗ್ಗೆ ಒಂದಷ್ಟು ಮಂದಿಯಾದರೂ ಸದಾ ಕಾಲ ಮಾತಾಡುತ್ತಲೇ ಇರ್ತಾರೆ. ಅವರೆಲ್ಲ ಆಕಳಿಸಿ ಆಕಳಿಯೇ ಹಾಸಿಗೆ ಹಿಡಿದು ಬಿಡುತ್ತಿದ್ದರೇನೋ. ಇನ್ನು ಸೀನು ಬಂದರೆ ಯಾರೋ ನಮ್ಮನ್ನು ಬೈಯುತ್ತಿದ್ದಾರೆ ಅನ್ನೋ ನಂಬಿಕೆಯೂ ಇದೆ. ಅದು ನಿಜವೇ ಆಗಿದ್ದರೆ ಕೆಲ ರಾಜಕಾರಣಿಗಳು ದಿನವಿಡೀ ಸೀನುತ್ತಲೇ ಇರಬೇಕಾಗ್ತಿತ್ತು!