ಅಮೇಜಾನ್ ಕಾಡುಗಳ ಬಗ್ಗೆ ಇಡೀ ಜಗತ್ತಿನ ತುಂಬೆಲ್ಲ ನಿರಂತರ ಆಕರ್ಷಣೆಯೊಂದು ಸದಾ ಪ್ರವಹಿಸುತ್ತಿರುತ್ತದೆ. ಅದಕ್ಕೆ ಕಾರಣವಾಗಿರೋದು ಅಮೇಜಾನ್ ಕಾಡುಗಳೊಳಗಿರೋ ಅಸೀಮ ನಿಗೂಢ. ಲೆಕ್ಕವಿರದಷ್ಟು ಜೀವ ಸಂಕುಲಗಳನ್ನು ಒಡಲಲ್ಲಿಟ್ಟುಕೊಂಡಿರೋ ಈ ಕಾಡು ಈ ಕ್ಷಣಕ್ಕೂ ನಿಗೂಢವಾಗಿಯೇ ಉಳಿದುಕೊಂಡಿದೆ. ಮನುಷ್ಯರು ಅದೆಂಥಾದ್ದೇ ಅತ್ಯಾಧುನಿಕ ಆವಿಷ್ಕಾರಗಳೊಂದಿಗೆ ಈ ಕಾಡು ಹೊಕ್ಕರೂ ಅದರ ನಿಗೂಢಗಳನ್ನ ಸಂಪೂರ್ಣವಾಗಿ ಭೇಧಿಸಲು ಸಾಧ್ಯವಾಗಿಲ್ಲ. ಬಹುಶಃ ಇನ್ನೆಷ್ಟೇ ವರ್ಷ ಕಳೆದರೂ ಅದು ಸಾಧ್ಯವಾಗೋದೂ ಇಲ್ಲವೇನೋ…
ಅಮೇಜಾನ್ ನದಿಯ ಬಗ್ಗೆ, ಅದರ ಜೀವ ಜಲ ಹೀರಿಕೊಂಡು ಸೊಂಪಾಗಿ ಹಬ್ಬಿಕೊಂಡಿರೋ ಕಾಡುಗಳ ಬಗ್ಗೆ ಬಹುತೇಕರು ಕೇಳಿರುತ್ತಾರೆ. ಆದರೆ ಅದರ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಸಾಕ್ಷು ವಿಚಾರಗಳಿದ್ದಾವೆ. ಅಮೇಜಾನ್ ಕಾಡಿರೋದು ದಕ್ಷಿಣ ಅಮೇರಿಕಾದ ಮೂಲದಲ್ಲಿ. ಹಾಗಂತ ಆ ಕಾಡು ಆದೇಶಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಅದರ ವಿಸ್ತಾರವನ್ನು ನಿಖರವಾಗಿ ಬಾಯಿ ಮಾತಲ್ಲಿ ಹೇಳಲೂ ಸಾಧ್ಯವಿಲ್ಲ. ಯಾಕಂದ್ರೆ ಈ ಕಾಡು ಒಂಭತ್ತು ದೇಶಗಳಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿದೆ.
ವಿಶೇಷ ಅಂದ್ರೆ ಬ್ರೆಜಿಲ್ ದೇಶ ಒಂದರಲ್ಲಿಯೇ ಶೇಖಡಾ ಅರವತ್ತರಷ್ಟು ಅಮೇಜಾನ್ ಕಾಡಿದೆಯಂತೆ. ಅಂದಹಾಗೆ ಅಮೇಜಾನ್ ಕಾಡನ್ನು ಇಡೀ ಜಗತ್ತಿನ ಹೃದಯ ಅನ್ನಲಾಗುತ್ತೆ. ಈ ಕಾಡಿನಲ್ಲಿ ಇಡೀ ವಿಶ್ವಕ್ಕೆ ಶೇಖಡಾ ಇಪ್ಪತ್ತರಷ್ಟು ಆಮ್ಲಜನಕ ರವಾನೆಯಾಗುತ್ತದೆಯಂತೆ. ಇದರಲ್ಲಿ ಐದು ಬಿಲಿಯನ್ನಿಗೂ ಅಧಿಕ ಪ್ರಬೇಧಗಳ ಮರಗಿಡಗಳಿದ್ದಾವೆ. ಅಂದಹಾಗೆ, ಈ ಅಮೇಜಾನ್ ಕಾಡಿನ ಒಟ್ಟಾರೆ ವಿಸ್ತೀರ್ಣ ಭಾರತಕ್ಕಿಂತಲೂ ದೊಡ್ಡದಾಗಿದೆ. ಇನ್ನೂ ವಿಶೇಷವೆಂದರೆ, ಅಮೇಜಾನ್ ನದಿಯಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಜಾತಿಗಳ ಮೀನುಗಳಿದ್ದಾವೆ.