ಮನುಷ್ಯರಿರಲಿ, ಪ್ರಾಣಿಗಳೇ ಆಗಿರಲಿ… ತಲೆಗೇನಾದರೂ ಸಣ್ಣ ಪೆಟ್ಟಾದರೂ ಇಡೀ ದೇಹದ ವಾತಾರವಣವೇ ಬದಲಾಗಿ ಬಿಡುತ್ತವೆ. ತಲೆಗೇನಾದರೂ ಬಲವಾಗಿ ಪೆಟ್ಟು ಬಿದ್ದರೆ ಸ್ವಾಧೀನವನ್ನೇ ಕಳೆದುಕೊಳ್ಳಬೇಕಾಗುತ್ತೆ. ಹೀಗಿರುವಾಗ ತಲೆಯನ್ನೇ ಕತ್ತರಿಸಿ ತೆಗೆದು ಬಿಟ್ಟರೆ ಜಗತ್ತಿನ ಯಾವ ಜೀವಿಯೇ ಆದರೂ ಬದುಕಲು ಸಾಧ್ಯವೇ? ಇಂಥಾ ಪ್ರಶ್ನೆ ಎದುರಾದರೆ ಇಲ್ಲವೇ ಇಲ್ಲ ಎಂಬ ಉತ್ತರ ಅಷ್ಟ ದಿಕ್ಕುಗಳಿಂದಲೂ ಮೊರೆಯುತ್ತೆ. ಆದರೆ ಒಂದು ವಿಚಿತ್ರವಾದ ಘಟನೆ ನಮ್ಮ ನಂಬಿಕೆಯನ್ನೇ ಸುಳ್ಳು ಮಾಡಿದೆ!
ಇಂಥಾದದ್ದೊಂದು ವಿಶೇಷವಾದ ವಿದ್ಯಮಾನ ನಡೆದಿರೋದು ಕೊಲ್ಯಾರಾಡೋದಲ್ಲಿ. ಈಗ್ಗೆ ಹಲವಾರು ವರ್ಷಗಳ ಹಿಂದೆ ನಡೆದಿರೋ ಈಘಟನಾವಳಿಗಳ ಹಿಂಚುಮುಂಚಿನ ವಿದ್ಯಮಾನ ನಿಜಕ್ಕೂ ರೋಚಕವಾಗಿದೆ. ಕೊಲ್ಯಾರಾಡೋದಲ್ಲಿನ ರೈತ ದಂಪತಿಗಳ ಸಮ್ಮುಖದಲ್ಲಿಯೇ ಈ ಅಚ್ಚರಿ ನಡೆದಿದೆ. ಅಲ್ಲಿನ ರೈತನೊಬ್ಬ ಕೃಷಿಯ ಜೊತೆಗೆ ಪೂರಕವಾಗಿ ಅನೇಕ ಪ್ರಾಣಿ ಪಕ್ಷಿಗಳನ್ನ ಸಾಕಿದ್ದ. ಅದರಲ್ಲಿ ಕೋಳಿಗಳೂ ಸೇರಿಕೊಂಡಿದ್ದವು. ಆಗಾಗ ಒಂದೊಂದು ಕೋಳಿಗಳನ್ನ ಕತ್ತರಿಸಿ ತಿನ್ನೋದು ಅವರೆಲ್ಲರ ರೂಢಿಯಾಗಿತ್ತು.
ಅದೊಂದು ದಿನ ಬಿಳಿ ಮೈಬಣ್ಣದ ಕೋಳಿಯೊಂದನ್ನು ಆ ರೈತ ತಿನ್ನುವ ಸಲುವಾಗಿ ಕತ್ತು ಕತ್ತರಿಸಿ ಕೊಂದಿದ್ದ. ಮಾಮೂಲಿಯಾದರೆ ಕತ್ತು ಕತ್ತರಿಸಿದ ನಂತರ ಕೋಳಿಗಳು ತುಸು ಒದ್ದಾಡಿ ಜೀವ ಬಿಡುತ್ತವೆ. ಆದರೆ ಆ ಕೋಳಿ ಮಾತ್ರ ತಲೆ ಕತ್ತರಿಸಿದ ನಂತರ ಕೈ ಕೊಸರಿಕೊಂಡು ನೆಲದ ಮೇಲೆ ಬಿದ್ದಿತ್ತಂತೆ. ಇನ್ನೇನು ಅದರ ದೇಹ ಸ್ತಬ್ಧವಾಗುತ್ತೆ ಅಂದುಕೊಂಡಿರುವಾಗ ಆ ಕೋಳಿ ತಲೆ ಇಲ್ಲದಿದ್ದರೂ ಎದ್ದು ಓಡಿತ್ತಂತೆ.
ಇದೊಂದು ವಿಸ್ಮಯ ಅನ್ನಿಸಿದ್ದರಿಂದ ಆ ರೈರ ಕೋಳಿಯನ್ನು ಹಿಡಿದು ತಂದು ಆಪಲ್ ಬಾಕ್ಸಿನಲ್ಲಿಟ್ಟಿದ್ದ. ಒಂದು ರಾತ್ರಿ ಕಳೆದು ಬೆಳಗ್ಗೆ ನೋಡಿದಾಗಲೂ ಆ ಕೋಳಿ ಬದುಕಿತ್ತು. ಹೊರಗೆ ಬಿಟ್ಟಾಗ ಸಲೀಸಾಗಿ ಓಡಾಡಲಾರಂಭಿಸಿತ್ತಂತೆ. ಆ ನಂತರ ಎಷ್ಟು ದಿನ ಇರುತ್ತೆ ನೋಡೋಣ ಅಂತ ಆ ರೈತ ತಲೆ ಇಲ್ಲದ ಕೋಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಲಾರಂಭಿಸಿದ್ದ. ಕತ್ತು ಕತ್ತರಿಸಿದ್ದ ಜಾಗಕ್ಕೆ ಆಗಾಗ ನೀರು ಬಿಡಲಾರಂಭಿಸಿದ್ದ. ಅದು ಬರೋಬ್ಬರಿ ಹದಿನೆಂಟು ತಿಂಗಳು ಬದುಕಿತ್ತಂತೆ. ಈವತ್ತಿಗೂ ಈ ವಿದ್ಯಮಾನ ವಿಜ್ಞಾನ ಜಗತ್ತಿಗೆ ಅಚ್ಚರಿಯಾಗಿ, ಸವಾಲಿನದ್ದಾಗಿ ಉಳಿದುಕೊಂಡಿದೆ.