ಎಲ್ಲ ಬುದ್ಧಿವಂತಿಕೆ, ತಿಳುವಳಿಕೆಗಳನ್ನು ಹೊಂದಿದ್ದರೂ ಕೂಡಾ ಈ ಮನುಷ್ಯನಷ್ಟು ಕೃತಘ್ನ ಜೀವಿ ಈ ಜಗತ್ತಿನಲ್ಲಿ ಹುಡುಕಿದರೂ ಸಿಗಲು ಸಾಧ್ಯವಿಲ್ಲ. ಹಾಗೊಂದು ವೇಳೆ ಚೂರೇ ಚೂರು ಕೃತಜ್ಞತೆ ಇದ್ದಿದ್ದರೂ ಕೂಡಾ ಸಹಜೀವಿಗಳ ಪಾಡು ಈ ಪರಿಯಾಗಿ ಹಡಾಲೇಳುತ್ತಿರಲಿಲ್ಲ. ಅದರಲ್ಲಿಯೂ ಪ್ರಕೃತಿಯ ಮೇಲೆ ನಾವೆಲ್ಲ ನಿರಂತರವಾಗಿ ಮಾಡುತ್ತಿರೋ ಅತಿಕ್ರಮಗಳಿವೆಯಲ್ಲಾ? ಅದನ್ನು ಯಾವ ಶಕ್ತಿಯೂ ಕ್ಷಮಿಸಲು ಸಾಧ್ಯವೇ ಇಲ್ಲ. ಈವತ್ತಿಗೆ ಇಡೀ ವಾತಾವರಣವನ್ನು ಸಮಸ್ಥಿತಿಯಲ್ಲಿಟ್ಟು ಮನುಷ್ಯ ಉಸಿರಾಡೋದಕ್ಕೂ ಅನುವು ಮಾಡಿಕೊಟ್ಟಿರುವ ಗಿಡ ಮರಗಳು ವಿನಾಶದಂಚಿನಲ್ಲಿವೆ. ಹೀಗೆ ನಾಮಾವಶೇಷ ಹೊಂದುತ್ತಿರೋ ಗಿಡಮರಗಳ ಶಕ್ತಿ ನಿಜಕ್ಕೂ ಊಹಾತೀತ.
ಗಿಡ ಮರಗಳಿಗೂ ಜೀವವಿದೆ ಅನ್ನೋ ಕಾಮನ್ ಸೆನ್ಸ್ ನಮಗೆ ಬಂದಿದ್ದೇ ತೀರಾ ಇತ್ತೀಚೆಗೆ. ಅವುಗಳಿಗೆ ಬಾಯಿ ಬರೋದಿಲ್ಲ. ತಮಗಾದ ನೋವುಗಳನ್ನು ಕೂಗಿ ಹೇಳುವ, ತೋರ್ಪಡಿಸಿಕೊಳ್ಳುವ ಅವಕಾಶವನ್ನೂ ಕೂಡಾ ಈ ಸೃಷ್ಟಿ ಅವುಗಳಿಗೆ ಕೊಟ್ಟಿಲ್ಲ. ಕೊಂಬೆ ಕಡಿದಾಗಲೂ ಮರ ತೆಪ್ಪಗಿರೋದರಿಂದ ಅವುಗಳಿಗೆ ನೋವಾಗೋದಿಲ್ಲ ಎಂದೇ ಜನ ಪರಿಭಾವಿಸಿಕೊಂಡಿದ್ದರು. ಆದರೆ ಹಾಗೆ ಕಡಿಯುತ್ತಾ ಸಾಗಿದ್ದರ ಫಲವೆಂಬಂತೆ ನಮಗೇ ಈಗ ನೋವಾಗತೊಡಗಿದೆ. ಅಂದಹಾಗೆ, ಮನುಷ್ಯ ಏನೇದರೂ ಆಕ್ರಮಣ ಮಾಠಡದೇ ಇದ್ದರೆ ಇಂಥಾ ಮರಗಳು ಸಾವಿರಾರು ವರ್ಷಗಳ ಕಾಲವೂ ಉಳಿದುಕೊಳ್ಳುತ್ತವೆ. ಇದೀಗ ಮರಗಳು ಒಟ್ಟಾರೆ ಆಯಸ್ಸಿನ ಒಂದು ಬಿಂದವಷ್ಟೂ ಬದುಕೋ ಅವಕಾಶವನ್ನು ನಾಗರಿಕ ಜಗತ್ತು ಕಿತ್ತುಕೊಂಡಿದೆ.
ಮರಗಳು ಕೊಲ್ಲದೇ ಹೋದರೆ ಯಾವ ಕಾರಣಕ್ಕೂ ಸಾಯೋದಿಲ್ಲ. ಅವುಗಳದ್ದು ದೀರ್ಘಕಾಲಿಕ ಆಯಸ್ಸು. ಮರಗಳು ಪ್ರಾಕೃತಿಕವಾಗಿ ಹುಖಳಗಳ ಬಾಧೆಯಿಂದ ಸಾಯೋದಿದೆ. ಅದನ್ನು ಒಂದು ಮಟ್ಟಕ್ಕೆ ಮೀರಿಕೊಳ್ಳುವ ತಾಕತ್ತೂ ಕೂಡಾ ಮರಗಳಿಗಿರುತ್ತೆ. ಅದೆಲ್ಲದರಾಚೆ ಸಾವಿರಾರು ವರ್ಷ ತಲೆಯೆತ್ತಿ ಬದುಕೋ ಛಾತಿ ಮರಗಳಿಗಿದೆ. ಇದಕ್ಕೆ ಪುರಾವೆಯೆಂಬಂತೆ ಸಾವಿರಾರು ವರ್ಷ ಬದುಕಿರೋ ಒಂದಷ್ಟು ಮರಗಳಿದ್ದಾವೆ. ಅವೆಲ್ಲ ವಿಶಿಷ್ಟವಾದ ಮರಗಳು ಅಂದುಕೊಳ್ಳಬೇಕಿಲ್ಲ. ಸಾಮಾನ್ಯವಾಗಿ ಎಲ್ಲ ಕಾಡು ಮರಗಳಿಗೂ ಅಂಥಾ ಶಕ್ತಿ ಇರುತ್ತೆ. ದುರಂತ ಅಂದ್ರೆ ಮನುಷ್ಯರ ಸ್ವಾರ್ಥದ ಕೊಡಲಿ ಅವುಗಳನ್ನು ಸಾಲು ಸಾಲಾಗಿ ಬಲಿ ಹಾಕುತ್ತಿದೆ.