ಮನುಷ್ಯರ ದೇಹ (human body) ರಚನಾ ಕ್ರಮವೇ ಒಂದು ಪ್ರಾಕೃತಿಕ ಅದ್ಭುತ. ಅದು ಈ ಜಗತ್ತಿನಲ್ಲಿರೋ ದಿವ್ಯ ಶಕ್ತಿಯೊಂದರ ಲೀಲೆ ಅನ್ನೋರಿದ್ದಾರೆ. ಅದನ್ನೇ ಭಗವಂತನ ಕೊಡುಗೆ ಅನ್ನುವವರೂ ಇದ್ದಾರೆ. ಆದರೆ ವಿಜ್ಞಾನ ಮಾತ್ರ ಅದರಾಚೆಗಿನ ಸತ್ಯಗಳನ್ನ ತೆರೆದಿಡುತ್ತಲೇ ಬಂದಿದೆ. ಬಾಹ್ಯ ಸೌಂದರ್ಯದ ಮಾತು ಹಾಗಿರಲಿ; ಮನುಷ್ಯದ ದೇಹದೊಳಗಿನ ರಚನೆ ನಿಜಕ್ಕೂ ವಿಸ್ಮಯ. ಅಲ್ಲಿರೋ ಒಂದೊಂದು ಆಯವ್ಯಯಗಳದ್ದೂ ಒಂದೊಂದು ಬಗೆ. ಅವು ಇಡೀ ದೇಹವನ್ನು ಸಮಸ್ಥಿತಿಯಲ್ಲಿಡುವ ರೀತಿ, ಅವು ಕಾರ್ಯ ನಿರ್ವಹಿಸುವ ಕ್ರಮಗಳೆಲ್ಲವೂ ರೋಚಕ. ಅದರಲ್ಲಿಯೂ ನಮ್ಮ ದೇಹದ ಆಧಾರಸ್ತಂಭದಂತಿರೋ ಮೂಳೆಗಳ (bones) ಶಕ್ತಿಯ ಬಗ್ಗೆ ಕೇಳಿದರಂತೂ ಯಾರೇ ಆದರೂ ಅವಾಕ್ಕಾಗುವಂತಿದೆ.
ಸಾಮಾನ್ಯವಾಗಿ ಮನುಷ್ಯರ ತೂಕದಲ್ಲಿ ವೈಪರೀತ್ಯಗಳಿರುತ್ತವೆ. ಕೆಲ ಮಂದಿ ಕ್ವಿಂಟಾಲುಗಟ್ಟಲೆ ತೂಕ ಇರ್ತಾರೆ. ಅಂಥವರಿಗೆ ತಮ್ಮ ದೇಹವನ್ನು ತಾವೇ ಹೊರೋದೂ ಕೂಡಾ ತ್ರಾಸದಾಯಕವಾಗಿರುತ್ತೆ. ಆದ್ದರಿಂದಲೇ ಕೂತಲ್ಲಿಂದ ಮೇಲೇಳಲೂ ಕೂಡಾ ಯಾವುದಾದರೊಂದು ಆಸರೆ ಬೇಡುತ್ತಾರೆ. ಹಾಗಿರುವಾಗ ಆ ಪಾಟಿ ದೇಹ ಉದುರಿಕೊಳ್ಳದಂತೆ ಸಮಸ್ಥಿತಿಯಲ್ಲಿಟ್ಟಿರೋದು ನಮ್ಮ ದೇಹದ ತುಂಬಾ ಹರಡಿಕೊಂಡಿರೋ ಮೂಳೆಗಳು. ಈ ವಿಚಾರವೇ ಮನುಷ್ಯನ ಮೂಳೆಗಳಿಗೆ ಅದೆಂಥಾ ಶಕ್ತಿ ಇದ್ದೀತೆಂಬುದನ್ನು ಜಾಹೀರು ಮಾಡುತ್ತೆ. ವೈದ್ಯ ಜಗತ್ತು ಈ ಮೂಳೆಗಳ ಸಾಮಥ್ರ್ಯದ ಬಗ್ಗೆ ಮತ್ತೊಂದು ಅಂಶವನ್ನೂ ಬಯಲಾಗಿಸಿದೆ.
ಮನುಷ್ಯನ ಮೂಳೆ ಗಟ್ಟಿಯಾಗಿರುತ್ತವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಹಾಗಾದ್ರೆ ಅದು ಅದೆಷ್ಟು ಗಟ್ಟಿಯಾಗಿರುತ್ತೆ? ಅದರ ಅಸಲೀ ಪವರ್ ಏನು ಅನ್ನೋದಕ್ಕೆ ಈ ವಿಚಾರ ಉತ್ತರದಂತಿದೆ. ಆ ನಿಟ್ಟಿನಲ್ಲಿ ನೋಡ ಹೋದರೆ ನಮ್ಮ ಮೂಳೆಗಳು ಹೈ ಗೇಜಿನ ಸ್ಟೀಲ್ ರಾಡಿಗಿಂತಲೂ ಗಟ್ಟಿಯಾಗಿರುತ್ತದೆಯಂತೆ. ನಮ್ಮ ಮೂಳೆಯಷ್ಟೇ ಸೈಜಿನ ಸ್ಟೀಲ್ ರಾಡಿಗಿಂತಲೂ ಮೂಳೆಗಳೇ ಹೆಚ್ಚು ಗಟ್ಟಿಯಂತೆ. ಅಂಥಾ ಗಟ್ಟಿಯಾದ ಮೂಳೆಗಳೇ ಒತ್ತಡ ತಾಳಲಾರದೆ ಕೆಲವೊಮ್ಮೆ ಘಾಸಿಗೊಳ್ಳುತ್ತವೆ. ಹಾಗೆ ಒಂದು ಸಾರಿ ಮುರಿದ ಮೂಳೆ ಎಷ್ಟೇ ಆದರೂ ಮತ್ತೆ ಮೊದಲಿನಂತಾಗಲು ಸಾಧ್ಯವಿಲ್ಲ.