ಸಾವೆಂಬುದು ಮನುಷ್ಯ ಜೀವನದ ಅಂತಿಮ ನಿಲ್ದಾಣ. ಹುಟ್ಟಿನಿಂದ ಸಾವಿನವರೆಗಿನ ಪಯಣವನ್ನು ಸಾರ್ಥಕಗೊಳಿಸಿಕೊಳ್ಳೋದಿದೆಯಲ್ಲಾ? ಅದು ಮನುಷ್ಯ ಜನುಮದ ಶ್ರೇಷ್ಠ ಸಾಧನೆ. ಆದರೆ ಮನುಷ್ಯ ಮಾತ್ರರಿಗೆ ಬದುಕಿಗಿಂತಲೂ ಸಾವೇ ಹೆಚ್ಚಾಗಿ ಕಾಡುತ್ತೆ. ಅದರಾಚೆಗಿನ ಆಗು ಹೋಗುಗಳತ್ತ ಸದಾ ಮನಸು ಗಿರಕಿ ಹೊಡೆಯುತ್ತೆ. ಸಾವಿನ ನಂತರ ಏನೂ ಇಲ್ಲದ ಶುಷ್ಕ ವಾತಾವರಣವಿರುತ್ತಾ? ಅಥವಾ ಆ ನಂತರವೂ ಒಂದು ಅಗೋಚರ ಬದುಕಿರುತ್ತಾ ಎಂಬುದೂ ಸೇರಿದಂತೆ ಸಹಸ್ರಾರು ಪ್ರಶ್ನೆಗಳಿದ್ದಾವೆ. ಇಂಥಾ ದ್ವಂದ್ವಗಳೇ ಸಾವಿನ ನಂತರದಲ್ಲಿ ಬದುಕಿರೋ ವ್ಯಕ್ತಿಗಳ ನಡುವೆ ಚಿತ್ರವಿಚಿತ್ರವಾದ ನಂಬಿಕೆಗಳು ಮೇಳೈಸುತ್ತವೆ.
ಭಾರತದಲ್ಲಿಯೂ ಸೆಂಟಿಮೆಂಟುಗಳಿಗೇನೂ ಕೊರತೆಯಿಲ್ಲ. ಅದು ಸಾವಿನಾಚೆಗೂ ಮೈ ಚಾಚಿಕೊಂಡಿದೆ. ನಮ್ಮ ಸುತ್ತ ಯಾರೇ ಸತ್ತರೂ ನಾವು ಮಣ್ಣು ಮಾಡಿ ಮರೆತು ಕೂರೋದಿಲ್ಲ. ಸದಾ ಕಾಲವೂ ಅವರನ್ನ ನೆನಪಿಸಿಕೊಳ್ಳುತ್ತೇವೆ. ಆಗಾಗ ಎಡೆ ಹಾಕಿ ಇಲ್ಲದವರನ್ನು ಊಟಕ್ಕೆ ಕರೆಯುತ್ತೇವೆ. ನಂತರ ಅವರ ಆತ್ಮ ಊಟ ಮಾಡಿ ಎದ್ದು ಹೋಯಿತೆಂದು ನಂಬಿ ನಿರಾಳವಾಗುತ್ತೇವೆ. ಆದರೆ, ರೋಮನ್ನರು ಮಾತ್ರ ಇಂಥಾ ಸೆಂಟಿಮೆಂಟಿನ ಉತ್ತುಂಗದಲ್ಲಿದ್ದಾರೆ. ಅಲ್ಲಿರೋ ನಂಬಿಕೆಗಳನ್ನ ನೋಡಿದರೆ ಯಾರಿಗೇ ಆದರೂ ಹಾಗನ್ನಿಸದಿರಲು ಸಾಧ್ಯವೇ ಇಲ್ಲ.
ರೋಮನ್ನರಲ್ಲಿ ಸತ್ತವರನ್ನು ಸಮಾಧಿ ಮಾಡೋ ಪದ್ಧತಿ ಸಾರ್ವತ್ರಿಕವಾಗಿದೆ. ಆದರೆ ಸಮಾಧಿ ಮಾಡೋ ರೀತಿ ಮಾತ್ರ ತುಂಬಾನೇ ಭಿನ್ನ. ಹಾಗೆ ಮಣ್ಣು ಮಾಡಿದ ಮೇಲೆ ಇಟ್ಟಿಗೆ ಸಿಮೆಂಟಿನ ಕಟ್ಟೆ ಮಾಡಿದಾಗಲೂ ಸಮಾಧಿಯೊಳಗೆ ಕನೆಕ್ಷನ್ನು ಇರುವಂತೆ ಒಂದು ಕೊಳವೆಯನ್ನು ಇಡಲಾಗುತ್ತದೆ. ಆ ಕೊಳವೆಯ ಮೂಲಕ ಸತ್ತವರ ರಕ್ತ ಸಂಬಂಧಿಗಳು ಆಗಾಗ ವೈನು, ಜೇನುತುಪ್ಪ ಮುಂತಾದವುಗಳನ್ನ ಬಿಡುತ್ತಲೇ ಇರುತ್ತಾರಂತೆ. ಅದನ್ನು ಸಮಾಧಿಯೊಳಗೆ ಮಲಗಿರೋ ಸಂಬಂಧಿಕರು ಚಪ್ಪರಿಸಿ ಕುಡಿದು ಸಂತೃಪ್ತರಾಗ್ರಾರೆ ಎಂಬ ನಂಬಿಕೆ ಈಗಲೂ ರೋಮನ್ನರಲ್ಲಿದೆ!