ಶೀತಲ್ ಶೆಟ್ಟಿ ನಿರ್ದೇಶನ ಮಾಡಿರುವ ಮೊದಲ ಚಿತ್ರ ವಿಂಡೋ ಸೀಟ್. ಆರಂಭದಿಂದಲೂ ರೋಮಾಂಚಕ ವಾತಾವರಣ ಸೃಷ್ಟಿಸಿದ್ದ ಈ ಚಿತ್ರ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನವನ್ನೂ ಕಂಡಿತ್ತು. ಇದೀಗ ವಿಂಡೋ ಸೀಟ್ ಓಟಿಟಿಗೆ ಲಗ್ಗೆಯಿಟ್ಟಿದೆ. ಇದೇ ಅಕ್ಟೋಬರ್ ೨೮ರಂದು ಜ಼ೀ೫ನಲ್ಲಿ ಬಿಡುಗಡೆಗೊಂಡಿದ್ದ ವಿಂಡೋ ಸೀಟ್, ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ. ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾದಾಗ ಹೋಗಿ ನೋಡಲಾಗದವರೆಲ್ಲ ಓಟಿಟಿಯಲ್ಲಿ ವಿಂಡೋ ಸೀಟ್ ಅನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಹಾಗೆ ನೋಡಿದವರೆಲ್ಲ ಒಟ್ಟಾರೆ ಚಿತ್ರವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ.
ಕೊರೋನಾ ಕಾಲಘಟ್ಟದಿಂದೀಚೆಗೆ ಓಟಿಟಿ ಟ್ರೆಂಡ್ ವ್ಯಾಪಕವಾಗಿ ಹಬ್ಬಿಕೊಂಡಿದೆ. ಒಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಯಾವ ಮಟ್ಟದಲ್ಲಿ ಹವಾ ಸೃಷ್ಟಿಸುತ್ತೋ, ಅಂಥಾದ್ದೇ ಸಂಚಲನವೀಗ ಓಟಿಟಿ ಪ್ಲಾಟ್ಫಾರ್ಮಿನಲ್ಲಿಯೂ ಸೃಷ್ಟಿಯಾಗುತ್ತೆ. ಅಲ್ಲಿಯೂ ಸೋಲು ಗೆಲುವುಗಳ ಲೆಕ್ಕಾಚಾರವಿರುತ್ತದೆ. ಅದೆಲ್ಲವನ್ನೂ ಕೂಡಾ ಅತ್ಯಂತ ಕಡಿಮೆ ಅವಧಿಯಲ್ಲಿ ವಿಂಡೋ ಸೀಟ್ ಗೆದ್ದುಕೊಂಡಿದೆ. ಜೊತೆಗೆ ಎಲ್ಲ ದಿಕ್ಕುಗಳಿಂದಲೂ ವಿಂಡೋ ಸೀಟ್ ಬಗ್ಗೆ ಒಳ್ಳೆ ಅಭಿಪ್ರಾಯಗಳೇ ಕೇಳಿ ಬರಲಾರಂಭಿಸಿವೆ.
ಈ ವಿದ್ಯಮಾನದಿಂದ ನಿರ್ದೇಶಕಿ ಶೀತಲ್ ಶೆಟ್ಟಿ ಖುಷಿಗೊಂಡಿದ್ದಾರೆ. ಕಿರುಚಿತ್ರಗಳ ಮೂಲಕ ಗಮನ ಸೆಳೆದು, ಆ ನಂತರ ಸ್ವತಂತ್ರ ನಿರ್ದೇಶಕಿಯಾಗೋ ಸಾಹಸಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದವರು ಶೀತಲ್ ಶೆಟ್ಟಿ. ಅದು ನಿಜಕ್ಕು ಸವಾಲಿನ ಹಾದಿ. ಆದರೆ ಅದನ್ನು ಶೀತಲ್ ಅತ್ಯಂತ ಜಾಣ್ಮೆಯಿಂದಲೇ ದಾಟಿಕೊಂಡಿದ್ದರು. ಕಥೆ ನಿರೂಪಣೆ ಮತ್ತು ಅಭಿನಯ ಸೇರಿದಂತೆ ಎಲ್ಲದರಲ್ಲಿಯೂ ವಿಂಡೋ ಸೀಟ್ ಗಮನ ಸೆಳೆದಿದೆ. ಮಲೆನಾಡಿನಿಂದ ಕದಲುವ ಕ್ರೈಂ ಥ್ರಿಲ್ಲರ್ ಮತ್ತು ಮುದ್ದಾದ ಪ್ರೇಮ ಕಥಾನಕವನ್ನೊಳಗೊಂಡಿರೋ ಈ ಚಿತ್ರ ಓಟಿಟಿಯಲ್ಲಿಯೂ ಕಮಾಲ್ ಮಾಡುತ್ತಿದೆ. ದಿನದಿಂದ ದಿನಕ್ಕೆ ಅಲ್ಲಿಯೂ ವಿಂಡೋ ಸೀಟ್ ಕ್ರೇಜ್ ಹೆಚ್ಚಿಕೊಳ್ಳುತ್ತಿದೆ.