ಇಲ್ಲಿದೆ ವೈಫ್ ಸ್ವಾಪಿಂಗ್ ಬಗೆಗಿನ ಬೆಚ್ಚಿ ಬೀಳಿಸೋ ಮ್ಯಾಟರ್!
ಜಗತ್ತು ಆಧುನಿಕತೆಗೆ ಒಡ್ಡಿಕೊಂಡಂತೆಲ್ಲಾ ಮನುಷ್ಯನ ವಿಕೃತಿಗಳು ಮೇರೆ ಮೀರುತ್ತಿವೆ. ಅದರಲ್ಲಿಯೂ ಲೈಂಗಿಕ ತೃಷೆಗಾಗಿ ಆಧುನಿಕ ಜಗತ್ತು ಅನುಸರಿಸುತ್ತಿರೋ ಅಡ್ಡದಾರಿಗಳಿವೆಯಲ್ಲಾ? ಅವು ಎಂಥವರನ್ನಾದರೂ ಬೆಚ್ಚಿ ಬೀಳಿಸುವಂತಿವೆ. ಒಂದು ಕಡೆಯಲ್ಲಿ ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಮೇರೆ ಮೀರುತ್ತಿವೆ. ಸನಾನತನವಾದಿಗಳು ಅದಕ್ಕೆ ಹೆಣ್ಣು ಮಕ್ಕಳು ಧರಿಸೋ ಬಟ್ಟೆಯೇ ಕಾರಣ ಎಂಬಂಥಾ ಮತ್ತೊಂದು ಬಗೆಯ ವಿಕೃತಿಯನ್ನ ಪ್ರತಿಪಾದಿಸುತ್ತಿದ್ದಾರೆ. ಹಾಗಾದರೆ ಎಲ್ಲ ಇದ್ದೂ ಮನುಷ್ಯ ಮತ್ತಷ್ಟು ಲೈಂಗಿಕತೆಗಾಗಿ ಯಾಕೆ ಹಾತೊರೆಯುತ್ತಾನೆ? ಮನುಷ್ಯತ್ವವನ್ನೇ ಅಣಕಿಸುವಂಥಾ ವೈಫ್ಸ್ವಾಪಿಂಗ್ ದಂಧೆಗಳ ಮೂಲಕ ಯಾಕೆ ಖುಷಿ ಕಾಣಲು ಪ್ರಯತ್ನಿಸುತ್ತಾನೆಂಬುದಕ್ಕೆಲ್ಲ ಸನಾತನಿಗಳ ಬಳಿ ಉತ್ತರವಿಲ್ಲ. ಅಂಥಾ ಅಗಾಧ ವಿಕೃತಿ ಮನಸೊಳಗೇ ಇಲ್ಲದೇ ಹೋಗಿದ್ದರೆ ಕಟ್ಟಿಕೊಂಡ ಹೆಂಡತಿಯರನ್ನೇ ಅದಲು ಬದಲು ಮಾಡಿಕೊಂಡು ಸುಖಿಸುವ ಖೂಳ ಬುದ್ಧಿ ಹಬೆಯಾಡಲು ಸಾಧ್ಯವೇ?
ನಮ್ಮದು ಎಲ್ಲಿಯೂ ಸಂಸ್ಕೃತಿ, ಕಟ್ಟುಪಾಡುಗಳ ಎಲ್ಲೆ ಮೀರದ ಸಮಾಜ. ಅದರೊಳಗೇ ಲೈಂಗಿಕ ವಾಂಛೆಗಳೂ ಕೂಡಾ ಹದ ಮೀರದೆ ಮುಂದುವರೆದುಕೊಂಡು ಬಂದಿವೆ. ಅಲ್ಲಲ್ಲಿ, ಆಗಾಗ ಅದು ಹದ್ದು ಮೀರಿ ಅಸಹ್ಯ ಸೃಷ್ಟಿಸಿದ್ದೂ ಇದೆ. ಆದರೆ ಇತ್ತೀಚಿನ ತಲೆಮಾರು ಮಾತ್ರ ಎಲ್ಲವನ್ನೂ ಮೀರಿಕೊಳ್ಳುವ ಮರ್ಜಿಗೆ ಬಿದ್ದು ಭ್ರಾಮಕ ಉತ್ತುಂಗದತ್ತ ತಣ್ಣಗೆ ಕೈಚಾಚುತ್ತಿದ್ದಾರೆ. ಅಂಥಾ ಮನಃಸ್ಥಿತಿಗಳ ಪಾಲಿಗೆ ಕಾಮ ಕೂಡಾ ಡ್ರಗ್ಸ್ ಚಟದಂತೆ ಅಂಟಿಕೊಂಡು ಬಿಡುತ್ತೆ. ಒಂದು ಮಟ್ಟದ ನಶೆಯಿಂದ ಬೋರು ಹೊಡೆಸಿಕೊಂಡು ಮತ್ತೆ ಮತ್ತೆ ಮತ್ತಷ್ಟು ನಶೆ ಹೊದ್ದು ತೂರಾಡುತ್ತಾರಲ್ಲಾ? ಅಂಥವರಲ್ಲಿ ಕೆಲವರು ವಿಷಪೂರಿತ ಹಾವಿನಿಂದ ಕಚ್ಚಿಕೊಳ್ಳುವ ಹಂತಕ್ಕೂ ತಲುಪಿಕೊಂಡು ಬಿಡುತ್ತಾರೆ. ಅದು ನಶೆಯ ಕಟ್ಟಕಡೆಯ ಹಂತ. ಉಳ್ಳವರ ಜಗತ್ತಿನ ಕಾಮವಾಂಛೆಯ ವಿಚಾರದಲ್ಲಿಯೂ ಬಹುಶಃ ಎಲ್ಲೆ ಮೀರಿದ ಹಂತವೆಂದರೆ ಅದು ವೈಫ್ ಸ್ವಾಪಿಂಗ್!
ಸದ್ಯಕ್ಕೆ ವೈಫ್ ಸ್ವಾಪಿಂಗ್ ದಂಧೆ ದೇವರ ನಾಡು ಕೇರಳದಲ್ಲಿ ಸದ್ದು ಮಾಡಿದೆ. ಇಲ್ಲಿನ ಕೊಟ್ಟಾಯಂ ಜಿಲ್ಲೆಯ ಕರುಕಾಚಲ ಪ್ರದೇಶದ ಪೊಲೀಸರು ಇಂಥಾದ್ದೊಂದು ಪ್ರಕರಣವನ್ನು ಪತ್ತೆಹಚ್ಚಿ ತನಿಖೆ ನಡೆಸುತ್ತಿದ್ದಾರೆ. ಇಲ್ಲಿನ ಕಾಮಪಿಪಾಸುಗಳು ವಾಟ್ಸಪ್ ಗ್ರೂಪ್ ಮಾಡಿಕೊಂಡು ಈ ಮೂಲಕವೇ ಹೆಂಡತಿಯರನ್ನು ಅದಲು ಬದಲು ಮಾಡಿಕೊಳ್ಳುತ್ತಿದ್ದರು. ಅದರಲ್ಲಿಯೇ ಒತ್ತಾಯಪೂರ್ವಕವಾಗಿ ತನ್ನ ಗಂಡನಿಂದಲೇ ಮಹಿಳೆಯೋರ್ವಳು ಈ ಕಾಮಕೂಪಕ್ಕೆ ಬೀಳೋದರಲ್ಲಿದ್ದಳು. ಆ ಹೆಣ್ಣುಮಗಳು ಗಟ್ಟಿ ಮನಸು ಮಾಡಿ ಈ ಬಗ್ಗೆ ಪೊಲೀಸರಿಗೊಂದು ದೂರು ನೀಡಿದ್ದಾಳೆ. ಈ ಮೂಲಕ ದೇವರ ನಾಡಿನ ತುಂಬಾ ಹಬ್ಬಿಕೊಂಡಿದ್ದ ಹೈಟೆಕ್ ಕಾಮುಕರ ಲೋಕವೊಂದು ಜಗತ್ತಿನೆದುರು ಅನಾವರಣಗೊಂಡಿದೆ.
ವೈಫ್ ಸ್ವಾಪಿಂಗ್ ಎಂಬುದು ಇಂಥಾದ್ದು ನಡೆಯಲು ಸಾಧ್ಯವಾ ಎಂಬಂಥಾ ಅಚ್ಚರಿ ಮೂಡಿಸುವಂಥಾ ದುಷ್ಟದಂಧೆ. ಕೈ ತುಂಬಾ ಕಾಸು, ಹೈಫೈ ಲೈಫು, ಇರದುದರೆಡೆಗೆ ಲಗಾಟಿ ಹೊಡೆಯೋ ಮನಸು… ಜನಸಾಮಾನ್ಯರ ವಲಯದ ಮೋಜು ಮಸ್ತಿಗಳಿಂದಲೂ ಬೋರು ಹೊಡೆಸಿಕೊಂಡ ಮಂದಿಯ ಪಾಲಿಗೆ ಆ ಸ್ಟೇಜಿನಲ್ಲಿ ಅಸಹಜ ಕಾಮ ವಾಂಛೆ ಹಬೆಯಾಡುತ್ತದೆಯೇನೋ. ಇಂಥಾ ಮಂದಿ ಹೆಂಡತಿಯರನ್ನೆ ಅದಲುಬದಲು ಮಾಡಿಕೊಂಡು ಸುಖಿಸಲಾರಂಭಿಸುತ್ತಾರೆ. ಅದೊಂದು ಅಕ್ಷರಶಃ ಅಸಹ್ಯದ ಲೋಕ. ನಿಖರವಾಗಿ ಹೇಳಬೇಕೆಂದರೆ ವೇಶ್ಯಾ ದಂಧೆಗಿಂತಲೂ ಕಡೆಯಾದ ದಂಧೆಯಿದು.
ಹಾಗಂತ ವೈಫ್ ಸ್ವಾಪಿಂಗ್ ಎಂಬುದು ಇತ್ತೀಚಿನ ವಿಕೃತಿಯೇನಲ್ಲ. ಇಲ್ಲಿ ಐಟಿ ಬಿಟಿ ಭರಾಟೆ ಯಾವಾಗ ಆರಂಭವಾಯಿತೋ ಆ ಕಾಲದಿಂದಲೇ ಭಾರತದಲ್ಲಿ ವೈಫ್ ಸ್ವಾಪಿಂಗ್ ಪ್ರಕರಣಗಳು ನಡೆಯಲಾರಂಭಿಸಿವೆ. ಇದಕ್ಕೆ ನಮ್ಮ ರಾಜ್ಯವೂ ಹೊರತಾಗಿಲ್ಲ. ೨೦೧೮ರಲ್ಲಿ ಬೆಂಗಳೂರಿನ ಆಸಾಮಿಯೊಬ್ಬ ತನ್ನ ಮಡದಿಯನ್ನು ಗೆಳೆಯನ ಜೊತೆ ಒತ್ತಾಯಪೂರ್ವಕವಾಗಿ ಕಳಿಸಲು ಪ್ರಯತ್ನಿಸಿದ ಪ್ರಕರಣವೊಂದು ನಡೆದಿತ್ತು. ಆ ಘಟನೆ ದೇಶ ಮಟ್ಟದಲ್ಲಿಯೂ ಸುದ್ದಿಯಾಗಿತ್ತು. ನಮ್ಮಲ್ಲಿ ಐಟಿ ಬಿಟಿ ಅಮಲು ಶುರುವಾಗಿ ವೀಕೆಂಡ್ ಪಾರ್ಟಿ ಮುಂತಾದ ಪದ್ಧತಿಗಳು ಶುರುವಾದವಲ್ಲ? ಆವಾಗಿನಿಂದಲೇ ಇಂಥಾ ಪ್ರಕರಣಗಳೂ ನಡೆಯಲಾರಂಭಿಸಿದ್ದವು. ದಶಕಗಳ ಹಿಂದೆ ಕಾಫಿನಾಡು ಚಿಕ್ಕಮಗಳೂರು, ಕೊಡಗು ಮುಂತಾದೆಡೆಗಳಲ್ಲಿ ವೈಫ್ಸ್ವಾಫಿಂಗ್ ಭಾರೀ ಸದ್ದು ಮಾಡಿತ್ತು.
ಇಂಥಾ ಕಾಮವಾಂಛೆ ಹೊಂದಿರುವ ಮಂದಿ ಜೋಡಿಯಾಗಿ ವೀಕೆಂಡುಗಳಲ್ಲಿ ಚಿಕ್ಕಮಗಳೂರಿನ ಕಾಫಿ ತೋಟದತ್ತ ದಾಂಗುಡಿಯಿಡುತ್ತಿದ್ದರು. ಕತ್ತಲಿನ ಸೆರಗು ಆವರಿಸಿಕೊಳ್ಳುತ್ತಲೇ ಅಲ್ಲೊಂದು ಉನ್ಮತ್ತ ವಿಕೃತ ಲೋಕ ಕಣ್ತೆರೆಯುತ್ತಿತ್ತು. ಸಣ್ಣಗಿನ ಉನ್ಮಾದದೊಂದಿಗೆ ಆರಂಭವಾಗುವ ಇಂಥಾ ಪಾರ್ಟಿಗಳಲ್ಲಿ ಗುಂಡು ತುಂಡುಗಳ ವಿನಿಮಯವಾಗುತ್ತದೆ. ಯಾವುದೋ ಮ್ಯೂಸಿಕ್ಕಿಗೆ ಮೈಮೇಲಿನ ಬೋಧ ತಪ್ಪಿದವರಂತೆ ಉನ್ಮತ್ತರಾಗಿ ಕುಣಿದಾಡುತ್ತಾರೆ. ಹಾಗೆ ಕುಣಿಯುತ್ತಲೇ ಗಂಡಹೆಂಡಿರು ಅದಲುಬದಲಾಗುತ್ತಾರೆ. ಮೈದಣಿಯೆ ಕುಣಿದು, ಕಂಠಪೂರ್ತಿ ಕುಡಿದು ಹೆಂಡಿರನ್ನು ಅದಲು ಬದಲು ಮಾಡಿಕೊಂಡು ರೂಮು ಸೇರಿದರೆ ವೈಫ್ ಸ್ವಾಪಿಂಗ್ ಸಮಾಪ್ತಿಯಾದಂತೆ!
ಹಾಗಾದರೆ ಈ ವಿಕೃತಿ ಶುರುವಾದದ್ದು ಎಲ್ಲಿಂದ? ಅದು ಮಾರಿಯಂತೆ ನಮ್ಮ ದೇಶದ ಗಡಿ ದಾಟಿಕೊಂಡಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಕಾಡೋದು ಸಹಜವೇ. ಈ ಬಗ್ಗೆ ಕೆದಕಲು ನಿಂತರೆ ಕೆಲ ಇಂಟರೆಸ್ಟಿಂಗ್ ವಿಚಾರಗಳು ಹೊರಬೀಳುತ್ತವೆ. ಅಂದಹಾಗೆ, ಅಮೆರಿಕಾ ವೈಫ್ ಸ್ವಾಪಿಂಗ್ ಎಂಬ ವಿಕೃತಿಯ ತವರು. ೧೯೬೦ರ ಸುಮಾರಿಗೆಲ್ಲ ಅಮೆರಿಕೆಯಲ್ಲಿ ಇಂಥಾ ಕಲ್ಚರ್ ಆರಂಭವಾಗಿ ಹೋಗಿತ್ತು. ಆ ಕಾಲಕ್ಕೆ ಆ ದೇಶದಲ್ಲಿ ಅತಿ ಹೆಚ್ಚಿನ ವಿಚ್ಚೇಧನ ಪ್ರಕರಣಗಳು ನಡೆಯಲಾರಂಭಿಸಿದ್ದವಂತೆ. ಇದೇ ಹಂತದಲ್ಲಿ ಕಾಮ ಸಂಬಂಧಿತವಾದ ವಿಕೃತಿಗಳೂ ಮೇರೆ ಮೀರಲಾರಂಭಿಸಿದ್ದವು. ಇದೇ ಹೊತ್ತಿನಲ್ಲಿ ಅಲ್ಲಿನ ಕಾರ್ಪೋರೇಟ್ ಜಗತ್ತಿಗೆ ಏಕಾಏಕಿ ವೈಫ್ ಸ್ವಾಪಿಂಗ್, ಕಪಲ್ ಸ್ವಾಪಿಂಗ್ ಕಾಲಿಟ್ಟಿತ್ತು. ಅದು ಆ ನಂತರದಲ್ಲಿ ಕಾರ್ಪೋರೇಟ್ ವಲಯದ ಮೂಲಕವೇ ಭಾರತಕ್ಕೂ ಸಾಗಿ ಬಂದಿತ್ತು.
ಹಾಗೆ ಬಂದ ವೈಫ್ ಸ್ವಾಪಿಂಗ್ ಇದೀಗ ನಾನಾ ಮಜಲುಗಳನ್ನು ದಾಟಿಕೊಂಡಿದೆ. ಅದೀಗ ಹೈಫೈ ಜನರ ಬದುಕಿನ ಭಾಗವಾಗಿದೆ. ಅವರಿಗೆ ಅದೆಲ್ಲ ಕಾಮನ್. ಗಂಡ ಹೆಂಡಿರೆಂಬ ಕಕ್ಕುಲಾತಿ, ಸೆಂಟಿಮೆಂಟುಗಳ ಲವಲೇಶವೂ ಇಲ್ಲದ ಉನ್ಮತ್ತ ಲೋಕವದು. ಕೇರಳದಲ್ಲಿ ಈ ವಿಕೃತಿ ಮಹಿಳೆಯೊಬ್ಬಳಿಂದ ಜಾಹೀರಾಗಿದೆ. ಆದರೆ ಈವತ್ತಿಗೂ ಕರ್ನಾಟಕದ ರೆಸಾರ್ಟುಗಳಲ್ಲಿ ಈ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಇಂಥವರಿಗೆಲ್ಲ ದಟ್ಟ ಕಾಡಿನ ನಡುವೆ ಮೈಚಾಚಿಕೊಂಡ ಮಲೆನಾಡೇ ಫೇವರಿಟ್ ಪ್ಲೇಸು. ತಾವು ಮಹಾನ್ ಪ್ರಕೃತಿ ಪ್ರಿಯರೆಂಬಂತೆ ಬಿಂಬಿಸಿಕೊಂಡು ಬರುವ ಕೆಲ ಮಂದಿ ಕಾಡಿನ ಸೆರಗೊಳಗೆ ವಿಕೃತಿ ಕಾರಿಕೊಂಡು ಕಣ್ಮರೆಯಾಗುತ್ತಿದ್ದಾರೆ. ಇದನ್ನು ಹತ್ತಿಕ್ಕಬೇಕಾದವರೇ ರೆಸಾರ್ಟ್ ಮಾಲೀಕರ ಮರ್ಜಿಗೊಳಗಾಗಿರುವಾಗ ಇಂಥಾ ವಿಕೃತ ವಾಂಛೆಗಳಿಗೆ ಕಡಿವಾಣ ಹಾಕಲು ಸಾಧ್ಯವೇ?