ನೋವೆಲ್ಲವೂ ಇಲ್ಲಿ ನಗುವಾಗಿದೆ!
ಕೆಲವೊಮ್ಮೆ ಪ್ರೇಕ್ಷಕರಲ್ಲಿದ್ದ ಅಗಾಧ ನಿರೀಕ್ಷೆ ಸಿನಿಮಾ ಮಂದಿರಗಳಲ್ಲಿ ಮಂಕಾಗುತ್ತೆ. ಅಪರೂಪಕ್ಕೆಂಬಂತೆ ನಿರೀಕ್ಷೆಯನ್ನು ಮೀರಿದ ಅಚ್ಚರಿಗಳು ದೊಡ್ಡ ಪರದೆಯ ಮೇಲೆ ಅಚಾನಕ್ಕಾಗಿ ಸರಿದಾಡುತ್ತವೆ. ಅಂಥಾದ್ದೊಂದು ಅನುಭೂತಿಯನ್ನು ಬೇಷರತ್ತಾಗಿ ಕಟ್ಟಿಕೊಟ್ಟಿರುವ ಚಿತ್ರ ವೀಲ್ಚೇರ್ ರೋಮಿಯೋ. ಟ್ರೈಲರ್ ಸೇರಿದಂತೆ ಒಂದಷ್ಟು ರೀತಿಯಲ್ಲಿ ಅದಾಗಲೇ ಪ್ರೇಕ್ಷಕರು ರೋಮಿಯೋನ ಮೋಡಿಗೀಡಾಗಿದ್ದರು. ಈ ಚಿತ್ರದಲ್ಲೇನೋ ಗಹನವಾದದ್ದಿದೆ ಎಂಬ ಭಾವ ಎಲ್ಲರೊಳಗೂ ಮೂಡಿಕೊಂಡಿತ್ತು. ಇದೆಲ್ಲದರ ಒಡ್ಡೋಲಗದಲ್ಲೀಗ ವೀಲ್ ಚೇರ್ ರೋಮಿಯೋ ಪತ್ಯಕ್ಷವಾಗಿದ್ದಾನೆ. ತಾವು ಎಣಿಸಿದ್ದಕ್ಕಿಂತಲೂ ವಿಸ್ತಾರವಾದ ಹರವುಳ್ಳ, ಅತ್ಯಂತ ಮಜವಾಗಿ ಮೂಡಿ ಬಂದಿರುವ ಈ ಚಿತ್ರವನ್ನು ನೋಡಿ ಪ್ರೇಕ್ಷಕರೆಲ್ಲ ಫಿದಾ ಆಗಿದ್ದಾರೆ.
ಸಾಮಾನ್ಯವಾಗಿ ಕಥೇ ಎಂಥಾದ್ದೇ ಇದ್ದರೂ ಹೀರೋ ಮಾತ್ರ ಹೀಗೀಗೇ ಇರಬೇಕೆಂಬ ಸಿದ್ಧ ಸೂತ್ರ ನಮ್ಮಲ್ಲಿ ಚಾಲ್ತಿಯಲ್ಲಿದೆ. ಅದನ್ನು ಬ್ರೇಕ್ ಮಾಡುವಂಥಾ ಸಿನಿಮಾಗಳು ವಿರಳವಾಗಿ ಬಂದಿವೆ. ಅದರಲ್ಲಿಯೂ ಈಗಿನ ವಾತಾವರಣದಲ್ಲಿ ಹೀರೋ ಪಾತ್ರವನ್ನು ಅದಕ್ಕೆ ವಿರುದ್ಧವಾಗಿ ಕಟ್ಟಿ ಕೊಡುವುದಕ್ಕೆ ಗುಂಡಿಗೆ ಇರಬೇಕು. ಆ ಪಾತ್ರಕ್ಕೆ ಜೀವ ತುಂಬುವುದಕ್ಕೂ ಗಟ್ಟಿತನದ ಕಲಾಪ್ರೇಮವಿರಬೇಕು. ಈ ನಿಟ್ಟಿನಲ್ಲಿ ನೋಡೋದಾದರೆ ಹೀರೋ ಪಾತ್ರವನ್ನು ವೀಲ್ಚೇರ್ನಲ್ಲಿ ಕೂರಿಸಿಯೂ ನಿರ್ದೇಶಕ ನಟರಾಜ್ ಗೆದ್ದಿದ್ದಾರೆ. ಇಮೇಜು ಮುಂತಾದವನ್ನೆಲ್ಲ ಮಡಚಿಟ್ಟು ವೀಲ್ಚೇರ್ನಲ್ಲಿ ಕೂತೇ ಯಾನ ಮಾಡಿದರೂ ರಾಮ್ ಚೇತನ್ ಕೂಡಾ ಗೆದ್ದಿದ್ದಾರೆ. ನಿಖರವಾಗಿ ಹೇಳಬೇಕೆಂದರೆ ಸಂಭಾಷಣೆ, ಪಾತ್ರಪೋಷಣೆ, ಕಥೆ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ವೀಲ್ ಚೇರ್ ರೋಮಿಯೋ ಬೇರೆಯದ್ದೇ ರೀತಿಯಲ್ಲಿ ಭಾಷ್ಯ ಬರೆದಿದೆ.
ಇಲ್ಲಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾ ಎಳೆಯೇ ವಿಭಿನ್ನವಾಗಿದೆ. ಪ್ರತೀ ಪಾತ್ರಗಳನ್ನು, ಪ್ರತೀ ಹಂಹಗಳಲ್ಲಿಯೂ ರೂಪಿಸಿದ ರೀತಿಯಿದೆಯಲ್ಲಾ? ಅದು ಒಟ್ಟಾರೆ ಸಿನಿಮಾದ ನೈಜ ಶಕ್ತಿ. ರಾಮ್ ಚೇತನ್ ಇಲ್ಲಿ ಉಲ್ಲಾಸ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದು ಹುಟ್ಟಿನಿಂದಲೇ ಮೂಳೆಸಂಬಂಧಿ ಕಾಯಿಲೆಯಿಂದ ಬಳಲುತ್ತಾ ಕಾಲುಗಳ ಸ್ವಾಧೀನ ಕಳೆದುಕೊಂಡ ಪಾತ್ರ. ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲಾರದ ಸ್ಥಿತಿ ಉಲ್ಲಾಸನದ್ದು. ಇಂಥಾ ಅಮ್ಮನಿಲ್ಲದ ಕೂಸನ್ನು ಹೆಜ್ಜೆ ಹೆಜ್ಜೆಯಲ್ಲಿಯೂ ನೆರಳಾಗಿ ಪೊರೆಯುವ ತಂದೆಯಾಗಿ ಸುಚೇಂದ್ರ ಪ್ರಸಾದ್ ಅವರದ್ದು ಅದ್ಭುತ ನಟನೆ. ಹೀಗೆ ವಿಕಲಾಂಗನಾಗಿ ಹುಟ್ಟಿದ ಉಲ್ಲಾಸ್ ಬುದ್ಧಿ ಬಲಿತ ಮೇಲೂ ವೀಲ್ಚೇರಿಗೇ ಅಂಟಿ ಕೂರಬೇಕಾದ ದುಃಸ್ಥಿತಿ.
ಯಾರಾದರೂ ಬಂದು ಸಪೋರ್ಟು ಮಾಡದಿದ್ದರೆ ಮಿಸುಕಾಡಲೂ ಆಗದಂಥಾ ಉಲ್ಲಾಸನೊಳಗೆ ಅಪ್ಪನ ಕಾರಣದಿಂದಲೇ ಉತ್ಸಾಹದ ಬುಗ್ಗೆ ಪುಟಿಯುತ್ತಿರುತ್ತೆ. ಆನರ ಕಣ್ಣಿನಲ್ಲಿ ಹೇಗೇ ಕಂಡರೂ ತನ್ನ ಮಗನನ್ನು ಬಿಂದಾಸ್ ಆಗಿರುವಂತೆ ಬೆಳೆಸಿದ ಅಪ್ಪನಿಗೆ ಬದುಕೇ ಒಂದು ಸವಾಲು. ಆದರೆ ನಿಜವಾದ ಸವಾಲೆದುರಾಗೋದು ಮಗ ವಯಸ್ಸಿಗೆ ಬಂದಾಗ. ಆ ಹಂತದಲ್ಲಿ ಆತನಿಗೊಂದು ಮದುವೆ ಮಾಡಬೇಕೆಂದು ಪಟ್ಟ ಪ್ರಯತ್ನಗಳೆಲ್ಲವೂ ನೀರಿನ ಮೇಲೆ ಹೋಮ ಮಾಡಿದಂತಾಗುತ್ತೆ. ಅದಾದ ನಂತರದಲ್ಲಿ ಕಥೆ ನಿರೀಕ್ಷೆಯಾಚೆಗೆ ಹೊರಳಿಕೊಳ್ಳುತ್ತೆ. ನಮಗೆಲ್ಲ ಪರಿಚಯವಿಲ್ಲದ ಮನೋಲೋಕವನ್ನು ಹಸಿ ಹಸಿಯಾಗಿ ತಂದು ಎದುರಿಗಿಡುತ್ತೆ. ವಿಕ್ಷಿಪ್ತ ಜಗತ್ತೊಂದರ ಇಕ್ಕೆಲದಲ್ಲಿ ದೇವತೆಯಂಥವಳೊಬ್ಬಳು ವೀಲ್ಚೇರ್ ರೋಮಿಯೋನನ್ನು ಎದುರುಗೊಳ್ಳುತ್ತಾಳೆ. ಅಲ್ಲಿ ಪ್ರೀತಿಯಾಗುತ್ತಾ? ಮಗನಿಗೆ ಮದುವೆ ಮಾಡಲೆತ್ನಿಸಿ ಸೋತ ಅಪ್ಪ ಮುಂದೇನು ಮಾಡುತ್ತಾನೆ? ರೋಮಿಯೋಗೆ ಪ್ರೀತಿ ದಕ್ಕುತ್ತಾ? ಮುಂತಾದ ಪ್ರಶ್ನೆಗಳಿಗೆ ಸಿನಿಮಾ ಮಂದಿರದಲ್ಲಿಯೇ ಮಜವಾದ ಉತ್ತರಗಳಿದ್ದಾವೆ.
ಇದು ವಿಶಾಲವಾದ ಹರವುಳ್ಳ ಕಥೆ. ಅದು ಒಂದಿನಿತೂ ಅಸ್ತವ್ಯಸ್ಥವಾಗದಂತೆ ಕಟ್ಟಿಕೊಟ್ಟಿರೋದೇ ಈ ಸಿನಿಮಾದ ಹೆಚ್ಚುಗಾರಿಕೆ. ಒಂದೆಳೆ ತಪ್ಪಿದರೂ ಕಥೆ ಎತ್ತೆತ್ತಲೋ ಹೊಯ್ದಾಡಿ ಹಿಡಿತ ತಪ್ಪುವ ಅಪಾಯಗಳಿದ್ದವು. ಅದೆಲ್ಲವನ್ನೂ ಜಾಣ್ಮೆಯಿಂದ ದಾಟಿಕೊಂಡಿರುವ ನಿರ್ದೇಶಕ ನಟರಾಜ್ ಮೊದಲ ಪ್ರಯತ್ನದಲ್ಲಿಯೇ ಗೆದ್ದಿದ್ದಾರೆ. ಹಾಗೆ ನೋಡಿದರೆ ಅವರು ಹೊಸೆದಿರುವ ಕಥೆಯೇ ವಿಶೇಷವಾದದ್ದು. ಒಂದು ಸಿನಿಮಾ ಹೀರೋ ಅಂದರೆ ಒಂದಷ್ಟು ಚೌಕಟ್ಟಿನಲ್ಲಿ ಬಂಧಿಯಾದ ಕಲ್ಪನೆಗಳಿರುತ್ತವೆ. ಕಟ್ಟುಮಸ್ತಾಗಿರಬೇಕು, ಎದುರಿಗೆ ನೂರು ಜನ ಬಂದರೂ ಬಡಿದು ಬಿಸಾಕಬೇಕೆಂಬುದೆಲ್ಲ ಆ ಸಿದ್ಧಸೂತ್ರದ ಕಾನ್ಸೆಪ್ಟುಗಳು. ಆದರೆ ಇಲ್ಲಿನ ಹೀರೋ ವೀಲ್ಚೇರ್ ಬಿಟ್ಟು ಕಡೇಯ ತನಕವೂ ಆಚೀಚೆ ಕದಲುವುದಿಲ್ಲ. ಇಡೀ ಕಥೆಯೇ ಅದನ್ನು ಬಳಸಿಕೊಂಡು ಸಾಗುತ್ತದೆ. ಆದರೆ ಅದೊಂದು ಕೊರತೆಯಲ್ಲ; ಅದುವೇ ನಿಜವಾದ ಶಕ್ತಿ ಎಂಬುದು ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ.
ಇನ್ನು ಈ ಚಿತ್ರ ಬಹುವಾಗಿ ಹಿಡಿಸೋದಕ್ಕೆ ಪ್ರಧಾನ ಕಾರಣವಾಗಿ ಕಾಣಿಸುವುದು ಪಂಚಿಂಗ್ ಡೈಲಾಗುಗಳು. ಸ್ವತಃ ಡೈಲಾಗ್ ರೈಟರ್ ಆಗಿ ಪ್ರೇಕ್ಷಕರ ನಾಡಿ ಮಿಡಿತ ಅರಿತಿರುವ ನಟರಾಜ್, ಈ ಚಿತ್ರದ ಸಂಭಾಷಣೆಯ ಜವಾಬ್ದಾರಿಯನ್ನು ಗುರು ಕಷ್ಯಪ್ ಅವರಿಗೆ ವಹಿಸಿದ್ದರು. ಇಲ್ಲಿನ ಕೆಲ ಡೈಲಾಗ್ಗಳಿಗಾಗಿ ಮೂರು ತಿಂಗಳಷ್ಟು ಕಾದಿರೋದಾಗಿ ನಿರ್ದೇಶಕರು ಆರಂಭಿಕವಾಗಿಯೇ ಹೇಳಿಕೊಂಡಿದ್ದರು. ಆ ಕಾಯುವಿಕೆಯಿಲ್ಲಿ ಸಾರ್ಥಕಗೊಂಡಂತಿದೆ. ಯಾಕೆಂದರೆ, ಈ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಡೈಲಾಗ್ ಕೂಡಾ ಒಂದಾಗಿ ಸೇರಿಕೊಂಡಿದೆ. ಪಂಚಿಂಗ್ ಡೈಲಾಗುಗಳೆಂದರೆ ಡಬಲ್ ಮೀನಿಂಗ್ ಎಂಬುದರಾಚೆಗೆ ಇಲ್ಲಿನ ಡೈಲಾಗುಗಳು ಬೇರೆಯದ್ದೇ ರೀತಿಯಲ್ಲಿ ಮೋಡಿ ಮಾಡುತ್ತವೆ. ಆ ಕಾಮಿಡಿಯಲ್ಲಿ ಗಾಂಭೀರ್ಯವಿದೆ, ದಟ್ಟ ವಾಸ್ತವವಿದೆ. ಅದನ್ನು ಪ್ರಚುರ ಪಡಿಸಿರುವ ಎಲ್ಲ ಕಲಾವಿದರೂ ಪ್ರತೀ ಫ್ರೇಮುಗಳಲ್ಲಿಯೂ ಪ್ರೇಕ್ಷಕರ ಮನಸಿಗೆ ಲಗ್ಗೆಯಿಡುತ್ತಾರೆ.
ಇದೆಲ್ಲದರೊಂದಿಗೆ ಬಹುವಾಗಿ ಕಾಡುವಂತೆ ಮೂಡಿ ಬಂದಿರೋದು ಹೀರೋ ಪಾತ್ರ. ಆ ಪಾತ್ರವನ್ನು ರಾಮ್ ಚೇತನ್ ಅಕ್ಷರಶಃ ಒಳಗಿಳಿಸಿಕೊಂಡು ನಟಿಸಿದ್ದಾರೆ. ಅಷ್ಟಕ್ಕೂ ಆ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕವೇ ಅವರು ಗೆದ್ದಿದ್ದಾರೆ. ಇದೀಗ ವೀಲ್ ಚೇರ್ ರೋಮಿಯೋ ಆಗಿ ವೀಲ್ಚೇರಿಗಂಟಿಕೊಂಡೇ ಸಿನಿಮಾ ಪೂರ್ತಿ ನಟಿಸಿರುವ ರಾಮ್ ಚೇತನ್ ಎಲ್ಲರನ್ನೂ ಆವರಿಸಿಕೊಳ್ಳುತ್ತಾರೆ. ಅವರ ಸ್ಟಿಲ್ಲುಗಳನ್ನು ನೋಡಿದವರೇ ಹೀರೋ ನಿಜವಾಗಿಯೂ ಅಂಗವಿಕಲ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆ ಹಾವಭಾವ, ಸೂಕ್ಷ್ಮ ಮಿಸುಕಾಟ, ಆಂಗಿಕ ಅಭಿನಯ… ಇದೆಲ್ಲದರಲ್ಲಿಯೂ ರಾಮ್ ಚೇತನ್ ಫುಲ್ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಇನ್ನುಳಿದಂತೆ ನಾಯಕಿಯಾಗಿ ಮಯೂರಿ ನಿರ್ವಹಿಸಿರುವ ಪಾತ್ರವಂತೂ ತನ್ನದೇ ರೀತಿಯಲ್ಲಿ ಕಾಡುತ್ತದೆ. ಇದು ಆ ನಟಿಯ ಪಾಲಿಗೆ ಮೈಲಿಗಲ್ಲಿನಂಥಾ ಪಾತ್ರ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
ನಿರ್ದೇಶಕರು ಈ ಚಿತ್ರದ ಎಲ್ಲ ಪಾತ್ರಗಳನ್ನೂ ಕೂಡಾ ಕಾಡುವಂತೆ, ಕಚಗುಳಿ ಇಡುವಂತೆ ಕಟ್ಟಿ ಕೊಟ್ಟಿದ್ದಾರೆ. ಅದರಲ್ಲಿಯೂ ರಂಗಾಯಣ ರಘು ನಿರ್ವಹಿಸಿರುವ ಜಾಕ್ ಮಾಮಾ ಎಂಬ ಪಾತ್ರವಂತೂ ಬಗೆ ಬಗೆಯಲ್ಲಿ ಕಾಡುವಂತಿದೆ. ಕೆಲ ಸಂದರ್ಭಗಳಲ್ಲಿ ರಂಗಾಯಣ ರಘು ಅವರಿಗೆ ಒಂದೇ ಥರದ ಪಾತ್ರಗಳು ಸಿಗುತ್ತಿವೆ ಅನ್ನಿಸೋದುಂಟು. ಅವರ ಮ್ಯಾನರಿಸಂನಲ್ಲಿಯೂ ಸಹ ಏಕತಾನತೆ ಹಣಕಿಹಾಕಿದ್ದೂ ಇದೆ. ಆದರೆ ಇದರಲ್ಲಿ ಹೊಸಾ ಬಗೆಯ ಪಾತ್ರವಾಗಿ ರಘು ಅಚ್ಚರಿ ಮೂಡಿಸಿದ್ದಾರೆ. ಸುಚೇಂದ್ರ ಪ್ರಸಾದ್, ತಬಲಾ ನಾಣಿ ಪಾತ್ರಗಳೂ ಕೂಡಾ ಹಾಗೆಯೇ ಮೂಡಿ ಬಂದಿವೆ.
ಒಟ್ಟಾರೆಯಾಗಿ ನಿರ್ದೇಶಕ ನಟರಾಜ್ ಮೊದಲ ಪ್ರಯತ್ನದಲ್ಲಿಯೇ ಪ್ರೇಕ್ಷಕರೆಲ್ಲರ ಮನ ಗೆದ್ದಿದ್ದಾರೆ. ಯಾವ ಪ್ರಾಕಾರದ ಚಿತ್ರಗಳನ್ನಾದರೂ ನಿರ್ದೇಶನ ಮಾಡಲು ನಟರಾಜ್ ಅರ್ಹರೆಂಬ ಭಾವ ಸಿನಿಮಾ ನೋಡಿದ ಯಾರಲ್ಲಿಯಾದರೂ ಮೂಡಿಕೊಳ್ಳದಿರಲು ಸಾಧ್ಯವೇ ಇಲ್ಲ. ದಶಕಗಳಿಗೂ ಹೆಚ್ಚು ಕಾಲದ ಅನುಭವ ಮತ್ತು ವಿಶಿಷ್ಟವಾದೊಂದು ಕಥಾನಕದ ಮೂಲಕ ಅವರ ಸರ್ವರನ್ನೂ ತಾಕಿದ್ದಾರೆ. ಒಂದು ಸಿನಿಮಾ ಗೆಲ್ಲಬೇಕೆಂದರೆ ಯಾವ್ಯಾಯ ಕ್ವಾಲಿಟಿಗಳಿರಬೇಕೋ ಅದೆಲ್ಲವನ್ನೂ ಬೆರೆಸಿಯೇ ನಟರಾಜ್ ಈ ಚಿತ್ರವನ್ನು ರೂಪಿಸಿದ್ದಾರೆ. ಅಂತೂ ಇದುವರೆಗೆ ನಿರ್ದೇಶನದ ನಾನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿ, ಸಂಭಾಷಣೆಕಾರರಾಗಿ ಗೆದ್ದಿದ್ದ ನಟರಾಜ್ ನಿರ್ದೇಶಕರಾಗಿಯೂ ಗೆಲುವು ದಾಖಲಿಸಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಯಶಸ್ವೀ ನಿರ್ದೇಶಕನಾಗಿ ನೆಲೆಗಾಣುವ ಕುರುಹುಗಳು ಸ್ಪಷ್ಟವಾಗಿಯೇ ಗೋಚರಿಸುತ್ತಿವೆ. ವೀಲ್ಚೇರ್ ರೋಮಿಯೋ ಖಂಡಿತವಾಗಿಯೂ ನೀವೆಲ್ಲ ನೋಡಬೇಕಾದ ಚಿತ್ರ.