ಅದ್ಭುತ ಕಥೆ ಅಣಿಗೊಂಡಿದ್ದರ ಹಿಂದಿದೆ ಅಗಾಧ ಪರಿಶ್ರಮ!
ಮೈಮೇಲಿನ ಮಚ್ಚೆಯಂತೆ ಮನಸಲ್ಲಿ ಬೇರೂರಿಕೊಂಡ ಒಂದು ಆಕಾಂಕ್ಷೆ, ಬದುಕೆಂಬುದು ಥರ ಥರದಲ್ಲಿ ಛಾಟಿ ಬೀಸಿದಾಗಲೂ ಸಾವರಿಸಿಕೊಂಡು ಇಷ್ಟದ ದಾರಿಯಲ್ಲಿ ಹೆಜ್ಜೆಯೂರುವ ಛಲ ಮತ್ತು ಅದಕ್ಕಾಗಿ ಮಾಡಿಕೊಳ್ಳುವ ಕ್ಷಣ ಕ್ಷಣದ ತಯಾರಿ… ಇಷ್ಟಿದ್ದು ಬಿಟ್ಟರೆ ಯಾರಿಗೇ ಆದರೂ ಗೆಲುವು ದಕ್ಕದಿರಲು ಸಾಧ್ಯವೇ ಇಲ್ಲ. ಅದರಲ್ಲಿಯೂ ಸಿನಿಮಾ ಎಂಬ ಮಾಯೆಯ ಬೆಂಬಿದ್ದವರಲ್ಲಿ ಇಂಥಾ ಕ್ವಾಲಿಟಿಗಳಿಲ್ಲದೇ ಹೋದರೆ ಒಂದಷ್ಟು ತಿಂಗಳ ಕಾಲ ಸಾವರಿಸಿಕೊಳ್ಳೋದೂ ಕಷ್ಟವಿದೆ. ಅಂಥಾದ್ದರ ನಡುವೆಯೇ ಜೈಸಿಕೊಂಡು ಮಹತ್ತರವಾದುದನ್ನು ಸಾಧಿಸಿದ ಛಲಗಾರರೂ ಇಲ್ಲಿದ್ದಾರೆ. ಇದೀಗ ಈ ವಾರವೇ ತೆರೆಗಾಣುತ್ತಿರುವ ವೀಲ್ಚೇರ್ ರೋಮಿಯೋ ಚಿತ್ರದ ಸಾರಥಿ ನಟರಾಜ್ ನಿಸ್ಸಂದೇಹವಾಗಿ ಆ ಸಾಲಿಗೆ ಸೇರ್ಪಡೆಗೊಳ್ಳುತ್ತಾರೆ!
ಒಂದು ಸಿನಿಮಾ ತೆರೆಗಾಣೋ ಸಂದರ್ಭ ಬಂತೆಂದರೆ ಅದರ ಸುತ್ತ ಬೇರೆಯದ್ದೇ ಪ್ರಭೆ ಹಬ್ಬಿಕೊಂಡಿರುತ್ತೆ. ಆದರೆ ಆ ಝಗಮಗದಾಚೆಗೆ ಆ ಸಿನಿಮಾದ ಭಾಗವಾದ ಅದೆಷ್ಟೋ ಜೀವಗಳ ನೋವು ನಲಿವಿನ ಸದ್ದಿರುತ್ತದೆ. ಅದಕ್ಕೆ ಕಿವಿಯಾದರೆ ಮಾತ್ರ ಭಿನ್ನವಾದ ಮತ್ತೊಂದಷ್ಟು ಕಥಾನಕಗಳು ಬಿಚ್ಚಿಕೊಳ್ಳುತ್ತವೆ. ಈಗ ಬಿಡುಗಡೆಗೆ ತಯಾರಾಗಿರೋ ವೀಲ್ಚೇರ್ ರೋಮಿಯೋ ಕೂಡಾ ಅದಕ್ಕೆ ಹೊರತಾಗಿಲ್ಲ. ಈ ಚಿತ್ರದ ನಿರ್ದೇಶಕ ನಟರಾಜ್ ಅವರ ಸಿನಿ ಯಾನ ಮತ್ತೊಂದು ಸಿನಿಮಾ ಸರಕಾಗುವಷ್ಟೇ ರೋಚಕವಾಗಿದೆ. ಅದು ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಕನಸಿಟ್ಟುಕೊಂಡಿರುವವರ ಪಾಲಿಗೆ ಸಾರ್ವಕಾಲಿಕ ಪ್ರೇರಣೆಯೂ ಹೌದು. ಕನಸಿನ ಹಾದಿಯಲ್ಲಿ ಮುಂದುವರೆದರೆ ಕಾಸಿಗೆ ಕೊರತೆ, ಕಾಸಿನ ಬೆನ್ನು ಬಿದ್ದರೆ ಸಾಧನೆಗೇ ಬೆನ್ನು ತಿರುಗಿಸುವಂತಾಗುವ ದುರಂತ… ಇಂಥಾ ಹೊಯ್ದಾಟದಲ್ಲಿರುವವರಿಗೂ ಕೂಡಾ ನಟರಾಜ್ ಅವರ ಜೀವನಗಾಥೆ ಹೊಸಾ ಹುರುಪು ತುಂಬುವಂತಿದೆ.
ನಟರಾಜ್ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನ ಪರಿಸರದಲ್ಲಿಯೇ. ಆರಂಭದಿಂದಲೇ ಸಿನಿಮಾ ಬಗೆಗೊಂದು ಸಹಜವಾದ ಸೆಳೆತ, ಆಸಕ್ತಿ ಇತ್ತಾದರೂ ಅದು ತೀವ್ರಗೊಂಡಿದ್ದು ಬಿಬಿಎಂ ಮಾಡುವ ಸಂದರ್ಭದಲ್ಲಿ. ಕದ್ದೂಮುಚ್ಚಿ ಒಂದಷ್ಟು ಸಿನಿಮಾಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಆ ಹೊತ್ತಿನಲ್ಲಿ ನಟರಾಜ್ ಓರ್ವ ಸಾಮಾನ್ಯ ಪ್ರೇಕ್ಷಕರಾಗಿದ್ದರಷ್ಟೇ. ಆದರೆ ದೊಂದು ದಿವ್ಯ ಘಳಿಗೆಯಲ್ಲಿ ನಟರಾಜ್ ಉಪೇಂದ್ರ ನಿರ್ದೇಶನದ ಎ ಚಿತ್ರ ನೋಡಿದ್ದರು. ಆ ಸಿನಿಮಾ ನೋಡಿ ಹೊರ ಬಂದವರ ನರ ನಾಡಿಗಳಲ್ಲಿಯೂ ಹೊಸಾ ಅನುಭೂತಿಯೊಂದು ಪ್ರವಹಿಸಿದಂತಾಗಿತ್ತು. ಅಲ್ಲಿಂದಾಚೆಗೆ ಸಿನಿಮಾ ನೋಡುವ ನೋಟವೇ ಬದಲಾಗಿತ್ತು. ಎ ಚಿತ್ರ ಅವರೊಳಗೆ ಹುಟ್ಟುಹಾಕಿದ್ದ ಪ್ರಶ್ನೆಗಳು, ಬೆರಗುಗಳೇ ಅವರೊಳಗೊಬ್ಬ ನಿರ್ದೇಶಕನನ್ನ ಪೊರೆಯಲಾರಂಭಿಸಿತ್ತು. ಅದುವೇ ಮುಂದೆ ತಾನೇನಾದರೂ ಆದರೆ ನಿರ್ದೇಶಕನಾಗಬೇಕೆಂಬ ಉತ್ಕಟ ಆಕಾಂಕ್ಷೆಯೊಂದು ನಟರಾಜ್ರ ಎಳೇ ಮನಸಿನಲ್ಲಿ ಕದಲದಂತೆ ಪ್ರತಿಷ್ಠಾಪಿತವಾಗಿತ್ತು.
ಇನ್ನುಳಿದಂತೆ ಅವರನ್ನು ಬಹಳಷ್ಟು ಪ್ರಭಾವಿಸಿದ್ದ ಚಿತ್ರವೆಂದರೆ ಗುರುಪ್ರಸಾದ್ ನಿರ್ದೇಶನದ ಮಠ. ಸಿನಿಮಾವೊಂದರ ಉದ್ದೇಶವೇನು? ಯಾವ್ಯಾವ ಎಲಿಮೆಂಟುಗಳಿದ್ದರೆ ಜನ ಹುಚ್ಚೆದ್ದು ಎಂಜಾಯ್ ಮಾಡುತ್ತಾರೆ? ಗಹನವಾದ ವಿಚಾರವನ್ನು ಗಾಢ ಹಾಸ್ಯದ ಮೂಲಕ ಪ್ರೇಕ್ಷಕರ ಮನಸಿಗೆ ದಾಟಿಸೋದು ಹೇಗೆ? ಇಂಥಾ ನಾನಾ ಸೂಕ್ಷ್ಮಗಳನ್ನು ನಟರಾಜ್ ಮಠದಿಂದಲೇ ಅಭ್ಯಸಿಸುವಂತಾಗಿತ್ತು. ನಿರ್ದೇಶಕನಾಗಬೇಕೆಂಬ ತಪನೆಯನ್ನು ಎದೆಯಲ್ಲಿಟ್ಟುಕೊಂಡ ನಟರಾಜ್ ಏನೇನೋ ಸರ್ಕಸ್ಸು ನಡೆಸಿ ಅಂತೂ ಅದೊಂದು ದಿನ ಮಠ ಗುರುಪ್ರಸಾದ್ ಅವರನ್ನು ಭೇಟಿಯಾಗಿದ್ದರು. ಅವರು ಯೆಸ್ ಅಂದಿದ್ದರೆ ಬಿಬಿಎಂ ಅನ್ನು ಅರ್ಧದಲ್ಲಿಯೇ ಬಿಟ್ಟು ಛಂಗನೆ ನೆಗೆಯುತ್ತಿದ್ದರೇನೋ ನಟರಾಜ್? ಆದರೆ ಸಿನಿಮಾ ವಿಚಾರದಲ್ಲಿ ಪಾತಾಳ ಗರಡಿ ಹಾಕಿದ್ದ ಗುರು, ಬಿಬಿಎಂ ಪದವಿ ಪೂರೈಸಿ ಬಂದರೆ ಮಾತ್ರವೇ ಅವಕಾಶ ಕೊಡೋದಾಗಿ ಖಂಡತುಂಡವಾಗಿ ಹೇಳಿ ಕಳಿಸಿದ್ದರಂತೆ.
ನಟರಾಜ್ ಅದು ಹೇಗೋ ಅವುಡುಗಚ್ಚಿ ಬಿಬಿಎಂ ಪೂರೈಸಿಕೊಳ್ಳುವಷ್ಟರಲ್ಲಿ ಮಠ ಗುರುಪ್ರಸಾದ್ ಎದ್ದೇಳು ಮಂಜುನಾಥ ಚಿತ್ರದ ತಯಾರಿಯಲ್ಲಿದ್ದರು. ಆ ಹೊತ್ತಿನಲ್ಲಿ ಎಂಟರಿ ಕೊಟ್ಟ ನಟರಾಜ್ರನ್ನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ನೇಮಿಸಿಕೊಂಡಿದ್ದರು. ಅದಾದ ನಂತರ ರವಿ, ರೂಪಾ ಅಯ್ಯರ್ ಮುಂತಾದವರ ಚಿತ್ರಗಳಲ್ಲಿಯೂ ಕಾರ್ಯ ನಿರ್ವಹಿಸುವ ಮೂಲಕ ಅವರು ಅನುಭವಗಳಿಗೆ ಒಡ್ಡಿಕೊಂಡಿದ್ದರು. ಆ ಹೊತ್ತಿಗೆಲ್ಲ ನಿರ್ದೇಶನದ ಚಹರೆಗಳು ಸ್ಪಷ್ಟವಾಗಿಯೇ ಅರ್ಥವಾಗಿದ್ದವಲ್ಲಾ? ಆ ದಿನಮಾನದಲ್ಲಿಯೇ ನಿರ್ದೇಶಕನಾಗಿಯೇ ತೀರುತ್ತೇನೆಂಬ ಆತ್ಮವಿಶ್ವಾಸ ಕೂಡಾ ನಟರಾಜ್ರೊಳಗೆ ಮೊಳೆತುಕೊಂಡಿತ್ತು. ಹೀಗೆ ತಮ್ಮೊಳಗಿನ ಸಿನಿಮಾ ಕನಸಿಗೊಂದು ಸ್ಪಷ್ಟ ರೂಪ, ಆಯಾಮ ಕಲ್ಪಿಸಿದ ಗುರುಪ್ರಸಾದ್ ಸೇರಿದಂತೆ ಎಲ್ಲರನ್ನೂ ಅವರು ಗುರು ಸ್ಥಾನದಲ್ಲಿಟ್ಟು ನೋಡುತ್ತಾರೆ.
ಆ ಬಳಿಕ ಸಿಕ್ಕಿದ ಪಿಸಿ ಶೇಖರ್ ನಟರಾಜ್ ಪಾಲಿಗೆ ಗುರುವೂ ಹೌದು, ಅಣ್ಣನಂಥಾ ಆತ್ಮಬಂಧುವೂ ಹೌದು. ರೋಮಿಯೋ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ನಟರಾಜ್ ನೇಮಕಗೊಂಡಿದ್ದರು. ಆ ಸಂದರ್ಭದಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುವ ಗುಣ, ಎಲ್ಲರನ್ನೂ ಕಾಲೆಳೆಯುತ್ತಾ ಲವಲವಿಕೆಯಿಂದಿರುವ ವ್ಯಕ್ತಿತ್ವ ಮತ್ತು ಮಾತುಗಳಲ್ಲಿ ಹೊಮ್ಮುತ್ತಿದ್ದ ಭಿನ್ನ ಬಗೆಯ ಕಸುವನ್ನು ಗಮನಿಸಿದ್ದ ಪಿಸಿ ಶೇಖರ್, ಅದೊಂದು ದಿನ ಹತ್ತಿರ ಕರೆದವರೇ ಡೈಲಾಗು ಬರೆಯುವ ಅಚ್ಚರಿದಾಯಕ ಜವಾಬ್ದಾರಿ ವಹಿಸಿದ್ದರು. ಹಾಗೆ ಅಚಾನಕ್ಕಾಗಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದ ನಟರಾಜ್ ಎಲ್ಲರನ್ನೂ ಆವರಿಸಿಕೊಳ್ಳುವಂಥಾ ಸಂಭಾಷಣೆ ಬರೆದು ಸೈ ಅನ್ನಿಸಿಕೊಂಡಿದ್ದರು. ಆ ನಂತರ ಡೈಲಾಗ್ ರೈಟರ್ ಆಗಿ ಅವರ ಯಾನ ಸ್ಟೈಲ್ ಕಿಂಗ್, ಝೂಮ್, ಆರೆಂಜ್, ಚಡ್ಡಿದೋಸ್ತ್ ಮುಂತಾದ ಚಿತ್ರಗಳವರೆಗೂ ಅನೂಚಾನವಾಗಿ ಮುಂದುವರೆದಿತ್ತು.
ಹಾಗೆ ನಿರ್ದೇಶನ ವಿಭಾಗದಲ್ಲಿ, ಎಲ್ಲಾ ಕೋನಗಳಿಂದಲೂ ಪಳಗಿಕೊಂಡಿದ್ದ ನಟರಾಜ್ರೊಳಗೆ ಅನುಕ್ಷಣವೂ ಸ್ವತಂತ್ರ ನಿರ್ದೇಶಕನಾಗಬೇಕೆಂಬ ಹಂಬಲ ಅನುರಣಿಸಲಾರಂಭಿಸಿತ್ತು. ಪಿ.ಸಿ ಶೇಖರ್ ಗರಡಿಯಲ್ಲಿ ಸರ್ವ ರೀತಿಯಿಂದಲೂ ಪಳಗಿಕೊಂಡ ಮೇಲೆ ಸ್ವತಂತ್ರ ನಿರ್ದೇಶಕರಾಗುವತ್ತ ಗಂಭೀರವಾಗಿ ಆಲೋಚಿಸಲಾರಂಭಿಸಿದ್ದರು. ನಿರ್ದೇಶಕನಾಗಿ ವಿಭಿನ್ನ ಕಥಾನಕದ ಮೂಲಕವೇ ಲಾಂಚ್ ಆಗಬೇಕೆಂಬ ಆಸೆ ಹೊತ್ತು ಕಥೆ ಹೊಸೆಯಲು ಕೂತ ನಟರಾಜ್ ಅವರಿಗೆ ವರವಾಗಿ ಕಂಡಿದ್ದು ನ್ಯಾಷನಲ್ ಜಿಯಾಗ್ರಫಿ ಚಾನೆಲ್ಲಿನಲ್ಲಿ ಪ್ರಸಾರವಾಗುತ್ತಿದ್ದ ಟ್ಯಾಬೋ ಸರಣಿಯದ್ದೊಂದು ಎಪಿಸೋಡ್. ಅದರಲ್ಲಿ ಆಸ್ಟ್ರೇಲಿಯಾದ ತಂತೆಯೊಬ್ಬ ತನ್ನ ಮಗನನ್ನು ವೇಶ್ಯಾ ಗೃಹಕ್ಕೆ ಕರೆದೊಯ್ಯುವ ನೈಜ ಕಥೆಯಿತ್ತು. ಆ ಕ್ಷಣದಿಂದಲೇ ನಟರಾಜ್ರೊಳಗೆ ಭಿನ್ನ ಕಥೆಯೊಂದು ಗರ್ಭಗಟ್ಟಲಾರಂಭಿಸಿತ್ತು.
ಹಾಗೆ ರೆಡಿಯಾದ ಕಥೆಯನ್ನು ಸ್ಕ್ರಿಫ್ಟ್ ಹಂತಕ್ಕಿಳಿಸಿದ ನಟರಾಜ್, ಗುರು ಕಶ್ಯಪ್ ಸಹಯೋಗದೊಂದಿಗೆ ಡೈಲಾಗ್ ವರ್ಷನ್ನಿಗೆ ಕೈ ಹಾಕಿದ್ದರು. ನಿಮಗೆಲ್ಲ ಅಚ್ಚರಿಯಾದೀತೇನೋ… ಕೇವಲ ಡೈಲಾಗ್ ವರ್ಷನ್ ಕಂಪ್ಲೀಟ್ ಮಾಡಿಕೊಳ್ಳಲು ಅವರು ತೆಗೆದುಕೊಂಡಿದ್ದ ಭರ್ತಿ ಮೂರು ವರ್ಷ. ಆ ಮೂರೂ ವರ್ಷಗಳ ಕಾಲ ಒಂದೊಂದು ಡೈಲಾಗುಗಳು ಪರಿಣಾಮಕಾರಿಯಾಗಿ ಮೂಡಿ ಬರಲು ಮೂರು ತಿಂಗಳ ಕಾಲ ಕಾದಿದ್ದೂ ಇದೆಯಂತೆ. ಹಾಗೆ ಎಲ್ಲವನ್ನೂ ಪಕ್ಕಾ ಆಗಿಸಿಕೊಂಡು ಇನ್ನೇನು ಚಿತ್ರೀಕರಣಕ್ಕಿಳಿದರಾಠಯ್ತು ಎಂಬಲ್ಲಿಗೆ ತಂದು ನಿಲ್ಲಿಸಿದ ನಟರಾಜ್ ಬೌಂಡೆಡ್ ಸ್ಕ್ರಿಪ್ಟ್ ಹಿಡಿದುಕೊಂಡು ಹೀರೋ ಹುಡುಕಾಟ ಆರಂಭಿಸಿದ್ದರು. ಆದರೆ ಮೊದಲ ದಿನವೇ ಈ ಕಸುಬು ಕಷ್ಟವಿದೆ ಎಂಬುದು ಅವರ ಅರಿವಿಗೆ ಬಂದಿತ್ತು.
ಇದರಲ್ಲಿ ನಾಯಕ ವೀಲ್ಚೇರಿನಲ್ಲಿಯೇ ಕೂತಿರುತ್ತಾನೆ. ಅದು ಆ ಪಾತ್ರದ ಚಹರೆ. ಆದರೆ ಒಂದಷ್ಟು ಹೀರೋಗಳು ನಾಯಕನನ್ನು ವೀಲ್ಚೇರಿನಿಂದ ಎಬ್ಬಿಸಿದರೆ ಮಾತ್ರವೇ ನಟಿಸೋದಾಗಿ ಹೇಳಿದ್ದೂ ಇದೆ. ಹತ್ದಿನೈದು ಮಂದಿಯನ್ನು ಅಪ್ರೋಚ್ ಮಾಡದ ನಂತರದಲ್ಲಿ ನೋಟು ಅಮಾನ್ಯೀಕರಣದ ಆಘಾತವೂ ಬಂದೊದಗಿತ್ತು. ಆ ಹೊತ್ತಿಗೆಲ್ಲ ಇದೇ ಸ್ಕ್ರಿಫ್ಟ್ ಇಟ್ಟುಕೊಂಡರೆ ತಾನು ನಿರ್ದೇಶಕನಾಗೋದು ಕನಸಿನ ಮಾತೆಂದು ಖುದ್ದು ನಟರಾಜ್ಗೆ ಅನ್ನಿಸಲಾರಂಭಿಸಿತ್ತಂತೆ. ಆದ್ದರಿಂದಲೇ ಅವರು ಮತ್ತೊಂದು ಕಥೆಯನ್ನು ಸಿದ್ಧಪಡಿಸಲಾರಂಭಿಸಿದ್ದರು. ಇನ್ನೇನು ಅದರ ಡೈಲಾಗ್ ವರ್ಷನ್ ಮುಗಿದು ಸ್ನೇಹಿತರೆಲ್ಲ ಸೇರಿ ಸಿನಿಮಾ ಮಾಡಬೇಕೆಂಬ ಕಡೇ ಘಳಿಗೆಯಲ್ಲಿ ಸಿಕ್ಕವರು ನಟರಾಜ್ರ ಹಳೇ ದೋಸ್ತಿ, ಪುಷ್ಪಕ ವಿಮಾನ ನಿರ್ದೇಶಕ ರವಿ. ಅವರು ಯಾರೋ ಒಬ್ಬರು ನಿರ್ಮಾಪಕರು ಕಥೆ ಕೇಳುತ್ತಿದ್ದಾರೆಂಬ ಸಂದೇಶ ರವಾನಿಸಿದ್ದರು. ಖುಷಿಗೊಂಡ ನಟರಾಜ್ ಕಥೆ ಹೇಳಬೇಕೆಂಬಷ್ಟರಲ್ಲಿ ಅವರು ಮಾಸ್ ಕಥೆ ಹುಡುಕುತ್ತಿದ್ದಾರೆಂಬ ನಿರಾಸೆಯೂ ಆವರಿಸಿಕೊಂಡಿತ್ತು.
ಆ ನಂತರ ಆ ನಿರ್ಮಾಪಕರ ಕಡೆಯಿಂದಲೇ ಅಂತಿಮ ಬುಲಾವು ಬಂದಿತ್ತು. ಅಲ್ಲಿ ನಿರ್ಮಾಪಕರೊಂದಿಗೆ ಹೀರೋ ರಾಮ್ ಚೇತನ್, ಅಣಜಿ ನಾಗರಾಜ್ಗ, ಕೆಸಿಎನ್ ಚಂದ್ರು ಕೂಡಾ ಇದ್ದರು. ಕಥೆ ಕೇಳಿ ಮೊದಲು ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಅಣಜಿ ನಾಗರಾಜ್. ಯಾವ ಅಂಶಗಳು ಅಕಸ್ಮಾತ್ ಕೈಕೊಟ್ಟರೂ ಕಾಮಿಡಿ ಖಂಡಿತಾ ಕಾಪಾಡುತ್ತೆ ಅಂದಿದ್ದ ಅಣಜಿ ಒಪ್ಪಿಕೊಳ್ಳುವಂತೆ ರಾಮ್ ಚೇತನ್ಗೆ ಸೂಚಿಸಿದ್ದರು. ಆ ನಂತರದಲ್ಲಿ ಕೆಸಿಎನ್ ಚಂದ್ರು ಕೂಡಾ ಖುಷಿಯಿಂದಲೇ ಓಕೆ ಅಂದಿದ್ದರು. ಇದೆಲ್ಲವನ್ನೂ ನೋಡಿ ನಿರ್ಮಾಪಕರೂ ಕೂಡಾ ಬಲು ಖುಷಿಯಿಂದಲೇ ಒಪ್ಪಿಕೊಂಡಿದ್ದರು. ಆ ನಂತರ ಶುರುವಾದದ್ದು ಚಿತ್ರೀಕರಣ.
ಹಾಗೆ ಇದೊಂದು ಕಥೆಯನ್ನು ಒಪ್ಪಿಸಲೋಸ್ಕರವೇ ನಟರಾಜ್ ನಾಲಕೈದು ವರ್ಷಗಳನ್ನು ಅವೆಸಿದ್ದಾರೆ. ಆ ಅವಧಿಯ ತುಂಬ ಸಾಕಷ್ಟು ನೋವು, ನಿರಾಸೆಗಳನ್ನು ಅನುಭವಿಸಿದ್ದಾರೆ. ಆದರೆ ಎಲ್ಲಿಯೂ ಕಾಂಪ್ರೋಮೈಸ್ ಆಗದೆ ಮುಂದುವರೆದಿದ್ದರ ಫಲವಾಗಿಯೇ ಇಂದು ವೀಲ್ಚೇರ್ ರೋಮಿಯೋ ಬಿಡುಗಡೆಗೆ ರೆಡಿಯಾಗಿ ನಿಂತಿದ್ದಾನೆ. ಆ ನಂತರದ ಹಾದಿಯೂ ಸುಗಮವಾಗೇನೂ ಇರಲಿಲ್ಲ. ಎಲ್ಲ ರೆಡಿಯಾಗಿದ್ದರೂ ಕೊರೋನಾ ಕಂಟಕ ಬಿಡುಗಡೆಗೆ ಅಡ್ಡಗಾಲು ಹಾಕಿತ್ತು. ಸಾವಿರ ಸಂಕಟ, ನಿರಾಸೆಗಳಲ್ಲಿ ಅದೂ ಒಂದು ಅಂದುಕೊಂಡ ನಟರಾಜ್ ಹೇಗೋ ದಾಟಿಕೊಂಡರು. ಇದು ವೀಲ್ಚೇರ್ ರೋಮಿಯೋ ರೆಡಿಯಾಗಿದ್ದರ ಹಿಂದಿನ ಕಥೆಯಾದರೆ, ಓರ್ವ ನಿರ್ದೇಶಕನಾಗಿ ನಟರಾಜ್ ಹದಗೊಂಡಿದ್ದರ ಹಿಂದೆಯೂ ಅಷ್ಟೇ ಸುದೀರ್ಘವಾದ ಕಥೆಯಿದೆ. ಅಲ್ಲೆಲ್ಲ ಅವರು ಕಷ್ಟ ಅನುಭವಿಸಿದ್ದಾರೆ. ನೋವುಂಡಿದ್ದಾರೆ. ನಿರಾಸೆಗೆ ಪಕ್ಕಾಗಿದ್ದಾರೆ. ಆದರೆ ಅದೆಲ್ಲವನ್ನೂ ಎದುರಿಸಿ ಕಾಲೂರಿ ನಿಲ್ಲುವಂಥಾ ಕಸುವು ಕೊಟ್ಟಿದ್ದು ಅವರೊಳಗೆ ಆಳವಾಗಿ ಬೇರೂರಿದ್ದ ಕನಸು. ಇಷ್ಟೆಲ್ಲ ಕಷ್ಟದ ಹಾದಿಯಲ್ಲಿ ರೂಪುಗೊಂಡ ವೀಲ್ ಚೇರ್ ರೋಮಿಯೋ ಎಲ್ಲರಿಗೂ ಇಷ್ಟವಾಗುವಂತಾಗಲಿ. ನಟರಾಜ್ರ ಕನಸುಗಳೆಲ್ಲವೂ ಸಾಕಾರಗೊಳ್ಳಲೆಂದು ಹಾರೈಸೋಣ…