ಬರಬರುತ್ತಾ ಜನ ತುಂಬಾನೇ ವಿಚಿತ್ರವಾಗ ತೊಡಗಿದ್ದಾರೆ. ಯಾವ ಕಲ್ಪನೆಗೂ ನಿಲುಕದಂಥಾ ವಿಚಿತ್ರ ನಡವಳಿಕೆಗಳ ಮೂಲಕ ಸದ್ದು ಮಾಡಲಾರಂಭಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಆಧುನಿಕ ಮಾನವರು ಸಂಬಂಧಗಳ ಬಗ್ಗೆಯೇ ನಂಬಿಕೆ ಕಳೆದುಕೊಂಡು ಅಕ್ಷರಶಃ ಅಂತರ್ ಪಿಶಾಚಿಗಳಂತಾಡತೊಡಗಿದ್ದಾರೆ. ಹಾಗಿದ್ದ ಮೇಲೆ ಎಲ್ಲ ಬಂಧಗಳನ್ನೂ ಗಟ್ಟಿಗೊಳಿಸುವ, ಒಚಿಟಿ ಬದುಕಿಗೆ ಟಿಸಿಲು ಮೂಡಿಸುವ ಮದುವೆಯೆಂಬೋ ಪಾರಂಪರಿಕ ಸಂಪ್ರದಾಯದ ಮೇಲೆ ಯುವ ಸಮೂಹ ನಂಬಿಕೆ ಇಡೋದು ಸಾಧ್ಯವೇ.
ಈಗಂತೂ ಯುವ ಜನತೆ ಮದುವೆಯನ್ನು ಸಂಕೋಲೆ ಎಂದೇ ಭಾವಿಸುತ್ತಿದ್ದಾರೆ. ಯಾವ ಬಂಧನವೂ ಇಲ್ಲದಿರೋ ಸ್ವಚ್ಛಂದ ಜೀವನದತ್ತ ಹಾತೊರೆಯುತ್ತಿದ್ದಾರೆ. ಮದುವೆ, ಗಂಡ ಹೆಂಡತಿ ಅಂದರೆ ಸ್ವಾತಂತ್ರ್ಯದ ಎದೆಗೆ ನಾಟಿಕೊಳ್ಳೋ ಬಂಧನದ ಮುಳ್ಳೆಂದೇ ಭಾವಿಸುತ್ತಿದ್ದಾರೆ. ಅಂಥಾದ್ದೇ ಮನಸ್ಥಿತಿಯಲ್ಲಿ ಮನುಷ್ಯ ಸಂಬಂಧಗಳ ಮೇಲೆ ನಂಬಿಕೆ ಕಳೆದುಕೊಂಡ ಆಸಾಮಿಯೊಬ್ಬ ಇಡೀ ಜಗತ್ತನ್ನೇ ಬೆಚ್ಚಿಬೀಳಿಸುವಂತೆ ಮದುವೆಯಾಗಿಬಿಟ್ಟಿದ್ದಾನೆ. ಆತನ ಮದುವೆ ಆ ಪರಿ ಸೆನ್ಸೇಷನ್ ಆಗಿರೋದಕ್ಕೆ ಕಾರಣವಿದೆ. ಯಾಕಂದ್ರೆ ಇಪ್ಪತ್ತೆರಡು ವರ್ಷದ ಆ ಯುವಕ ಮದುವೆಯಾಗಿರೋದು ಬಹುತೇಕರು ಚಪ್ಪರಿಸಿ ತಿನ್ನೋ ಫಿಜ್ಜಾ ಕೇಕ್ ಅನ್ನು!
ರಷ್ಯಾದ ಆ ಪುಣ್ಯಾತ್ಮನಿಗೆ ಇಪ್ಪತ್ತೆರಡರ ಹೊತ್ತಿಗೆಲ್ಲ ಏಕಾಂಗಿ ಜೀವನ ಬೋರು ಹೊಡೆಸಿತ್ತು. ಹಾಗಂತ ಹುಡುಗಿಯನ್ನು ಮದುವೆಯಾಗೋದು ಅವನಿಗಿಷ್ಟ ಇರಲಿಲ್ಲ. ಯಾಕಂದ್ರೆ ಅಲ್ಲಿ ವಿನಾ ಕಾರಣ ಜಗಳ, ನಂಬಿಕೆ ದ್ರೋಹ ಸಂಭವಿಸುತ್ತೆ ಅನ್ನೋದು ಅವನ ನಂಬಿಕೆ. ಆದ್ದರಿಂದಲೇ ಸೀರಿಯಸ್ಸಾಗಿ ಆತ ಫಿಜ್ಜಾ ಕೇಕನ್ನೇ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾನಂತೆ. ಆದರೆ ಆ ದೇಶದ ಅಧಿಕಾರಿಗಳು ಈ ಮದುವೆಗೆ ಕಾನೂನು ಮಾನ್ಯತೆ ಕೊಟ್ಟಿಲ್ಲ. ಅದಕ್ಕೂ ಕೇರು ಮಾಡದ ಈ ಹುಡುಗ ಫಿಜ್ಜಾವನ್ನು ಪ್ರೀತಿಯಿಂದ ವರಿಸಿದ್ದಾನೆ. ಆದರೆ ಮುಂಬರುವ ಖಾಸಗೀ ಅಗತ್ಯಗಳಿಗೆ ಅದೇನು ಮಾಡುತ್ತಾನೋ ಭಗವಂತನೇ ಬಲ್ಲ!