ಕನ್ನಡ ಕಿರುತೆರೆ ಜಗತ್ತಿನ ಮಹತ್ವದ ಮೈಲಿಗಲ್ಲಿನಂಥಾ ಒಂದಷ್ಟು ಕಾರ್ಯಕ್ರಮಗಳಿವೆ. ಬರೀ ಟಿಆರ್ಪಿ ಮೇಲೆ ಕಣ್ಣಿಟ್ಟ ಕೆಲ ಕೊಳಕು ರಿಯಾಲಿಟಿ ಶೋಗಳು ಪ್ರೇಕ್ಷಕರಲ್ಲೊಂದು ರೇಜಿಗೆ ಹುಟ್ಟಿಸಿದ್ದರೆ, ಮತ್ತೆ ಕೆಲ ಕಾರ್ಯಕ್ರಮಗಳು ಪ್ರೇಕ್ಷಕರನ್ನೆಲ್ಲ ಬೇಷರತ್ತಾಗಿ ಹಿಡಿದಿಟ್ಟುಕೊಂಡಿವೆ. ಅಂಥಾ ಸಕಾರಾತ್ಮಕ ಕಾರ್ಯಕ್ರಮಗಳಲ್ಲಿ ನಿಸ್ಸಂದೇಹವಾಗಿಯೂ ವೀಕೆಂಡ್ ವಿತ್ ರಮೇಶ್ ಸೇರಿಕೊಳ್ಳುತ್ತೆ. ನಟ ರಮೇಶ್ ಆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ರೀತಿ, ನಾನಾ ಕ್ಷೇತ್ರಗಳ ಸಾಧಕ ಬದುಕಿನ ಪ್ರತೀ ಮಗ್ಗುಲನ್ನು ತೆರೆದಿಡವ ಪರಿಗಳೆಲ್ಲವೂ ಭಾರೀ ಜನಪ್ರಿಯತೆ ಗಳಿಸಿಕೊಂಡಿವೆ. ಒಂದು ಸುದೀರ್ಘ ಅಂತರದ ನಂತರ ವೀಕೆಂಡ್ ವಿಥ್ ರಮೇಶ್ ಮತ್ತೆ ಶುರುವಾಗುತ್ತಿದೆ.
ಇದೇ ತಿಂಗಳ ಇಪ್ಪತೈದನೇ ತಾರೀಕಿನಿಂದ ಈ ಕಾರ್ಯಕ್ರಮ ಮತ್ತೆ ಪ್ರಸಾರವಾಗಲಿದೆ. ಆ ದಿನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಆವೃತ್ತಿಗೆ ಚಾಲನೆ ಸಿಗಲಿದೆ. ಹೀಗೆ ತಮ್ಮ ನೆಚ್ಚಿನ ಕಾರ್ಯಕ್ರಮಕ್ಕೆ ವಾರವಿವೊಂದು ಬಾಕಿ ಇರುವಾಗಲೇ ಪ್ರೇಕ್ಷಕರೆಲ್ಲರೊಳಗೂ, ಸಾಧಕರ ಸೀಟಿನಲ್ಲಿ ಯಾರ್ಯಾರು ಮಿರುಗಲಿದ್ದಾರೆ? ಈ ಸೀಜನ್ನಿನ ಮೊದಲ ಅತಿಥಿಯಾಗಿ ಯಾರು ಬರಲಿದ್ದಾರೆ ಅಂತೆಲ್ಲ ಪ್ರಶ್ನೆಗಳಿವೆ. ಈ ಹಿಂದೆ ಪ್ರಭುದೇವ ಮೊದಲ ಅತಿಥಿಯಾಗಲಿದ್ದಾರೆಂಬ ಮಾತುಗಳು ಹರಿದಾಡಿದ್ದವು. ಆದರೀಗ ಮೊದಲ ಅತಿಥಿಯಾಗಿ ಆಗಮಿಸಲಿರೋದು ಮೋಹಕ ತಾರೆ ರಮ್ಯಾ ಎಂಬ ಸುದ್ದಿ ಜಾಹೀರಾಗಿದೆ!
ಹಾಗೆ ನೋಡಿದರೆ, ಕಳೆದ ಒಂದಷ್ಟು ಸೀಜನ್ನುಗಳಲ್ಲಿಯೇ ರಮ್ಯಾ ಹೆಸರು ಕೇಳಿ ಬಂದಿತ್ತು. ಅಷ್ಟಕ್ಕೂ ದಶಕಗಳ ಕಾಲ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿ ಮೆರೆದು, ಈಗಲೂ ಅದೇ ಫ್ಯಾನ್ ಬೇಸ್ ಹೊಂದಿರುವಾಕೆ ರಮ್ಯಾ. ಈ ಬಾರಿಯಂತೂ ರಾಜಕೀಯದಾಚೆ ಆಕೆ ಸಿನಿಮಾ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಈ ಕಾರ್ಯಕ್ರಮದ ಆಯೋಜಕರು, ಸೀಜನ್ ಐದರ ಮೊದಲ ಅತಿಥಿ ಮೋಹಕ ತಾರೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಒಂದು ಮೂಲದ ಪ್ರಕಾರ, ಅದಕ್ಕೆ ರಮ್ಯಾ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಹಾಗಂತ ಚಿತ್ರೀಕರಣವೂ ಮುಕ್ತಾಯಗೊಂಡಿದೆ ಅಂದುಕೊಳ್ಳಬೇಕಿಲ್ಲ. ಇದೇ ಇಪ್ಪತ್ತೊಂದರಂದು ರಮ್ಯಾ ಚಿತ್ರೀರಣದಲ್ಲಿ ಭಾಗಿಯಾಗಲಿದ್ದಾರೆ.
ಅಲ್ಲಿಗೆ ಸೀಜನ್ ಐದರ ಮೊದಲ ಅತಿಥಿಯಾಗಿ ರಮ್ಯಾ ಸಾಧಕರ ಸೀಟಿನಲ್ಲಿ ಮಿಂಚೋದು ನಿಕ್ಕಿಯಾದಂತಾಗಿದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗಿದ್ದದ್ದು 2014ರಲ್ಲಿ. ಈ ಶೋನ ಮೊಟ್ಟಮೊದಲ ಅತಿಥಿಯಾಗಿ ಕಂಗೊಳಿಸಿದ್ದವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಆದರೆ ನಾಲಕ್ಕನೇ ಸೀಜನ್ನಿಗೆ ದಾಟಿಕೊಳ್ಳುವ ಹೊತ್ತಿಗೆಲ್ಲ, ಯೋಗ್ಯತೆ ಇಲ್ಲದ ಒಂದಷ್ಟು ಮಂದಿ ಸಾಧಕರ ಸೀಟಿನಲ್ಲಿ ಮಿಂಚಿದ್ದರೆಂಬ ಅಸಹನೆ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ರಕಿತ್ ಶೆಟ್ಟಿ, ಶ್ರೀಮುರುಳಿಯಂಥಾ ಮಹಾನ್ ಸಾಧಕರು ಆ ಸೀಟಿನಲ್ಲಿ ಕೂತು, ತಮ್ಮ ಕಲ್ಪಿತ ಕಷ್ಟದ ದಿನಗಳನ್ನು ಮೆಲುಕು ಹಾಕುತ್ತಾ, ಘನತೆ ಹೊಂದಿದ್ದ ಈ ಕಾರ್ಯಕ್ರಮಕ್ಕೊಂದು ಕಾಮಿಡಿ ಟಚ್ ಕೊಟ್ಟಿದ್ದರು. ಈ ಬಾರಿ ಅಂಥಾ ದುರಂತಗಳು ಸಂಭವಿಸದಿರಲೆಂಬುದು ಹಾರೈಕೆ!