ಅರಣ್ಯನಾಶದ ಭೀಕರ ಪರಿಣಾಮದ ಮುನ್ಸೂಚನೆ!
ನೀರಿಲ್ಲದೆ ಈ ಜಗತ್ತಿನ ಯಾವ ಜೀವರಾಶಿಯ ಬದುಕನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅದರ ಅರಿವಿರುವ ಮನುಷ್ಯರೇ ಮಾಡುತ್ತಿರುವ ಮಹಾ ಯಡವಟ್ಟುಗಳಿಂದಾಗಿ ದಿನೇ ದಿನೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕಣ್ಣೆದುರೇ ವ್ಯಾಪಕ ಮಳೆಯಾಗಿ, ಪ್ರವಾಹದಿಂದ ಜನರ ಬದುಕು ಕೊಚ್ಚಿ ಹೋಗುತ್ತಿರೋದು ನಿಜ; ಆದರೆ ಅದರ ಬೆನ್ನ ಹಿಂದೆಯೇ ಭೀಕರ ಕ್ಷಾಮದ ಚಹರೆಯೊಂದು ತಣ್ಣಗೆ ನಿಂತಂತಿದೆ. ಯಾಕೆ ಹೀಗಾಗುತ್ತಿದೆ? ಅತ್ತ ಅತೀ ಮಳೆಯಾಗುತ್ತಿದೆ, ಇತ್ತ ಕುಡಿಯುವ ನೀರಿಗೆ ಇಷ್ಟರಲ್ಲಿಯೇ ಹಾಹಾಕಾರವೇಳೋ ಲಕ್ಷಣಗಳಿದ್ದಾವೆ. ಒಳ್ಳೆ ಮಳೆಯಾದರೆ ನೀರಿಗೆ ಕೊರತೆಯಿಲ್ಲ ಎಂಬಂಥಾ ಸಾರ್ವಕಾಲಿಕ ಸತ್ಯವೂ ಯಾಕೆ ಸುಳ್ಳಾಗುತ್ತಿದೆ? ಹೀಗೊಂದು ಭಯಮಿಶ್ರಿತ ಪ್ರಶ್ನೆ ಎಲ್ಲರೊಳಗೂ ಇದೆ. ಅದಕ್ಕೆ ಉತ್ತರವಾಗಿ ನಿಲ್ಲೋದು ವ್ಯಾಪಕ ಅರಣ್ಯ ನಾಶವಲ್ಲದೆ ಬೇರೇನೂ ಅಲ್ಲ!
ಈ ಅರಣ್ಯ ನಾಶದಿಂದಾಗಿ ಜಾಗತಿಕ ವಾತಾವರಣವೇ ಇದೀಗ ಅದಲುಬದಲಾಗುತ್ತಿದೆ. ಅತ್ತ ನೀರಿನ ಹಾಹಾಕಾರದ ಲಕ್ಷಣಗಳು ಗೋಚರಿಸುತ್ತಿರುವಾಗಲೇ, ಇತ್ತ ಇರುವ ನೀರಿನ ಗುಣಮಟ್ಟವೂ ಹಾಳಾಗುತ್ತಿದೆ. ಹೀಗೆ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಜರ್ಮನಿಯ ಸಂಶೋಧರಕ ತಂಡವೊಂದು ಬೆಚ್ಚಿಬೀಳುವಂಥಾ ಸೂಕ್ಷ್ಮ ಸಂಗತಿಯೊಂದನ್ನು ಜಾಹೀರು ಮಾಡಿದೆ. ಹಲವಾರು ವರ್ಷಗಳಿಂದ ಈ ಸಂಶೋಧಕರು ಜರ್ಮನಿಯ ರಾಪ್ಪೋಡೆ ಎಂಬ ದೊಡ್ಡ ಜಲಾಶಯದ ನೀರಿನ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಿದ್ದರು. ಕಡೆಗೂ ಕುಡಿಯುವ ನೀರಿನ ಗುಣಮಟ್ಟ ಈ ಹಿಂದಿಗಿಂತ ಗಣನೀಯ ಪ್ರಮಾಣದಲ್ಲಿ ಕುಸಿರುತ್ತಿರೋದನ್ನು ನಿಖರವಾಗಿಯೇ ಪತ್ತೆಹಚ್ಚಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಜಗತ್ತಿನ ಎಲ್ಲ ಭಾಗಗಳಿಗೂ ಕೂಡಾ ಗುಣಮಟ್ಟದ ನೀರೆಂಬುದು ಮರೀಚಿಕೆಯಾಗಲಿದೆ ಎಂಬಂಥಾ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.
ಹಾಗಾದರೆ, ಕುಡಿಯುವ ನೀರಿನ ಗುಣಮಟ್ಟ ಹೀಗೆ ಗಣನೀಯವಾಗಿ ಕುಸಿಯಲು ಕಾರಣವೇನು ಎಂಬ ದಿಕ್ಕಿನಲ್ಲಿಯೂ ಆ ಸಂಶೋಧಕರು ಒಂದಷ್ಟು ಅಧ್ಯಯನ ನಡೆಸಿದ್ದಾರೆ. ಆಗ ಆ ಜಲಾಶಯಕ್ಕೆ ನೀರು ಪೂರೈಕೆಯಾಗುವ ಪ್ರದೇಶದತ್ತ ತೆರಳಿದ್ದಾರೆ. ಅಲ್ಲಿ ಕಾಡಿನ ಭಾಗ ಮೇಲು ನೋಟಕ್ಕೇ ಗೊತ್ತಾಗುವಂತೆ ಕ್ಷೀಣಿಸಿರುವ ಅಂಶ ಸ್ಪಷ್ಟವಾಗಿಯೇ ಮನದಟ್ಟಾಗಿದೆ. ಸಾಮಾನ್ಯವಾಗಿ ಕಾಡಿನ ಭಾಗಕ್ಕೆ ಬಿದ್ದ ನೀರನ್ನು ಮರದ ಬೇರುಗಳು ಫಿಲ್ಟರ್ ಮಾಡಿ ಕಳಿಸುತ್ತವೆ. ನಾನಾ ಪ್ರಬೇಧದ, ಔಷಧೀಯ ಗುಣಗಳನ್ನು ಹೊಂದಿರುವ ಬೇರುಗಳಿಂದ ಫಿಲ್ಟರ್ ಆಗಿ ಬರುವ ನೀರು ಸಹಜವಾಗಿಯೇ ಗುಣಮಟ್ಟದಿಂದ ಕೂಡಿರುತ್ತದೆ. ಆದರೆ ಕಾಡುಗಳ ನಾಶದಿಂದಾಗಿ ಅಂಥಾದ್ದೊಂದು ಪ್ರಾಕೃತಿಕವಾದ ಜರಡಿ ಹಿಡಿಯುವ ಕ್ರಿಯೆಯೇ ಕಣ್ಮರೆಯಾಗಿದೆ. ಅದುವೇ ಕುಡಿಯುವ ನೀರಿನ ಗುಣಮಟ್ಟಕ್ಕೆ ಕತ್ತರಿ ಹಾಕಿದೆ. ಇನ್ನಾದರೂ ಕಾಡುಗಳನ್ನು ಸಹಜವಾಗಿಡುವಂಥಾ ಪ್ರಯತ್ನಗಳು ನಡೆಯದಿದ್ದರೆ, ಮುಂದೊಂದು ದಿನ ಕುಡಿಯುವ ನೀರಿಂದಲೇ ನಾನಾ ರೋಗ ರುಜಿನಗಳು ಹಬ್ಬೋದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.