ಶೋಧ ನ್ಯೂಸ್ ಡೆಸ್ಕ್: ದೇಶಾದ್ಯಂತ ಇದೀಗ ರಾಜಕೀಯ ದ್ವೇಷ, ವಾಗ್ದಾಳಿ, ಮಾರಾಮಾರಿಗಳು ಮೇರೆ ಮೀರಿಕೊಂಡಿವೆ. ಕೆಲವೊಮ್ಮೆ ಅವುಗಳು ಹೊಡೆದಾಟ, ಬಡಿದಾಟದ ಹಂತವನ್ನೂ ತಲುಪಿಕೊಳ್ಳುತ್ತಿವೆ. ಇದೀಗ ಪುಣೆಯಲ್ಲಿಯೂ ಅಂಥಾದ್ದೇ ಒಂದು ವಿದ್ಯಮಾನ ಘಟಿಸಿದೆ. ಈ ಭಾಗದಲ್ಲಿ ಬಿಜೆಪಿಯ ಹಿರಿಯ, ಪ್ರಭಾವಿ ನಾಯಕರಾಗಿ ಗುರ್ತಿಸಿಕೊಂಡಿದ್ದ ವಿನಾಯಕ್ ಅಂಬೇಕರ್ ಮೇಲೆ ಅವರದ್ದೇ ಕಚೇರಿಗೆ ನುಗ್ಗಿದ ಎನ್ಸಿಪಿ ಕಾರ್ಯಕರ್ತರು ಭಯಾನಕವಾಗಿ ಹಲ್ಲೆ ನಡೆಸಿದ್ದಾರೆ. ಈ ವಿಚಾರವೀಗ ಆನ್ಲೈನ್ ತುಂಬೆಲ್ಲ ವೈರಲ್ ಆಗಿ ಬಿಟ್ಟಿದೆ.
ಈಗಂತೂ ರಾಜಕೀಯ ಮುಖಂಡರೂ ಕೂಡಾ ತಮ್ಮ ಜಿದ್ದು, ದ್ವೇಷಗಳನ್ನೆಲ್ಲ ಸಾಮಾಜಿಕ ಜಾಲತಾಣಗಳ ಮೂಲಕವೇ ಕಶಾರಿಕೊಳ್ಳಲಾರಂಭಿಸಿದ್ದಾರೆ. ಈ ಕಾರಣದಿಂದ ಹಿಂಬಾಲಕರೂ ಕೂಡಾ ಅಲ್ಲಿಯೇ ಲಂಗರು ಹಾಕಿ ಕಚ್ಚಾಡಿಕೊಂಡು ರಾಡಿಯೆಬ್ಬಿಸುತ್ತಾರೆ. ಬಿಜೆಪಿ ಮುಖಂಡ ವಿನಾಯಕ್ ಅಂಬೇಕರ್ ಕೂಡಾ ಅಂಥಾದ್ದೇ ಒಂದು ಕಚ್ಚಾಟಕ್ಕೆ ಎಡೆ ಮಾಡಿಕೊಡುವಂಥಾ ಯಡವಟ್ಟೊಂದನ್ನು ಮಾಡಿಕೊಂಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅಂಬೇಕರ್ ಇತ್ತೀಚೆಗೆ ಎನ್ಸಿಪಿಯ ಮಾಜೀ ನಾಯಕ ಶರದ್ ಪವಾರ್ ಬಗೆಗೊಂದು ಪೋಸ್ಟ್ ಹಾಕಿದ್ದರಂತೆ. ಆ ಪೋಸ್ಟ್ ಶರದ್ ಪವಾರ್ ಅವರನ್ನು ಅವಮಾನಿಸುವಂತಿದ್ದುದರಿಂದ ಶರದ್ ಹಿಂಬಾಲಕರು ರೊಚ್ಚಿಗೆದ್ದಿದ್ದರು. ಕಾರ್ಯಕರ್ತರೊಬ್ಬರು ವಿನಾಯಕ್ ಅಂಬೇಕರ್ ವಿರುದ್ಧ ದೂರನ್ನೂ ದಾಖಲಿಸಿದ್ದರು. ಆದರೂ ಕೂಡಾ ಪವಾರ್ ಹಿಂಬಾಲಕರ ಆಕ್ರೋಶ ತಣಿದಿರಲಿಲ್ಲ. ಮೊನ್ನೆ ದಿನ ನೇರವಾಗಿ ಪುಣೆಯಲ್ಲಿರುವ ಅಂಬೇಕರ್ ಕಚೇರಿಗೆ ನುಗ್ಗಿದವರೇ ಅವರನ್ನು ಎಳೆದಾಡಿದ್ದಾರೆ. ಕಪಾಳಕ್ಕೆ ಬಾರಿಸುವ ಮೂಲಕ ಸಿಟ್ಟು ತೀರಿಸಿಕೊಂಡಿದ್ದಾರೆ.