ಇದು ಕಿರುತೆರೆ ಕಿಟಕಿಯಿಂದ ತೆರೆದುಕೊಂಡ ಅಚ್ಚರಿ!
ಹೊಸತೇನನ್ನೋ ಸೃಷ್ಟಿಸಬೇಕೆಂಬ ಹಂಬಲಿಕೆಯೇ ಕನ್ನಡ ಚಿತ್ರರಂಗದ ದಿಕ್ಕು ದೆಸೆಗಳನ್ನು ಹಂತ ಹಂತವಾಗಿ ಬದಲಾಯಿಸುತ್ತಾ ಬಂದಿದೆ. ಅದರಲ್ಲಿಯೂ ಹೊಸಬರ ಆಗಮನದೊಂದಿಗೇ ಅಂಥಾದ್ದೊಂದು ಹೊಸ ಗಾಳಿ ಬೀಸಿ ಬರಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಕನ್ನಡ ಚಿತ್ರರಂಗವೀಗ ಮನ್ವಂತರವೊಂದರ ಹೊಸ್ತಿಲಲ್ಲಿದೆ. ಅತ್ತ ಒಂದು ಕಡೆಯಿಂದ ದೇಶಾದ್ಯಂತ ಸದ್ದು ಮಾಡಬಲ್ಲ ಪ್ಯಾನಿಂಡಿಯಾ ಸಿನಿಮಾಗಳು ಅಣಿಗೊಳ್ಳುತ್ತಿವೆ. ಇತ್ತ ಸೀಮಿತ ಬಜೆಟ್ಟಿನಲ್ಲಿಯೇ ವಿಶ್ವರೂಪ ದರ್ಶನ ಮಾಡಬಲ್ಲ ಕಸುವಿರುವಂಥಾ ಚಿತ್ರಗಳೂ ತಯಾರಾಗುತ್ತಿವೆ. ಆ ಸಾಲಿನಲ್ಲಿ ದಾಖಲಾಗುವ ಎಲ್ಲ ಗುಣಲಕ್ಷಣಗಳನ್ನೂ ಒಳಗೊಂಡಿರುವ ಚಿತ್ರ ವಿಕಿಪೀಡಿಯಾ. ಸೀರಿಯಲ್ ರೈಟರ್ ಆಗಿ ಯಶಸ್ವಿಯಾಗಿರುವ ಸೋಮು ಹೊಯ್ಸಳ ನಿರ್ದೇಶನದ ಈ ಚಿತ್ರ ಇದೇ ತಿಂಗಳ ಇಪ್ಪತ್ತಾರನೇ ತಾರೀಕಿನಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ.
ಕೆಲವೊಂದಷ್ಟು ಸಿನಿಮಾಗಳು ಶೀರ್ಷಿಕೆಯಿಂದಲೇ ಸೆಳೆದು ಬಿಡುತ್ತವೆ. ಅದರ ಮೂಲಕವೇ ಈ ಸಿನಿಮಾ ಯಾವ ಬಗೆಯದ್ದು? ಅದರ ಕಥೆ ಎಂಥಾದ್ದಿರಬಹುದು? ಅಂತೆಲ್ಲ ಆಲೋಚನೆಗೆ ಹಚ್ಚುತ್ತವೆ. ಸದ್ಯ ವಿಕಿಪೀಡಿಯಾ ಸುತ್ತಲೂ ಅಂಥಾದ್ದೇ ಚರ್ಚೆಗಳು ಹಬ್ಬಿಕೊಂಡಿವೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್ ಅಂತೂ ವಿಕಿಪೀಡಿಯಾ ಬಗ್ಗೆ ಗಾಢವಾದ ಭರವಸೆ ಮೂಡಿಕೊಳ್ಳುವಂತೆ ಮಾಡಿದೆ. ಒಂದು ಹಾಡು ಕೂಡಾ ನಾಡಿನೆಲ್ಲೆಡೆ ಗುನುಗಿಸಿಕೊಳ್ಳುತ್ತಿದೆ. ಹೀಗೆ ಎಲ್ಲೆಡೆ ಪಾಸಿಟಿವ್ ಟಾಕ್ ಕ್ರಿಯೇಟ್ ಆಗಿದ್ದನ್ನು ಕಂಡು ಒಂದಿಡೀ ಚಿತ್ರತಂಡ ಥ್ರಿಲ್ ಆಗಿಬಿಟ್ಟಿದೆ. ಯಾವುದೇ ಪ್ರಚಾರದ ಅಬ್ಬರವಿಲ್ಲದೆ ಹೀಗೆ ಹವಾ ಎಬ್ಬಿಸೋದಿದೆಯಲ್ಲಾ? ಅದು ಸಿನಿಮಾ ಒಂದರ ಗೆಲುವಿನ ಪ್ರಥಮ ಹೆಜ್ಜೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ.
ಈ ಚಿತ್ರದ ಮೂಲಕ ಈಗಾಲೇ ಕಿರುತೆರೆಯಲ್ಲಿ ಮನೆ ಮಾತಾಡಿ, ಒಂದಷ್ಟು ಸಿನಿಮಾಗಳಲ್ಲಿಯೂ ಪಾತ್ರ ನಿರ್ವಹಿಸಿರುವ ಯಶ್ವಂತ್ ನಾಯಕನಾಗಿ ಆಗಮಿಸುತ್ತಿದ್ದಾರೆ. ಹೀರೋ ಆಗಬೇಕೆಂಬ ಅಭಿಲಾಷೆಯನ್ನು ಎದೆಯಲ್ಲಿಟ್ಟಿಕೊಂಡು, ಐಟಿ ಕ್ಷೇತ್ರದ ಕೆಲಸ ಮತ್ತು ನಟನೆಯನ್ನು ಸರಿದೂಗಿಸಿಕೊಂಡು ಬಂದವರು ಯಶವಂತ್. ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಿರುವ ಅವರು, ಬಹಳಷ್ಟು ಕನಸಿಟ್ಟುಕೊಂಡು ಕ್ರೌಡ್ ಫಂಡಿಂಗ್ ಮೂಲಕ ವಿಕಿಪೀಡಿಯಾವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ದೊಡ್ಡ ಸವಾಲೊಂದನ್ನು ಮೈಮೇಲೆಳೆದುಕೊಂಡಿರೋ ಯಶವಂತ್, ಕೊರೋನಾ ಕಾಲಘಟ್ಟದಲ್ಲಿ ಪ್ರತೀ ಹೆಜ್ಜೆಗೂ ತೊಡಕೆದುರಾದರೂ ಅಂಜದೆ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಅಂದುಕೊಂಡಂತೆಯೇ ಚಿತ್ರ ಮೂಡಿ ಬಂದಿದೆ ಎಂಬ ಬಹು ದೊಡ್ಡ ತೃಪ್ತಿ ಅವರಲ್ಲಿದೆ.
ಹಾಗಾದರೆ ಇದು ಯಾವ ಜಾನರಿನ ಚಿತ್ರ? ಕಥಾ ಹಂದರದ ವಿಶೇಷತೆಗಳೇನೆಂಬ ಕುತೂಹಲ ಮೂಡಿಕೊಳ್ಳುವುದು ಸಹಜ. ಇಲ್ಲಿ ಪ್ರತಿಯೊಬ್ಬರ ಬದುಕಿಗೂ ಹತ್ತಿರಾದಂಥಾ ಕಥಾನಕ ಇದೆ ಎಂಬಂಥಾ ಸುಳಿವನ್ನಷ್ಟೇ ಚಿತ್ರತಂಡ ಬಿಟ್ಟು ಕೊಡುತ್ತದೆ. ಆದರೆ, ಪ್ರತೀ ಸೀನುಗಳಲ್ಲಿಯೂ ಸಾಮಾಜಿಕ ಸಂದೇಶವನ್ನಿಟ್ಟು, ಅದನ್ನು ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ದೃಷ್ಯೀಕರಿಸಲಾಗಿದೆಯಂತೆ. ಇರುವ ಸೌಕರ್ಯಗಳಲ್ಲಿಯೇ ಅದ್ದೂರಿಯಾಗಿ ವಿಕಿಪೀಡಿಯಾವನ್ನು ರೂಪಿಸಲಾಗಿದೆಯಂತೆ. ಸಾಮಾನ್ಯವಾಗಿ ಸಾಧಕರ ಬದುಕಿನ ಮಹತ್ತರ ಅಂಶಗಳ ವಿವರ ವಿಕಿಪೀಡಿಯಾದಲ್ಲಿ ಸಿಗುತ್ತದೆ. ಆದರೆ ಜನ ಸಾಮಾನ್ಯರ ಬದುಕಿನಲ್ಲಿಯೂ ಕೂಡಾ ಅಂಥಾದ್ದೇ ದಾಖಲಾರ್ಹ ಮಹತ್ತರ ಘಟ್ಟಗಳಿರುತ್ತವೆ. ಅಂಥಾ ಅಂಶಗಳನ್ನು ಎಲ್ಲರಿಗೂ ಇಷ್ಟವಾಗುವಂತೆ, ಸೊಗಸಾಗಿ ಕಟ್ಟಿ ಕೊಟ್ಟಿರುವ ಭರವಸೆ ಚಿತ್ರತಂಡದಲ್ಲಿದೆ.
ವಿಶೇಷವೆಂದರೆ, ಮೂರು ಪ್ರಧಾನ ಪಾತ್ರಗಳ ಸುತ್ತಾ ಇಲ್ಲಿನ ಕಥೆ ಚಲಿಸುತ್ತದೆ. ಇದೇ ಮೊದಲ ಬಾರಿ ಮಂಗಳಮುಖಿಯ ಬದುಕಿನ ಆಯಾಮಗಳನ್ನು ಪ್ರೇಕ್ಷಕರಿಗೆ ಭಿನ್ನ ಬಗೆಯಲ್ಲಿ ದಾಟಿಸುವ ಪ್ರಯತ್ನ ಈ ಮೂಲಕ ನಡೆದಿದೆ. ಒಂದು ಸಿನಿಮಾ ಎಂದರೆ ಗಂಡು, ಹೆಣ್ಣು ಮತ್ತು ಕೆಲ ಪಾತ್ರಗಳ ದೃಷ್ಟಿಯಲ್ಲಿ ಕಥೆಗಳು ತೆರೆದುಕೊಳ್ಳುತ್ತವೆ. ಆದರೆ ಓರ್ವ ಮಂಗಳಮುಖಿಯ ಕೇಂದ್ರಿತವಾಗಿಯೂ ಕಥೆ ತೆರೆದುಕೊಂಡಿದ್ದಿಲ್ಲ. ಮಂಗಳಮುಖಿಯರ ಖಾಸಗೀ ಪುಟಗಳನ್ನು ಬೆರಗುಗೊಳ್ಳುವಂತೆ ತೆರೆದಿಡುವ ಅಂಶಗಳೂ ಈ ಕಥೆಯಲ್ಲಿ ಅಡಕವಾಗಿವೆ. ಮಂಜುನಾಥ ಹೆಗಡೆ, ರಾಧಾ ರಾಮಚಂದ್ರ, ರಕ್ಷಿತಾ, ಮಂಜುಳಾ ರೆಡ್ಡಿ, ಶ್ರೀ ಹರಿ ಮುಂತಾದವರ ತಾರಾಗಣವಿದೆ. ಈ ಚಿತ್ರದಲ್ಲಿ ಎಪ್ಪತ್ತಕ್ಕೂ ಹೆಚ್ಚು ಪಾತ್ರಗಳಿವೆ. ಅದೆಲ್ಲವನ್ನೂ ಕಿರುತೆರೆ ಮತ್ತು ರಂಗಭೂಮಿ ಕಲಾವಿದರೇ ನಿರ್ವಹಿಸಿದ್ದಾರೆ. ಇಂಥಾ ಅನೇಕಾನೇಕ ಅಚ್ಚರಿಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ವಿಕಿಪೀಡಿಯಾ ವಾರದೊಪ್ಪತ್ತಿನಲ್ಲಿಯೇ ನಿಮ್ಮ ಮುಂದೆ ಅವತರಿಸಲಿದೆ.