ಶೋಧ ನ್ಯೂಸ್ ಡೆಸ್ಕ್: ಒಂದು ಕಾನೂನು ಜಾರಿಗೆ ಬಂದರೆ ಅದರಲ್ಲಿರೋ ಜನಹಿತವನ್ನೇ ಮರೆ ಮಾಚುವಂತೆ ಯಾರ್ಯಾರದ್ದೋ ಸ್ವಾರ್ಥಕ್ಕೆ ಬಳಕೆಯಾಗೋದೇ ಹೆಚ್ಚು. ಅರಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಧಾನವಾಗಿ ಸೇರಿಕೊಳ್ಳುತ್ತೆ. ಮಾಹಿತಿ ಹಕ್ಕು ಕಾಯ್ದೆ ಬಂದ ನಂತರದಲ್ಲಿ ಆಳೋ ಮಂದಿಯ ಹುಳುಕುಗಳು, ನಾನಾ ಸರ್ಕಾರಿ ಇಲಾಖೆಗಳ ಹಕೀಕತ್ತುಗಳು ದಂಡಿ ದಂಡಿಯಾಗಿ ಹೊರಬರುತ್ತಿವೆ. ದೇಶದ ತುಂಬೆಲ್ಲ ಅಕ್ಷರಶಃ ಯೋಧರಂತೆ ಬಡಿದಾಡುತ್ತಾ ಆರ್ಟಿಐ ಎಂಬ ಅಸ್ತ್ರದ ಮೂಲಕ ಸಮಾಜದ ಹಿತ ಕಾಯುವ ಕೆಲಸವನ್ನು ಅನೇಕರು ಮಾಡುತ್ತಾ ಬಂದಿದ್ದಾರೆ. ಅದೇ ಹೊತ್ತಿನಲ್ಲಿ ಒಂದಷ್ಟು ಮಂದಿ ಅದೇ ಆರ್ಟಿಐ ಅನ್ನು ಎತ್ತುವಳಿಯ ಅಸ್ತ್ರವಾಗಿಸಿಕೊಂಡಿದ್ದಾರೆ. ಈ ದೆಸೆಯಿಂದಲೇ ಒಂದಷ್ಟು ಕೊಲೆಗಳೂ ನಡೆಯುತ್ತಿವೆ. ಹಾಗಂತೆ ಆಗುತ್ತಿರುವ ಆರ್ಟಿಐ ಕಾರ್ಯಕರ್ತರ ಕೊಲೆಗಳಿಗೆಲ್ಲ ಎತ್ತುವಳಿಯೇ ಕಾರಣ ಅನ್ನುವಂತಿಲ್ಲ. ದಿಟ್ಟವಾಗಿ, ನ್ಯಾಯ ಸಮ್ಮತವಾಗಿರುವವರೂ ಉಸಿರು ಚೆಲ್ಲಿದ್ದಾರೆ.
ಇದೀಗ ಮದ್ಯಪ್ರದೇಶದಲ್ಲಿಯೂ ಹಾಡ ಹಗಲೇ ಆರ್ಟಿಐ ಕಾರ್ಯಕರ್ತನೊಬ್ಬನನ್ನು ಗುಂಡಿಟ್ಟು ಕೊಲ್ಲಲಾಗಿದೆ.ಈ ಕೊಲೆ ನಡೆದ ರೀತಿ ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಇಂಥಾದ್ದೊಂದು ಕೃತ್ಯ ನಡೆದಿರೋದು ಮಧ್ಯಪ್ರದೇಶದ ವಿದಿಶಾ ಎಂಬಲ್ಲಿ ಅಲ್ಲಿನ ಪಿಡಬ್ಲ್ಯೂಡಿ ಇಲಾಖೆಯ ವರ್ಕಿಂಗ್ ಟಯಂನಲ್ಲಿಯೇ ಈ ಘಟನೆ ನಡೆದಿದೆ. ಆ ಅವಧಿಯಲ್ಲಿ ಅಲ್ಲಿ ಜನಜಂಗುಳಿಯಿತ್ತು. ಹಾಗೆ ನೆರೆದಿದ್ದ ಸಾರ್ವಜನಿಕರೆದುರೇ ಆರ್ಟಿಐ ಕಾರ್ಯಕರ್ತ ರಂಜಿತ್ ಸೋನಿ ಎಂಬಾತನ ತಲೆಗೆ ಗುಂಡಿಟ್ಟು ಕೊಲ್ಲಲಾಗಿದೆ.
ಸೋನಿ ಲೋಕೋಪಯೋಗಿ ಇಲಾಖೆಯಲ್ಲಿ ಸಣ್ಣ ಮಟ್ಟದ ಗುತ್ತಿಗೆದಾರನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ. ಅದರಿಂದ ಬದುಕು ನಡೆಸಿಕೊಂಡು ಆರ್ಟಿಐ ಕಾರ್ಯಕರ್ತನಾಗಿಯೂ ಆ ಭಾಗದಲ್ಲಿ ಒಂದಿಷ್ಟು ಪ್ರಸಿದ್ಧಿ ಪಡೆದುಕೊಂಡಿದ್ದ. ಇಂಥಾ ರಂಜೀತ್ ಸೋನಿ ಮೊನ್ನೆ ದಿನ ಲೋಕೋಪಯೋಗಿ ಇಲಾಖೆಯಿಂದ ಅದ್ಯಾವುದೋ ಕಡತ ಹಿಡಿದು ಹೊರ ಬರುತ್ತಿದ್ದ ವೇಳೆ ಹಂತಕರು ಏಕಾಏಕಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.