ಹೆಚ್ಚೇನಲ್ಲ; ಹದಿನೈದಿಪ್ಪತ್ತು ಅಡಿಯಿಂದ ಕೆಳಕ್ಕೆ ಬಿದ್ದರೂ ಸೊಂಟವೂ ಸೇರಿದಂತೆ, ದೇಹದ ನಾನಾ ಭಾಗದ ಮೂಳೆಗಳು ಮುರಿಯೋ ಸಂಭವವಿದೆ. ತಲೆ ಕೆಳಗಾಗಿ ಬಿದ್ದರಂತೂ ಬದುಕೋದೇ ಡೌಟು. ಇನ್ನು ನೂರಾರು ಅಡಿಯಿಂದ ಬಿದ್ದರಂತೂ ಮೇಲೆದ್ದು ಬರೋ ಸಾಧ್ಯತೆಗಳೇ ಕಡಿಮೆ. ಹಾಗಿದ್ದ ಮೇಲೆ ಸಾವಿರಾರು ಅಡಿಯಿಂದ ಕೆಳಕ್ಕೆ ಬಿದ್ದರೆ ಬದುಕೋದು ಸಾಧ್ಯವೇ? ಇಂಥಾ ಪ್ರಶ್ನೆ ಎದುರಾದ್ರೆ ಸಾರಾಸಗಟಾಗಿ ಸಾಧ್ಯವಿಲ್ಲ ಎಂಬ ಉತ್ತರವೇ ಎದುರುಗೊಳ್ಳುತ್ತೆ. ಆದರೆ ಅದನ್ನು ಸುಳದ್ಳು ಮಾಡುವಂಥಾ ಘಟನೆಯೊಂದು ೧೯೭೦ರ ದಶಕದಲ್ಲಿಯೇ ನಡೆಯಲಾಗಿದೆ. ಅದು ಗಿನ್ನಿಸ್ ರೆಕಾರ್ಡಿನಲ್ಲಿಯೂ ದಾಖಲಾಗಿ ಬಿಟ್ಟಿದೆ!
ಸರ್ಬಿಯಾ ದೇಶದ ಪ್ಲೈಟ್ ಅಟೆಂಡೆಂಟ್ ವೆಸ್ನಾ ವುಲೋವಿಕ್ ಎಂಬ ಗಟ್ಟಿಗಿತ್ತಿ ಹೆಣ್ಣು ಮಗಳು ಈ ಪವಾಡಸದೃಶ ಘಟನೆಯ ಕೇಂದ್ರಬಿಂದು. ಹಲವಾರು ವರ್ಷಗಳಿಂದಲೂ ವಿಮಾನ ಯಾನದ ಬಗ್ಗೆ ಕನಸು ಕಂಡು ಕಡೆಗೂ ಪ್ಲೈಟ್ ಅಟೆಂಡೆಂಟ್ ಆಗಿದ್ದ ಆಕೆ ವಿಮಾನ ಪತನದ ಆಘಾತ ಎದುರಿಸುವಂತಾಗಿತ್ತು. ಗಡಿಬಿಡಿಯಲ್ಲಿ ಪ್ಯಾರಾಚೂಟ್ ಅನ್ನೂ ಹಿಡಿದುಕೊಳ್ಳದೆ ಕ್ರ್ಯಾಶ್ ಆಗಿದ್ದ ವಿಮಾನದಿಂದ ಹಾರಿಕೊಂಡ ಆಕೆ ಮೂವತ್ಮೂರು ಸಾವಿರ ಅಡಿಗಳಷ್ಟು ಎತ್ತರದಿಂದ ಭೂಮಿಗೆ ಬಿದ್ದಿದ್ದಳು. ಈ ಎತ್ತರ ಕೇಳಿದ ಯಾರೇ ಆದರೂ ಆಕೆಯ ಮೂಳೆಗಳೂ ಸಿಗಲಿಕ್ಕಿಲ್ಲ ಎಂಬ ತೀರ್ಮಾನಕ್ಕೆ ಬರಬಹುದು. ಅದಕ್ಕೆ ತದ್ವಿರುದ್ಧ ಎಂಬಂತೆ ಆಕೆ ಬದುಕಿ ಬಂದಿದ್ದಳು!
ಈ ಘಟನೆ ನಡೆದದ್ದು ೧೯೭೨ರ ಜನವರಿ ಇಪ್ಪತ್ತಾರರಂದು. ಜೆಟ್ ಏರ್ವೇಸ್ನ ವಿಮಾನ ಕೋಪನ್ಹೆಗೆನ್ ವಿಮಾನ ನಿಲ್ದಾಣದಿಂದ ಮಧ್ಯಾನ್ಹ ಮೂರೂವರೆಯ ಹೊತ್ತಿಗೆಲ್ಲ ಟೇಕಾಫ್ ಆಗಿತ್ತು. ಅದಾಗಿ ನಲವತ್ತು ನಿಮಿಷ ಕಳೆಯೋದರೊಳಗಾಗಿ ವಿಮಾನ ಪತನಕ್ಕೀಡಾಗಿತ್ತು. ಕೆಳಕ್ಕೆ ಉದುರುತ್ತಿದ್ದ ವಿಮಾನದಿಂದ ಇಪ್ಪತ್ತೆರಡು ವರ್ಷದ ವೆಸ್ನಾ ವುಲೋವಿಕ್ ಪ್ಯಾರಾಚೂಟ್ ಕೂಡಾ ಇಲ್ಲದೆ ಕೆಳಕ್ಕೆ ಹಾರಿದ್ದಳು. ಆ ಕ್ಷಣ ಆಕೆಯೊಳಗೆ ಹೇಗಾದರೂ ಮಾಡಿ ಬದುಕೋ ಹಂಬಲವಿತ್ತು. ಹಾಗೆ ಮೂವತ್ಮೂರು ಸಾವಿರ ಅಡಿಯಿಂದ ಬರಿಗೈಲಿ ಧುಮುಕಿದ್ದ ವೆಸ್ನಾ ವುಲೋವಿಕ್ ಗಿಡಗಂಟಿಗಳಿರುವ ಪ್ರದೇಶವೊಂದರಲ್ಲಿ ಪ್ರಜ್ಞಾ ಹೀನಳಾಗಿ, ಗಾಯಗೊಂಡು ಬಿದ್ದಿದ್ದಳಂತೆ.
ಒಂದು ವೇಳೆ ಅದೇನಾದರೂ ಜನ ಓಡಾಡುವ ಪ್ರದೇಶ ಅಲ್ಲದೇ ಹೋಗಿದ್ದರೆ ವೆಸ್ನಾ ವುಲೋವಿಕ್ಳನ್ನು ಯಾರೂ ಗಮನಿಸುತ್ತಿರಲಿಲ್ಲ. ಆದರೆ ಆಕೆ ಬಿದ್ದ ಕೆಲವೇ ಕ್ಷಣಗಳಲ್ಲಿ ಆ ಹಳ್ಳಿಯ ಬ್ರೂನೋ ಹೋಂಕೆ ಎಂಬಾತ ಅದೇ ದಾರಿಯಲ್ಲಿ ಸಾಗಿ ಬಂದಿದ್ದ. ಅಚಾನಕ್ಕಾಗಿ ವೆಸ್ನಾಳನ್ನ ಕಂಡು ತಡ ಮಾಡದೆ ಆಸ್ಪತ್ರೆಗೆ ದಾಖಲಿಸಿದ್ದ. ಆ ಕ್ಷಣದಲ್ಲಿ ವೈದ್ಯರಿಗೂ ಕೂಡಾ ಆಕೆ ಬದುಕೋ ಸಾಧ್ಯತೆಗಳು ಕಂಡು ಬರಲಿಲ್ಲ. ಆ ಥರದಲ್ಲಿ ವೆಸ್ನಾಳ ದೇಹ ನಜ್ಜುಗುಜ್ಜಾಗಿತ್ತು. ಆದರೆ ಪವಾಡವೆಂಬಂತೆ ಮೆಲ್ಲಗೆ ಆಕೆ ಚೇತರಿಸಿಕೊಳ್ಳಲಾರಂಭಿಸಿದ್ದಳು. ಕಡೆಗೂ ಹದಿನೆಂಟು ತಿಂಗಳ ನಿರಂತರ ಚಿಕಿತ್ಸೆ ಪಡೆದು ಆಕೆ ಗುಣಮುಖಳಾಗಿ ಬದುಕುಳಿದಿದ್ದಳು.
ಅಂದಹಾಗೆ ಆ ವಿಮಾನ ದುರಂತದಲ್ಲಿ ಇಪ್ಪತ್ತೆಂಟು ಮಂದಿ ಪ್ರಯಾಣಿಕರು ಪೈಲೆಟ್ ಸಮೇತ ಅಸು ನೀಗಿದ್ದರು. ಆ ದುರಂತದಲ್ಲಿ ಬದುಕುಳಿದಿದ್ದು ವೆಸ್ನಾ ವುಲೋವಿಕ್ ಮಾತ್ರ. ಆ ನಂತರವೂ ಆಕೆ ಎಂದಿನಂತೆಯೇ ಲವ ಲವಿಕೆಯಿಂದ, ಜೀವನೋತ್ಸಾಹದಿಂದ ಆಕೆ ಬದುಕಿದ್ದಳಂತೆ. ಬದುಕಿನ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿದ್ದ ವೆಸ್ನಾ ವುಲೋವಿಕ್ ಆ ನಂತರ ಹೊಸಾ ಕಲಿಕೆಗೂ ತೆರೆದುಕೊಂಡಿದ್ದಳಂತೆ. ಅಂಥ ಮಹಾ ದುರಂತದಲ್ಲಿ ಬದುಕುಳಿದು ತುಂಬು ಜೀವನ ನಡೆಸಿದ್ದ ವೆಸ್ನಾ ೨೦೧೬ ಡಿಸೆಂಬರ್ ೨೩ರಂದು ನಿಧನ ಹೊಂದಿದ್ದಾರೆ.