ಒಮ್ಮೊಮ್ಮೆ ಯಾವುದೋ ಸಿನಿಮಾದ ಸಣ್ಣ ತುಣುಕಿನಲ್ಲಿ ಹಣಕಿ ಹಾಕುವ ಪಾತ್ರದ ಚಹರೆಗಳು ಮನಸಲ್ಲುಳಿದು ಬಿಡುತ್ತವೆ. ಅಂಥಾದ್ದೊಂದು ಪವಾಡ ಸಂಭವಿಸುವುದು ತುಸು ಅಪರೂಪವಾದರೂ, ಹಾಗೆ ಮನ ಸೆಳೆದ ಪಾತ್ರದ ರೂವಾರಿಯಾದ ನಟರು ಯಶಸ್ವಿಯಾಗುತ್ತಾರೆಂಬುದರಲ್ಲಿ ಸಂದೇಹವೇನಿಲ್ಲ. ಕಡಲ ತೀರದ ಭಾರ್ಗವ ಚಿತ್ರದ ವಿಚಾರದಲ್ಲಿ ಹೇಳೋದಾದರೆ ಟೀಸರ್ ಮತ್ತು ಟ್ರೈಲರ್ನಲ್ಲಿ ಕಂಡಿರುವ ಅದೊಂದು ರಗಡ್ ಲುಕ್ಕಿನ ಪಾತ್ರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿ ಬಿಟ್ಟಿದೆ. ಆ ಪಾತ್ರವನ್ನು ಆವಾಹಿಸಿಕೊಂಡು ನಟಿಸಿರುವವರು ವರುಣ್ ರಾಜ್. ವಿಶೇಷವೆಂದರೆ, ಹೀಗೆ ನಟನಾಗಿ ಸಂಚಲನ ಸೃಷ್ಟಿಸೋ ಸೂಚನೆ ಕೊಟ್ಟಿರುವ ವರುಣ್ ಈ ಸಿನಿಮಾಮಾದ ನಿರ್ಮಾಪಕರೂ ಹೌದು!
ಸಿನಿಮಾ ನಿರ್ಮಾಣವೆಂಬುದು ಕೂಡಾ ಒಂದು ಕಲೆ. ಅದನ್ನು ಒಲಿಸಿಕೊಳ್ಳಬೇಕೆಂದರೆ ಸಾಕಷ್ಟು ಕಸರತ್ತುಗಳನ್ನು ನಡೆಸಬೇಕಾಗುತ್ತದೆ. ಅಂಥಾದ್ದರಲ್ಲಿ ನಿರ್ಮಾಣದ ಜೊತೆಗೆ, ನಾಯಕರಲ್ಲೊಬ್ಬರಾಗಿಯೂ ನಟಿಸೋದೆಂದರೆ ಅದು ಸಲೀಸಿನ ಸಂಗತಿಯೇನಲ್ಲ. ಒಂದು ವೇಳೆ ಅಂಥಾ ಸಾಹಸಕ್ಕಿಳಿದರೆ, ಎರಡು ದೋಣಿಗೆ ಕಾಲಿಟ್ಟು ಸರಿದೂಗಿಸಿಕೊಂಡು ಸಾಗುವ ಸವಾಲೆದುರಾಗುತ್ತೆ. ಈ ನಿಟ್ಟಿನಲ್ಲಿ ಹೇಳುವುದಾದರೆ, ನಿರ್ಮಾಣ ಕಾರ್ಯದಲ್ಲಿ ಗಣನೀಯವಾಗಿ ಕಾರ್ಯನಿರ್ವಹಿಸಿರುವ ವರುಣ್ ಎಲ್ಲವನ್ನೂ ಬಹು ಜಾಣ್ಮೆಯಿಂದಲೇ ನಿಭಾಯಿಸಿದ್ದಾರೆ. ಈ ವಿಚಾರದಲ್ಲಿ ಖುದ್ದು ಚಿತ್ರತಂಡದಲ್ಲಿಯೇ ಅಚ್ಚರಿ ಮೂಡಿಸಿದ್ದಾರೆ.
ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ಕಡಲ ತೀರದ ಭಾರ್ಗವ. ಟೀಸರ್, ಟ್ರೈಲರ್ ಮತ್ತು ಹಾಡುಗಳಿಂದಲೇ ಈ ಸಿನಿಮಾ ಹುಟ್ಟು ಹಾಕಿರುವ ಕ್ರೇಜ್ ನಿಜಕ್ಕೂ ಸಮ್ಮೋಹಕವಾದದ್ದು. ಈ ಮೂಲಕವೇ ಗಾಢವಾದ ಭರವಸೆ, ನಿರೀಕ್ಷೆಗಳನ್ನು ಮೂಡಿಸುವಲ್ಲಿ ಚಿತ್ರತಂಡ ಗೆದ್ದಿದೆ. ಹಾಗೆ ಹೊರ ಬಂದಿರುವ ಟೀಸರ್, ಟ್ರೈಲರ್ಗಳಲ್ಲಿ ಘನ ಗಂಭೀರವಾದ, ರಗಡ್ ಲುಕ್ಕಿನ ವರುಣ್ ಅವರ ಪಾತ್ರ ಕಂಡು ಸಿನಿಮಾ ಪ್ರೇಮಿಗಳೆಲ್ಲ ಥ್ರಿಲ್ ಆಗಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಖಡಕ್ ನಟನೊಬ್ಬನ ಆಗಮನವಾಗಲಿದೆ ಎಂಬ ನಂಬಿಕೆ ಬಹುತೇಕರಲ್ಲಿ ಮೂಡಿಕೊಂಡಿದೆ. ಹಾಗಂತ ಇಂಥಾದ್ದೊಂದು ಸಕಾರಾತ್ಮಕ ವಾತಾವರಣವೇನು ಏಕಾಏಕಿ ಸೃಷ್ಟಿಯಾಗಿರುವುದಲ್ಲ. ಅದರ ಹಿಂದೆ ವರುಣ್ ಅವರ ಅಗಾಧ ಪರಿಶ್ರಮವಿದೆ. ಬದುಕು ಎತ್ತೆತ್ತ ಹೊಯ್ದಾಡಿದರೂ ಅವಡುಗಚ್ಚಿ ಕಂಡ ಸಿನಿಮಾ ಕನಸು, ಅದಕ್ಕಾಗಿ ಪಟ್ಟ ಪರಿಶ್ರಮವೆಲ್ಲ ನಿಜಕ್ಕೂ ಸ್ಫೂರ್ತಿಯಂತೆಯೇ ಭಾಸವಾಗುತ್ತೆ!
ಬೆಂಗಳೂರಿನ ಸಾರಕ್ಕಿ ಪ್ರದೇಶದಲ್ಲಿ ಹುಟ್ಟಿ ಬೆಳೆದ ವರುಣ್ ಅಪ್ಪಟ ಬೆಂಗಳೂರಿನ ಹುಡುಗ. ಬುದ್ಧಿ ಬಲಿಯುತ್ತಲೇ ಓದಿಗಿಂತಲೂ ಹೆಚ್ಚಾಗಿ, ಸ್ವತಂತ್ರವಾಗಿ ನೆಲೆ ಕಂಡುಕೊಳ್ಳಬೇಕೆಂಬ ತುಡಿತವೇ ವರುಣ್ರನ್ನು ಆವರಿಸಿಕೊಂಡಿತ್ತು. ಹೈಸ್ಕೂಲು ತಲುಪೋ ಹೊತ್ತಿಗೆಲ್ಲ ಅವರನ್ನು ಸಿನಿಮಾ ವ್ಯಾಮೋಹವೆಂಬುದು ಅಪಾದಮಸ್ತಕ ಆವರಿಸಿಕೊಂಡಿತ್ತು. ನಂತರದಲ್ಲಿ ಬದುಕಿಗಾಗಿ ಬ್ಯುಸಿನೆಸ್ ನಡೆಸಿ, ಆ ನಂತರ ನಟನಾಗಿ ನೆಲೆ ಕಂಡುಕೊಳ್ಳಬೇಕೆಂಬ ದೃಢ ನಿರ್ಧಾರ ಆ ದಿನಗಳಲ್ಲಿಯೇ ವರುಣ್ರ ಮನಸಲ್ಲಿ ಆಳವಾಗಿ ಬೇರೂರಿಕೊಂಡಿತ್ತು. ಓದಿನ ಬಗ್ಗೆ ಅಷ್ಟೇನೂ ಆಸಕ್ತಿ ಇರದಿದ್ದ ಅವರು, ಪಿಯುಸಿಗೆಲ್ಲ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿ ಬ್ಯುಸಿನೆಸ್ನತ್ತ ಹೊರಳಿಕೊಂಡಿದ್ದರು.
ಅಲ್ಲಿಂದಾಚೆಗೆ ದುಡಿಮೆಯ ಹಾದಿಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡು, ಅವುಡುಗಚ್ಚಿ ಗೆದ್ದ ವರುಣ್ ಪಾಲಿಗೆ ಆ ನಂತರದ ಏಕಮಾತ್ರ ಗುರಿಯಾಗಿದ್ದದ್ದು ನಟನಾಗೋದು ಮಾತ್ರ. ಯಾರೇ ಆದರೂ, ಎದೆಯೊಳಗೆ ಕನಸೊಂದು ಪ್ರಾಮಾಣಿಕವಾಗಿದ್ದರೆ, ಅದಕ್ಕಾಗಿ ಅದೆಂಥಾ ರಿಸ್ಕು ತೆಗೆದುಕೊಳ್ಳಲೂ ಸಿದ್ಧ ಎಂಬಂಥಾ ಛಾತಿ ಇದ್ದರೆ ವಾತಾವರಣವೆಂಬುದು ತಾನೇತಾನಾಗಿ ಅನುಕೂಲಕರ ಸನ್ನಿವೇಷಗಳನ್ನು ಸೃಷ್ಟಿಸಿ ಬಿಡುತ್ತದೆ. ವರುಣ್ ಅವರ ವಿಚಾರದಲ್ಲಿಯೂ ಈ ಮಾತು ಅಕ್ಷರಶಃ ಸತ್ಯ. ಯಾಕೆಂದರೆ, ಸಿನಿಮಾ ಕನಸು ಕಟ್ಟಿಕೊಂಡಿದ್ದ ಅವರಿಗೆ ಸಮಾನ ಮನಸ್ಕ ಗೆಳೆಯರೇ ಜೊತೆಗೂಡಿದ್ದರು. ಈ ಸಿನಿಮಾ ನಿರ್ದೇಶಕರಾದ ಪನ್ನಗ ಸೋಮಶೇಖರ್ ಹಾಗೂ ಭರತ್ ಗೌಡ ವರುಣ್ರ ಸ್ನೇಹ ವಲಯವನ್ನು ಪ್ರವೇಶಿಸಿದ್ದರು. ಈ ಸ್ನೇಹಿತರ ಗುಂಪು ಸದಾ ಕಾಲವೂ ಸಿನಿಮಾವನ್ನೇ ಧಯಾನಿಸಿದ್ದರ ಫಲವಾಗಿಯೇ ಈವತ್ತಿಗೆ ಕಡಲ ತೀರದ ಭಾರ್ಗವ ಬಿಡುಗಡೆಗೆ ಸಜ್ಜಾಗಿ ನಿಂತಿದೆ!
ನಿಂತಲ್ಲಿ ಕುಂತಲ್ಲಿ ಸಿನಿಮಾವನ್ನೇ ಕನವರಿಸುತ್ತಿದ್ದ, ನಟನಾಗಬೇಕೆಂದು ಹಂಬಲಿಸುತ್ತಿದ್ದ ವರುಣ್ಗೆ, ನಿರ್ದೇಶಕನಾಗಬೇಕೆಂಬ ಹಂಬಲ ಹೊಂದಿದ್ದ ಪನ್ನಗ ಸೋಮಶೇಖರ್ ಸಾಥ್ ಕೊಟ್ಟಿದ್ದರು. ಪನ್ನಗ ಒಂದೊಳ್ಳೆ ಕಥೆ ರೆಡಿ ಮಾಡಿಕೊಂಡು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು. ವರುಣ್ ಅದರ ನಾಯಕನಾಗಿ ನಟಿಸಿದ್ದರು. ಆದರೆ, ಆ ನಂತರದಲ್ಲಿ ಎಲ್ಲರ ಬದುಕೂ ಅನಿವಾರ್ಯತೆಗಳ ತಿರುವಿಗೆ ಸಿಕ್ಕಿದ್ದರಿಂದಾಗಿ ಕೆಲ ಕಾಲ ಸಿನಿಮಾ ಪ್ರಯತ್ನಗಳಿಗೆ ಬ್ರೇಕ್ ಬಿದ್ದಂತಾಗಿತ್ತು. ಆದರೆ ವರುಣ್ರ ಪ್ರಯತ್ನ ಮಾತ್ರ ಸದಾ ಚಾಲ್ತಿಯಲ್ಲಿತ್ತು. ವರ್ಷಾಂತರಗಳ ನಂತರ ಮತ್ತೆ ಪನ್ನಗ, ಭರತ್ ಮತ್ತು ವರುಣ್ ಸಿನಿಮಾ ತಯಾರು ಮಾಡಬೇಕೆಂಬ ದೃಢ ನಿರ್ಧಾರಕ್ಕೆ ಬಂದಿದ್ದರು. ಆದರೆ, ನಿರ್ಮಾಪಕರ ಸಮಸ್ಯೆ ಎದುರಾದಾಗ, ತಾವೇ ಹಣ ಹೂಡುವ ಧೈರ್ಯ ಪ್ರದರ್ಶಿಸಿದ್ದವರು ವರುಣ್.
ಆ ಧೈರ್ಯಕ್ಕೆ ಸಾಥ್ ಕೊಟ್ಟಿದ್ದೇ ಕಡಲ ತೀರದ ಭಾರ್ಗವವನಿಗೆ ಚಾಲನೆ ಸಿಕ್ಕಿತ್ತು. ಹೀಗೆ ಈ ಸಿನಿಮಾ ಆರಂಭವಾಗುವ ಮುನ್ನ ಕಥೆಯೊಂದು ರೆಡಿಯಾಗಿತ್ತಲ್ಲಾ? ಆ ಕಾಲದಲ್ಲಿ ವರುಣ್ಗೆ ನಿಕ್ಕಿಯಾಗಿದ್ದ ಪಾತ್ರ ಪುಟ್ಟದಾಗಿತ್ತು. ಆ ನಂತರದಲ್ಲಿ ಆ ಪಾತ್ರದ ಚಹರೆಗಳು ತಂತಾನೇ ಬದಲಾದವು. ಬರ ಬರುತ್ತಾ ನುರಿತ ನಟರನ್ನು ಬಿಟ್ಟರೆ ಮತ್ಯಾರೂ ಅದನ್ನು ನಿಭಾಯಿಸೋದು ಕಷ್ಟವೆಂಬಂತೆ ಅದು ತೂಕ ಪಡೆದುಕೊಂಡಿತ್ತು. ಸ್ವತಃ ವರುಣ್ ಪಾಲಿಗೂ ಕೂಡಾ ಅದೊಂದು ಸವಾಲಿನಂತೆಯೇ ಎದುರುಗೊಂಡಿತ್ತು. ವರುಣ್ ಬಲು ಇಷ್ಟಪಟ್ಟೇ ಅದನ್ನು ಆವಾಹಿಸಿಕೊಂಡಿದ್ದರು. ಚಿತ್ರತಂಡದ ತುಂಬು ಸಹಕಾರದಿಂದ ಅದಕ್ಕೆ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದರು.
ಈ ಚಿತ್ರದಲ್ಲಿ ವರುಣ್ ನಿರ್ವಹಿಸಿರುವ ಪಾತ್ರ ವಿಶಿಷ್ಟವಾದದ್ದು. ಅದರ ಹೆಸರೂ ಕೂಡಾ ವಿಶೇಷವಾಗಿದೆ. ಅಗಾಧ ಪ್ರಮಾಣದ ಫೈಟ್ ಸನ್ನಿವೇಶಗಳೂ ಇದ್ದುದರಿಂದ ವರುಣ್ ಸಾಕಷ್ಟು ತಾಲೀಮು ನಡೆಸಿದ್ದರು. ಹೀಗೆ ಪ್ರತೀ ಹಂತದಲ್ಲಿಯೂ ಕಲಿಯುತ್ತಾ, ತಯಾರಿ ನಡೆಸುತ್ತಾ ಶ್ರದ್ಧೆಯಿಂದ ಜೀವ ತುಂಬಿರುವ ಅವರಿಗೆ, ಸದರಿ ಪಾತ್ರ ತನ್ನ ಕನಸಿಗೊಂದು ದಿಕ್ಕು ತೋರಲಿದೆ ಎಂಬ ನಂಬಿಕೆ ಇದೆ. ಪ್ರೇಕ್ಷಕರು ತಮ್ಮನ್ನು ಆ ಪಾತ್ರದ ಹೆಸರಿನಿಂದಲೇ ಕರೆದು ಗುರುತಿಸುವ ಮಟ್ಟಕ್ಕೆ ಆ ಪಾತ್ರದ ಕಿಮ್ಮತ್ತಿದೆ ಎಂಬಂಥಾ ಧನ್ಯತಾ ಭಾವವೂ ವರುಣ್ರೊಳಗಿದೆ. ಯಾವ ದೊಡ್ಡ, ಕಮರ್ಶಿಯಲ್ ಸಿನಿಮಾಗಳಿಗೂ ಕಡಿಮೆಯಿಲ್ಲದಂಥಾ ಮಾಸ್ ಸೀನುಗಳನ್ನು ಹೊಂದಿರೋ ಈ ಸಿನಿಮಾ ಗೆದ್ದೇ ಗೆಲ್ಲುತ್ತದೆಂಬ ನಂಬಿಕೆಯೂ ಅವರಲ್ಲಿದೆ. ಈಗಾಗಲೇ ಈ ಪಾತ್ರ ವರುಣ್ ಪಾಲಿಗೆ ಸಕಾರಾತ್ಮಕ ವಾತಾವರಣ ಸೃಷ್ಟಿಸಿದೆ. ಅದಾಗಲೇ ಅವರು ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ವರುಣ್ ಅವರ ಇಂಗಿತದಂತೆಯೇ ದೊಡ್ಡ ಗೆಲುವಿನ ರೂವಾರಿಯಾಗಲಿ. ಕಡಲ ತೀರದ ಭಾರ್ಗವ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗುವಂತಾಗಲೆಂಬುದು ಹಾರೈಕೆ…