ನಿರ್ದೇಶಕ ರಾಮ್ಗೋಪಾಲ್ ವರ್ಮಾ ಬಾಯ್ಬಿಟ್ಟರೆ ಸಾಕು; ವಿವಾದಗಳೇ ಪುಟಿದೆದ್ದು ಕುಣಿಯಲಾರಂಭಿಸುತ್ತವೆ. ಕೆಲವೊಮ್ಮೆ ಮೇಧಾವಿಯಂತೆ, ಮತ್ತೆ ಕೆಲ ಘಳಿಗೆಗಳಲ್ಲಿ ಪ್ರಚಾರದ ತೆವಲಿನ ಸಾಧಾರಣ ಆಸಾಮಿಯಂತೆ ಕಾಣಿಸೋ ವರ್ಮಾ ಫಿಲ್ಟರ್ಲೆಸ್ ಮಾತುಗಳಿಗೆ ಭಲೇ ಫೇಮಸ್ಸು. ತನ್ನೊಳಗಿನ ಸರಕು ಖಾಲಿಯಾಗಿದೆ ಎಂಬುದು ಗೊತ್ತಾದಾಕ್ಷಣ, ಹಡಬೇ ಜಾಯಮಾನದವರಾದರೆ ಯಾರನ್ನೋ ನಕಲು ಮಾಡುವ ನೀಚ ಬುದ್ಧಿ ಪ್ರದರ್ಶಿಸುತ್ತಾರೆ. ಯಾವುದನ್ನೂ ಕ್ರಿಯೇಟಿವ್ ವಲಯದಲ್ಲಿ ಬಚ್ಚಿಟ್ಟುಕೊಳ್ಳಲಾಗೋದಿಲ್ಲವೆಂಬ ಸತ್ಯ ಗೊತ್ತಿದ್ದರೂ ನೌಟಂಕಿ ನಾಟಕವನ್ನೇ ಬದುಕಾಗಿಸಿಕೊಳ್ಳುವ ನಿರ್ಲಜ್ಜತನದ ಪರಮಾವಧಿ ತಲುಪಿಕೊಳ್ಳುತ್ತಾರೆ. ಆದರೆ ವರ್ಮಾ ತನ್ನ ಹಾದಿ ಬಿಟ್ಟು ಆಚೀಚೆ ಕದಲಲಿಲ್ಲ ಎಂಬುದೇ ಅವರ ಮೇಲೆ ಗೌರವ ಮೂಡಿಸುತ್ತೆ. ಇಂಥಾ ವರ್ಮಾ ಮತ್ತೆ ಬಿಡುಬೀಸಾಗಿ ಮಾತಾಡಿದ್ದಾರೆ.
ಈ ಬಾರಿ ಅವರ ಮಾತಿನ ಕೇಂದ್ರ ಸ್ಥಾನದಲ್ಲಿರುವುದು ಖ್ಯಾತ ಮಾರ್ಷಲ್ ಆರ್ಟಿಸ್ಟ್, ನಟ ಬ್ರೂಸ್ಲೀ. ಈತ ಜಗತ್ತಿನ ಎಲ್ಲ ಭಾಗದವರನ್ನೂ ಪ್ರಭಾವಿಸಿದ, ಜಗತ್ತಿನೆಲ್ಲೆಡೆ ಅಭಿಮಾನಿ ವರ್ಗವನ್ನೊಳಗೊಂಡಿದ್ದಾನೆ. ಒಂದು ಕಾಲದಲ್ಲಿ, ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ವರ್ಮಾ ಬ್ರೂಸ್ಲೀಯಿಂದ ಪ್ರಭಾವಿತನಾಗಿದ್ದರಂತೆ. ಆ ವಯಸ್ಸಿನಲ್ಲಿಯೇ ವರ್ಮಾ ಬ್ರೂಸ್ಲೀಯ ‘ಎಂಟರ್ ದಿ ಡ್ರ್ಯಾಗನ್’ ಅನ್ನು ವೀಕ್ಷಿಸಿದ್ದರಂತೆ. ವರ್ಷಾಂತರಗಳ ವರೆಗೂ ಅದೇ ಗುಂಗಿನಲ್ಲಿದ್ದ ವರ್ಮಾರನ್ನು ಬ್ರೂಸ್ಲೀ ಈ ಕ್ಷಣದವರೆಗೂ ಕಾಡುತ್ತಲೇ ಇದ್ದಾನಂತೆ. ಈ ಕಾರಣದಿಂದಲೇ ತಾನು ಗೇ ಅಲ್ಲದಿದ್ದರೂ ಬ್ರೂಸ್ಲೀಗೆ ಕಿಸ್ಸು ಕೊಡಬೇಕೆಂಬಷ್ಟು ಅಭಿಮಾನ ವರ್ಮಾರೊಳಗೆ ತುಂಬಿಕೊಂಡಿತ್ತಂತೆ.
ಹೀಗೆ ಆಗಾಗ ಬದುಕಿನ ನಾನಾ ಪಲ್ಲಟಗಳ ಬಗ್ಗೆ ಮಾತಾಡುತ್ತಾ ಸಾಗುತ್ತಿರುವ ವರ್ಮಾ ಒಂದು ಕಾಲಕ್ಕೆ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂಥಾ ದೃಷ್ಯ ಕಾವ್ಯಗಳನ್ನು ಕಟ್ಟಿ ಕೊಟ್ಟವರು. ಬಹುಶಃ ಅಂಥಾದ್ದೊಂದು ಪ್ರತಿಭೆಯ ಕಸುವಿಲ್ಲದೇ ಹೋಗಿದ್ದರೆ ನಿರ್ದೇಶಕನಾಗಿ ಬಹು ಹೆಚ್ಚು ಕಾಲ ಆಳೋದು ವರ್ಮಾಗೆ ಸಾಧ್ಯವಾಗುತ್ತಿರಲಿಲ್ಲ. ಇಂಥಾ ಅಪಾರ ಪ್ರತಿಭೆ ಹೊಂದಿರೋ ವರ್ಮಾ ಒಂಥರಾ ತಿಕ್ಕಲು ಆಸಾಮಿ. ಇತ್ತೀಚೆಗಂತೂ ವರ್ಮಾ ಪಾಲಿಗೆ ಎಲ್ಲವೂ ಕಲಸುಮೇಲೋಗರವಾಗಿಯೇ ಎದುರುಗೊಳ್ಳುತ್ತಿದೆ. ಆಗಾಗ ಒಂದಷ್ಟು ಸಿನಿಮಾ ಮಾಡುತ್ತಾರಾದರೂ ಕಾಮಸೂತ್ರದ ಗುಂಗಿನಿಂದ ಹೊರಬರಲು ಸಾಧ್ಯವಾಗದವರಂತೆ ತಲ್ಲಣಿಸುತ್ತಿದ್ದಾರೆ. ಇದೀಗ ಮತ್ತೊಂದು ಅಂಥಾದ್ದೇ ಸರಕಿನೊಂದಿಗೆ ಬಂದಿರುವ ವರ್ಮಾ ಈ ಬಾರಿಯಾದರೂ ನಿರ್ದೇಶಕರಾಗಿ ಗೆಲ್ಲುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.