ಖತ್ರಾ ಚಿತ್ರಕ್ಕೆ ಮಡಿವಂತಿಕೆಯ ಕತ್ತರಿ!
ಪ್ರಸಿದ್ಧ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಸಿನಿಮಾ ಮೂಲಕ ಸದ್ದು ಮಾಡೋದನ್ನು ನಿಲ್ಲಿಸಿ ಒಂದಷ್ಟು ವರ್ಷಗಳೇ ಕಳೆದು ಹೋಗಿವೆ. ವರ್ಮಾರ ಬತ್ತಳಿಕೆಯಲ್ಲಿ ಸರಕುಗಳು ಮುಗಿದು ಹೋಗಿವೆ ಎಂಬಂಥಾ ಆರೋಪಗಳೂ ಕೂಡಾ ಆಗಾಗ ಕೇಳಿ ಬರುತ್ತವೆ. ಆದರೆ ಇದ್ಯಾವುದಕ್ಕೂ ಕೇರು ಮಾಡುವ ಜಾಯಮಾನ ವರ್ಮಾರದ್ದಲ್ಲ. ಕೆಲವೊಮ್ಮೆ ತೀರಾ ತಲೆ ಕೆಟ್ಟಂಥಾ ಹೇಳಿಕೆ ಕೊಡುತ್ತಾ, ಮತ್ತೆ ಕೆಲವೊಮ್ಮೆ ಯಾರೇ ಆದರೂ ತಲೆ ಕೆಡಿಸಿಕೊಳ್ಳುವಂಥಾ ವಿಚಾರಗಳನ್ನು ಹರಿಯಬಿಡುತ್ತಾ ವರ್ಮಾ ಸದಾ ಕಾಲವೂ ಚಾಲ್ತಿಯಲ್ಲಿರುತ್ತಾರೆ. ಅಂಥಾ ವರ್ಮಾ ಈ ಬಾರಿ ಖುದ್ದಾಗಿ ತಲೆಕೆಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣವಾಗಿರೋದು ಅವರೇ ನಿರ್ದೇಶನ ಮಾಡಿರುವ ಖತ್ರಾ ಚಿತ್ರದ ಹೀನಾಯ ಸೋಲು!
ರಾಮ್ ಗೋಪಾಲ್ ವರ್ಮಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸೆಕ್ಸ್ ಸಂಬಂಧಿತ ಕಥಾ ಹಂದರದತ್ತ ವಾಲಿಕೊಂಡಿದ್ದಾರೆ. ಒಂದು ಕಾಲದಲ್ಲಿ ಪ್ರೇಕ್ಷಕರ ನಾಡಿಮಿಡಿತವನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡಿದ್ದ ಅವರೀಗ ಹೆಜ್ಜೆ ಹೆಜ್ಜೆಗೂ ಮುಗ್ಗರಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಆ ಸರಣಿಗೆ ಸೇರ್ಪಡೆಗೊಂಡಿರುವ ಚಿತ್ರ ಖತ್ರಾ. ನಾಯಕಿಯನ್ನು ಬಟ್ಟೆ ಸುಲಿದು ನಿಲ್ಲಿಸಿದರೂ, ರಂಗು ರಂಗಿನ ಕಥೆಗಳನ್ನು ಹಬ್ಬಿಸಿದರೂ ಈ ಚಿತ್ರ ಬರಖತ್ತಾಗಲಿಲ್ಲ. ಇದೀಗ ವರ್ಮಾ ಅದೇಕೋ ಈ ಸೋಲಿನ ಗುಂಗಿಗೆ ಬಿದ್ದಿದ್ದಾರೆ. ಅದರ ಭೂಮಿಕೆಯಲ್ಲಿ ಮತ್ತೆ ಮಾತಾಡಿದ್ದಾರೆ.
ಖತ್ರಾ ಸಿನಿಮಾವನ್ನು ಪ್ರದರ್ಶಿಸಲು ಅನೇಕ ಥೇಟರ್ ಮಾಲೀಕರು ಹಿಂದೇಟು ಹಾಕಿದ್ದನ್ನೂ ವರ್ಮಾ ನೆನಪಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಕ್ಸ್ಗೆ ಸಂಬಂಧಿಸಿದ ಯಾವುದೇ ವಿಚಾರವಾದರೂ ಇಲ್ಲಿ ನಿಶೇಧಿತವಾಗಿಯೇ ಉಳಿದಿದೆ ಎಂದಿರುವ ವರ್ಮಾ, ನಾಲಕ್ಕು ವರ್ಷಗಳ ಹಿಂದೆಯೇ ಸೆಕ್ಷನ್ ೩೭೭ನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದರೂ ಸಹ ಜನ ಆ ಬಗ್ಗೆ ಮಾತಾಡಲು ಹಿಂದೇಟು ಹಾಕುತ್ತಾರೆಂಬ ವಿಚಾರವನ್ನು ಮಂಡಿಸಿದ್ದಾರೆ. ವರ್ಮಾರೊಳಗೀಗ ನಿಜಕ್ಕೂ ಸರಕು ಖಾಲಿಯಾಗಿದೆಯಾ ಅಥವಾ ಅವರು ಒಂದು ವಿಚಾರದ ಬೆಂಬೀಳುತ್ತಾ ತಮ್ಮೊಳಗಿನ ಕಥೆಗಾರನನ್ನು ಮಂಕು ಹಿಡಿಸಿದ್ದಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಬಹುವಾಗಿ ಕಾಡುತ್ತಿದೆ.