ಕಡೆಗೂ ಅಳೆದೂ ತೂಗಿ (bjp) ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದೆ. ಹೊಸಾ ಮುಖಗಳಿಗೆ ಮಣೆ ಹಾಕುವ ನೆರಳಿನಲ್ಲಿ. (rss) ಆರೆಸೆಸ್ ಆಣತಿಯೇ ಪ್ರಧಾನವಾಗಿ ಕೆಲಸ ಮಾಡಿರೋದು ಕೂಡಾ ಮೇಲು ನೋಟಕ್ಕೇ ಗೋಚರಿಸಿದೆ. (congress) ಕಾಂಗ್ರೆಸ್ ಮಂದಿಗೆ ಟಾಂಗ್ ಕೊಡುವ ನೆಪದಲ್ಲಿ ಕೆಲವರನ್ನು ವ್ಯವಸ್ಥಿತವಾಗಿ ಹಣಿಸು, ಮೂಲೆಗುಂಪು ಮಾಡುವ ಹುನ್ನಾರಗಳೂ ಕೂಡಾ ಗಮನ ಸೆಳೆದಿವೆ. ಕೆಲ ಮಂದಿಯನ್ನಂತೂ ಅವರಿಗಿಷ್ಟವಿಲ್ಲದಿದ್ದರೂ ಎತ್ತಿ ಯಾರೆದುರೋ ನಿಲ್ಲಿಸಿದಂತೆಯೂ ಭಾಸವಾಗುತ್ತಿದೆ. ಅಂಥಾ ಹರಕೆಯ ಕುರಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು (v. somanna) ವಿ. ಸೋಮಣ್ಣ. ಅಧಿಕಾರದಾಸೆಯಿಂದಲೇ ಕಮಲವನ್ನು ಎದೆಗವುಚಿಕೊಂಡಿದ್ದ ಸೋಮಣ್ಣನೀಗ, ಈ ಬಾರಿಯ ಚುನಾವಣೆಯೇ ತನ್ನ ರಾಜಕೀಯ ಬದುಕಿನ ಕೊನೇಯ ಕಣವಾಗುತ್ತದೇನೋ ಎಂಬಂಥಾ ಭಯದಲ್ಲಿದ್ದಾರೆ. ಇದೆಲ್ಲದಕ್ಕೂ ಕಾರಣವಾಗಿರೋದು ಖುದ್ದು (bjp) ಬಿಜೆಪಿ ನಾಯಕರ ರಣತಂತ್ರಗಳೇ!
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದು ವೀರಾಧಿ ವೀರರಂತೆ ಪೋಸು ಕೊಡುತ್ತಲೇ, ಎಸೆದ ಕಲ್ಲು ಎದೆ ಮೇಲೆ ಬಿದ್ದಾಗ ಕುಂಯ್ಯೋ ಅನ್ನಲೂ ಆಗದೆ, ನೋವು ತಡೆದುಕೊಳ್ಳುವ ಶಕ್ತಿಯೂ ಇಲ್ಲದೆ ಮುಲುಕ್ಯಾಡುವುದು ಬಿಜೆಪಿಗರ ಜಾಯಮಾನ. ಅತ್ತ ಕಾಂಗ್ರೆಸ್ ಮಂದಿ ಶಾಮನೂರು ಶಿಶಂಕರಪ್ಪರಂಥಾ ಮುದಿ ಆಸಾಮಿಗಳಿಗೆ ಟಿಕೆಟು ಕೊಡುತ್ತಲೇ, ಇತ್ತ ಬಿಜೆಪಿ ಮಂದಿ ವಯಸ್ಸಾದ ವಟುಗಳನ್ನು ಮುಲಾಜಿಲ್ಲದೆ ಮನೆಗೆ ಕಳಿಸುತ್ತಿದೆ. ಸಾಕ್ಷಾತ್ತು ಈಶ್ವರಪ್ಪನಿಗೇ ಅಂಥಾ ನಿಷ್ಠುರತೆಯ ಬಾಸುಂಡೆ ಬಿದ್ದಿದೆ. ಬಹುಶಃ ಬಿಜೆಪಿ ಮಂದಿಯಿಂದ ಇಂಥಾದ್ದೊಂದು ನಡೆಯನ್ನು ಯಾರೆಂದರೆ ಯಾರೂ ನಿರೀಕ್ಷಿಸಿರಲಿಕ್ಕಿಲ್ಲ.
ಅದರಿಂದಾಗೋ ಪರಿಣಾಮಗಳೇನು ಎಂಬುದಕ್ಕಿಂತಲೂ, ಏಕಾಏಕಿ ತಂತಮ್ಮ ಭದ್ರ ಕೋಟೆಗಳಿಂದ ಎತ್ತೆಸೆಯಲ್ಪಟ್ಟವರ ಪಾಡೇನೆಂಬುದೇ ವಿಶ್ಲೇಷಣೆಗೆ ಅರ್ಹವಾದ ತುರ್ತಿನ ವಿಚಾರ. ಅದರಲ್ಲಿಯೂ ಹಿರಿಯ ರಾಜಕಾರಣಿಯಾಗಿ ಗುರುತಿಸಿಕೊಂಡು, ಆಗಾಗ ಲಿಂಗಾಯತ ನಾಯಕನಾಗುವ ಉಮೇದು ತೋರಿಸಿದ್ದ ಸೋಮಣ್ಣನ ಸದ್ಯದ ಸ್ಥಿತಿಯಂತೂ ಶೋಚನೀಯವಾಗಿದೆ. ಇದೀಗ ಸೋಮಣ್ಣನಿಗೆ ವರುಣಾ ಮತ್ತು ಚಾಮರಾಜನಗರ ಕ್ಷೇತ್ರಗಳಿಂದ ಟಿಕೇಟು ಕೊಡಲಾಗಿದೆ. ಬಿಜೆಪಿಗರೇ ಆಗಿರುವ ಅನೇಕ ಮಂದಿ ಟಿಕೆಟು ಸಿಗದೆ ಒದ್ದಾಡುತ್ತಿದ್ದಾರೆ. ಬಕೀಟುಗಟ್ಟಲೆ ಕಣ್ಣೀರು ಸುರಿಸುತ್ತಾ ದುರಂತ ನಾಯಕರಂತೆ ಪೋಸು ಕೊಡುತ್ತಿದ್ದಾರೆ. ಅಂಥಾದ್ದರಲ್ಲಿ ಸೋಮಣ್ಣನಿಗೆ ಎರಡೆರಡು ಕ್ಷೇತ್ರಗಳಲ್ಲಿ ಟಿಕೇಟು ಸಿಕ್ಕಿರೋದು, ಅವರ ಶಕ್ತಿಯ ಸಂಕೇತ ಅಂತ ಮೇಲು ನೋಟಕ್ಕೆ ಅನ್ನಿಸಬಹುದು. ಇಲ್ಲಿ ಈ ಕ್ಷಣಕ್ಕೆ ಬೀಸೋ ದೊಣ್ಣೆಯಿಂದ ಪಾರಾಗಿ, ಅದೇ ದೊಣ್ಣೆಯನ್ನು ಅಗೋಚರವಾಗಿ ಸೋಮಣ್ಣನತ್ತ ಎಸೆಯುವ ಜಾಣ ನಡೆಯೂ ಗಮನಾರ್ಹವೇ!
ಸಿಟಿ ರವಿಯಂಥವರ ನಾಲಗೆಯ ಪ್ರಭಾವದಿಂದ ಬಿಜೆಪಿ ಲಿಂಗಾಯತ ವಿರೋಧಿಯಾಗಿ ಬಿಂಬಿಸಿಕೊಳ್ಳುವ ಭಯದ ವಾತಾವರಣ ನಿರ್ಮಾಣವಾಗಿತ್ತು. ಅದು ನಿಮಗೆಲ್ಲ ನೆನಪಿರಬಹುದು. ಅದೆಲ್ಲವನ್ನೂ ಶಮನ ಮಾಡುವ ಸಲುವಾಗಿಯೇ ಸೋಮಣ್ಣನಿಗೆ ಎರಡೆರಡು ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಕೊಡಲಾಗಿದೆ. ಇಲ್ಲಿ ಗಮನಿಸಲೇಬೇಕಾದ ಒಂದಷ್ಟು ವಿಚಾರಗಳಿದ್ದಾವೆ. ವರುಣಾದಲ್ಲಿ ಸಿದ್ದರಾಮಯ್ಯಗೆ ಸೆಡ್ಡು ಹೊಡೆಯುವ ಸರ್ಕಸ್ಸು ಬಿಜೆಪಿ ಪಾಳೆಯದಲ್ಲಿ ಈ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಅಲ್ಲಿ ಯಡಿಯೂರಪ್ಪನ ಮಗನನ್ನೇ ಕಣಕ್ಕಿಳಿಸಿ ಮಜಾ ನೋಡುವ ಆಟವನ್ನೂ ಬಿಜೆಪಿಯ ಒಂದು ಬಣ ಕಟ್ಟಿತ್ತು. ಆದರೆ ಚತುರ ರಾಜಕಾರಣಿ ಯಡ್ಡಿ ನಾಜೂಕಿನಿಂದಲೇ ಮಗನನ್ನು ಆ ಕಂಟಕದಿಂದ ಪಾರುಗಾಣಿಸಿದ್ದಾರೆ. ಅದರ ಬೆನ್ನಿಗೇ ವರುಣಾ ಎಂಬ ಬಲಿ ಪೀಠಕ್ಕೆ ಸೋಮಣ್ಣನನ್ನು ಸದ್ದಿಲ್ಲದೆ ಎಳೆ ತರಲಾಗಿದೆ!
ಅದೇನೇ ಸರ್ಕಸ್ಸು ನಡೆಸಿದರೂ ಈ ಬಾರಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಸಿದ್ದುಗೆ ಸೆಡ್ಡು ಹೊಡೆಯೋದು ಕಷ್ಟವಿದೆ. ಕಣಕ್ಕೆ ಕಾಲಿಡುವ ಮುನ್ನವೇ ಸೋಲೆಂಬುದು ಖಾತರಿಯಾದಂತಿದೆ. ವರುಣಾದಲ್ಲಿ ಸೋತರೆ ಚಾಮರಾಜನಗರ ಇದೆಯಲ್ಲಾ ಅಂತನ್ನಿಸಬಹುದು. ಆ ಕ್ಷೇತ್ರದ ಆಂತರ್ಯವನ್ನೊಮ್ಮೆ ಪರಾಮರ್ಶಿಸಿದರೆ, ಚಾಮರಾಜನಗರದಲ್ಲಿಯೂ ಸೋಮಣ್ಣನಿಗೆ ಪರಿಸ್ಥಿತಿ ಸಲೀಸಾಗಿಲ್ಲ. ಯಾಕೆಂದರೆ, ಅಲ್ಲಿ ಪುಟ್ಟರಂಗಶೆಟ್ಟಿ ಆಳವಾಗಿ ಬೇರೂರಿಕೊಂಡಿದ್ದಾರೆ. ಆತ ಆ ಕ್ಷೇತ್ರದ ಪ್ರಭಾವೀ ಮುಖಂಡ. ಆತನನ್ನು ಬೆಂಗಳೂರಿನಿಂದ ಬಂದ ಸೋಮಣ್ಣ ಅಷ್ಟು ಸುಲಭಕ್ಕೆ ಮಣಿಸಲು ಸಾಧ್ಯವಿಲ್ಲ. ಅಲ್ಲಿಗೆ ಎರಡೂ ಕ್ಷೇತ್ರಗಳಲ್ಲಿಯೂ ಸೋಮಣ್ಣನಿಗೆ ಅಕ್ಷರಶಃ ಅಗ್ನಿ ಪರೀಕ್ಷೆ ಎರುರಾಗಲಿರೋದು ಪಕ್ಕಾ!
ಒಂದು ಮೂಲದ ಪ್ರಕಾರ ನೋಡೋದಾದರೆ, ಮಗ ಅರುಣ್ನನ್ನು ನೆಲೆಗಾಣಿಸುವ ಪುತ್ರ ವ್ಯಾಮೋಹವೇ ಸೋಮಣ್ಣನಿಗೆ ಖೆಡ್ಡಾ ತೋಡಿತೇನೋ ಎಂಬಂಥಾ ಭಾವ ಮೂಡಿಕೊಳ್ಳುತ್ತೆ. ಯಾಕೆಂದರೆ, ಗೋವಿಂದ ರಾಜನಗರದಲ್ಲಿ ಅರುಣ್ಗೆ ಟಿಕೇಟು ಕೊಡಿ ಅಂತ ಬೇಡಿಕೆ ಇಟ್ಟಿದ್ದ ಸೋಮಣ್ಣ, ತಿಪಟೂರಿನತ್ತ ಕಣ್ಣಿಟ್ಟಿದ್ದರಂತೆ. ಆದರೆ ಅದನ್ನು ಮನಗಂಡ ಕೆಲ ಮುಖಂಡರು ಸೋಮಣ್ಣನನ್ನು ವರುಣಾದ ಬಲಿ ಪೀಠಕ್ಕೆ ಎಳೆದೊಯ್ದಿದ್ದಾರೆ. ಅತ್ತ ಗೋವಿಂದರಾಜನಗರದಲ್ಲಿ ಅರುಣ್ಗೆ ಟಿಕೆಟು ಸಿಕ್ಕರೂ ಆತ ಬಚವಾಗೋದು ಕಷ್ಟ. ಇತ್ತ ಎರಡೂ ಕ್ಷೇತ್ರಗಳಲ್ಲಿ ಖುದ್ದು ಸೋಮಣ್ಣನೇ ಜೈಸಿಕೊಳ್ಳೋದು ಡೌಟಿದೆ. ಈ ಎಲ್ಲ ದಿಕ್ಕಿನಿಂದ ನೋಡಿದರೆ, ಈ ಚುನಾವಣಾ ಫಲಿತಾಂಶ ಸೋಮಣ್ಣನ ರಾಜಕೀಯ ಬದುಕಿಗೆ ಫುಲ್ ಸ್ಟಾಪ್ ಇಡುವ ಲಕ್ಷಣಗಳೇ ಢಾಳಾಗಿವೆ. ಈ ವಿಚಾರದಲ್ಲಿ ಯಡ್ಡಿ ಪಾಳೆಯ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದದ್ದಂತೂ ಖರೇ!