ಹಾಸ್ಯ ನಟನಾಗಿ ಪ್ರಖ್ಯಾತಿ ಪಡೆದು, ಆ ನಂತರ ನಾಯಕ ನಟನಾಗಿಯೂ ನಗುವಿನ ಪಥದಲ್ಲಿಯೇ ಮುಂದುವರೆದಿದ್ದವರು ಕೋಮಲ್. ಒಂದಷ್ಟು ಕಾಲ ಅವರು ನೇಪಥ್ಯಕ್ಕೆ ಸರಿದಂತಾದಾಗ, ಅಪಾರ ಸಂಕ್ಯೆಯ ಪ್ರೇಕ್ಷಕರು ಕೋಮಲ್ರನ್ನು ಮಿಸ್ ಮಾಡಿಕೊಂಡಿದ್ದದ್ದು ನಿಜ. ಆದರೀಗ ಅವರು ಹೊಸಾ ಚೈತನ್ಯದಿಂದ ಮೈಕೊಡವಿಕೊಂಡು ಮೇಲೆದ್ದು ನಿಂತಿದ್ದಾರೆ. ಅವರು ನಟಿಸುತ್ತಿರುವ ಚಿತ್ರಗಳ ಬಗ್ಗೆ ಸುದ್ದಿಯಾಗುತ್ತಲೇ, ನಟಿಸಿಯಾಗಿರುವ ಸಿನಿಮಾಗಳೂ ಕೂಡಾ ಸಂಚಲನ ಸೃಷ್ಟಿಸುತ್ತಿವೆ. ಅದರ ಭಾಗವಾಗಿಯೇ ಇದೀಗ `ಉಂಡೆನಾಮ’ ಎಂಬ ಶೀರ್ಷಿಕೆಯ ಸಿನಿಮಾ ಕೂಡಾ ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ಬಂದು ನಿಂತಿದೆ. ಸದ್ದೇ ಇಲ್ಲದೆ ಚಿತ್ರೀಕರಣಗೊಂಡಿದ್ದ ಉಂಡೆನಾಮ ಇದೇ ಏಪ್ರಿಲ್ 14ರಂದು ತೆರೆಗಾಣಲಿದೆ.
ಈ ಶೀರ್ಷಿಕೆ, ಕೋಮಲ್ ಕಾಂಬಿನೇಷನ್ ಮತ್ತು ನಿರ್ದೇಶಕರ ಹಿನ್ನೆಲೆಗಳೆಲ್ಲವನ್ನೂ ಒಟ್ಟುಗೂಡಿಸಿ ನೋಡಿದರೆ, ಉಂಡೆನಾಮದ ಮೂಲಕ ಭರ್ಜರಿ ನಗುವಿನ ಹಬ್ಬದ ಮುನ್ಸೂಚನೆ ಸಿಗುತ್ತಿದೆ. ಅಂದಹಾಗೆ ಇದು ಕೆ.ಎಲ್ ರಾಜಶೇಖರ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರ. ರಾಜಶೇಖರ್ ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್ ಶೋ ಮೂಲಕ ಹೆಚ್ಚು ಪ್ರಚಲಿತಕ್ಕೆ ಬಂದಿದ್ದವರು. ಆ ಶೋನ ಮೊದಲ ಸೀಜನ್ನಿನ ಇನ್ನೂರರಷ್ಟು ಎಪಿಸೋಡ್ಗಳಿಗೆ ಸ್ಕ್ರಿಪ್ಟ್ ಸಿದ್ಧಪಡಿಸಿದ್ದವರು ಇದೇ ರಾಜಶೇಖರ್. ಅದೇ ಶೋನಲ್ಲಿ ನಟಿಸುವ ಮೂಲಕವೂ ಅವರು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು.
ಹಾಗಿದ್ದ ಮೇಲೆ ರಾಜಶೇಖರ್ ನಿರ್ದೇಶನ ಮಾಡಿರುವ ಉಂಡೆನಾಮ, ನಗುವಿನ ಪರಿಷೆಯನ್ನೇ ಸೃಷ್ಟಿಸೋದರಲ್ಲಿ ಯಾವ ಅನುಮಾನವೂ ಇಲ್ಲ. ಇತ್ತೀಚೆಗಷ್ಟೇ ಶರಣ್. ನೆನಪಿರಲಿ ಪ್ರೇಂ, ಶ್ರುತಿ, ಸಾಧು ಕೋಕಿಲಾ, ರಾಗಿಣಿ ದ್ವಿವೇದಿ ಮುಂತಾದವರು ಉಂಡೆನಾಮ ಟೈಟಲ್ ರಿವೀಲ್ ಮಾಡಿದ್ದರು. ಇನ್ನು ಹಂತ ಹಂತವಾಗಿ ಪೋಸ್ಟರ್, ಟೀಸರ್, ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಕೌತುಕದ ಕಾವೇರಿಸಲು ಚಿತ್ರತಂಡ ಅಣಿಗೊಳ್ಳುತ್ತಿದೆ. ದಶಕಗಳಿಂದೀಚೆಗೆ ಕಿರುತೆರೆಯಲ್ಲಿ ಧಾರಾವಾಹಿಗಳ ಎಪಿಸೋಡ್ ನಿರ್ದೇಶಕರಾಗಿ, ಅಮ್ಮ ಐ ಲವ್ ಯೂ, ರಾಬರ್ಟ್, ವಿಕ್ಟರಿ2, ತ್ರಿಬಲ್ ರೈಡಿಂಗ್ ಮುಂತಾದ ಚಿತ್ರಗಳಿಗೆ ಡೈಲಾಗ್ ಬರೆದು ಸೈ ಅನ್ನಿಸಿಕೊಂಡಿರುವವರು ರಾಜಶೇಖರ್. ಹಾಗಿರುವಾಗ ಉಂಡೆನಾಮದ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿಕೊಳ್ಳುತ್ತೆ.
ಹಾಗಾದರೆ, ಉಂಡೆನಾಮ ಯಾವ ಥರದ ಕಥೆ ಹೊಂದಿಗೆ ಎಂಬಂಥಾ ಪ್ರಶ್ನೆ ಕಾಡೋದು ಸಹಜ. ಎರಡನೇ ಲಾಕ್ಡೌನ್ ಸಮಯದಲ್ಲಿ ಶುರುವಾಗಿದ್ದ ಉಂಡೆನಾಮ, ಲಾಕ್ಡೌನ್ ಅವಧಿಯಲ್ಲಿ ಹೀಗೆ ನಡೆದರೆ ಹೇಗೆಂಬ ಕಲ್ಪನೆಯ ಮೂಸೆಯಲ್ಲರಳಿದ ಮಜವಾದ ಕಥಾನಕವನ್ನೊಳಗೊಡಿದೆಯಂತೆ. ನಟ ಕೋಮಲ್ಗೆ ಇಲ್ಲಿ ಇದುವರೆಗಿನ ಅಷ್ಟೂ ಪಾತ್ರಗಳಿಗಿಂದ ಭಿನ್ನವಾದ ರೋಲ್ ಇದೆಯಂತೆ. ಅವರಿಗೆ ಉಂಡೆನಾಮದ ಮೂಲಕವೇ ಸರಿಯಾದ್ದೊಂದು ಬ್ರೇಕ್ ಸಿಗುವ ಎಲ್ಲ ಲಕ್ಷಣಗಳೂ ದಟ್ಟವಾಗಿಯೇ ಗೋಚರಿಸುತ್ತಿವೆ. ಲವಲವಿಕೆಯ ಕಥೆ, ಚೇತೋಹಾರಿ ನಿರೂಪಣೆ ಮತ್ತು ಚೆಂದದ ಪಾತ್ರಗಳೊಂದಿಗೆ ಉಂಡೆನಾಮ ಕಳೆಗಟ್ಟಿಕೊಂಡಿದೆಯೆಂಬ ಭರವಸೆ ಚಿತ್ರತಂಡದಲ್ಲಿದೆ.
ಇದು ಎನ್.ಕೆ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಸಿ.ನಂದಕಿಶೋರ್ ನಿರ್ಮಾಣ ಮಾಡಿಕರುವ ಚಿತ್ರ. ಕೆ.ಎಲ್ ರಾಜು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಕೋಮಲ್ಗೆ ಹರೀಶ್ ರಾಜ್, ಧನ್ಯಾ ಬಾಲಕೃಷ್ಣ, ಅಪೂರ್ವ, ತಬಲಾ ನಾಣಿ, ವೈಷ್ಣವಿ, ತನಿಷಾ ಕುಪ್ಪಂಡ, ಬ್ಯಾಂಕ್ ಜನಾರ್ಧನ್ ಮುಂತಾದವರು ನಟಿಸಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನವಿದೆ. ಇನ್ನೇನು ಉಂಡೆನಾಮ ಪ್ರೇಕ್ಷಕರ ಮುಂದೆ ಬರಲು ದಿನಗಣನೆ ಶುರುವಾಗಿದೆ. ಅಂತೂ ಈ ಸಿನಿಮಾದ ಬಗ್ಗೆ ತಾನೇತಾನಾಗಿ ಪ್ರೇಕ್ಷಕರ ವಲಯದಲ್ಲಿ ಚರ್ಚೆಗಳು ಶುರುವಾಗಿವೆ. ಅದುವೇ ಗಾಢ ನಿರೀಕ್ಷೆಯಾಗಿಯೂ ಹರಳುಗಟ್ಟಿಕೊಳ್ಳುತ್ತಿದೆ.