ಕನ್ನಡ ಚಿತ್ರರಂಗದೊಳಗೀಗ ಹೊಸತನದ ಸುಳಿಗಾಳಿ ಬಲವಾಗಿಯೇ ಬೀಸಲಾರಂಭಿಸಿದೆ. ಅದರ ಭಾಗವಾಗಿಯೇ ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿರುವ ಚಿತ್ರ ತುರ್ತು ನಿರ್ಗಮನ. ಇತ್ತೀಚಿನ ವರ್ಷಗಳಲ್ಲಿ ಊಹೆಗೆ ನಿಲುಕದಂಥಾ ವಿಶಿಷ್ಟ ಕಥೆಗಳು ದೃಷ್ಯ ರೂಪ ಧರಿಸಿ ಬರುತ್ತವೆ. ಬಹುಶಃ ಭಿನ್ನ ನೆಲೆಯಲ್ಲಿ ಆಲೋಚಿಸುವ ಯುವ ಮನಸುಗಳು ಇಲ್ಲದೇ ಹೋಗಿದ್ದರೆ ಇಂಥಾದ್ದೊಂದು ಮನ್ವಂತರ ಸಾಧ್ಯವಾಗುತ್ತಿರಲಿಲ್ಲವೇನೋ… ನಮ್ಮೆಲ್ಲರ ಕಣ್ಣಿಗೆ ಸದಾ ಬೀಳುತ್ತಾ, ಒಳಗೆಲ್ಲೋ ಆಗಾಗ ಆಲೋಚನೆಗೆ ಹಚ್ಚುವ ತುರ್ತು ನಿರ್ಗಮನವೆಂಬ ಬೋರ್ಡಿದೆಯಲ್ಲಾ? ಅದರ ಸುತ್ತಾ ಪಾತಾಳಗರಡಿ ಹಾಕಿ, ನಮ್ಮೆಲ್ಲರ ಬದುಕಿಗೆ ಹತ್ತಿರವಾದ ಚೆಂದದ ಕಥೆಯೊಂದಿಗೆ ಹೇಮಂತ್ ಕುಮಾರ್ ಈ ಚಿತ್ರವನ್ನು ರೂಪಿಸಿದ್ದಾರೆ.
ತುರ್ತು ನಿರ್ಗಮನ ಎಂಬ ಟೈಟಲ್ ಲಾಂಚ್ ಆಗುತ್ತಲೇ ಪ್ರೇಕ್ಷಕರು ಅದರತ್ತ ಆಕರ್ಷಿತರಾಗಿದ್ದರು. ಆ ಬಳಿಕ ಪೋಸ್ಟರ್, ಫಸ್ಟ್ ಲುಕ್ ಮುಂತಾದವುಗಳ ಮೂಲಕ ಈ ಚಿತ್ರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹೀಗೆ ಆರಂಭದಿಂದ ಇಲ್ಲಿಯವರೆಗೂ ಕುತೂಹಲವನ್ನು ಕಾಪಿಟ್ಟುಕೊಂಡು ಬಂದಿದ್ದ ಈ ಚಿತ್ರವೀಗ ಬಿಡುಗಡೆಯ ಸನ್ನಾಹದಲ್ಲಿದೆ. ಇಂಥಾ ಅಪರೂಪದ ಕಥೆಯ ಸುಳಿವು ಸಿಕ್ಕಾಕ್ಷಣ ಅದರ ಹುಟ್ಟಿನ ಸುತ್ತಮುತ್ತ ಪ್ರೇಕ್ಷಕರ ಚಿತ್ತ ಗಿರಕಿ ಹೊಡೆಯಲಾರಂಭಿಸುತ್ತೆ. ಈ ನಿಟ್ಟಿನಲ್ಲಿ ಸಿನಿಮಾ ತಂಡವನ್ನು ಎದುರುಗೊಂಡಾಗ ಖುದ್ದು ನಿರ್ದೇಶಕ ಹೇಮಂತ್ ಕುಮಾರ್ ಅವರೇ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಹೇಮಂತ್ ಕುಮಾರ್ ಸಿನಿಮಾ ನಿರ್ದೇಶಕರಾಗಬೇಕೆಂಬ ಕನಸು ಕಟ್ಟಿಕೊಂಡು, ಬದುಕು ಸುತ್ತಾಡಿಸಿದಷ್ಟೆಲ್ಲಾ ಸುತ್ತಾಡಿ ಬಳಿಕ ಆಸಕ್ತಿ ಕೇಂದ್ರದಲ್ಲಿ ನೆಲೆ ಕಂಡುಕೊಂಡಿರುವವರು. ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು ಎಂಬ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಹೇಮಂತ್ ಕುಮಾರ್ ಅದಾದ ನಂತರ ಚೆಂದದ್ದೊಂದು ಕಥೆಯ ಮೂಲಕ ಸ್ವತಂತ್ರ ನಿರ್ದೇಶಕನಾಗಬೇಕೆಂದು ನಿರ್ಧರಿಸಿದ್ದರು. ಏನೋ ಅಂದಕೊಂಡು ಹೆಜ್ಜೆಯೊಂದನ್ನು ಎತ್ತಿಟ್ಟಾಗ ಬದುಕು ಮತ್ಯಾವುದೋ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಈ ಮಾತಿಗೆ ತಕ್ಕುದಾಗಿಯೇ ಹೇಮಂತ್ ಅವರ ಬದುಕಿನಲ್ಲಿಯೂ ದುರಂತವೊಂದು ಸಂಭವಿಸಿತ್ತು.ತೀರಾ ಹಚ್ಚಿಕೊಂಡಿದ್ದ, ಬದುಕಿಗೆ ದಾರಿ ತೋರಿದ್ದ ಅವರ ಅಪ್ಪ ಹಠಾತ್ತನೆ ಇನ್ನಿಲ್ಲವಾಗಿದ್ದರು. ಹಾಗೆ ನೆರಳಿನಂತಿದ್ದ ಜೀವಗಳು ಏಕಾಏಕಿ ನಿರ್ಗಮಿಸಿದಾಗ ಶುಷ್ಕ ವಾತಾವರಣವೊಂದು ಆವರಿಕೊಳ್ಳುತ್ತೆ. ಬದುಕಿಗೆ ಅರ್ಥವೇ ಇಲ್ಲವೆಂಬಂತೆ ಮನಸು ನೋವಿನ ಕಮರಿಗೆ ಬೀಳುತ್ತದೆ.
ಒಂದಷ್ಟು ದಿನ ಹೇಮಂತ್ ಅವರ ಸ್ಥಿತಿಯೂ ಹಾಗೆಯೇ ಇತ್ತು. ಅದಾದ ಬಳಿಕ ಅಪ್ಪನ ಸಾವಿನ ಸುತ್ತ ಬದುಕಿನ ನಶ್ವರ ಸ್ಥಿತಿಯನ್ನು ಕಂಡುಕೊಳ್ಳುತ್ತಾ, ಅವರ ಮನಸು ಬದುಕಿನ ಅರ್ಥವನ್ನು ಹುಡುಕಲಾರಂಭಿಸಿತ್ತು. ಹಾಗೆ ಕಥೆಯೊಂದು ಮುಸುಕಾಗಿ ಜೀವ ಪಡೆಯುತ್ತಿರುವಾಗಲೇ ಅವರನ್ನು ಬಹುಕಾಲದಿಂದ ಕಾಡುತ್ತಿದ್ದ ತುರ್ತು ನಿರ್ಗಮನವೆಂಬ ಬೋರ್ಡು ಮುಸುಕು ಮುಸುಕಾಗಿದ್ದ ಅಗೋಚರ ಕಥೆಯ ನೆತ್ತಿಗೆ ಮೆತ್ತಗೆ ಮುತ್ತಿಡಲಾರಂಭಿಸಿತ್ತು. ಸಾಮಾನ್ಯವಾಗಿ ನಾವೆಲ್ಲರೂ ಬಸ್ಸು, ಟ್ರೈನು, ಸಿನಿಮಾ ಮಂದಿರ ಮುಂತಾದೆಡೆಗಳಲ್ಲಿ ತುರ್ತು ನಿರ್ಗಮನ ಎಂಬ ಬೋರ್ಡು ನೋಡಿರುತ್ತೇವೆ. ಏನಾದರೂ ಅನಾಹುತ ಘಟಿಸಿದರೆ ಅದರ ಮೂಲಕ ತೂರಿಕೊಂಡು ಪಾರಾಗಲೆಂದೇ ಅಂಥಾ ಎಮರ್ಜೆನ್ಸಿ ಎಕ್ಸಿಟ್ಗಳು ರೂಪುಗೊಂಡಿರುತ್ತವೆ.
ಹೇಮಂತ್ ಕುಮಾರ್ ಅವರ ಪಾಲಿಗೆ ಅಂಥಾ ತುರ್ತು ನಿರ್ಗಮನದ ಬೋರ್ಡು ನೋಡಿದಾಗೆಲ್ಲ ಅದರಾಚೆಗೊಂದು ನಿಗೂಢ ಲೋಕ ಇದ್ದಿರಬಹುದೇನೋ ಅನ್ನಿಸುತ್ತಿತ್ತಂತೆ. ನಂತರ ಬದುಕಿಗೂ ಕೂಡಾ ಕೆಲ ಘಳೆಗೆಗಳಲ್ಲಿ ಅಂಥಾ ತುರ್ತು ನಿರ್ಗಮನ ಅಂತೊಂದಿರಬೇಕಿತ್ತೆಂಬ ಭಾವ ಕಾಡಲಾರಂಭಿಸಿತ್ತಂತೆ. ಅಂಥಾ ಭಾವನೆಗಳನ್ನೆಲ್ಲ ಕಥೆಯಾಗಿಸಿ, ಅದಕ್ಕೆ ಸಿನಿಮಾ ರೂಪ ನೀಡಿರುವ ಹೇಮಂತ್ ಈ ಚಿತ್ರವನ್ನು ಪಕ್ಕಾ ಮನೋರಂಜನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರಂತೆ. ಇಂಥಾದ್ದೊಂದು ತೃಪ್ತ ಭಾವ ಅವರಲ್ಲಿದೆ.
ಇಲ್ಲಿ ಯಾರ ಊಹೆಗೂ ಸಲೀಸಾಗಿ ನಿಲುಕದಂಥಾ ಅಪರೂಪದ ಕಥೆಯಿದೆ. ಮತ್ಯಾವುದೋ ಲೋಕಕಕ್ಕೆ ಕರೆದೊಯ್ಯುವಂಥಾ ಅದ್ಭು ದೃಷ್ಯ ವೈಭವವಿದೆ. ಒಟ್ಟಾರೆಯಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಈ ಚಿತ್ರ ಮೂಡಿ ಬಂದಿದೆ ಎಂಬ ಭರವಸೆ ನಿರ್ದೇಶಕರಲ್ಲಿದೆ. ಈ ಮೂಲಕವೇ ಎಕ್ಸ್ಕ್ಯೂಸ್ಮೀ ಖ್ಯಾತಿಯ ಸುನೀಲ್ ರಾವ್ ನಾಯಕನಾಗಿ ಆಗಮಿಸುತ್ತಿದ್ದಾರೆ. ಇದರ ತಾರಾಗಣ ಪ್ರತಿಭಾವಂತ ಕಲಾವಿದರಿಂದ ತುಂಬಿಕೊಂಡಿದೆ. ಸಂಯುಕ್ತಾ ಹೆಗಡೆ, ಹಿತಾ ಸುಧಾ ರಾಣಿ, ಚಂದ್ರಶೇಖರ್, ಅರುಣಾ ಬಾಲರಾಜ್, ನಾಗೇಂದ್ರ ಶಾನ್, ಅಮೃತಾ ರಾಮಮೂರ್ತಿ ಮುಂತಾದ ಕಲಾವಿದರ ದಂಡೇ ತುರ್ತು ನಿರ್ಗಮನದಲ್ಲಿದೆ. ಭರತ್ ಕುಮಾರ್ ಮತ್ತು ಹೇಮಂತ್ ಕುಮಾರ್ ಎಲ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಶರತ್ ಭಗವಾನ್ ಕಾರ್ಯಕಾರಿ ನಿರ್ಮಾಪಕರಾಗಿ ಈ ಚಿತ್ರವನ್ನು ಪೊರೆದಿದ್ದಾರೆ.