ಅವಳ ಸಂಕಟದ ಕಥೆ ಕೇಳಿದ್ರೆ ನಿಮ್ಮ ಕಣ್ಣುಗಳೂ ಹನಿಗೂಡುತ್ತವೆ!
ಲೆಕ್ಕಾಚಾರ ಹಾಕಿ ಪ್ರೀತಿಸಿದಂತೆ ಮಾಡುತ್ತಲೇ ಕಂಫರ್ಟ್ ಝೋನ್ ನೋಡಿಕೊಂಡು ಬೆಚ್ಚಗಿರ ಬಯಸೋ ಮನಸುಗಳೇ ತುಂಬಿರೋ ಪ್ರಸ್ತುತ ಜಗತ್ತಿನಲ್ಲಿ ಅಪೂರ್ವ ಪ್ರೇಮ ಕಥಾನಕಗಳು ವಿರಳ. ಆದರೂ ಇಲ್ಲಿಯೇ ಹೃದಯ ಬೆಚ್ಚಗಾಗಿಸುವ, ಕಣ್ಣು ತೋಯಿಸುವಂಥಾ ಅಪ್ಪಟ ಪ್ರೇಮವೊಂದು ಪ್ರವಹಿಸುತ್ತಲೇ ಇರುತ್ತೆ. ಅಂಥಾದ್ದೊಂದು ಪ್ರಾಂಜಲ ಪ್ರೀತಿಯ ಸೆಳೆತಕ್ಕೆ ಸಿಕ್ಕ ಪ್ರೇಮಿಗಳಿಬ್ಬರ ಕಥೆ ಎಂಥಾ ಗಟ್ಟಿಗರ ಕಣ್ಣುಗಳನ್ನೂ ತೇವಗೊಳಿಸುವಂತಿದೆ!
ಈ ಅಪೂರ್ವ ಪ್ರೇಮಕಥೆ ನಡೆದದ್ದು ದೂರದ ಲಂಡನ್ನಿನಲ್ಲಿ. ಅಲ್ಲಿನ ಡೇವಿಡ್ ಎಂಬಾತ ಅಚಾನಕ್ಕಾದೊಂದು ಸಂದರ್ಭದಲ್ಲಿ ದೇವತೆಯಂಥಾ ಕ್ರಿಸ್ಟಿನಾ ಲೀ ಎಂಬಾಕೆಯನ್ನು ನೋಡುತ್ತಾನೆ. ಆ ನಂತರ ಪ್ರೇಮಿಗಳ ಮಾಮೂಲಿ ಪಡಿಪಾಟಲಿನಂತೆಯೇ ನಾನಾ ಸರ್ಕಸ್ಸು ನಡೆಸಿ ಆಕೆಯನ್ನು ಮಾತಾಡಿಸುತ್ತಾನೆ. ೨೦೧೫ರ ಡಿಸೆಂಬರ್ ತಿಂಗಳ ಕೊನೆಯಲ್ಲಿ ಅಂತೂ ಡೇವಿಡ್ ಕ್ರಿಸ್ಟಿನಾಳನ್ನು ಮಾತಾಡಿಸಿದ್ದ.
ಆ ನಂತರ ಇವರಿಬ್ಬರ ನಡುವೆ ಆತ್ಮೀತೆ ಬೆಳೆದು ಮಾತು, ಭೇಟಿಗಳೆಲ್ಲ ಮುಂದುವರೆದಿದ್ದವು. ಕ್ರಿಸ್ಟಿನಾ ಮೇಲೆ ಬೆಟ್ಟದಷ್ಟು ಪ್ರೀತಿ ಹೊಂದಿದ್ದ ಡೇವಿಡ್ ಭಿನ್ನವಾಗಿ ಪ್ರಪೋಸ್ ಮಾಡಬೇಕೆಂಬ ಆಸೆಯಿಂದ ಕಾಯುತ್ತಲೇ ಇದ್ದ. ಕ್ರಮೇಣ ಕ್ರಿಸ್ಟಿನಾಗೂ ಡೇವಿಡ್ ಮೇಲೆ ಪ್ರೇಮಾಂಕುರವಾಗಿತ್ತು. ಇದೆಲ್ಲ ಆಗಿ ೨೦೧೬ರ ಮಧ್ಯ ಭಾಗದಲ್ಲಿ ಇನ್ನೇನು ಪರಸ್ಪರ ಪ್ರೀತಿ ಹೇಳಿಕೊಳ್ಳ ಬೇಕೆಂದು ಕಾಯುತ್ತಿದ್ದ ಈ ಪ್ರೇಮಿಗಳಿಗೆ ಮಹಾ ಆಘಾತವೊಂದು ಕಾದಿತ್ತು.
ಯಾಕೆಂದರೆ ಸದಾ ಉತ್ಸಾಹದ ಚಿಲುಮೆಯಂತಿದ್ದ ಕ್ರಿಸ್ಟಿನಾ ಅನಾರೋಗ್ಯದಿಂದ ಮಂಕಾಗಲಾರಂಭಿಸಿದ್ದಳು. ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಗೆ ಸ್ತನ ಕ್ಯಾನ್ಸರ್ ಇರೋ ವಿಚಾರ ಗೊತ್ತಾಗಿತ್ತು. ದುರಂತವೆಂದರೆ ಆಕೆಗೆ ಬಂದಿದ್ದದ್ದು ಮಾರಕ ವೆರೈಟಿಯ ಕ್ಯಾನ್ಸರ್. ಆದರೂ ಆಕೆಗೆ ಟ್ರೀಟ್ಮೆಂಟ್ ಶುರುವಾಗಿತ್ತು. ಡೇವಿಡ್ ಕೂಡಾ ಆಕೆಗೆ ಮಾನಸಿಕ ಸ್ಥೈರ್ಯ ತುಂಬಲಾರಂಭಿಸಿದ್ದ. ಈ ಡೇವಿಡ್ ಎಂಥಾ ಅಚಲ ಪ್ರೇಮಿ ಎಂದರೆ ತಾನು ಕ್ರಿಸ್ಟಿನಾಳನ್ನು ಭೇಟಿಯಾಗಿ ಸರಿಯಾಗಿ ಒಂದು ವರ್ಷ ಅಂದರೆ ೨೦೧೬ರ ಡಿಸೆಂಬರಿನಲ್ಲಿ ಬೆಡ್ ಮೇಲೆ ನಿತ್ರಾಣವಾಗಿ ಮಲಗಿದ್ದಾಗಲೇ ಕ್ರಿಸ್ಟಿನಾಗೆ ಪ್ರಪೋಸ್ ಮಾಡಿದ್ದ. ಅದು ಆ ನೋವಿನಲ್ಲೂ ಕ್ರಿಸ್ಟಿನಾ ಖುಷಿಗೊಳ್ಳುವಂತೆ ಮಾಡಿತ್ತು.
ಆದರೆ ೨೦೧೭ರ ವರ್ಷ ಪೂರ್ತಿ ಕ್ರಿಸ್ಟಿನಾಗೆ ಟ್ರೀಟ್ಮೆಂಟ್ ಕೊಡಲಾಯ್ತಾದರೂ ಆಕೆ ಬದುಕೋ ಯಾವ ಸೂಚನೆಗಳೂ ಇರಲಿಲ್ಲ. ನಾನಾ ಥೆರಫಿಗಳಿಂದ ಕೂದಲೂ ಉದುರಿ ಆ ಕೆ ನಿತ್ರಾಣವಾಗಿದ್ದಳು. ಆದರೆ ಕಳೆದ ಡಿಸೆಂಬರ್ ೨೩ರನೇ ತಾರೀಕಿನಂದು ಡೇವಿಡ್ ಹಾಸಿಗೆಯಲ್ಲಿದ್ದರೂ ಆಕೆಯನ್ನು ಮದುವೆಯಾಗೋ ತೀರ್ಮಾನಕ್ಕೆ ಬಂದಿದ್ದ. ಆದರೆ ಆವಾಗ ಆಕೆಯ ಆರೋಗ್ಯ ಮತ್ತಷ್ಟು ಉಲ್ಬಣಿಸಿದ್ದರಿಂದ ಅದು ಮುಂದೆ ಹೋಗಿತ್ತು. ಆ ನಂತರ ಡಿಸೆಂಬರ್ ಮೂವತ್ತನೇ ತಾರೀಕಿನಂದು ಡೇವಿಡ್ ಕ್ರಿಸ್ಟಿನಾಳನ್ನು ಆಕೆ ಹಾಸಿಗೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಮದುವೆಯಾದ.
ಕುಟುಂಬದ ಸಮ್ಮುಖದಲ್ಲಿ ಸಂಪ್ರದಾಯದಂತೆ ನಡೆದ ಈ ಮದುವೆ ಒಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಯಾಕೆಂದರೆ ಕ್ರಿಸ್ಟಿನಾ ಹೆಚ್ಚು ದಿನ ಬದುಕೋದಿಲ್ಲ ಅಂತ ಅಲ್ಲಿದ್ದವರಿಗೆಲ್ಲ ಗೊತ್ತಿತ್ತು. ಆದರೆ ಸಾವಿನ ಸಮೀಪ ಇದ್ದರೂ ಕ್ರಿಸ್ಟಿನಾ ಆವತ್ತು ತನ್ನ ಪ್ರೀತಿಯ ಹುಡುಗ ಡೇವಿಡ್ನನ್ನು ಮದುವೆಯಾಗಿದ್ದಳು. ಎರಡು ವರ್ಷದ ಬಳಿಕ ನೋವಲ್ಲೂ ಪುಟಿಯುತ್ತಾ ಹಾಸಿಗೆಯಲ್ಲೇ ಸಂಭ್ರಮಿಸಿದ್ದಳು. ಕೊಂಚ ಏರು ಪೇರಾದರೂ ದೂರಾಗೋ ಪ್ರೇಮಿಗಳ ನಡುವೆ ಇಂಥಾ ಪ್ರೀತಿ ಕಂಡು ಎಲ್ಲರೂ ಅಚ್ಚರಿಗೊಂಡಿದ್ದರು. ದುರಂತವೆಂದರೆ, ಹೀಗೆ ತನ್ನ ಪ್ರೀತಿಯ ಹುಡುಗನನ್ನು ಮದುವೆಯಾದ ಹದಿನೆಂಟು ಘಂಟೆಗಳಲ್ಲಿ ಕ್ರಿಸ್ಟಿನಾ ಮರಣ ಹೊಂದಿದ್ದಳು!