ಇದು ಹೊಸ ಹೊಸಾ ಆವಿಷ್ಕಾರಗಳಿಂದಲೇ ಕಳೆಗಟ್ಟಿಕೊಂಡಿರೋ ಯುಗ. ನಿಂತಿದ್ದಕ್ಕೆ ಕುಂತಿದ್ದಕ್ಕೆಲ್ಲ ನಮಗೆ ಕೆಲಸ ಆರಾಮಾಗಬೇಕು. ಎಲ್ಲದಕ್ಕೂ ಅತ್ಯಾಧುನಿಕ ಆವಿಷ್ಕಾರದ ಫಲಗಳಂತೂ ಬೇಕೇ ಬೇಕು. ಹಾಗೆ ಇಂದು ನಮಗೆಲ್ಲ ಕೈಗೆಟುಕುತ್ತಿರೋ ಕೆಲ ವಸ್ತುಗಳಿಲ್ಲದ ಕಾಲದಲ್ಲಿ ಈ ಜಗತ್ತು ಹೇಗಿತ್ತು? ಆ ಕಾಲದಲ್ಲಿ ಜನ ಆಯಾ ಕೆಲಸಕ್ಕಾಗಿ ಏನನ್ನು ಬಳಸ್ತಿದ್ರು ಅನ್ನೋದೆಲ್ಲ ಶೋಧನಾರ್ಹ ಅಂಶಗಳೇ. ಈ ನಿಟ್ಟಿನಲ್ಲಿ ನೋಡ ಹೋದ್ರೆ ಮುಂದುವರೆದು ಬೀಗುತ್ತಿರೋ ಕೆಲ ದೇಶಗಳಲ್ಲಿನ ಇಂಟರೆಸ್ಟಿಂಗ್ ಪುರಾಣಗಳು ಗರಿಬಿಚ್ಚಿಕೊಳ್ಳುತ್ವೆ.
ಈವತ್ತಿಗೆ ಅಮೆರಿಕಾ ಇಡೀ ಜಗತ್ತಿನ ದೊಡ್ಡಣ್ಣ ಎಂಬಂತೆ ಮೆರೆಯುತ್ತಿದೆ. ಜಗತ್ತಿನ ಇತರೇ ರಾಷ್ಟ್ರಗಳ ಆಂತರಿಕ ವಿಚಾರಗಳಲ್ಲಿಯೂ ಮೂಗು ತೂರಿಸ್ತಾ ದೊಡ್ಡಸ್ತಿಕೆ ಪ್ರದರ್ಶಿಸ್ತಿದೆ. ಅಲ್ಲಿನ ಜನರಂತೂ ತೀರಾ ಅಪ್ಡೇಟೆಡ್ ವರ್ಷನ್ನುಗಳು. ಅವರದ್ದು ಹೈಫೈ ಕಲ್ಚರ್. ನಮಗೆ ವಿಚಿತ್ರ ಅನ್ನುವಂಥ ನಡವಳಿಕೆ, ಜೀವನ ಕ್ರಮ ಅವರದ್ದು. ಈಗ ಪಾಯಿಖಾನೆ ಬಳಸಿದ ನಂತ್ರ ಶುಚಿತ್ವಕ್ಕೆ ಟಾಯ್ಲೆಟ್ ಪೇಪರ್ ಬಂದಿದೆಯಲ್ಲಾ? ನಮ್ಮ ದೇಶದಲ್ಲಿ ಚೊಂಬು ಹಿಡಿದು ಪೊದೆ ಹುಡುಕುತ್ತಿದ್ದ ಕಾಲದಲ್ಲಿಯೇ ಅಮೆರಿಕನ್ನರು ಒರೆಸಿಕೊಳ್ಳುವ ತಂತ್ರಜ್ಞಾನವನ್ನ ಆವಿಷ್ಕರಿಸಿದ್ರು.
ಆದ್ರೆ ಟಾಯ್ಲೆಟ್ ಪೇಪರ್ ಅನ್ನೋದು ಆಧುನಿಕ ಆವಿಷ್ಕಾರ. ಅದಕ್ಕೂ ಮುನ್ನ ಅಮೆರಿಕನ್ನರು ಆ ಕೆಲಸಕ್ಕಾಗಿ ಏನನ್ನು ಬಳಸ್ತಿದ್ರು ಅನ್ನೋ ಕುತೂಹಲ ಸಹಜಾನೆ. ಆ ಕಾಲದಲ್ಲಿ ಅವರು ಜೋಳದ ಮೇಲಿನ ಸಿಪ್ಪೆಯನ್ನೇ ಆ ಕಾರ್ಯಕ್ಕಾಗಿ ಬಳಸ್ತಿದ್ರಂತೆ. ಜೋಳದ ಹಸೀ ಸಿಪ್ಪೆಯನ್ನು ಒಂದಷ್ಟು ಕಾಲ ಒಣಗಿಸಿದ್ರೆ ಅದ್ರ ಒಳಭಾಗ ಸಾಫ್ಟ್ ಆಗತ್ತೆ. ಆ ನಂತ್ರ ಅದನ್ನ ಶೇಖರಿಸಿಟ್ಕೊಂಡು ಅದನ್ನೇ ಟಾಯ್ಲೆಟ್ ಪೇಪರ್ನಂತೆ ಬಳಸಿಕೊಳ್ತಿದ್ರಂತೆ. ನಂತರ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಜೋಳದ ಸಿಪ್ಪೆ ಈ ಕಾರ್ಯಕ್ರಮಕ್ಕೆ ಬಳಕೆಯಾಗ್ತಿತ್ತಂತೆ. ಈಗಲೂ ಕೆಲ ಪಾಶ್ಚಾತ್ಯರು ನೈಸರ್ಗಿಕ ಉತ್ಪನ್ನಗಳ ಮೇಲಿನ ಪ್ರೇಮ, ಆರೋಗ್ಯದ ಕಾಳಜಿಯಿಂದ ಜೋಳದ ಸಿಪ್ಪೆಗೆ ಅಂಟಿಕೊಂಡಿದ್ದಾರಂತೆ.