ಬಾಗ್ಲು ತೆಗಿ ಮೇರಿ ಜಾನ್ ಹಾಡಿನ ಮಹಾ ದಾಖಲೆ!
ಮಧ್ಯ ಮಳೆಗಾಲದಲ್ಲಿಯೂ ತೋತಾಪುರಿಯ ಸ್ವಾದ ನಾನಾ ಸ್ವರೂಪಗಳಲ್ಲಿ ಘಮಿಸುತ್ತಿದೆ. ಒಂದು ಸಿನಿಮಾವನ್ನು ಇಷ್ಟೊಂದು ದೀರ್ಘ ಕಾಲದವರೆಗೆ ನಿರೀಕ್ಷೆ ಮುಕ್ಕಾಗದಂತೆ ಕಾಪಾಡಿಕೊಳ್ಳೋದೊಂದು ಸವಾಲು. ಆದರೆ ನಿರ್ದೇಶಕ ವಿಜಯಪ್ರಸಾದ್ ಅವರಿಗೆ ಅದು ಲೀಲಾಜಾಲ. ಕೆಲಯ ಕಾರ್ಯಗಳ ಮೂಲಕವೇ ತಮ್ಮ ಸಿನಿಮಾದೆಡೆಗೊಂದು ಕೌತುಕವನ್ನು ಸದಾ ಕಾಪಿಟ್ಟುಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ. ತೋತಾಪುರಿ ಚಿತ್ರದ ಪ್ರಚಾರಕ್ಕೆ ಅವರು ಅನುಸರಿಸುತ್ತಿರುವ ಕ್ರಮಗಳನ್ನು ಕಂಡವರೆಲ್ಲ ಈ ಮಾತನ್ನು ನಿಸ್ಸಂದೇಹವಾಗಿ ಅನುಮೋದಿಸುತ್ತಾರೆ. ಈ ಸಿನಿಮಾ ಮೂಲಕ ನೀರ್ ದೋಸೆ ನಂತರದಲ್ಲಿ ವಿಜಯ ಪ್ರಸಾದ್ ಮತ್ತು ಜಗ್ಗೇಶ್ ಜೋಡಿ ಒಂದಾಗುತ್ತಿದೆ. ಈ ಕಾಂಬಿನೇಷನ್ನಿನ ಅಸಲೀ ಮಜಾ ಎಂಥಾದ್ದೆಂಬುದನ್ನು ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಬಾಗ್ಲು ತೆಗಿ ಮೇರಿ ಜಾನ್’ ಎಂಬ ಹಾಡಿನ ಮೂಲಕ ಜಾಹೀರಾಗಿತ್ತು. ಇದೀಗ ಈ ಹಾಡೇ ಒಂದಿಡೀ ಚಿತ್ರತಂಡಕ್ಕೆ ಅಗಾಧ ಪ್ರಮಾಣದಲ್ಲಿ ಖುಷಿ ತಂದು ಕೊಟ್ಟಿದೆ.
ಈ ಖುಷಿಯ ಬಗ್ಗೆ ಚಿತ್ರತಂಡ ಥ್ರಿಲ್ಲಿಂಗ್ ಸಂಗತಿಯೊಂದನ್ನು ಹಂಚಿಕೊಂಡಿದೆ. ಅದರನ್ವಯ ಹೇಳೋದಾದರೆ, ಈ ಹಾಡೀಗ ಕೇವಲ ಕರ್ನಾಟಕ ಮಾತ್ರವಲ್ಲದೇ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ಸದು ಮಾಡುತ್ತಿದೆ. ಬಿಡುಗಡೆಯಾದ ಘಳಿಗೆಯಿಂದಲೇ ಈ ಹಾಡು ಎಲ್ಲ ವರ್ಗದವರನ್ನೂ ಆವರಿಸಿಕೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯಂತೂ ಬಾಗ್ಲು ತೆಗಿ ಮೇರಿ ಜಾನ್ ನಾನಾ ರೀತಿಯಲ್ಲಿ ಹರಿದಾಡಿ ಮಿಂಚಿತ್ತು. ನಿಖರವಾಗಿ ಹೇಳ ಬೇಕೆಂದರೆ, ಅಪರೂಪದ ಈ ಹಾಡನ್ನು ಜನರೆಲ್ಲ ತಮ್ಮದೇ ರೀತಿಯಲ್ಲಿ ಸಂಭ್ರಮಿಸಿದ್ದರು. ರೀಲ್ಸ್, ಡ್ಯಾನ್ಸ್ ಸೇರಿದಂತೆ ಮೇರಿ ಜಾನ್ ಹಾಡು ಎಲ್ಲರನ್ನೂ ಮರುಳು ಮಾಡಿತ್ತು. ಇಂಥಾ ಜನಪ್ರಿಯತೆಯ ಪ್ರಭೆಯಲ್ಲಿಯೇ ಈ ಹಾಡೀಗ ಇನ್ನೂರು ಮಿಲಿಯನ್ನಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ!
ಈ ಹಾಡನ್ನು ಖುದ್ದು ವಿಜಯ ಪ್ರಸಾದ್ ಅವರೇ ಬರೆದಿದ್ದರು. ಅದು ಅನೂಪ್ ಸಿಳೀನ್ ಸಂಗೀತ ನಿರ್ದೇಶನದಲ್ಲಿ, ವ್ಯಾಸರಾಜ್ ಸೋಸಲೆ ಮತ್ತು ಅನನ್ಯಾ ಭಟ್ ಕಂಠದಲ್ಲಿ ಚೆಂದಗೆ ಮೂಡಿ ಬಂದಿತ್ತು. ಈ ಹಾಡು ಕೇವಲ ಸಾಹಿತ್ಯ ಮತ್ತು ಸಂಗೀತದ ವಿಚಾರದಲ್ಲಿ ಮಾತ್ರವೇ ಭಿನ್ನವಾಗಿರಲಿಲ್ಲ; ಅದನ್ನು ಚಿತ್ರೀಕರಣ ನಡೆಸಿದ ರೀತಿಯೂ ಕೂಡಾ ಅಷ್ಟೇ ವಿಶೇಷವಾಗಿತ್ತು. ನೂರಾರು ಕಲಾವಿದರ ಬೃಹತ್ ತಾರಾಗಣದಲ್ಲಿ, ಕಲರ್ಫುಲ್ಲಾಗಿ ಚಿತ್ರೀಕರಣಗೊಂಡಿದ್ದ ಈ ಹಾಡು, ಮೋನಿಪ್ಲಿಕ್ಸ್ ಯೂಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆಗೊಂಡು ದೊಡ್ಡ ದಾಖಲೆಯನ್ನೇ ಮಾಡಿದೆ. ಈ ಕ್ಷಣಕ್ಕೂ ಟ್ರೆಂಡಿಂಗಿನಲ್ಲಿರುವ ಈ ಸಾಂಗಿನ ಮೂಲಕವೇ ತೋತಾಪುರಿಯತ್ತಲಿನ ನಿರೀಕ್ಷೆಗಳು ಮತ್ತಷ್ಟು ಮಾಗಿಕೊಳ್ಳುವಂತಾಗಿದೆ.
ಇದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೆ.ಎ ಸುರೇಶ್ ನಿರ್ಮಾಣ ಮಾಡಿರುವ ಅದ್ದೂರಿ ಚಿತ್ರ. ಅತ್ಯಂತ ವಿಶೇಷವಾದ ಕಥಾ ಹಂದರವನ್ನೊಳಗೊಂಡಿರುವ ತೋತಾಪುರಿ, ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಬಿಡುಗಡೆಗೊಳ್ಳಲಿದೆ. ಈ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳ್ಳುತ್ತಿರುವ ಕನ್ನಡದ ಮೊದಲ ಹಾಸ್ಯ ಪ್ರಧಾನ ಚಿತ್ರವೆಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ. ಅದಕ್ಕಿಂತಲೂ ವಿಶೇಷವೆಂದರೆ, ತೋತಾಪುರಿ ಎರಡು ಭಾಗಗಳಲ್ಲಿ ಬಿಡುಗಡೆಗೊಳ್ಳಲಿದೆ. ಸಾಮಾನ್ಯವಾಗಿ, ಒಂದು ಚಿತ್ರ ಬಿಡುಗಡೆಗೊಂಡು ಹಿಟ್ ಆದ ತರುವಾಯ ಎರಡನೇ ಭಾಗ ಚಾಲೂ ಆಗುತ್ತೆ. ಆದರೆ ಏಕಕಾಲದಲ್ಲಿಯೇ ತೋತಾಪುರಿಯ ಎರಡೂ ಭಾಗಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ ಸೇರಿದಂತೆ ಬಹುದೊಡ್ಡ ತಾರಾಗಣದಿಂದ ತೋತಾಪುರಿ ಕಳೆಗಟ್ಟಿಕೊಂಡಿದೆ.