ಆರ್ಯಭಟ ಪ್ರಶಸ್ತಿ ವಿಜೇತನೊಂದಿಗೆ ಸ್ವರ್ಣಲತಾ ಆರ್ಭಟ!
ನಟಿ ಶ್ರೀಲೀಲಾ ಮತ್ತೆ ಸುದ್ದಿಯಲ್ಲಿದ್ದಾಳೆ. ಸದ್ಯದ ಮಟ್ಟಿಗೆ ಆಕೆ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಬೇಡಿಕೆ ಹೊಂದಿರುವ ನಟಿ. ಆಕೆ ಸುದ್ದಿಯಲ್ಲಿರೋದರಲ್ಲಿ ಏನು ವಿಶೇಷವಿದೆ ಅಂತ ನಿಮಗನ್ನಿಸೋದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಈಗ ಆಕೆ ಸುದ್ದಿಕೇಂದ್ರಕ್ಕೆ ಬಂದಿರುವುದು ಅಮ್ಮನ ಡಾನ್ಗಿರಿಯ ಕಾರಣದಿಂದ. ವೃತ್ತಿಯಲ್ಲಿ ಡಾಕ್ಟರ್ ಆಗಿದ್ದುಕೊಂಡು, ಮಗಳು ಶ್ರೀಲೀಲಾ ಏಳಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿರುವ ಸ್ವರ್ಣಲತಾ ಇದೀಗ ಎಲ್ಲರೂ ಅವಾಕ್ಕಾಗುವ ರೀತಿಯಲ್ಲಿ ವಿವಾದವೊಂದರ ಕೇಂದ್ರಬಿಂದುವಾಗಿದ್ದಾರೆ. ಅಲೆಯನ್ಸ್ ವಿವಿಯ ಮಾಜೀ ಸಂಸ್ಥಾಪಕ ಚಾನ್ಸಲರ್ ಆಗಿರುವ ಮಧುಕರ್ ಅಂಗೂರ ತನ್ನದೇ ವಿವಿಯೊಳಗೆ ನುಗ್ಗಿ ದಾಂಧಲೆಯೆಬ್ಬಿಸಿದ್ದಾನೆ. ಆತನ ಮಗ್ಗುಲಲ್ಲಿ ನಿಂತು ಅಕ್ಷರಶಃ ಲೇಡಿ ಡಾನ್ ಅವತಾರವೆತ್ತುವ ಮೂಲಕ ಇದೀಗ ಬಂಧನದ ಭೀತಿ ಎದುರಿಸುತ್ತಿರುವಾಕೆ ಶ್ರೀಲೀಲಾಳ ಅಮ್ಮ ಸ್ವರ್ಣಲತಾ!
ಈ ವಿಚಾರ ಕೇಳಿದೇಟಿಗೆ ವಂಚಕ ಕಂ ಕಚ್ಚೆಹರುಕ ಮಧುಕರ ಅಂಗೂರನಿಗೂ, ನಟಿ ಶ್ರೀಲೀಲಾಳ ತಾಯಿಗೂ ಎತ್ತಣಿಂದೆತ್ತಣ ಸಂಬಂಧ ಎಂಬಂಥಾ ಅಚ್ಚರಿ ಕಾಡೋದು ಸಹಜ. ಆದರೆ, ಹಣ ಮದದಿಂದ ಮೆರೆಯುವ ಇಂಥಾ ಹೈಫೈ ಆಸಾಮಿಗಳಿಗೆ ಯಾವ್ಯಾವ ದಿಕ್ಕಿನಿಂದ ಕನೆಕ್ಷನ್ನುಗಳು ಕುದುರಿಕೊಳ್ಳುತ್ತವೋ ಹೇಳಲು ಬರುವುದಿಲ್ಲ. ಅಂಥಾದ್ದೊಂದು ಮಾಯೆಯಿರದೇ ಹೋಗಿದ್ದರೆ, ನಟಿಯ ಅಮ್ಮನಿಗೂ ನಾನಾ ಆರೋಪ ಹೊತ್ತು ತನ್ನದೇ ವಿವಿಯಿಂದ ಹೊರದಬ್ಬಿಸಿಕೊಂಡಿರುವ ಅಂಗೂರನಿಗೂ ನಂಟು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಇಂಥಾ ಅಂಗೂರ ಹಾಗೂ ಆತನ ಫ್ಯಾಮಿಲಿ ನಡುವೆಯೇ ೨೦೧೫ರಿಂದ ಆಸ್ತಿ ಸಂಬಂಧಿತವಾದ ಕೌಟುಂಬಿಕ ಕಲಹ ನಡೆಯುತ್ತಿತ್ತು. ತನ್ನೆಲ್ಲ ಪರಿಶ್ರಮ, ಬುದ್ಧಿಮತ್ತೆಯಿಂದಲೇ ಅಲೆಯನ್ಸ್ ವಿವಿ ಸ್ಥಾಪನೆ ಮಾಡಿ ಅದರಲ್ಲಿ ಯಶ ಕಂಡಿದ್ದ ಅಂಗೂರನಿಗೆ ಉಂಗುಷ್ಟದಿಂದ ಮಸ್ತಕದವರೆಗೂ ನಾನಾ ಖಯಾಲಿಗಳಿದ್ದಾವೆ. ಅಫೇರಿನ ಮೇಲೆ ಅಫೇರುಗಳನ್ನಿಟ್ಟುಕೊಳ್ಳುತ್ತಾ ಸಾಗಿದ ಈತ, ಈ ಖಯಾಲಿಗೆ ವಿವಿಯನ್ನೇ ಅಡವಿಡುತ್ತಾನೆಂಬ ಭಯದಿಂದಲೇ ಈತನ ತಮ್ಮ ವಿವಿಯನ್ನು ಹೈಜಾಕ್ ಮಾಡಿಕೊಂಡಿದ್ದ, ಹಾಗೆ ಆನೇಕಲ್ಲಿನಲ್ಲಿರುವ ಅಲೆಯನ್ಸ್ ವಿವಿಯಿಂದ ಹೊರಬಿದ್ದು ಅಬ್ಬೇಪಾರಿಯಂತಾಗಿದ್ದ ಅಂಗೂರ ನಿನ್ನೆ ಏಕಾಏಕಿ ದಂಡಿನ ಸಮೇತ, ಥೇಟು ಗ್ಯಾಂಗ್ಸ್ಟರ್ನಂತೆ ಅಲೆಯನ್ಸ್ ವಿವಿಗೆ ನುಗ್ಗಿದ್ದಾನೆ. ಆ ದಂಡಿನ ಅಧಿನಾಯಕಿಯಂತೆ ಅಬ್ಬರಿಸಿ, ನಾನಾ ವೆರೈಟಿಯ ಡ್ರಾಮಾ ಸೃಷ್ಟಿಸಿದಾಕೆ ಶ್ರೀಲೀಲಾಳ ಅಮ್ಮ ಸ್ವರ್ಣಲತಾ!
ಅಂಗೂರ ಮತ್ತು ಸ್ವರ್ಣಲತಾ ವಿವಿಗೆ ನುಗ್ಗಿದ ರೀತಿಯೇ ಭಯಾನಕವಾಗಿತ್ತು. ಬೆಂಜ್ ಕಾರಲ್ಲಿ ಬಂದಿಳಿದ ಈ ಇಬ್ಬರ ಹಿಂದೆಯೂ ಐವತ್ತು ಮಂದಿ ಶಸ್ತ್ರಸಜ್ಜಿತ ಬೌನ್ಸರ್ಗಳ ಪಡೆಯಿತ್ತು. ಒಂದು ಬಸ್ಸಿನ ತುಂಬಾ ಬೌನ್ಸರ್ಗಳನ್ನು ತುಂಬಿಕೊಂಡು ಬಂದ ಮಧುಕರ್ ಅಂಗೂರ ಮತ್ತು ಸ್ವರ್ಣಲತಾ, ವಿದ್ಯಾರ್ಥಿಗಳ ಕಣ್ಣೆದುರಲ್ಲಿಯೇ ವಿವಿಗೆ ನುಗ್ಗಿ ದಾಂಧಲೆಯೆಬ್ಬಿಸಿದ್ದರು. ಹಾಗೆ ನುಗ್ಗಿದ ಅಂಗೂರ ತನ್ನ ಹಳೇ ಚೇಂಬರಿಗೆ ಪ್ರವೇಶಿಸಿ ಇದು ನಂದೇ ವಿವಿ ಅಂತ ಗರ್ವದಿಂದ ಹ್ಞೂಂಕರಿಸಿದ್ದ. ತನ್ನ ಸಹೋದರ ಸುಧೀರ್ ಅಂಗೂರ್, ಶೈಲಜಾ ಛಬ್ಬಿ ಮುಂತಾದವರೆಲ್ಲ ದಂಗಾಗುವಂತೆ ಮಾಡಿದ್ದ. ಈ ಪ್ರಕರಣದಲ್ಲಿ ಮಧುಕರ ಅಂಗೂರನನ್ನೇ ಮೀರಿಸುವಂತೆ ಮೆರೆದಾಡಿದ್ದಾಕೆ ಸ್ವರ್ಣಲತಾ. ಮನಬಂದಂತೆ ಆವಾಜು ಬಿಡುತ್ತಾ, ಥೇಟು ಲೇಡಿ ಡಾನೆಂಬಂತೆ ಅಬ್ಬರಿಸಿದ್ದ ಸ್ವರ್ಣಲತಾ, ನಾನೇ ಈ ವಿವಿಯ ಮುಂದಿನ ಚಾನ್ಸಲರ್ ಅಂತ ಘೋಶಿಸಿಕೊಂಡು ಬಿಟ್ಟಿದ್ದಳು.
ಯಾವಾಗ ತನ್ನಣ್ಣ ಮತ್ತು ಸ್ವರ್ಣಲತಾ ದಾಂಧಲೆಯೆಬ್ಬಿಸಿದರೋ, ಆ ಕ್ಷಣವೇ ಸುಧೀರ್ ಅಂಗೂರ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿದ್ದರಾದರೂ ಸ್ವರ್ಣಲತಾ ಮೆರೆದಾಟಕ್ಕೆ ಮಾತ್ರ ಬ್ರೇಕ್ ಬೀಳಲಿಲ್ಲ. ಕಡೆಗೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿ ಅಂಗೂರನ ಪಟಾಲಮ್ಮನ್ನು ಸ್ವರ್ಣಲತಾಳ ಸಮೇತ ವಿವಿ ಗೇಟಿಂದ ಹೊರಗಟ್ಟುವಲ್ಲಿ ಯಶ ಕಂಡಿದ್ದರು. ಸಂಜೆ ಹೊತ್ತಿಗೆ ವಿವಿಗೆ ಭೇಟಿ ನೀಡಿದ್ದ ಆನೇಕಲ್ ಗ್ರಾಮಾಂತರ ಮಲ್ಲಿಕಾರ್ಜುನ ಬಾಲದಂಡೆ ಎಲ್ಲವನ್ನೂ ಪರಿಶೀಲಿಸಿದ್ದಾರೆ. ಕೂಡಲೇ ಮಧುಕರ ಅಂಗೂರನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಂಡು, ಅಂಗೂರನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಇಷ್ಟೆಲ್ಲ ಆಗುವ ಹೊತ್ತಿಗೆ ಗಾಯಬ್ ಆಗಿದ್ದ ಶ್ರೀಲೀಲಾ ಅಮ್ಮ ಸ್ವರ್ಣಲತಾಗೂ ಈಗ ಬಂಧನದ ಭೀತಿ ಎದುರಾಗಿದೆ. ಅದೇನೇ ಸರ್ಕಸ್ಸು ನಡೆಸಿದರೂ ಕೂಡಾ ಆಕೆ ಜೈಲುಪಾಲಾಗೋದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬಂಥಾ ವಾತಾವರಣವಿದೆ.
ಹಾಗಾದರೆ, ಈ ಪ್ರಕರಣದ ಅಸಲಿಯತ್ತೇನು? ಇದರ ಹಿಂದಿರುವ ಕಿಸುರುಗಳ್ಯಾವುವು? ಅಂಗೂರನಿಗೂ ಶ್ರೀಲೀಲಾ ತಾಯಿ ಸ್ವರ್ಣಲತಾಗೂ ಇರುವ ನಂಟೆಂಥಾದ್ದೆಂಬುದನ್ನು ವಿವರಿಸುವ ಮುನ್ನ, ಮಧುಕರ್ ಅಂಗೂರನನ್ನು ಪರಿಚಯಿಸುವುದೊಳಿತು. ಮಧುಕರ ಬಿ. ಅಂಗೂರ ಮೂಲತಃ ಮಹಾರಾಷ್ಟ್ರದವನು. ಸ್ಥಿತಿವಂತ ಫ್ಯಾಮಿಲಿಯಿಂದ ಬಂದಿದ್ದ ಈತ ದೇಶ ವಿದೇಶಗಳ ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಓದಿ ಭಾರೀ ಸಾಧನೆ ಮಾಡಿದ್ದವನು. ಹೀಗೆ ವೇಗವಾಗಿ ಬೆಳೆದ ಈತ ಅಮೆರಿಕದ ಮಿಚಿಗನ್ ಯೂನಿವರ್ಸಿಟಿಯಲ್ಲಿ ಪ್ರತಿಷ್ಠಿತ ಹುದ್ದೆಯನ್ನೂ ಗಿಟ್ಟಿಸಿಕೊಂಡಿದ್ದ. ಈ ಮಿಚಿಗನ್ನಲ್ಲಿ ಉದ್ಯೋಗ ಸಿಗೋದಕ್ಕಿಂತ ಬೇರೆ ಸಾಧನೆ ಇಲ್ಲವೇನೋ. ಆದರೆ ಈತನ ಕಚ್ಚೆಹರುಕ ಬುದ್ಧಿ ಎಂಬುದು ಆ ಕೆಲಸಕ್ಕೂ ಕತ್ತರಿ ಹಾಕಿತ್ತು. ಹೆಣ್ಣೆಂದರೆ ಬಾಯಿ ಬಾಯಿ ಬಿಡುವ ಜಾಯಮಾನದ ಈತ ಕಾಲೇಜು ದಿನಗಳಿಂದಲೂ ಲಫಡಾ ಮಾಡಿಕೊಳ್ಳುತ್ತಲೇ ಬಂದಿದ್ದ. ಇಂಥವನು ಮಿಚಿಗನ್ ಉನಿವರ್ಸಿಟಿಯಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ತಡವಿಕೊಳ್ಳಲು ಹೋಗಿದ್ದ. ಇಂಥಾ ಕಾಮುಕರ ಕಾಟವನ್ನು ಅವುಡುಗಚ್ಚಿ ಸಹಿಸಿಕೊಳ್ಳಲು ಅದೇನು ಭಾರತವೇ? ಆಕೆ ಸೀದಾ ಹೋಗಿ ಈತನ ವಿರುದ್ಧ ಯೂನಿವರ್ಸಿಟಿ ಮುಖ್ಯಸ್ಥರಿಗೆ ದೂರು ನೀಡಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಕಡೆಗೂ ಅಲ್ಲಿ ಅಂಗೂರನ ತಲೆ ದಂಡವಾಗಿತ್ತು.
ಹಾಗೆ ಮಿಚಿಗನ್ ಯೂನಿವರ್ಸಿಟಿ ಕೆಲಸದಿಂದ ಹೊರ ದಬ್ಬಿಸಿಕೊಂಡು ಬಂದ ಈ ಆಸಾಮಿ ಸೀದಾ ತವರು ನೆಲದತ್ತ ಮರಳಿಕೊಂಡಿದ್ದ. ಈತನಿಗೆ ಪಿರ್ತಾರ್ಜಿತವಾಗಿ ಬಂದ ಆಸ್ತಿ ಬಹಳಷ್ಟಿತ್ತು. ಈತನಿಗೆ ಸುಧೀರ್ ಅಂಗೂರ್ ಮತ್ತು ಶೈಲಾ ಛಬ್ಬಿ ಎಂಬ ಸಹೋದರ ಸಹೋದರಿ ಇದ್ದಾರೆ. ಆದರೆ ಮಹಾರಾಷ್ಟ್ರದಲ್ಲಿದ್ದ ಆಸ್ತಿ ಹಂಚಿಕೆ ಆಗಿರಲಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ಭಾರೀ ಅನುಭವ ಹೊಂದಿದ್ದ ಮಧುಕರ ಅಂಗೂರ ಅಂಥಾ ಪಿತ್ರಾರ್ಜಿತ ಆಸ್ತಿಯ ಬಾಬತ್ತಿನಲ್ಲಿ ಬೆಂಗಳೂರಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದ್ದ. ಭಾರೀ ಆದಾಯ ಬರುವ ಬಗ್ಗೆ ಆಸೆಯಿಟ್ಟುಕೊಂಡು ಅವರೆಲ್ಲರೂ ಈತನ ಮಾತಿಗೆ ತಲೆಯಾಡಿಸಿದ್ದರು. ಹೀಗೆ ಪಿತ್ರಾರ್ಜಿತ ಆಸ್ತಿಯ ಬಾಬತ್ತಿಟ್ಟುಕೊಂಡು ಈತ ೨ಂ೧ಂರಲ್ಲಿ ಅಲೆಯನ್ಸ್ ಬ್ಯುಸಿನೆಸ್ ಸ್ಕೂಲ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿಯೇ ಬಿಟ್ಟಿದ್ದ. ಯಡಿಯೂರಪ್ಪನ ಸರ್ಕಾರ ಅಜೀಂ ಪ್ರೇಂಜಿಯ ವಿಪ್ರೋಗೆ ಸೇರಿದ್ದ ಒಂದು ವಿದ್ಯಾ ಸಂಸ್ಥೆಯ ಜೊತೆಗೆ ಅಂಗೂರನ ಕಾಲೇಜಿಗೂ ಯೂನಿವರ್ಸಿಟಿಯ ಮಾನ್ಯತೆ ನೀಡಿತ್ತು. ಖಾಸಗಿ ವಿವಿಗಳಿಗೆ ಮಾನ್ಯತೆ ನೀಡಬಾರದೆಂಬ ವಿಪಕ್ಷಗಳ ಕೂಗನ್ನು ಪಕ್ಕಕ್ಕೆ ಸರಿಸಿ ಈ ಕ್ರಮ ಕೈಗೊಳ್ಳಲಾಗಿತ್ತು.
ಹೀಗೆ ಅನುಮೋದನೆ ಪಡೆದು ಅಲೈಯನ್ಸ್ ಯೂನಿವರ್ಸಿಟಿ ಶುರು ಮಾಡಿದ ಮಧುಕರ್ ಅಂಗೂರ ಆ ಯೂನಿವರ್ಸಿಟಿಯನ್ನು ಕಟ್ಟಿ ನಿಲ್ಲಿಸಿದ ಪರಿ ಅದ್ಭುತವೇ. ಇದು ಶುರುವಾದ ವರ್ಷಗಳಲ್ಲಿಯೇ ದೇಶ ವಿದೇಶಗಳಲ್ಲಿಯೂ ಮಾನ್ಯತೆ ಪಡೆದುಕೊಂಡಿದೆ. ಈವತ್ತಿದು ಬೆಂಗಳೂರಿನಲ್ಲಿ ಅಗ್ರ ಸ್ಥಾನದಲ್ಲಿರುವ ಖಾಸಗಿ ವಿದ್ಯಾ ಸಂಸ್ಥೆಯಾಗಿ ಬೆಳೆದಿದೆ. ಆರಂಭ ಕಾಲದಲ್ಲಿ ಅಂಗೂರ ತನ್ನ ಸಹೋದರ, ಸಹೋದರಿ ಮತ್ತು ಆಕೆಯ ಗಂಡನನ್ನು ಈ ಕಾಲೇಜಿಗೆ ಡೈರೆಕ್ಟರುಗಳನ್ನಾಗಿ ಹುದ್ದೆ ನೀಡಿದ್ದ. ಆದರೆ ಬರ ಬರುತ್ತಾ ಎಲ್ಲವನ್ನೂ ಈತನೇ ಆವರಿಸಿಕೊಂಡಿದ್ದ. ಈ ನಡುವೆ ತನ್ನ ಅತ್ತೆ ಮಗಳ ಮೇಲೆಯೇ ಅತ್ಯಾಚಾರ ಮಾಡಿದನಲ್ಲಾ? ಅದಾದ ಬಳಿಕವಂತೂ ಈತ ಯಾರನ್ನೂ ಲೆಕ್ಕಕ್ಕಿಟ್ಟುಕೊಳ್ಳಲಿಲ್ಲ. ಹೊಸಾ ಹೆಂಡತಿ ಪ್ರಿಯಾಳನ್ನೇ ಆಯಕಟ್ಟಿನ ಜಾಗೆಗೆ ಕೂರಿಸಿದ್ದ. ಇದಾಗುತ್ತಲೇ ಸಹೋದರ ಸುಧೀರ್, ಸಹೋದರಿ ಶೈಲಜಾ, ಆಕೆಯ ಗಂಡ ಪ್ರಕಾಶ್ ಛಬ್ಬಿ ಮುಂತಾದವರು ತಮ್ಮ ಆಸ್ತಿಯ ಬಾಬತ್ತು ಕೊಡೆಂದರೂ ಈತ ಕ್ಯಾರೇ ಅಂದಿರಲಿಲ್ಲ. ಈ ಬಗ್ಗೆಯೂ ವಿವಾದ ಕೋರ್ಟಿನಲ್ಲಿದೆ. ಈ ನಡುವೆ ಅಂಗೂರನ ಒಂದೊಂದೇ ಲೀಲಾವಳಿಗಳು ಲೀಕ್ ಆಗಲು ಶುರುವಿಟ್ಟುಕೊಂಡಿದ್ದವು!
ವರ್ಷಗಳ ಹಿಂದೆ ಅತ್ತೆ ಮಗಳ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಜೈಲು ಸೇರಿ ವಾಪಾಸಾಗಿದ್ದ ಮಧುಕರ ಅಂಗೂರನ ಮೇಲೆ ಮತ್ತೊಂದು ಅತ್ಯಾಚಾರದ ಕೇಸು ಮುರಕೊಂಡು ಬಿದ್ದಿತ್ತು. ತನ್ನ ಮೇಲೆ ಮೂರು ಬಾರಿ ಮಧುಕರ್ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆ ಯೊಬ್ಬರು ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಹೋಟೆಲ್ ಒಂದರಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್ ಆಗಿ ಕೆಲಸ ಮಾಡುವ ಆಕೆ ಮಧುಕರ ಅಂಗೂರ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ದಾಖಲಿಸಿದ್ದಾದ್ದಳು. ಈ ದೂರಿನನ್ವಯ ನೋಡಿದರೆ, ೨ಂಂ೫ ರಿಂದ ಇದುವರೆಗೆ ಮೂರು ಬಾರಿ ಆಕೆಯ ಮೇಲೆ ಮಧುಕರ್ ಅತ್ಯಾಚಾರ ನಡೆಸಿದ್ದಾನೆ. ಇಸ್ವಿ ೨ಂಂ೫ ರಲ್ಲಿ ಬಿಟಿಎಂ ಲೇಔಟ್ನಲ್ಲಿ ಅತ್ಯಾಚಾರ ನಡೆಸಿದ್ದ ಅಂಗೂರ, ಇಸ್ವಿ ೨ಂ೧೩ ರಲ್ಲಿ ಏನೇನೋ ನೆಪ ಹೇಳಿ ಚಂಡೀಗಢಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಕಳೆದ ಫೆಬ್ರವರಿಯಲ್ಲೂ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಅಂತ ಆ ಮಹಿಳೆ ದೂರು ದಾಖಲಿಸಿದ್ದಾಳೆ.
ಮಧುಕರ ಅಂಗೂರನಿಗೆ ಇದೆಂಥಾ ಹಾಳು ಛಾಳಿ ಅಂಟಿಕೊಂಡಿದೆಯೋ ಗೊತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತನಿಗಿರುವ ಘನತೆಗೂ, ಈಗ ತಲುಪಿಕೊಂಡಿರುವ ಪಾತಾಳಕ್ಕೂ ಸೂತ್ರ ಸಂಬಂಧವಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿಯೂ ಭಾರೀ ಹೆಸರು ಮಾಡಿದ್ದ ಈತ ಆರ್ಯಭಟ ಪ್ರಶಸ್ತಿಗೂ ಭಾಜನನಾಗಿದ್ದ. ಇದಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠತ ಪ್ರಶಸ್ತಿಗಳೂ ಈತನ ಮುಡಿಗೇರಿವೆ. ಆದರೆ ಮೂಗುಬಟ್ಟಿನ ಖಯಾಲಿ ಎಂಬುದು ಅಂಥಾ ಘನತೆಯನ್ನೆಲ್ಲ ಗುಡಿಸಿ ಬಿಸಾಡಿದೆ. ಕೇವಲ ಚಟದಿಂದಾಗಿಯೇ ಪಾತಾಳ ಸೇರಿರುವ ಮಧುಕರ ಅಂಗೂರನ ದೆಸೆಯಿಂದ ಈಗ ಸಮುದ್ರದಂತೆ ಬೆಳೆದು ನಿಂತಿರುವ, ದೇಶ ವಿದೇಶಗಳಿಗೂ ವ್ಯಾಪಿಸಿಕೊಂಡಿರುವ ಅಲೆಯನ್ಸ್ ಯೂನಿವರ್ಸಿಟಿಯ ಬುಡವೇ ಅದುರುತ್ತಿದೆ. ವರ್ಷಾಂತರಗಳ ಹಿಂದೆ ಪ್ರಿಯಾಂಕಾ ಎಂಬಾಕೆಯ ಮೋಹಕ್ಕೆ ಬಿದ್ದಿದ್ದ ಅಂಗೂರ, ಆಕೆಯನ್ನು ಎರಡನೇ ಹೆಂಡತಿಯನ್ನಾಗಿ ಸ್ವೀಕರಿಸಿದ್ದ. ಇನ್ನೇನು ಅಲೆಯನ್ಸ್ ವಿವಿ ಆಸ್ತಿಪಾಸ್ತಿ ಆಕೆಯ ಪಾಲಾಗಿ ಬಿಡುತ್ತದೆಂದು ಭಯಗೊಂಡ ಸಹೋದರ ಸಹೋದರಿಯರು ಹೇಗೋ ಮಾಡಿ ವಿವಿಯನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದರು. ೨೦೧೫ರಿಂದೀಚೆಗೂ ಆ ಕೇಸು ನಡೆಯುತ್ತಿದೆ. ಅದೀಗ ವಿಚಾರಣೆಯ ಹಂತದಲ್ಲಿರುವಾಗಲೇ ದಾಂಧಲೆಯೆಬ್ಬಿಸುವ ಮೂಲಕ ಮಧುಕರ್ ಅಂಗೂರ ಮತ್ತೆ ಜೈಲುಪಾಲಾಗಿದ್ದಾನೆ.
ಇಂಥಾ ಹೀನಸುಳಿ ಹೊಂದಿರುವ ಮಧುಕರ್ ಅಂಗೂರನೊಂದಿಗೆ ಸ್ವರ್ಣಲತಾ ಅಬ್ಬರಿಸುತ್ತಾಳೆಂದರೆ ಈ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿಕೊಳ್ಳುತ್ತದೆ. ಸ್ವರ್ಣಲತಾ ಮೂಲತಃ ತೆಲುಗು ನಾಡಿನಾಕೆ. ಅಲ್ಲಿಯವರೇ ಆದ ಉದ್ಯಮಿ ಸುರಪನೇನಿ ಸುಭಾಕರ ರಾವ್ ಎಂಬಾತನನ್ನು ಮದುವೆಯಾಗಿದ್ದ ಸ್ವರ್ಣಲತಾ ಕೆಲವೇ ವರ್ಷಗಳಲ್ಲಿ ಆತನಿಂದ ದೂರಾಗಿದ್ದಳು. ಆ ನಂತರ ಬೆಂಗಳೂರಿಗೆ ಆಗಮಿಸಿ ದಂತವೈದ್ಯ ವೃತ್ತಿ ಶುರುವಿಟ್ಟುಕೊಂಡಿದ್ದ ಆಕೆ ಅದರಲ್ಲಿಯೇ ಕಳೆದು ಹೋಗಿದ್ದಳು. ಇತ್ತೀಚೆಗೆ ಶ್ರೀಲೀಲಾ ನಟಿಯಾಗಿ ಪ್ರಸಿದ್ಧಿ ಪಡೆದುಕೊಂಡಿದ್ದಾಳಲ್ಲಾ? ಆ ಹೊತ್ತಿನಲ್ಲಿಯೇ ಶ್ರೀಲೀಲಾಳ ಅಪ್ಪ ಉದ್ಯಮಿ ಸುರಪನೇನಿ ಸುಭಾಕರ ರಾವ್ ಎಂಬ ವಿಚಾರ ತೆಲುಗು ವಾಹಿನಿಗಳಲ್ಲಿ ಹರಿದಾಡಲಾರಂಭಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸುಭಾಕರ ರಾವ್, ತಾನು ಶ್ರೀಲೀಲಾ ಅಪ್ಪ ಅಲ್ಲ, ಸ್ವರ್ಣಲತಾ ತನ್ನಿಂದ ದೂರಾದ ಮೇಲೆ ಆಕೆ ಹುಟ್ಟಿದ್ದಾಳೆ ಎಂಬರ್ಥದ ಸ್ಫೋಟಕ ಹೇಳಿಕೆ ನೀಡಿದ್ದ. ಅದು ಹೇಗೋ ತಣ್ಣಗಾಗಿತ್ತಾದರೂ, ಸ್ವರ್ಣಲತಾರ ಖಾಸಗಿ ಬದುಕು ಅಸ್ತವ್ಯಸ್ತವಾಗಿರೋದರ ಸ್ಪಷ್ಟ ಸೂಚನೆಯನ್ನಂತೂ ರವಾನಿಸಿತ್ತು.
ಹೀಗೆ ಸಿಂಗಲ್ ಪೇರೆಂಟಾಗಿ ಶ್ರೀಲೀಲಾಳನ್ನು ಪೊರೆಯುತ್ತಾ, ತನ್ನ ವೃತ್ತಿ ನಡೆಸುತ್ತಾ, ಹೈಫೈ ಪಾರ್ಟಿಗಳಲ್ಲಿ ಮಿಂದೇಳುತ್ತಿದ್ದ ಸ್ವರ್ಣಲತಾ ಇದೀಗ ಸುದ್ದಿಯಾಗಬಾರದ ರೀತಿಯಲ್ಲಿ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಮಧುಕರ ಅಂಗೂರನ ಸ್ತ್ರೀಲೀಲಾವಳಿಗಳ ಅರಿವಿರುವವರಿಗೆಲ್ಲ ಈ ಬಗ್ಗೆ ಸಹಜವಾಗಿಯೇ ಗುಮಾನಿಗಳಿದ್ದಾವೆ. ಸ್ವರ್ಣಲತಾ ಮತ್ತಷ್ಟು ಕಾಸಿಗಾಗಿ ಅಂಗೂರನ ಸಂಗಕ್ಕೆ ಬಿದ್ದರಾ? ಪ್ರಸಿದ್ಧ ಅಲೆಯನ್ಸ್ ವಿವಿ ಚಾನ್ಸಲರ್ ಆಗಿ ಮೆರೆಯುವ ಕನಸು ಕಂಡರಾ ಅಂತೆಲ್ಲ ಹತ್ತಾರು ಪ್ರಶ್ನೆಗಳೇಳುತ್ತವೆ. ಸದ್ಯಕ್ಕೀಗ ಮಧುಕರ್ ಅಂಗೂರ ಜೈಲುಪಾಲಾಗಿದ್ದಾನೆ. ಒಂದು ಮೂಲದ ಪ್ರಕಾರ ಇನ್ನು ದಿನದೊಪ್ಪತ್ತಿನಲ್ಲಿಯೇ ಸ್ವರ್ಣಲತಾ ಕೂಡಾ ಅಂಗೂರನಿಗೆ ಸಾಥ್ ಕೊಡುವಂತಾಗುತ್ತದೆ. ಯಾಕೆಂದರೆ, ಆಕೆಯ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಪೊಲೀಸರ ತನಿಖೆಯ ನಂತರವಷ್ಟೇ ಸ್ವರ್ಣಲತಾ ಮತ್ತು ಮಧುಕರ್ ಅಂಗೂರನ ನಡುವಿನ ನಂಟಿನ ಅಸಲೀ ಕಹಾನಿ ಹೊರಬೀಳಲಿದೆ. ಇದೆಲ್ಲ ಏನೇ ಇದ್ದರೂ ನಟಿಯಾಗಿ ಚಿಗುರಿಕೊಳ್ಳುತ್ತಿರುವ ಶ್ರೀಲೀಲಾಳ ಅಮ್ಮನಿಗೆ ಕಂಟಕವಂತೂ ತಪ್ಪಿದ್ದಲ್ಲ!