ಹೇಗಾದರೂ ಮಾಡಿ ಚಿತ್ರರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಹಂಬಲ ಹೊತ್ತ ಜೀವಗಳೆಲ್ಲ ಬದುಕಿನ ಯಾವುದೋ ಇರಿಕ್ಕು ಗಲ್ಲಿಗಳಲ್ಲಿ ಕಳೆದು ಹೋಗೋದಿದೆ. ವರದಂತೆ, ಅದುವರೆಗಿನ ತಪಸ್ಸಿನ ಫಲದಂತೆ ಒಲಿದು ಬಂದ ಅವಕಾಶವನ್ನು ಉಪಯೋಗಿಸಿಕೊಂಡು ತಾರೆಗಳಾದವರಿಗೂ ಏಕಾಏಕಿ ಮಂಕಾಗುವ, ಕಳೆದು ಹೋಗಿ ಬಿಡುವ ಅಪಾಯ ಇದ್ದೇ ಇರುತ್ತೆ. ಅದು ಬಣ್ಣದ ಜಗತ್ತಿನ ಬಣ್ಣನೆಗೆ ನಿಲುಕದ ಮಾಯೆ. ಹಾಗೆ ನಾಯಕ ನಟರಾಗಿ ಮಿಂಚಿ, ಭರವಸೆ ಮೂಡಿಸಿ ಇದ್ದಕ್ಕಿದ್ದಂತೆ ನೇಪಥ್ಯಕ್ಕೆ ಸರಿದ ಒಂದಷ್ಟು ಪ್ರತಿಭೆಗಳಿದ್ದಾವೆ. ಆ ಸಾಲಿನಲ್ಲಿ ಪ್ರಧಾನವಾಗಿ ಗಣನೆಗೆ ತೆಗೆದುಕೊಳ್ಳಬಹುದಾದ ಹೆಸರು ಸುನೀಲ್ ರಾವ್ ಅವರದ್ದು. ಖ್ಯಾತ ಗಾಯಕಿ ಬಿ.ಕೆ ಸುಮಿತ್ರಾರ ಮಗ ಸುನೀಲ್ ರಾವ್. ಅದರಾಚೆಗೆ ತನ್ನದೇ ಆದ ಐಡೆಂಟಿಟಿ ಪಡೆದುಕೊಂಡು ಮರೆಯಾಗಿದ್ದ ಅವರು ತುರ್ತು ನಿರ್ಗಮನದ ಮೂಲಕ ಮತ್ತೆ ಆಗಮಿಸಿದ್ದಾರೆ.
ಇದು ಸಿನಿ ಪ್ರೇಮಿಗಳ ಪಾಲಿಗೆ ಖುಷಿಯ ಸಂಗತಿ. ಕಡಿಮೆಯೇನಲ್ಲ; ಹತ್ತತ್ತಿರ ಹನ್ನೆರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರವುಳಿದಿದ್ದವರು ಸುನೀಲ್ ರಾವ್. ಈ ಹಂತದಲ್ಲಿ ಅವರು ತೆರೆಗೆ ಸರಿದ ಬಗ್ಗೆ ಊಹಾಪೋಹಗಳು ಹಬ್ಬಿಕೊಂಡಿದ್ದವು. ಗಾಂಧಿನಗರದಗುಂಟ ಥರ ಥರದ ಕಥೆಗಳು ಹುಟ್ಟಿಕೊಂಡಿದ್ದವು. ಅದೆಲ್ಲದರಾಚೆಗೆ ಸುನೀಲ್ ಬದುಕು ಬೇರೆಯದ್ದೇ ಪಥದತ್ತ ಹೊರಳಿಕೊಂಡಿತ್ತು. ಆದರೆ ಆತ್ಮದಂತೆ ಅಂಟಿಕೊಂಡ ಬಣ್ಣದ ನಂಟನ್ನು ಅಷ್ಟು ಸಲೀಸಾಗಿ ಕಳಚಿಕೊಳ್ಳಲು ಸಾಧ್ಯವೇ? ಒಂದೊಳ್ಳೆ ಕಥೆಯ ಮೂಲಕ ಮತ್ತೆ ಎಂಟರಿ ಕೊಡಬೇಕು, ತನ್ನನ್ನು ಪ್ರೀತಿಸುವ ಜೀವಗಳನ್ನು ಚಕಿತಗೊಳಿಸಬೇಕೆಂಬ ಇರಾದೆ ಸುನೀಲ್ರೊಳಗೆ ಇದ್ದೇ ಇತ್ತು. ಅಂಥಾ ಧ್ಯಾನಕ್ಕೊಲಿದು ಬಂದ ಅಪೂರ್ವ ಅವಕಾಶ ತುರ್ತು ನಿರ್ಗಮನ.
ನಿರ್ದೇಶಕ ಹೇಮಂತ್ ಕುಮಾರ್ ತುರ್ತು ನಿರ್ಗಮನ ಎಂಬ ಕಥೆಯನ್ನು ಬರೆದು, ಚಿತ್ರಕಥೆ ಸೇರಿದಂತೆ ಎಲ್ಲವನ್ನೂ ಫೈನಲ್ ಮಾಡಿದ ಕ್ಷಣದಲ್ಲಿ ಎದುರಾದದ್ದು ಯಾರು ಹೀರೋ ಎಂಬ ಪ್ರಶ್ನೆ. ಅದಾದ ಮರುಘಳಿಗೆಯಲ್ಲಿಯೇ ಸುನೀಲ್ ರಾವ್ ಎಂಬ ಹೆಸರು ಅದಕ್ಕುತ್ತರವಾಗಿ ನಿಂತಿತ್ತು. ಅದಾದ ಬಳಿಕ ಸುನೀಲ್ರನ್ನು ಸಂಪರ್ಕಿಸಿ ಕಥೆ ಹೇಳಿದರಲ್ಲಾ ಹೇಮಂತ್ ಕುಮಾರ್? ಅದರ ಚಹರೆಗಳನ್ನು ಕಂಡು, ಇಡೀ ಕಥೆಯನ್ನು ಆಸ್ವಾದಿಸಿದ ಸುನೀಲ್ ಮರು ಮಾತನಾಡದೆ ಒಪ್ಪಿಗೆ ಸೂಚಿಸಿದ್ದರಂತೆ. ಆ ಕ್ಷಣದಲ್ಲಿಯೇ ತನ್ನ ರೀ ಎಂಟ್ರಿಗೆ ಹೇಳಿ ಮಾಡಿಸಿದ ಕಥೆ ಇದೆಂಬ ಭಾವ ಸುನೀಲ್ರೊಳಗೆ ಗಟ್ಟಿಯಾಗಿ ಬೇರೂರಿಕೊಂಡಿತ್ತಂತೆ.
ದಶಕಗಳಷ್ಟು ಹಿಂದೆ ಎಕ್ಸ್ಕ್ಯೂಸ್ ಮೀ ಚಿತ್ರದ ಮೂಲಕ ಚಿತ್ರಪ್ರೇಮಿಗಳ ಮನಸೆಳೆದಿದ್ದವರು ಸುನೀಲ್. ಪಾದರಸದಂಥಾ ಆ ಪಾತ್ರದ ಮೂಲಕ ಅವರು ನೋಡುಗರ ಮನಸಿಗಿಳಿದಿದ್ದರು. ನೋಡ ನೋಡುತ್ತಲೇ ಅವರಿಗೊಂದು ಫ್ಯಾನ್ ಬೇಸ್ ಸೃಷ್ಟಿಯಾಗಿತ್ತು. ಒಂದರ್ಥದಲ್ಲಿ ಎಕ್ಸ್ಕ್ಯೂಸ್ ಮಿ ದಾಖಲೆಯನ್ನೇ ಸೃಷ್ಟಿಸಿತ್ತು. ಅಂಥಾದ್ದೇ ದಾಖಲೆಯನ್ನು ತುರ್ತು ನಿರ್ಗಮನವೂ ಸೃಷ್ಟಿಸಲಿದೆ ಎಂಬ ಅಚಲ ನಂಬಿಕೆ ಅವರಲ್ಲಿದೆ. ಹೊರ ಜಗತ್ತಿನಲ್ಲೂ ಕೂಡಾ ಅಂಥಾದ್ದೇ ಅಭಿಪ್ರಾಯಗಳು ಹೊಮ್ಮುತ್ತಿವೆ. ಈ ಚಿತ್ರ ಸುನೀಲ್ ರಾವ್ ಅವರ ನಸೀಬು ಬದಲಿಸಲಿದೆ ಎಂಬ ಮಾತುಗಳೂ ವ್ಯಾಪಕವಾಗಿ ಕೇಳಿ ಬರುತ್ತಿವೆ. ಅದು ನಿಜವಾಗಲಿ, ಸುನೀಲ್ ರಾವ್ ಎಂಬ ಮಲೆನಾಡ ಪ್ರತಿಭೆ ಮತ್ತೆ ಪ್ರಜ್ವಲಿಸಲೆಂಬುದು ಹಾರೈಕೆ…