ಸುಧಾರಾಣಿ ಎಂಬ ಹೆಸರು ಕೇಳಿದಾಕ್ಷಣ ಪ್ರತೀ ಚಿತ್ರಪ್ರೇಮಿಗಳ ಮನಸು ಪ್ರಪುಲ್ಲಗೊಳ್ಳುತ್ತೆ. ಸ್ಮೃತಿಪಟಲದ ತುಂಬಾ ಅವರ ನಾನಾ ಪಾತ್ರಗಳ ಚಿತ್ತಾರ ಮೂಡಿಕೊಳ್ಳುತ್ತೆ. ಎಂಭತ್ತರ ದಶಕದ ನಂತರದಲ್ಲಿ ಮುಖ್ಯನಾಯಕಿಯಾಗಿ ಬೆಳ್ಳಿತೆರೆಯನ್ನು ಆವರಿಸಿಕೊಂಡಿದ್ದ ಅವರು ಮಾಡಿದ್ದ ಮೋಡಿಯೇ ಅಂಥಾದ್ದಿದೆ. ಹಾಗೆ ಪ್ರಸಿದ್ಧ ನಾಯಕಿಯಾಗಿ ಮೆರೆದು, ಸ್ಟಾರ್ಗಳಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ಸುಧಾರಾಣಿ, ಒಂದಷ್ಟು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಸಾಂಸಾರಿಕ ಜೀವನದಲ್ಲಿ ಕಳೆದು ಹೋಗಿದ್ದರು. ಆ ನಂತರ ಕಳೆದ ವರ್ಷದಿಂದ ಮತ್ತೆ ಬಣ್ಣ ಹಚ್ಚಿರುವ ಅವರಿಗಾಗಿ ಅಪರೂಪದ ಪಾತ್ರಗಳು ಅರಸಿ ಬರುತ್ತಿವೆ. ಸದ್ಯ ಅವರು ನಾಳೆ ಬುಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರ ತುರ್ತು ನಿರ್ಗಮನದಲ್ಲಿ ವಿಶಿಷ್ಟವಾದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
ಈ ಚಿತ್ರದ ಕಥೆಯನ್ನು ಸಿದ್ಧಪಡಿಸುವಾಗಲೇ ಅದರಲ್ಲಿನ ನರ್ಸ್ ಪಾತ್ರಕ್ಕೆ ಸುಧಾರಾಣಿ ಹೇಳಿ ಮಾಡಿಸಿದ್ದಾರೆಂದು ಹೇಮಂತ್ ಕುಮಾರ್ಗೆ ಅನ್ನಿಸಿತ್ತಂತೆ. ಆ ಕ್ಷಣದಲ್ಲಿಯೇ ಅದನ್ನು ಸುಧಾರಾಣಿ ಒಪ್ಪಿಕೊಳ್ಳದಿರೋದಿಲ್ಲ ಎಂಬಂಥಾ ನಂಬಿಕೆಯೂ ಅವರಲ್ಲಿತ್ತಂತೆ. ಸುಧಾರಾಣಿ ತಮ್ಮ ಎರಡನೇ ಇನ್ನಿಂಗ್ಸ್ನ ಪ್ರತೀ ಹೆಜ್ಜೆಗಳನ್ನೂ ಎಚ್ಚರಿಕೆಯಿಕೆಯಿಂದ ಎತ್ತಿಡುತ್ತಿರುವವರು. ತಮಗೆ ಸಿಗುವ ಪ್ರತೀ ಚಿತ್ರ, ಪ್ರತೀ ಪಾತ್ರಗಳೂ ಭಿನ್ನವಾಗಿರಬೇಕೆಂಬುದು ಅವರ ಬಯಕೆ. ಪಾತ್ರಗಳ ಆಯ್ಕೆಯ ವಿಚಾರದಲ್ಲಿ ಸುಧಾರಾಣಿ ಅಂಥಾದ್ದೊಂದು ಪ್ರೌಢಿಮೆಯನ್ನು ಸಹಜವಾಗಿಯೇ ದಕ್ಕಿಸಿಕೊಂಡಿದ್ದಾರೆ. ತುರ್ತು ನಿರ್ಗಮನದಲ್ಲಿ ನಟಿಸೋ ಅವಕಾಶ ಬಂದಾಗ ಕಥೆ ಮತ್ತು ತಮ್ಮ ಪಾತ್ರದ ಬಗ್ಗೆ ಕೇಳಿದ ಸುಧಾ ರಾಣಿ ಆ ಕ್ಷಣವೇ ಅದನ್ನು ಒಪ್ಪಿಕೊಂಡಿದ್ದರಂತೆ.
ಆ ಪಾತ್ರದ ವಿಶೇಷತೆಯೇ ಅಂಥಾದ್ದಿದೆ. ಅದು ಇಡೀ ಚಿತ್ರದ ಮುಖ್ಯ ಬಿಂದುವಿನಂಥಾ ಪಾತ್ರ. ಪ್ರೇಕ್ಷಕರ ಪಾಲಿನ ಅಚ್ಚರಿಯ ಕಿಂಡಿಗಳು ಆ ಪಾತ್ರದ ಮೂಲಕವೇ ತೆರೆದುಕೊಳ್ಳುತ್ತವೆ. ನರ್ಸ್ ಎಂದಾಕ್ಷಣ ಒಂದು ಮಾಮೂಲಿ ವೆರೈಟಿಯ ಕಲ್ಪನೆ ನಿಮ್ಮೊಳಗೆ ಮೂಡಿಕೊಳ್ಳೋದು ಸಹಜ. ಆದರೆ ಆ ಕಲ್ಪನೆಯಾಚೆಗೆ ಚದುರಿಕೊಂಡು ಬೇರೆಯದ್ದೇ ಜಗತ್ತನ್ನು ತೋರಿಸುವಂಥಾ ವಿಶಿಷ್ಟ ಪಾತ್ರ ಸುಧಾರಾಣಿಯವರದ್ದಂತೆ. ಈ ಪಾತ್ರದ ಬಗ್ಗೆ ಕೇಳಿದಾಗ ಅವರು ಅರೆಕ್ಷಣ ಬೆಚ್ಚಿಬಿದ್ದಿದ್ದರಂತೆ. ಹಾಗಾಗಲು ಕಾರಣವೇನು? ಸುಧಾರಾಣಿ ಪಾತ್ರದ ನೈಜ ಸ್ವರೂಪವೇನೆಂಬುದು ನಾಳೆ ನಿಮ್ಮೆಲ್ಲರ ಮುಂದೆ ತೆರೆದುಕೊಳ್ಳಲಿದೆ.