ಒಂದು ಕಾರ್ಗತ್ತಲ ಸನ್ನಿವೇಷದಲ್ಲಿ ಬೆಳಕಿನ ಸಣ್ಣ ಮಿಣುಕೊಂದು ಹೊತ್ತಿಕೊಂಡಂತಿದೆ. ಸದ್ಯ ದರ್ಶನ್ ಅವರಿಗೆ ಹೊಸಪೇಟೆಯಲ್ಲೆದುರಾದ ದುರಾದೃಷ್ಟಕರ ಸನ್ನಿವೇಷದ ಹಿನ್ನೆಲೆಯಲ್ಲಿ ಅಂಥಾದ್ದೊಂದು ಪವಾಡ ಸೃಷ್ಟಿಯಾಗೋ ಲಕ್ಷಣಗಳು ದಟ್ಟವಾಗಿಯೇ ಗೋಚರಿಸಲಾರಂಭಿಸಿವೆ. ಸಾವಿರ ಕಷ್ಟಕೋಟಲೆಗಳನ್ನೇ ಮೆಟ್ಟಿಲಾಗಿಸಿಕೊಂಡು ಗೆದ್ದು ತೋರಿಸಿರುವವರು ದರ್ಶನ್. ಅವರ ಮೇಲೆ ಚಪ್ಪಲಿ ತೂರುವಂಥಾ ವಿಕೃತಿ ನಡೆದಿರೋದರ ವಿರುದ್ಧ ಒಂದಿಡೀ ಚಿತ್ರಂಗವೇ ಒಂದಾಗಿದೆ. ಶಿವಣ್ಣ ಸೇರಿದಂತೆ ಅನೇಕರು ಈ ಘಟನೆಯನ್ನು ಖಂಡಿಸಿದ್ದಾರೆ. ಹೀಗೆ ಚಿತ್ರರಂಗದ ಮಂದಿಯೆಲ್ಲ ಒಂದು ಕಡೆಯಿಂದ ದರ್ಶನ್ ಬೆಂಬಲಕ್ಕೆ ನಿಲ್ಲುತ್ತಿರುವಾಗಲೇ, ಪ್ರೇಕ್ಷಕರ ಚಿತ್ತ ಕಿಚ್ಚಾ ಸುದೀಪ್ ಅವರತ್ತ ನೆಟ್ಟುಕೊಂಡಿತ್ತು. ಕಡೆಗೂ ಅವರು ತಮ್ಮ ಒಂದು ಕಾಲದ ಗೆಳೆಯನ ಬೆಂಬಲಕ್ಕೆ ನಿಂತಿದ್ದಾರೆ. ಈ ಮೂಲಕ ಈ ಘಟನೆಗೆ ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದೀರ್ಘವಾದ ಬರಹದ ಮೂಲಕ ಸುದೀಪ್ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಗೆಳೆಯ ದರ್ಶನ್ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಮತ್ತು ಅವರು ಮೇಲೆದ್ದು ನಿಂತ ರೀತಿಯ ಬಗ್ಗೆ ಅಭಿಮಾನ ಪೂರ್ವಕವಾಗಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನದ ಹೆಸರಲ್ಲಿ ಅತಿರೇಕದಿಂದ ವರ್ತಿಸುವವರಿಗೂ ಕೂಡಾ ಸೌಜನ್ಯದ ಚೌಕಟ್ಟಿನಲ್ಲಿಯೇ ತಿಳಿ ಹೇಳಿದ್ದಾರೆ. ಎಲ್ಲೋ ಒಂದು ಕಡೆ, ಸ್ಟಾರ್ ವಾರ್ ಎಂಬುದು ಹಿಂದೆಂದೂ ಕಂಡು ಕೇಳರಿಯದಂತೆ ಮೇರೆ ಮೀರುತ್ತದೇನೋ ಎಂಬ ಆತಂಕ ಎಲ್ಲರಲ್ಲಿಯೂ ಮನೆಮಾಡಿತ್ತು. ಆದರೆ ಸುದೀಪ್ರಂಥಾ ನಟರು ದರ್ಶನ್ ಬೆಂಬಲಕ್ಕೆ ನಿಂತಿರುವ ಪರಿ, ಶಿವಣ್ಣ ಹಿರೀಕನ ಸ್ಥಾನದಲ್ಲಿ ನಿಂತು ಮಾತಾಡಿರುವ ರೀತಿಗಳೆಲ್ಲವೂ ಮತ್ತೆ ಕನ್ನಡ ಚಿತ್ರರಂಗ ಒಗ್ಗಟ್ಟಿನಿಂದ ಜೊತೆಯಾಗಿ ಹೆಜ್ಜೆ ಹಾಕೋ ಶುಭ ಸೂಚನೆ ನೀಡಿದಂತಿದೆ.
ಕಿಚ್ಚ ಸುದೀಪ್ ದರ್ಶನ್ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ರೀತಿಗೆ, ಅವರು ಮಂಡಿಸಿರುವ ಪ್ರೌಢ ವಿಚಾರಗಳಿಗೆ ಎಲ್ಲ ದಿಕ್ಕುಗಳಿಂದಲೂ ಉತ್ತಮ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಹೀಗೆ ಸಾಥ್ ಕೊಟ್ಟ ವಿಚಾರದಲ್ಲಿಯೂ ಮನಬಂದಂತೆ ಕಮೆಂಟು ಮಾಡೋ ಹಲಾಲುಟೋಪಿಗಳಿದ್ದಾರಲ್ಲಾ? ಅಂಥವರನ್ನು ಎಲ್ಲ ನಟರೂ ತಹಬಂದಿಯಲ್ಲಿ ಇಟ್ಟುಕೊಳ್ಳುವಂತಾದರೆ, ಖಂಡಿತವಾಗಿಯೂ ಮುಂದೆಂದೂ ಇಂಥಾ ಅತಿರೇಕಗಳ ನಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಸೇರಿದಂತೆ ಎಲ್ಲ ನಟರೂ ತಂತಮ್ಮ ಅಭಿಮಾನಿ ಬಳಗವನ್ನು ಹಿಡಿತದಲ್ಲಿಟ್ಟುಕೊಳ್ಳುವ ಜರೂರತ್ತಿದೆ.
ಇದೆಲ್ಲ ಹಾಗಿರಲಿ, ಇದೀಗ ಕಿಚ್ಚಾ ಸುದೀಪ್ ಮತ್ತು ದರ್ಶನ್ ಬಹುಕಾಲದ ನಂತರ ಮತ್ತೆ ಒಂದಾಗುವ ಮುನ್ಸೂಚನೆಯಂತೂ ಸಿಕ್ಕಿದೆ. ಈ ಇಬ್ಬರು ನಟರ ಅಭಿಮಾನಿಗಳೂ ಕೂಡಾ ಸಾಕಷ್ಟು ವಿಚಾರಗಳಲ್ಲಿ ಶರಂಪರ ಕಿತ್ತಾಡಿಕೊಂಡಿದ್ದರು. ಆದರೆ ಆ ಕಿತ್ತಾಟಗಳ ನಡುವೆಯೂ ಈ ನಟರಿಬ್ಬರು ಮತ್ತೆ ಒಂದಾಗಬೇಕೆಂಬ ಇಂಗಿತ ಅಭಿಮಾನಿ ವಲಯದಲ್ಲಿ ಇದ್ದೇ ಇತ್ತು. ಆಗಾಗ ಈ ಬಗ್ಗೆ ಚರ್ಚೆಗಳಂತೂ ನಡೆಯುತ್ತಾ ಬಂದಿವೆ. ಇನ್ನೇನು ಇವರಿಬ್ಬರೂ ಒಂದಾಗುತ್ತಾರೆಂಬ ಬಗ್ಗೆ ಅಂತೆಕಂತೆಗಳು ಕೇಳಿ ಬರುತ್ತಿದ್ದವು. ಆದರೆ, ಅದೇಕೋ ಆ ಕಾಲ ಇದುವರೆಗೂ ಕೂಡಿ ಬಂದಿರಲಿಲ್ಲ. ಹಾಗೆ ಈ ನಟರಿಬ್ಬರೂ ಮತ್ತೆ ಒಂದಾಗಲೆಂಬ ಆಶಯ ಅಭಿಮಾನದಾಚೆಗೂ ಹಬ್ಬಿಕೊಂಡಿರೋದು ಸುಳ್ಳೇನಲ್ಲ.
ಈ ಹಿಂದೆ ಖುದ್ದು ಅಂಬರೀಷ್ ಅವರೇ ಸಂಧಾನಕ್ಕೆ ಯತ್ನಿಸಿದ್ದರೂ ಕೂಡಾ ಕಿಚ್ಚಾ ಸುದೀಪ್ ಮತ್ತು ದರ್ಶನ್ರನ್ನು ಒಂದು ಮಾಡಲು ಸಾಧ್ಯವಾಗಿರಲಿಲ್ಲ. ಕನ್ನಡ ಚಿತ್ರರಂಗದ ಮಟ್ಟಿಗೆ ಸುದೀಪ್ ಹಾಗೂ ದರ್ಶನ್ ದೈತ್ಯ ಶಕ್ತಿಗಳಿದ್ದಂತೆ. ಆ ಎರಡು ಶಕ್ತಿಗಳು ದೂರಾಗುವಂತೆ ಅನೇಕರು ಆರಂಭದಿಂದಲೂ ಹುಳಿ ಹಿಂಡುತ್ತಲೇ ಬಂದಿದ್ದಾರೆ. ಎರಡೂ ಕಡೆಗಳಲ್ಲಿ ಚೆಂದಗಿದ್ದುಕೊಂಡು, ರೂಮರ್ ಹಬ್ಬಿಸೋ ಆಲ್ಕಾಟಿಗಳ ಬಗ್ಗೆ ಈ ಇಬ್ಬರು ನಟರೂ ಎಚ್ಚರ ವಹಿಸಿರಲಿಲ್ಲ. ಹೀಗೆ ಅಂತಃಪುರದಲ್ಲಿಯೇ ತಂದಿಕ್ಕುವವರ ದಂಡು ಹೆಚ್ಚಾದ್ದರಿಂದಲೇ ಸುದೀಪ್ ಹಾಗೂ ದರ್ಶನ್ ನಡುವೆ ಕಂದಕ ಸೃಷ್ಟಿಯಾಗಿತ್ತು ಅನ್ನುವವರೂ ಇದ್ದಾರೆ.
ಇದೆಲ್ಲ ಏನೇ ಇದ್ದರೂ ಇದೀಗ ಮುನಿಸು ಮರೆತು ಮತ್ತೆ ಒಂದಾಗುವ ಕಾಲ ಹತ್ತಿರ ಬಂದಂತಿದೆ. ಅದು ಕನ್ನಡ ಚಿತ್ರರಂಗದ ಮಟ್ಟಿಗೆ ನಿಜಕ್ಕೂ ಒಳಿತಿನ ಬೆಳವಣಿಗೆ. ಈ ದಿಸೆಯಲ್ಲಿ ಖುದ್ದು ದರ್ಶನ್ ಆತ್ಮ ವಿಮರ್ಶೆ ಮಾಡಿಕೊಂಡು, ತನ್ನ ಸುತ್ತ ಏನು ನಡೆಯುತ್ತಿದೆ? ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬುದರ ಬಗ್ಗೆ ಸೌಜನ್ಯದಿಂದ ಆಲೋಚಿಸುವ ತುರ್ತೂ ಇದೆ. ಅದೇ ರೀತಿ, ಈ ಪ್ರಕರಣದಲ್ಲಿ ಅಜಾತಶತ್ರು ಅಪ್ಪುವಿಗೆ ಅವಮಾನವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಎಲ್ಲರ ಮೇಲಿದೆ. ಒಟ್ಟಾರೆಯಾಗಿ ಕಿಚ್ಚ ಮತ್ತು ದರ್ಶನ್ ಬಹುಕಾಲದ ಮುನಿಸು ಮರೆತು ಮತ್ತೆ ಜೊತೆಯಾಗೋ ಕಾಲ ಹತ್ತಿರದಲ್ಲಿದೆ. ಅದಕ್ಕಿಂತ ಖುಷಿಯ ಸಂಗತಿ ಬೇರೇನಿದೆ?