ಸುಮ್ಮನೊಮ್ಮೆ ಆಕಾಶದತ್ತ ಕಣ್ಣೆತ್ತಿ ದಿಟ್ಟಿಸಿದರೆ ಅದೆಂಥಾ ಸಂದಿಗ್ಧ ಘಳಿಗೆಯಲ್ಲೂ ನಿರಾಳ ಭಾವ ತಬ್ಬಿಕೊಳ್ಳುತ್ತೆ. ಆ ಕೊನೆಯಿರದ ಅಗಾಧತೆಯ ಮುಂದೆ ನಮ್ಮ ದುಗುಡಗಳೆಲ್ಲ ತೀರಾ ಸಣ್ಣದೆನಿಸುತ್ತೆ. ಆಕಾಶದ ತಾಕತ್ತು ಬರೀ ಅಷ್ಟಕ್ಕೆ ಮಾತ್ರವೇ ಸೀಮಿತವಲ್ಲ. ಅದೊಂದು ವಿಸ್ಮಯ, ವಿಚಿತ್ರಗಳ ನಿಗೂಢ ಆಕರ್ಷಣೆ.
ಅಲ್ಲಿ ಸರಿಯುತ್ತ ಹೆಪ್ಪುಗಟ್ಟೋ ಮೋಡ ಮಳೆಯಾಗಿ ತಂಪೆರೆಯುತ್ತೆ. ಮತ್ತೊಂದೆಡೆ ಸೂರ್ಯ ಚಂದ್ರರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಭೂಮಿಯನ್ನೇ ನಿಯಂತ್ರಿಸುತ್ತೆ. ರಾತ್ರಿಯಾಗುತ್ತಲೇ ಅಸಂಖ್ಯಾತ ನಕ್ಷತ್ರಗಳಿಂದ ತನ್ನನ್ನ ತಾನೇ ಸಿಂಗರಿಸಿಕೊಳ್ಳುತ್ತೆ. ಕೇವಲ ಎಳೇಯ ಮಕ್ಕಳಿಗೆ ಮಾತ್ರವಲ್ಲ; ಹಣ್ಣಣ್ಣು ಮುದುಕರವರೆಗೂ ಆಕಾಶ ಅನ್ನೋದೊಂದು ನಿರಂತರ ಸೆಳೆತವಾಗಿ ಉಳಿದುಕೊಂಡಿದೆ.
ಈವತ್ತಿಗೆ ವಿಜ್ಞಾನ ಅಂತರೀಕ್ಷದ ಇಂಚಿಂಚು ನಿಗೂಢಗಳನ್ನೂ ಬಗೆದು ಬಯಲಾಗಿಸಿದೆ. ಆದರೂ ಅಂತರೀಕ್ಷವೆಂಬುದು ನಿತ್ಯ ನಿಗೂಢ. ನಮ್ಮ ಮನಸಲ್ಲಿ ಬಾನಲ್ಲಿ ಮಿಂಚೋ ನಕ್ಷತ್ರಗಳು ಛಳುಕು ಮೂಡಿಸುತ್ವೆ. ಕಣ್ಣಿನ ಪರಿಧಿ ಮೀರಿ ಚೆಲ್ಲಿದಂತಿರೋ ಆ ನಕ್ಷತ್ರಗಳು ಅದೆಷ್ಟಿರಬಹುದೆಂಬ ಪ್ರಶ್ನೆ ಕಾಡುತ್ತೆ. ಅದರ ಮುಂದೆ ಗಣಿತವೇ ಮಂಡಿಯೂರಿದಂತೆಯೂ ಭಾಸವಾಗುತ್ತೆ.
ಯಾಕಂದ್ರೆ, ನಕ್ಷತ್ರಗಳ ಸಂಖ್ಯೆ ಅಗಣಿತವಾದದ್ದು. ಅದು ಎಷ್ಟಿರಬಹುದೆಂಬುದಕ್ಕೆ ಮತ್ತೊಂದು ಸಂಕೀರ್ಣದತ್ತ ಬೊಟ್ಟು ಮಾಡಬಹುದಷ್ಟೆ. ನಿಖರ ಉತ್ತರ ಆಕಾಶದಷ್ಟೇ ನಿಗೂಢ. ಬಲ್ಲವರು ಹೇಳೋ ಪ್ರಕಾರ ಇಡೀ ವಿಶ್ವದ ಅಷ್ಟೂ ಕಡಲ ತೀರದಲ್ಲಿರೋ ಮರಳಿನ ರಾಶಿಗಳಿರುತ್ತವಲ್ಲ? ಅದರ ಕಣಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಕ್ಷತ್ರಗಳಿದ್ದಾವಂತೆ. ಒಂದು ಕ್ಷಣ ಒಂದೇ ಒಂದು ಮುಷ್ಟಿ ಮರಳಿನ ಕಣಗಳನ್ನ ಎಣಿಸೋದನ್ನು ಕಲ್ಪಿಸಿಕೊಳ್ಳಿ… ನಕ್ಷತ್ರಗಳ ಸಂಖ್ಯೆಯ ಕಿಮ್ಮತ್ತಿನ ಅಂದಾಜು ಸಿಗಬಹುದು.