ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿ ಹೆಸರುವಾಸಿಯಾಗಿರುವವರು ಸೋನು ಸೂದ್. ಆದರೆ ವಿಲನ್ಗಿರಿ ಕೇವಲ ಸಿನಿಮಾಗಷ್ಟೇ ಸೀಮಿತ. ರಿಯಲ್ ಲೈಫಿನಲ್ಲಿ ಅವರೊಬ್ಬ ನಿಜವಾದ ಹೀರೋ ಎಂಬುದು ಕೊರೋನಾ ಕಾಲಘಟ್ಟದಲ್ಲಿಯೇ ಸಾಬೀತಾಗಿದೆ. ತೆರೆಯ ಮೇಲೆ ಹೀರೋಗಳಾಗಿ ಆರ್ಭಟಿಸುತ್ತಾ ಸ್ಟಾರ್ಗಳೆನ್ನಿಸಿಕೊಂಡ ಬಹುತೇಕರು ಕೊರೋನಾ ಸಮಯದಲ್ಲಿ ಜನ ಸಂಕಟದಲ್ಲಿದ್ದಾಗ ತಂತಮ್ಮ ಮನೆ ಸೇರಿಕೊಂಡು ಬೆಚ್ಚಗಿದ್ದರು. ಕಷ್ಟದ ಕಾಸಲ್ಲಿ ಸಿನಿಮಾ ನೋಡಿ ತಮಗೆ ಸ್ಟಾರ್ಗಿರಿ ತಂದುಕೊಟ್ಟ ಜನರ ಸಂಕಟಗಳಿಗೆ ಹೆಚ್ಚಿನವರು ಮಿಡಿಯಲೇ ಇಲ್ಲ. ಮಿಡಿದವರು ದೇವರಾದರು. ಆ ಸಾಲಿನಲ್ಲಿ ದೇಶ ಮಟ್ಟದಲ್ಲಿ ಸೋನು ಸೂದ್ ಸೇರ್ಪಡೆಯಾದರು. ಇಂಥಾ ಸೂದ್ ಇದೀಗ ಅಪಘಾತದಲ್ಲಿ ಕಾಲು ಕಳೆದುಕೊಂಡು ಒಂದೇ ಕಾಲಿನಲ್ಲಿ ಕುಂಟುತ್ತಾ ಶಾಲೆಗೆ ತೆರಳುತ್ತಿದ್ದ ಪುಟ್ಟ ಹೆಣ್ಣು ಮಗಳಿಗೆ ಆಸರೆಯಾಗಿದ್ದಾರೆ.
ಇಡೀ ಭಾರತದ ಹಳ್ಳಿಗಾಡಿನ ಮಕ್ಕಳು ಈವತ್ತಿಗೂ ಕಿಲೋಮೀಟರುಗಟ್ಟಲೆ ನಡೆದುಕೊಂಡೇ ಶಾಲೆಗೆ ತೆರಳುತ್ತಾರೆ. ಬಿಹಾರದ ಹಳ್ಳಿಯೊಂದರ ಪರಿಸ್ಥಿತಿ ಕೂಡಾ ಅದಕ್ಕಿಂತ ಭಿನ್ನವಾಗಿರಲಿಲ್ಲ. ಆ ಹಳ್ಳಿಯಿಂದ ತುಂಬಾ ದೂರದಲ್ಲಿರುವ ಶಾಲೆಗೆ ಹತ್ತು ವರ್ಷದ ಹುಡುಗಿಯೊಬ್ಬಳು ಒಂದೇ ಕಾಲಿನಲ್ಲಿ ಕುಂಟುತ್ತಾ ಹೋಗುವಂಥಾ ದುಃಸ್ಥಿತಿ ಬಂದೊದಗಿತ್ತು. ಅಂಥಾ ಸ್ಥಿತಿಯಲ್ಲಿಯೂ ಲವಲವಿಕೆಯಿಂದ ಪುಟಿಯುತ್ತಿದ್ದ ಆ ಹುಡುಗಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿತ್ತು. ಅದು ಸೋನು ಸೂದ್ ಅವರನ್ನೂ ತಲುಪಿಕೊಂಡಿದೆ. ಅವರ ಬಾಯಿ ಮಾತಿನ ಅನುಕಂಪ ತೋರದ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಆ ಹುಡುಗಿಗೆ ಮೂರು ಚಕ್ರದ ಸೈಕಲ್ ಕೊಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ.
ಬಿಹಾರದ ಜುಮಾಯ್ ಜಿಲ್ಲೆಯ ಈ ಹುಡುಗಿ ಸೋನು ಮಾಡಿದ ಸಹಾಯದಿಂದ ನಿರಾಳವಾಗಿದ್ದಾಳೆ. ಒಂದೇ ಕಾಲಿನಲ್ಲಿ ಕಿಲೋಮೀಟರುಗಳಷ್ಟು ದೂರವನ್ನು ಕ್ರಮಿಸೋದು ಎಷ್ಟು ಕಷ್ಟ ಅಂತ ಯಾರಿಗಾದರೂ ಅರ್ಥವಾಗುತ್ತೆ. ಇದೀಗ ಆ ಹುಡುಗಿ ಖುಷಿಯಾಗಿ, ಯಾವುದೇ ತ್ರಾಸಿಲ್ಲದೆ ಮೂರು ಚಕ್ರದ ಸೈಕಲ್ಲಿನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದಾಳೆ. ಹಾಗಂತ ಈ ಹುಡುಗಿ ಹುಟ್ಟು ಅಂಗವಿಕಲೆಯೇನಲ್ಲ. ಈಗ್ಗೆ ಎರಡು ವರ್ಷಗಳ ಹಿಂದೆ ಆಗಿದ್ದ ಭೀಕರ ಅಪಘಾತವೊಂದರಲ್ಲಿ ಆಕೆಯದ್ದೊಂದು ಕಾಲನ್ನು ತೆಗೆಯ ಬೇಕಾಗಿ ಬಂದಿತ್ತು. ಒಂದು ಕಾಲು ಹೋದರೂ ಶಾಲೆಗೆ ಹೋಗುತ್ತಿದ್ದ ಆಕೆಯ ಬಗ್ಗೆ ಎಲ್ಲರಿಗೂ ಅನುಕಂಪವಿತ್ತು. ಆದರೆ ಸೋನು ಸೂದ್ ಸೈಕಲ್ಲು ಕೊಡಿಸುವ ಮೂಲಕ ಆಕೆಯ ಭವಿಷ್ಯವನ್ನು ಬೆಳಗಿದ್ದಾರೆ. ಸಿನಿಮಾ ವಿಲನ್ ಒಬ್ಬ ನಿಜಜೀವನದ ಹೀರೋ ಆಗಲು ಇದಕ್ಕಿಂತಲೂ ಬೇರೇನು ಬೇಕು?
sonusood,sonu,actor,shodhanews