ಹಾವುಗಳ ಕುಟುಂಬ ಅದೆಷ್ಟು ದೊಡ್ಡದಿದೆ ಗೊತ್ತಾ?
ಇದು ಜೀವ ಜಗತ್ತಿನ ಅಸೀಮ ವಿಸ್ಮಯ!
ಈ ವರ್ಷವೂ ನಾಗರ ಪಂಚಮಿ ಆಗಮಿಸೋದರಲ್ಲಿದೆ. ಪ್ರತಿಯೊಂದರಲ್ಲೂ ಭಕ್ತಿ ಹಾಸುಹೊಕ್ಕಾಗಿರೋ ನಮ್ಮಲ್ಲಿ ಹಾವುಗಳ ಬಗ್ಗೆಯೂ ಒಂದಷ್ಟು ನಂಬಿಕೆಗಳಿದ್ದಾವೆ. ಆದ್ರೆ ಹಾವುಗಳ ಬಗೆಗಿನ ಅಸಲೀ ವಿಚಾರಗಳು ನಮ್ಮೆಲ್ಲರ ನಂಬಿಕೆಗಳನ್ನು ಮೀರಿದಂಥಾದ್ದು. ನಾವೆಲ್ಲ ಹಾವೆಂದರೆ ಬೆಚ್ಚಿ ಬೀಳ್ತೇವೆ. ಈ ಜಗತ್ತಿನಲ್ಲಿರೋ ಎಲ್ಲ ಹಾವುಗಳೂ ಡೇಂಜರಸ್ ಅನ್ನೋದಷ್ಟೇ ನಮ್ಮ ಕುರುಡು ನಂಬಿಕೆ. ಇದರಿಂದಾಗಿಯೇ ಈವತ್ತು ಹಾವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಗೆ ಮನುಷ್ಯ ಪ್ರಹಾರಕ್ಕೆ ಸಿಕ್ಕು ನಶಿಸಿದರೂ ಈ ಹಾವುಗಳದ್ದು ಈವತ್ತಿಗೂ ಬಹು ದೊಡ್ಡ ಫ್ಯಾಮಿಲಿ.
ಈ ಹಾವುಗಳು ಸೃಷ್ಟಿಯ ಅತ್ಯಂತ ಅಚ್ಚರಿದಾಯಕ ಜೀವಿಗಳು. ಸ್ವಚ್ಚತೆಗೆ ರೋಲ್ ಮಾಡೆಲ್ಲುಗಳಿಂತಿರೋ ಹಾವುಗಳ ಚಹರೆ, ಜೀವನಕ್ರಮ, ಪ್ರಬೇಧಗಳು ಸೇರಿದಂತೆ ಎಲ್ಲವೂ ಅಚ್ಚರಿಯ ಆಗರಗಳೇ. ಜೀವ ವೈವಿಧ್ಯದಲ್ಲಿ ತಮ್ಮದೇ ಸ್ಥಾನ ಉಳಿಸಿಕೊಂಡಿರೋ ಹಾವುಗಳದ್ದು ಬಹುದೊಡ್ಡ ಕುಟುಂಬ. ಜಗತ್ತಿನ ಬಹುತೇಕ ಭೂಭಾಗಗಳಲ್ಲಿ ಹಬ್ಬಿಕೊಂಡಿರೋ ಇವುಗಳಲ್ಲಿ ಹತ್ತತ್ತಿರ ನಾಲಕ್ಕು ಸಾವಿರಕ್ಕೂ ಮೀರಿದ ಪ್ರಬೇಧಗಳಿವೆ. ಇದ್ರಲ್ಲಿ ನಲವತ್ತರಷ್ಟು ವಿಭಿನ್ನ ಉಪ ಪಂಗಡಗಳಿದ್ದಾರೆ. ಇನ್ನೂ ತಲಾಶು ನಡೆಸಿದರೆ ನಾಲಕ್ಕೂ ಚಿಲ್ಲರೆ ಸಾವಿರ ಪ್ರಬೇಧದ ಹಾವುಗಳೆಲ್ಲ ನೂರಾ ನಲವತ್ತು ಭಿನ್ನ ಕುಟುಂಬಗಳಲ್ಲಿ ಜೀವಿಸುತ್ತಿರುವ ವಿಚಾರವೂ ಜಾಹೀರಾಗುತ್ತೆ.
ಈ ಪ್ರಕೃತಿಯೇ ಒಂದು ವಿಸ್ಮಯ. ಇಲ್ಲಿನ ಪ್ರತೀ ಜೀವಿಗಳನ್ನೂ ಕೂಡಾ ಅದು ಆಯಾ ವಾತಾವರಣಕ್ಕೆ ತಕ್ಕುದಾಗಿಯೇ ಸೃಷ್ಟಿಸಿದೆ. ಕೆಲವೊಮ್ಮೆ ಕೆಲ ಜೀವಿಗಳ ಬಗ್ಗೆ ನಾವಂದುಕೊಂಡಿರೋದನ್ನು ಪ್ರಾಕೃತಿಕ ವಿಸ್ಮಯಗಳು ಸುಳ್ಳು ಮಾಡುತ್ತವೆ. ಹಾವುಗಳ ಜೀವನಕ್ರಮವೂ ಅದಕ್ಕೆ ಹೊರತಾಗಿಲ್ಲ. ಯಾವುದೇ ಜೀವಿಯ ಸಂತಾನೋತ್ಪತ್ತಿ ವಿಶಿಷ್ಟ ಪ್ರಕ್ರಿಯೆ. ಹಾವುಗಳು ಮೊಟ್ಟೆಯಿಡೋ ಮೂಲಕವೇ ಸಂತಾನೋತ್ಪತ್ತಿಯಾಗುತ್ತೆ ಅಂತ ಬಹುಪಾಲು ಮಂದಿ ನಂಬಿದ್ದಾರೆ. ಆದ್ರೆ ಅದು ಅರ್ಧ ಸತ್ಯ. ಯಾಕಂದ್ರೆ, ಶೇಖಡಾ ಅರವತ್ತರಷ್ಟು ಹಾವುಗಳು ಮಾತ್ರವೇ ಮೊಟ್ಟೆಯಿಟ್ಟು ಮರಿ ಮಾಡುತ್ವೆ. ಮಿಕ್ಕ ಒಂದಷ್ಟು ಹಾವುಗಳು ನೇರವಾಗಿ ಮರಿ ಹಾಕುತ್ವೆ. ಕೆಲ ಶೀತ ಪ್ರದೇಶಗಳಲ್ಲಿ ಮೊಟ್ಟೆಯಿಟ್ಟು ಅವುಗಳನ್ನು ಕಾಪಾಡಿಕೊಂಡು ಮರಿ ಮಾಡೋದು ಕಷ್ಟವಾಗುತ್ತೆ. ಆದ್ದರಿಂದಲೇ ಅಂಥಾ ಪ್ರದೇಶಗಳಲ್ಲಿ ಬದುಕೋ ಹಾವುಗಳಿಗೆ ಪ್ರಕೃತಿ ಇಂಥಾದ್ದೊಂದು ವಿಶೇಷವಾದ ವರ ಕೊಟ್ಟಂತಿದೆ.
ಎದೆಯಲ್ಲೊಂದು ಕೌತುಕ ಇದ್ರೆ ಈ ಜೀವಜಗತ್ತೊಂದು ಅಚ್ಚರಿಗಳ ಕೊಂಪೆಯಂತೆ ಭಾಸವಾಗುತ್ತೆ. ಅದರಲ್ಲಿ ಈ ಹಾವುಗಳದ್ದೇ ಸಿಂಹಪಾಲು. ನೀವು ಗಮನಿಸಿದ್ದೀರಾ? ಈ ಹಾವುಗಳಿಗೆ ನಮ್ಮಂತೆ ಕಣ್ಣು ರೆಪ್ಪೆಗಳಿರೋದಿಲ್ಲ. ನಾವು ರೆಪ್ಪೆಗಳಿರದ ಕಣ್ಣನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದ್ರೆ ಹಾವುಗಳು ರೆಪ್ಪೆಗಳ ಹೊರತಾಗಿಯೂ ಹಾಯಾಗಿರುತ್ತವೆ. ಅವು ಕಣ್ಣು ಬಿಟ್ಟುಕೊಂಡೇ ನಿದ್ರೆ ಮಾಡೋ ಅನಿವಾರ್ಯತೆ ಇದೆ. ಆದ್ರೆ ಕಣ್ಣನ್ನು ರಕ್ಷಣೆ ಮಾಡೋದಕ್ಕಾಗಿ ಹಾವುಗಳಿಗೆ ತೆಳುವಾದ ಪೊರೆಯೊಂದಿರುತ್ತೆ. ಅದಕ್ಕೆ ಬ್ರಿಲ್ ಅಂತ ಕರೆಯಲಾಗುತ್ತೆ. ಅಂದಹಾಗೆ ಬ್ರಿಲ್ ಅಂದ್ರೆ ಜರ್ಮನ್ ಭಾಷೆಯಲ್ಲಿ ಕನ್ನಡಕ ಅನ್ನೋ ಅರ್ಥವಿದೆ.