ಇಡೀ ವಿಶ್ವದ ನಾನಾ ಭಾಗಗಳ ಆಹಾರ ಪದ್ಧತಿಯೇ ಒಂದು ವಿಸ್ಮಯ. ಜಗತ್ತಿನ ಕೆಲ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಮಾಂಸಾಹಾರದ ಕ್ರಮಗಳಂತೂ ಬೆಚ್ಚಿ ಬೀಳುವಂತಿವೆ. ಕೈಯಲ್ಲಿ ಮುಟ್ಟೋದಿರಲಿ; ಬರಿಗಣ್ಣಿನಿಂದ ನೋಡಲೂ ಭಯವಾಗುವ ಹುಳ ಹುಪ್ಪಟೆಗಳನ್ನು ಹಸಿಯಾಗಿಯೇ ಜಗಿದು ತಿನ್ನುವವರಿದ್ದಾರೆ. ಕೈಗೆ ಸಿಕ್ಕರೆ ಪ್ರಾಣಿಗಳ ಕತ್ತಿಗೇ ಬಾಯಿ ಹಾಕಿ ಹಸೀ ರಕ್ತ ಹೀರಿ ಸುಖ ಪಡುವವರೂ ಇದ್ದಾರೆ. ಇಂಥವುಗಳೆಲ್ಲ ಮೇಲು ನೋಟಕ್ಕೆ ಹೌಹಾರುವಂತೆ ಮಾಡಿದರೂ ಅವುಗಳು ಕೆಲ ದೇಶಗಳಲ್ಲಿ, ಭೂಭಾಗಗಳಲ್ಲಿ ಪರಂಪರೆಯೆಂಬಂತೆ ನಡೆದು ಬಂದಿವೆ ಎಂದರೆ ಯಾರಿಗಾದರೂ ಅಚ್ಚರಿಯಾಗದಿರೋದಿಲ್ಲ!
ನಮ್ಮಲ್ಲಿ ಹಾವುಗಳಿಗೂ ಹಾಲೆರೆದು ಭಯ ಭಕ್ತಿಯಿಂದ ಕೈ ಮುಗಿಯುವ ಪದ್ಧತಿ, ಪರಂಪರೆ ರೂಢಿಯಲ್ಲಿದೆ. ಅದರಲ್ಲಿಯೂ ಕೆಲ ಫವರ್ಫುಲ್ ಹಾವುಗಳನ್ನು ಕೊಂದರೆ ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡುವ ಕ್ರಮವೂ ಚಾಲ್ತಿಯಲ್ಲಿದೆ. ಆದರೆ ನಾವು ಯಾವ ಹಾವುಗಳನ್ನು ದೇವರೆಂದೇ ಪೂಜಿಸುತ್ತೇವೋ ಅದೇ ಹಾವುಗಳನ್ನು ವಿದೇಶಗಳಲ್ಲಿ ಥರ ಥರದಲ್ಲಿ ಭಕ್ಷಿಸಲಾಗುತ್ತದೆ. ವಿಯೇಟ್ನಾಂನಲ್ಲಿ ಪ್ರಚಲಿತದಲ್ಲಿರುವ ಹಾವಿನ ಭಕ್ಷಣಾ ಕ್ರಮವಂತೂ ತೀರಾ ಬೀಭತ್ಸವಾದದ್ದು!
ಅಲ್ಲಿ ಹಾವುಗಳನ್ನು ಕೊಂದು ತಕ್ಷಣವೇ ಅದರ ಹೃದಯವನ್ನು ಹೊರ ತೆಗೆದು ಹಸಿಯಾಗಿಯೇ ತಿನ್ನುವ ಕ್ರಮ ಚಾಲ್ತಿಯಲ್ಲಿದೆ. ಹಾಗೆ ಕೊಂದ ಹಾವುಗಳ ರಕ್ತವನ್ನು ಹಸಿಯಾಗಿಯೇ ಗುಟುಕರಿಸಲಾಗುತ್ತದೆ. ವಿಶೇಷವೆಂದರೆ ಅದು ವಿಯೇಟ್ನಾಂನ ಕೆಲ ಭಾಗಗಳಲ್ಲಿ ಸಂಪ್ರದಾಯವಾಗಿಯೇ ರೂಢಿಯಲ್ಲಿದೆ. ಅಲ್ಲಿ ಥರ ಥರದ ಹಾವುಗಳಿಂದ ಅಷ್ಟೇ ಬಗೆ ಬಗೆಯ ಬಕ್ಷ ಭೋಜನಗಳನ್ನು ತಯಾರು ಮಾಡುವ ಪದ್ಧತಿಗಳೂ ಇವೆ. ಅದರಲ್ಲಿ ಬಹುತೇಕವುಗಳನ್ನು ಬೇಯಿಸದೆ ಹಸಿಯಾಗಿಯೇ ತಿಂದು ತೇಗೋದರಲ್ಲಿಯೇ ಅಲ್ಲಿನ ಜನ ಖುಷಿ ಪಡುತ್ತಾರೆ!