ಶಿವಮೊಗ್ಗ ಸುಬ್ಬಣ್ಣನ ನೆನಪಿನಲ್ಲಿ…
ಎಂಬತ್ತರ ದಶಕದ ಆಚೀಚಿನ ಕಾಲಘಟ್ಟದಲ್ಲಿ ತಮ್ಮ ಅಮೋಘ ಕಂಠಸಿರಿಯಿಂದ, ಅಗೋಚರವಾಗಿ ಜನಮಾಸವನ್ನು ಕಾಡಿದ ಒಂದಷ್ಟು ಸಂಗೀ ದಿಗ್ಗಜರಿದ್ದಾರೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿ ನೆಲೆ ಕಂಡುಕೊಂಡಿದ್ದವರು ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ. ಓರ್ವ ಗಾಯಕರಾಗಿ ಮಾತ್ರವಲ್ಲದೇ, ಜೀವಪರ ಚಿಂತನೆಯ ವ್ಯಕ್ತಿಯಾಗಿಯೂ ಗಮನ ಸೆಳೆದಿದ್ದ ಸುಬ್ಬಣ್ಣ ಇನ್ನು ನೆನಪು ಮಾತ್ರ. ತಲೆಮಾರುಗಳಾಚೆಗೂ ತಮ್ಮ ಗಾಯನದಿಂದಲೇ ಪ್ರವಹಿಸುತ್ತಾ ಬಂದಿದ್ದ, ಪ್ರಸ್ತುತವಾಗುಳಿದಿದ್ದ ಅವರು ತಮ್ಮ ಎಂಬತ್ಮೂರನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇದು ಸುಗಮ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಅಂದರೆ ಅದು ಕ್ಲೀಷೆಯಾದೀತೇನೋ. ಅವರ ನಿರ್ಗಮನದಿಂದ ಸೃಷ್ಟಿಯಾಗಿರುವುದು ಎಂದಿಗೂ ನೀಗಲಾರದಂಥಾ ನಿರ್ವಾತ ಸ್ಥಿತಿ. ಸದಾ ಕಾಲವೂ ನಮ್ಮೊಳಗೆಲ್ಲೇ ಅನುರಣಿಸುತ್ತಿದ್ದ ಹಾಡೊಂದು ಇದ್ದಕ್ಕಿದ್ದಂತೆ ಮಾಯವಾದಂಥಾ ವಿಷಾಧವೊಂದು ಶಾಶ್ವತವಾಗಿ ಕನ್ನಡಿಗರ ಎದೆತುಂಬಿಕೊಂಡಿದೆ.
ಒಂದು ಕಾಲದಲ್ಲಿ ಈಗಿನಂತೆ ಬೆರಳ ಮೊನೆಗೆ ಹಾಡುಗಳು ಸಿಗುತ್ತಿರಲಿಲ್ಲ. ಅದೊಂಥರಾ ಧ್ಯಾನ. ಆಕಾಶವಾಣಿ ಎಂಬುದು ಸಂಗೀತಾಸಕ್ತರಿಗೆಂದೇ ಸೃಷ್ಟಿಯಾಗಿದ್ದ ವರದಂಥಾ ಮಾಯೆ. ಅದರಲ್ಲಿ ಬರುತ್ತಿದ್ದ ಸುಗಮ ಸಂಗೀತದ ಆಲಾಪ ಆ ಹೊತ್ತಿನಲ್ಲಿ ಏಕತಾನತೆಯ ಬದುಕಿಗೆ ಸಮರ್ಥ ಸಾಥಿ. ನಸೀಬು ನೆಟ್ಟಗಿದ್ದರೆ ಬಯಸಿದ ಹಾಡೊಂದು ತಂತಾನೇ ಶುರುವಾಗುತ್ತಿದ್ದ ಆ ದಿನಗಳಲ್ಲಿ, ಹಂಬಲಿಸಿದ ಹಾಡೊಂದು ಏಕಾಏಕಿ ರೇಡಿಯೋದಲ್ಲಿ ತೇಲಿ ಬಂದರೆ, ಅದೆಷ್ಟೋ ವರ್ಷದ ತಪಸ್ಸಿಗೆ ಫಲ ಸಿಕ್ಕಿದಂಥಾದ್ದೇ ರೋಮಾಂಚನವಾಗುತ್ತಿತ್ತು. ಮನೋರಂಜನೆಗೆ ಸೀಮಿತ ಅವಕಾಶಗಳಿದ್ದ ಅಂಥಾದ್ದೊಂದು ರೋಮಾಂಚಕ ಕಾಲಘಟ್ಟವನ್ನು ಅಕ್ಷರಶಃ ಆಳಿದ್ದವರು ಶಿವಮೊಗ್ಗ ಸುಬ್ಬಣ್ಣ.
ಆಕಾಶವಾಣಿಯ ಎ ಟಾಪ್ಗ್ರೇಡ್ ಗಾಯಕರಾಗಿದ್ದ ಸುಬ್ಬಣ್ಣ, ಆ ಮೂಲಕ ಜನಮಾನಸವನ್ನು ಸೆಳೆದುಕೊಂಡಿದ್ದ ಪರಿಯೇ ಅದ್ಭುತ. ಈಗ ಗಾಯನ ಕ್ಷೇತ್ರವೂ ಬದಲಾಗಿದೆ. ದಿಢೀರ್ ಖ್ಯಾತಿಗೆ ಹಪಾಹಪಿಸುವ ಮನಸ್ಥಿತಿ ಬಹುತೇಕರಲ್ಲಿ ಪಡಿಮೂಡಿಕೊಂಡಿದೆ. ಎಂಥೆಂಥಾ ಮಹನೀಯರಿಂದ ಮಿನುಗಿದ್ದ ಸುಗಮ ಸಂಗೀತ ಕ್ಷೇತ್ರಕ್ಕೂ ಮೆಲುವಾಗಿ ಅಂಥಾದ್ದೊಂದು ಮನಃಸ್ಥಿತಿ ಅಡಿಯಿಟ್ಟಿದೆ. ಆದರೆ, ಯಾವ ಖ್ಯಾತಿಗೂ ಹಂಬಲಿಸದೆ ಹಾಡುಗಾರಿಕೆಯನ್ನೇ ಧ್ಯಾನದಂತೆ, ವ್ರತದಂತೆ ಪರಿಪಾಲಿಸಿಕೊಂಡು ಬಂದ ಹೆಗ್ಗಳಿಕೆ ಸುಬ್ಬಣ್ಣರದ್ದು. ಮಾಡುವ ಕೆಲಸವನ್ನು ತನ್ಮಯತೆಯಿಂದ ಮಾಡಿದರೆ, ದಕ್ಕಬೇಕಾದ ಇನಾಮು ಸಿಕ್ಕಿಯೇ ಸಿಗುತ್ತದೆಂಬಂಥಾ ಮನಃಸ್ಥಿತಿ ಅವರದ್ದಾಗಿತ್ತು. ಹಾಗಿರದೇ ಹೋಗಿದ್ದರೆ, ಅವರು ತಲೆಮಾರುಗಳಾಚೆಗೂ ಪ್ರಸ್ತುತರಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ.
ಸುಬ್ಬಣ್ಣ ಮಲೆನಾಡಿನಿಂದ ಮೇಲೆದ್ದು ಬಂದ ಮಹಾ ಪ್ರತಿಭೆ. ಈ ಜಿಲ್ಲೆಯ ನಗರ ಎಂಬೂರಿನ ಗಣೇಶ್ ರಾವ್ ಮತ್ತು ರಂಗನಾಯಕಮ್ಮ ದಂಪತಿಯ ಮಗನಾಗಿ ಹುಟ್ಟಿದ ಸುಬ್ಬಣ್ಣರಿಗೆ ಸಂಗೀತಾಸಕ್ತಿ ಎಂಬುದು ಎಳವೆಯಿಂದಲೇ ಆವರಿಸಿಕೊಂಡಿತ್ತು. ಯಾಕೆಂದರೆ, ಅವರ ಮನೆಯ ವಾತಾವರಣವೇ ಅದಕ್ಕೆ ಪೂರಕವಾಗಿತ್ತು. ಅವರದ್ದು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದವರ ವಂಶ. ಅಜ್ಜೆ ಶಾಮಣ್ಣನವರಿಂದಲೇ ಸುಬ್ಬಣ್ಣರಿಗೆ ಸಂಗೀತದ ಪಾಠ ಮನನವಾಗಿತ್ತು. ಹಾಗೆ ಬೆಳೆದು ಬಂದು, ಶಾಲಾ ಕಾಲೇಜು ದಿನಗಳಲ್ಲಿಯೇ ಅವರು ಗಾಯಕರಾಗಿ ಗುರುತಿಸಿಕೊಂಡಿದ್ದರು. ಕಾಲೇಜು ದಿನಗಳಲ್ಲಿ ಹಿಂದಿ ಹಾಡುಗಳ ಮೋಹಕ್ಕೆ ವಶವಾಗಿದ್ದ ಸುಬ್ಬಣ್ಣ, ಹೆಚ್ಚಾಗಿ ಹಿಂದಿ ಹಾಡುಗಳನ್ನು ಹಾಡುವ ಮೂಲಕ ಸೈ ಅನ್ನಿಸಿಕೊಂಡಿದ್ದರು.
ಹೀಗೆ ಸಾಗಿ ಬಂದ ಸುಬ್ಬಣ್ಣ, ಒಂದು ಗಾಯನ ಸ್ಪರ್ಧೆಯಲ್ಲಿ ಅಡಿಗರ ಯಾವ ಮೋಹನ ಮುರಳಿ ಕರೆಯಿತೋ ಎಂಬ ಹಾಡನ್ನು ಹಾಡಿದ್ದರು. ಅವರದ್ದೇ ಶೈಲಿ ಮತ್ತು ಸ್ವಂತಿಕೆಯೊಂದಿಗೆ ಆ ಸ್ಪರ್ಧೆಯಲ್ಲವರು ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದರು. ಆ ಕ್ಷಣಗಳು ಸುಬ್ಬಣರ ಪಾಲಿಗೆ ಅದೆಂಥಾ ಅನುಭೂತಿಯನ್ನು ಕಟ್ಟಿಕೊಟ್ಟಿದ್ದವೆಂದರೆ, ಇನ್ನು ಮುಂದೆ ಬದುಕಿನಾರಭ್ಯ ಸುಗಮ ಸಂಗೀತ ಕ್ಷೇತ್ರದಲ್ಲಿಯೇ ಮುಂದುವರೆಯುವ ಅಚಲ ನಿರ್ಧಾರ ತಳಿದಿದ್ದರು. ಆ ನಂತರ ಚೆಂದ ಭಾವಗೀತೆಗಳನ್ನು ಕನ್ನಡಿಗರಿಗೆ ಮೊಗೆ ಮೊಗೆದು ಕೊಟ್ಟರು. ಅವರು ಹಾಡಿದ ಹಾಡುಗಳೀಗ ಮೊಗೆದು ಸುರಿದುಕೊಂಡಷ್ಟೂ ಮುಗಿಯದ ಮಾಯೆಯಂತೆ ಎಲ್ಲರನ್ನೂ ತಾಕುತ್ತಿವೆ.
ಹೀಗೆ ಸುಗಮ ಸಂಗೀತ ಕ್ಷೇತ್ರದಲ್ಲಿ ಮಿಂಚಲಾರಂಭಿಸಿದ್ದ ಸುಬ್ಬಣ್ಣ, ೧೯೭೯ರಲ್ಲಿ ತೆರೆಗಂಡಿದ್ದ ಕಾಡುಕುದುರೆ ಎಂಬ ಚಿತ್ರಕ್ಕಾಗಿ ‘ಕಾಡು ಕದುರಿ ಓಡಿ ಬಂದಿತ್ತಾ…’ ಎಂಬ ಹಾಡನ್ನು ಹಾಡಿದ್ದರು. ಆ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿಯೂ ಅವರನ್ನರಸಿ ಬಂದಿತ್ತು. ಆ ನಂತರದಲ್ಲಿ ಕುವೆಂಪು, ನಿಸಾರ್ ಅಹಮದ್, ಒಲಕ್ಷ್ಮೀನಾರಾಯಣ ಭಟ್ಟ ಮುಂತಾದ ಅನೇಕ ಕವಿಗಳ ಕವಿತೆಗೆ ಸುಬ್ಬಣ್ಣ ಧ್ವನಿಯಾದರು. ಅಂಥಾ ಶ್ರೇಷ್ಠ ಕವಿತೆಗಳನ್ನು ಕ್ಯಾಸೆಟ್ಟುಗಳ ಮೂಲಕ, ಆಕಾಶವಾಣಿ ಗಾಯನದ ಮೂಲಕ ಜನರೆದೆಗೆ ದಾಟಿಸಿದರು. ಶಿಶುನಾಶ ಷರೀಫರ ಗೀತೆಗಳೂ ಕೂಡಾ ಸುಬ್ಬಣ್ಣರ ಕಂಠದಲ್ಲಿ ಕುಣಿದಾಡಿದವು. ಈವತ್ತಿಗೂ ಕುವೆಂಪು ರಚಿತ ‘ಆನಂದಮಯ ಈ ಜಗಹೃದಯಾ ಏತಕೆ ಭಯ ಮಾಣೋ, ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ’ ಎಂಬ ಹಾಡು ಈ ಜನರೇಷನ್ನಿನವರೊಳಗೂ ಮಿಂಚಿನ ಸಂಚಾರವೆಬ್ಬಿಸುತ್ತಿದೆ. ಅದು ಸುಬ್ಬಣ್ಣರಿಗೊಲಿದ ಗಾಯನ ಶಕ್ತಿಗೊಂದು ಉದಾಹರಣೆ. ಅವರೀಗ ಭೌತಿಕವಾಗಿ ಎದ್ದು ನಡೆದಿರಬಹುದು. ಆದರೆ ಹಾಡುಗಳ ಮೂಲಕ ಸುಬ್ಬಣ್ಣ ಕೋಟಿ ಕನ್ನಡಿಗರ ಎದೆಯೊಳಗೆ ಅನುರಣಿಸುತ್ತಲೇ ಇರುತ್ತಾರೆ.