ಸಿನಿಮಾ ಒಂದಕ್ಕೆ ಹೇಗೆಲ್ಲ ಪ್ರಚಾರ ಕೊಡಿಸಬಹುದೆಂಬುದಕ್ಕೂ, ಹಾಗೆ ಸಿಕ್ಕ ಪ್ರಚಾರದ ಶಿಖರವೇರಿ ನಿಂತ ಚಿತ್ರವೊಂದನ್ನು ಹೇಗೆ ಸೋಲಿನ ಪ್ರಪಾತಕ್ಕೆ ದೊಪ್ಪನೆ ಕೆಡವಬಹುದೆಂಬುದಕ್ಕೂ ಸಜೀವ ಉದಾಹರಣೆಯಂತಿರುವವರು ನಿರ್ದೇಶಕ ಜೋಗಿ ಪ್ರೇಮ್. ಈತನ ಪ್ರಚಾರದ ವರಸೆ, ಆರಂಭದಲ್ಲೇ ಕೊಡುವ ಬಿಟ್ಟಿ ಪೋಸುಗಳ ಬಗ್ಗೆ ಸಾಕಷ್ಟು ಮೂದಲಿಕೆಗಳೆದುರಾಗಿವೆ. ಕಡೆಗೂ ಅದೆಲ್ಲದರಿಂದಾಗಿ ಪ್ರೇಮ್ಸ್ ಕೊಂಚ ಬದಲಾದಂತಿದ್ದರು. ಈ ಹಿಂದೆ ಏಕ್ ಲವ್ ಯಾ ಸಂದರ್ಭದಲ್ಲಿ ಅಂಥಾದ್ದೊಂದು ಬದಲಾವಣೆ ಪ್ರೇಮ್ ವ್ಯಕ್ತಿತ್ವದಲ್ಲಿ ಸ್ಪಷ್ಟವಾಗಿಯೇ ಕಾಣಿಸಿಕೊಂಡಿತ್ತು. ಇದೀಗ ಹೊಸಾ ಚಿತ್ರದ ಭೂಮಿಕೆಯಲ್ಲಿ ಮತ್ತದೇ ಹಳೇ ಪ್ರೇಮ್ ಅವತರಿಸಿಬಿಟ್ಟಂತಿದೆ!
ಪ್ರೇಮ್ ಕೆಡಿ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿರೋದು ಮತ್ತು ಧ್ರುವ ಸರ್ಜಾ ಅದರ ನಾಯಕನಾಗಿ ನಟಿಸುತ್ತಿರೋದು ಗೊತ್ತಿರುವ ವಿಚಾ. ಸದ್ಯಕ್ಕೆ ಧ್ರುವ ಮಾರ್ಟಿನ್ ಪ್ರಮೋಷನ್ನಿನಲ್ಲಿ ಬ್ಯುಸಿಯಾಗಿರೋದರಿಂದ ಸದ್ಯಕ್ಕೆ ಕೇಡಿ ಶುರುವಾಗೋ ಲಕ್ಷಣಗಳಿಲ್ಲ. ಆದರೆ ಆ ಸಿನಿಮಾ ಸೃಷ್ಟಿಸುತ್ತಿರುವ ಹೈಪುಗಳಿಗೇನೂ ಕಡಿಮೆಯಿಲ್ಲ. ಎಂದಿನಂತ ತಾರಾಗಣಕ್ಕೆ ಘಟಾನುಘಟಿ ನಟ ನಟಿಯರ ಹೆಸರನ್ನು ಹರಿಯ ಬಿಡುವ ಮೂಲಕವೇ ಪ್ರೇಮ್ ಕೇಡಿಗೆ ಪ್ರಚಾರ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸಂಜಯ್ ದತ್ ಈ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳಲಿರೋದು ಈಗಾಗಲೇ ಪಕ್ಕಾ ಆದಂತಾಗಿದೆ. ಆ ಸಾಲಿನಲ್ಲಿ ಪರಭಾಷಾ ಚಿತ್ರರಂಗದ ಮತ್ತೊಂದಷ್ಟು ಮಂದಿಯ ಹೆಸರೂ ಕೇಳಿ ಬರುತ್ತಿದೆ. ಇದೀಗ ಆ ಸಾಲಿನಲ್ಲಿ ಶಿಲ್ಪಾ ಶೆಟ್ಟಿಯ ಹೆಸರೂ ಕೇಳಿ ಬರುತ್ತಿದೆ. ಪ್ರೇಮ್ ಹಬ್ಬಿಸಿರುವ ಸುದ್ದಿಯ ಭೂಮಿಕೆಯಲ್ಲಿ ಹೇಳೋದಾದರೆ, ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಲು ಶಿಲ್ಪಾ ಶೆಟ್ಟಿ ಒಪ್ಪಿಗೆ ಸೂಚಿಸಿದ್ದಾರೆ. ಅದು ನಿಜವೇ ಆಗದ್ದರೆ ಶಿಲ್ಪಾ ದಶಕದ ನಂತರ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಈ ಹಿಂದೆ ರವಿಚಂದ್ರನ್ ಸಿನಿಮಾ ನಾಯಕಿಯಾಗಿ ಮಿಂಚಿದ್ದ ಶಿಲ್ಪಾ ಆಗಮನ ಒಂದಷ್ಟು ಪ್ರೇಕ್ಷಕರನ್ನು ಥ್ರಿಲ್ ಆಗಿಸಿರೋದು ಸುಳ್ಳಲ್ಲ!