ಮುದ್ದಾದ ಪ್ರೇಮಕಥೆ ಬೆರೆತ ಮರ್ಡರ್ ಮಿಸ್ಟ್ರಿ?
ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಮೂಲಕ ಸುದೀರ್ಘವಾದೊಂದು ನಿರೀಕ್ಷೆ ನಿರ್ಣಾಯಕ ಘಟ್ಟ ತಲುಪಿಕೊಂಡಂತಾಗಿದೆ. ಅಷ್ಟಕ್ಕೂ ಇದುವರೆಗೂ ಕೂಡಾ ಕೌತುಕದ ಕಾವು ಒಂದಿನಿತೂ ಆರದಂತೆ ಶೀತಲ್ ಶೆಟ್ಟಿ ಜಾಣ್ಮೆಯಿಂದಲೇ ಸಾಗಿ ಬಂದಿದ್ದಾರೆ. ಫಸ್ಟ್ ಲುಕ್, ಮೇಕಿಂಗ್ ವೀಡಿಯೋ, ಟೀಸರ್, ಹಾಡು ಅಂತೆಲ್ಲ ನಿರೀಕ್ಷೆಯೆಂಬುದು ನಿಗಿನಿಗಿಸುವಂತೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಟ್ರೈಲರ್ ಪ್ರೋಮೋ ಮೂಲಕ ಟಾಕ್ ಕ್ರಿಯೇಟ್ ಮಾಡಿದ್ದ ಶೀತಲ್ ಇದೀಗ ಚೆಂದದ ಟ್ರೈರಲ್ ಅನ್ನು ಲಾಂಚ್ ಮಾಡಿದ್ದಾರೆ.
ಮಳೆ, ನಾಯಕನನ್ನು ಆವರಿಸಿಕೊಂಡ ದುಃಖದ ಕಾರ್ಮೋಡ, ನನಗೇ ಯಾಕೆ ಪದೇ ಪದೆ ಹೀಗಾಗುತ್ತದೆಂಬಂಥಾ ಯಾತನೆ ಮತ್ತು ಶೀತಲ್ ಶೆಟ್ಟಿಯವರ ಹಿನ್ನೆಲೆಯ ನಿರೂಪಣೆಯೊಂದಿಗೆ ಸಾಗುವ ಈ ಟ್ರೈಲರ್ ನಾನಾ ದಿಕ್ಕಿನಲ್ಲಿ ಈ ಕಥೆಯ ಬಗ್ಗೆ ಆಲೋಚಿಸುವಂತೆ ಮಾಡಿದೆ. ಇದರ ಜೊತೆ ಜೊತೆಗೇ ಮುದ್ದಾದೊಂದು ಪ್ರೇಮ ಕಥಾನಕ ಸುಳಿವಿನೊಂದಿಗೆ, ಇದು ರೋಚಕವಾಗಿ ಸಾಗುವ ಮರ್ಡರ್ ಮಿಸ್ಟ್ರಿ ಇರಬಹುದಾ ಎಂಬ ದಿಕ್ಕಿನಲ್ಲಿಯೂ ಆಲೋಚನೆಗೆ ಹಚ್ಚಿದೆ. ಅದೆಲ್ಲಕ್ಕಿಂತಲೂ ಮಿಗಿಲಾಗಿ ಶೀತಲ್ ಮೊದಲ ಪ್ರಯತ್ನದಲ್ಲಿಯೇ ಪಳಗಿದ ನಿರ್ದೇಶಕಿಯಂತೆ ಇಲ್ಲಿನ ದೃಷ್ಯಗಳನ್ನು ಹ್ಯಾಂಡಲ್ ಮಾಡಿರುವುದು ಎದ್ದು ಕಾಣುತ್ತದೆ. ಈ ಮೂಲಕ ಅವರು ನಿಜಕ್ಕೂ ಭರವಸೆ ಮೂಡಿಸಿದ್ದಾರೆ.
ಆರಂಭದಲ್ಲಿ ಲಾಂಚ್ ಆಗಿದ್ದ ಫಸ್ಟ್ ಲುಕ್ನಲ್ಲಿಯೇ ಒಂದಷ್ಟು ಅಂಶಗಳು ಪ್ರೇಕ್ಷಕರನ್ನ ತಲುಪಿಕೊಂಡಿದ್ದವು. ಆ ಘಳಿಗೆಯಲ್ಲಿ ಶೀಘ್ರದಲ್ಲಿಯೇ ಟ್ರೈಲರ್ ಲಾಂಚ್ ಮಾಡೋದಾಗಿಯೂ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿಕೊಂಡಿದ್ದರು. ಅದರ ಬೆನ್ನಲ್ಲಿಯೇಕಿಚ್ಚ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ವಿಂಡೋ ಸೀಟ್ನ ಮಸ್ತ್ ಆಗಿರೋ ಮೇಕಿಂಗ್ ವೀಡಿಯೋ ಕೂಡಾ ಬಿಡುಗಡೆಗೊಂಡಿತ್ತು. ಅದರಲ್ಲಿ ಸದರಿ ಸಿನಿಮಾ ಬಗೆಗಿನ ಮತ್ತೊಂದಷ್ಟು ರಸವತ್ತಾದ ಹೊಳಹುಗಳು ಜಾಹೀರಾಗಿದ್ದವು. ಆ ನಂತರವೂ ಅದೇ ಬಿಸಿಯನ್ನು ಕಾಪಿಟ್ಟುಕೊಂಡು ಬಂದಿದ್ದ ವಿಂಡೋ ಸೀಟ್ ಒಂದಲ್ಲೊಂದು ರೀತಿಯಲ್ಲಿ ಸದಾ ಸುದ್ದಿ ಕೇಂದ್ರದಲ್ಲಿತ್ತು. ಹಾಗೆ ಸಾಗಿ ಬಂದು ಬಹು ನಿರೀಕ್ಷಿತ ಚಿತ್ರವಾಗಿಯೂ ಬಿಂಬಿಸಲ್ಪಟ್ಟಿತ್ತು. ಅದನ್ನು ಈಗ ಬಿಡುಗಡೆಗೊಂಡಿರೋ ಟ್ರೈಲರ್ ತೀವ್ರವಾಗಿಸಿದೆ.
ಕೊರೋನೋತ್ತರ ಕಾಲದಲ್ಲಿ ಚಿತ್ರರಂಗಕ್ಕೆ ಹೊಸಾ ಆವೇಗ ನೀಡಬಲ್ಲ ಭರವಸೆ ಮೂಡಿಸಿರುವ ಒಂದಷ್ಟು ಸಿನಿಮಾಗಳಿದ್ದಾವೆ. ಆ ಯಾದಿಯಲ್ಲಿ ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿ ಬಂದಿರುವ ವಿಂಡೋ ಸೀಟ್ ಖಂಡಿತಾ ಪ್ರಧಾನವಾಗಿ ಸೇರಿಕೊಳ್ಳುತ್ತದೆ. ಇದೀಗ ಲಾಂಚ್ ಆಗಿರೋ ಟ್ರೈಲರ್ನಲ್ಲಿ ವಿಂಡೋ ಸೀಟ್ನ ಕಥಾ ಹಂದರದ ಝಲಕ್ಗಳೂ ಕೂಡಾ ಸ್ಪಷ್ಟವಾಗಿ ಕಾಣಿಸಿದೆ. ಒಂದೊಳ್ಳೆ ರೊಮ್ಯಾಂಟಿಕ್ ಕ್ರೈಂ ಥ್ರಿಲ್ಲರ್ ಕಥಾನಕವನ್ನು ಶೀತಲ್ ಶೆಟ್ಟಿ ಕಟ್ಟಿ ಕೊಟ್ಟಿದ್ದಾರೆಂಬುದೂ ಸ್ಪಷ್ಟವಾಗಿದೆ. ಅದಲ್ಲದೇ ನಿರೂಪ್ ಭಂಡಾರಿ ಇಲ್ಲಿ ಯಾವ್ಯಾವ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿದ್ದಾರೆಂಬ ಪ್ರೇಕ್ಷಕರ ಕ್ಯೂರಿಯಾಸಿಟಿ ಕೂಡಾ ಕೊಂಚ ತಣಿದಂತಾಗಿದೆ. ಒಟ್ಟಾರೆಯಾಗಿ ಈ ಟ್ರೈಲರ್ ವಿಂಡೋ ಸೀಟ್ ಅನ್ನು ಕಣ್ತುಂಬಿಕೊಳ್ಳಲು ತದೇಕಚಿತ್ತದಿಂದ ಕಾಯುವಂತೆ ಮಾಡುವಷ್ಟು ಶಕ್ತವಾಗಿ ಮೂಡಿ ಬಂದಿದೆ.