ಆಗಾಗ ನಾನಾ ಅವತಾರಗಳಲ್ಲಿ ಪ್ರತ್ಯಕ್ಷರಾಗುತ್ತಾ, ಒಂದಷ್ಟು ವಿವಾದದ ಮೂಲಕ ಸದ್ದು ಮಾಡುತ್ತಿರುವಾತ ಕಾಳಿಮಠದ ಸ್ವಾಮೀಜಿಯಾಗಿ ಗುರುತಿಸಿಕೊಂಡಿರುವ ರಿಷಿಕುಮಾರ. ಮೂಲರ್ತ ಡ್ಯಾನ್ಸರ್ ಕೂಡಾ ಆಗಿರುವ ರಿಷಿ, ಒಂದು ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ ಅಂತೊಂದು ಸುದ್ದಿ ವರ್ಷಗಳ ಹಿಂದೆಯೇ ಹಬ್ಬಿಕೊಂಡಿತ್ತು. ಆ ನಂತರದಲ್ಲಿ ಸದ್ದೇ ಇಲ್ಲದೆ ಒಪ್ಪ ಓರಣವಾಗಿ ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಚಿತ್ರವೀಗ ಇದೇ ವಾರ ಬಿಡುಗಡೆಗೊಳ್ಳಲು ಸನ್ನದ್ಧವಾಗಿದೆ. ಸದ್ಯದ ಮಟ್ಟಿಗೆ ಸಮಾಜಮುಖಿಯಾದ, ಒಂದೊಳ್ಳೆ ಕಥಾಹಂದರದೊಂದಿಗೆ ತಯಾರುಗೊಂಡಿರುವ ‘ಸರ್ವಂ ನಾಟ್ಯಮಯಂ’ ಎಂಬ ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತೆ ಮೂಡಿ ಬಂದಿದೆಯಂತೆ.
ಡಿಎಂಕೆ ಆಡ್ ಜೋನ್ ಬ್ಯಾನರಿನಡಿಯಲ್ಲಿ ಮನೋಜ್ ವರ್ಮಾ ನಿರ್ಮಾಣ ಮಾಡಿರುವ ಈ ಚಿತ್ರವನ್ನು, ವಿಜಯನಗರ ಮಝು ಅಂತಲೇ ಹೆಸರಾಗಿರುವ ಮಂಜುನಾಥ್ ಬಿ.ಎನ್ ನಿರ್ದೇಶನ ಮಾಡಿದ್ದಾರೆ. ಶೀರ್ಷಿಕೆ ಕೇಳಿದಾಕ್ಷಣವೇ ಇದು ನಾಟ್ಯದ ಭೂಮಿಕೆಯಲ್ಲಿ ಜರುಗುವ ಕಥಾನಕವನ್ನೊಳಗೊಂಡ ಚಿತ್ರವೆಂಬ ವಿಚಾರ ಸ್ಪಷ್ಟವಾಗುತ್ತದೆ. ಈಗ ಒಂದೇ ಆವೇಗದ ಚಿತ್ರಗಳ ಜಮಾನ. ಇಂಥಾದ್ದರ ನಡುವೆ ಯಾವುದೋ ಗಹನವಾದ ವಿಚಾರಗಳೊಂದಿಗೆ, ಮನಮುಟ್ಟುವಂತೆ ಈ ಚಿತ್ರ ಮೂಡಿ ಬಂದಿದೆಯಂತೆ. ಅಂದಹಾಗೆ, ಯಾರೂ ದಿಕ್ಕಿಲ್ಲದ ಅನಾಥ ಮಕ್ಕಳು, ತಮ್ಮೊಳಗಿನ ತಬ್ಬಲಿತನವನ್ನು ಮೀರಿಕೊಂಡು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಧಿಸುವ ಕಥೆ ಈ ಚಿತ್ರದಲ್ಲಿ ಅಡಕವಾಗಿದೆಯಂತೆ.
ಸ್ವಾಮೀಜಿ ಎಂದು ಹೇಳಿಕೊಳ್ಳುತ್ತಲೇ, ಬಿಗ್ಬಾಸ್ ಸ್ಪರ್ಧಿಯೂ ಆಗಿದ್ದ ರಿಷಿಕುಮಾರ ಈ ಚಿತ್ರದಲ್ಲಿ ಒಂದೊಳ್ಳೆ ಪಾತ್ರವನ್ನು ನಿಭಾಯಿಸಿದ್ದಾರಂತೆ. ಅನಾಥ ಮಕ್ಕಳಿಗೆ ತರಬೇತಿ ಕೊಟ್ಟು, ನೃತ್ಯದಲ್ಲಿ ಸಾಧನೆ ಮಾಡಲು ಪ್ರೇರೇಪಿಸುವ ನೃತ್ಯ ಶಿಕ್ಷಕನ ಪಾತ್ರದಲ್ಲವರು ನಟಿಸಿದ್ದಾರಂತೆ. ಇನ್ನುಳಿದಂತೆ ಎಂ.ಬಿ ಹಳ್ಳಿಕಟ್ಟಿ ಛಾಯಾಗ್ರಹಣ, ರವೀಶ್ ಸಂಗೀತ ನಿರ್ದೇಶನ, ಸೌಂದರರಾಜನ್ ಸಂಕಲನ, ಹರ್ಷ ಚೆಲುವರಾಜನ್ ಸಂಭಾಷಣೆ, ಎಂ.ಬಿ ಲೋಕಿ ಸಾಹಿತ್ಯವಿದೆ. ನೂರೈವತ್ತಕ್ಕೂ ಹೆಚ್ಚು ಮಕ್ಕಳು ನಟಿಸಿರುವ ಈ ಸಿನಿಮಾದಲ್ಲಿ ಶಮ್ಯ ಗುಬ್ಬಿ, ಬೇಬಿ ಸ್ಫೀರ್ತಿ, ಮಹೇಶ್ ರಾಜ್, ಮಾಸ್ಟರ್ ಸುಶೀಲ್, ಹರ್ಷ, ಯುಕ್ತ, ವೆಂಕಟೇಶ್, ಹೇಮಾ, ಮನೋಜ್ ವರ್ಮಾ, ಹರ್ಷ, ಚೆಲುವರಾಜ್ ಮುಂತಾದವರು ಬಹುಮುಖ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ.