ಸಾಮಾಜಿಕ ಜಾಲತಾಣದಲ್ಲಿ ಹೆಂಗಳೆಯರನ್ನು ಪರಿ ಪರಿಯಾಗಿ ಕಾಡುವ, ಹೀನಾಯವಾಗಿ ಕಮೆಂಟ್ ಮಾಡುವ ಮೂಲಕ ತಮ್ಮೊಳಗಿನ ವಿಕೃತಿಯನ್ನು ಕಾರಿಕೊಳ್ಳುವ ಒಂದು ದಂಡೇ ಇದೆ. ಇಂಥವರೆಲ್ಲ ಹೆಚ್ಚಿನ ಸಂದರ್ಭಗಳಲ್ಲಿ ಸಂಸ್ಕøತಿ, ಧರ್ಮ ರಕ್ಷಕರೆಂಬ ಸೋಗಿನಲ್ಲಿರುತ್ತಾರೆ. ಈ ಮಂದಿಗೆ ಮಾಡಲು ಬೇರೆ ಕಸುಬಿಲ್ಲವೋ, ತೀಟೆ ತೀರಿಸಿಕೊಳ್ಳಲು ಬೇರೆ ದಾರಿಗಳಿಲ್ಲವೋ ಭಗವಂತನೇ ಬಲ್ಲ. ಯಾರೋ ಹುಡುಗಿ ತನ್ನಿಷ್ಟದ ಬಟ್ಟೆ ಹಾಕಿದರೆ, ತನಗೆ ಬೇಕಾದಂತೆ ಬದುಕುವ ಸುಳಿವು ಕೊಟ್ಟರೆ ಇಂಥಾ ಹುಳುಗಳೆಲ್ಲ ಅದೆಲ್ಲಿದ್ದರೂ ಕಮೆಂಟ್ ಬಾಕ್ಸ್ನತ್ತ ತೆವಳಿ ಬರುತ್ತವೆ. ತಮಗೆ ತೋಚಿದಂತೆ ಉಪದೇಶ ನೀಡಿ ಉಗಿಸಿಕೊಳ್ಳುತ್ತವೆ. ಇಂಥಾ ಹಿಂಡಿನ ಮೇಲೀಗ ಪುಟ್ ಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಕೆಂಡವಾಗಿದ್ದಾಳೆ!
ಕೆಲ ದಿನಗಳ ಹಿಂದೆ ಸಾನ್ಯಾ ಅಯ್ಯರ್ ತಾಯಿ ದೀಪಾ ಅಯ್ಯರ್ ಹುಟ್ಟುಹಬ್ಬವಿತ್ತು. ಈ ದೀಪಾ ಕೂಡಾ ಡಬ್ಬಿಂಗ್ ಆರ್ಟಿಸ್ಟ್ ಆಗಿರುವವರು. ಅದರ ಜೊತೆ ಜೊತೆಗೇ ಸೀರಿಯಲ್ಲುಗಳಲ್ಲಿಯೂ ನಟಿಸುತ್ತಿರುವವರು. ಸದ್ಯಕ್ಕೆ ಲಕ್ಷಣ ಎಂಬ ಸೀರಿಯಲ್ಲಿನ ಮುಖ್ಯ ಪಾತ್ರವೊಂದರ ಮೂಲಕ ದೀಪಾ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಹೀಗೆದ ಸೀರಿಯಲ್ ಜಗತ್ತಿನಲ್ಲಿರುವ ದೀಪಾ ಮೊನ್ನೆ ದಿನ ಮಗಳು ಸಾನ್ಯಾಳ ಕೊಟ್ಟಿದ್ದ ಬರ್ತ್ಡೇ ಪಾರ್ಟಿ, ಸರ್ಪ್ರೈಸ್ಗಳ ನಡುವೆ ಖುಷಿಗೊಂಡಿದ್ದರು. ಸಾನ್ಯಾ ದೊಡ್ಡ ಹೊಟೇಲೊಂದಕ್ಕೆ ಕರೆದುಕೊಂಡು ಹೋಗಿ ತಾಯಿಯ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಳು. ಅದಕ್ಕೆ ಸಂಬಂಧಿಸಿದ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಳು. ಈ ಸಂದರ್ಭದಲ್ಲಿ ಸಾನ್ಯಾ ಅಮ್ಮ ದೀಪಾ ಧರಿಸಿದ್ದ ಬಟ್ಟೆಯೇ ಒಂದಷ್ಟು ಹುಳುಗಳ ಮೈ ಉರಿಗೆ ಕಾರಣವಾಗಿ ಬಿಟ್ಟಿದೆ.
ಹೀಗೆ ದೀಪಾ ತೊಟ್ಟಿದ್ದ ಬಟ್ಟೆಯನ್ನು ಗುರಿಯಾಗಿಸಿಕೊಂಡಿದ್ದ ಕೆಲ ಮಂದಿ ಕೆಟ್ಟಾಕೊಳಕಾಗಿ ಕಮೆಂಟು ಮಾಡಿದ್ದರು. ತಾಯಿಯದ್ದೇ ಇಂಥಾ ಅವತಾರವಾಗಿರುವಾಗ, ಮಗಳು ಹೀಗಿರೋದರಲ್ಲಿ ಯಾವ ಅಚ್ಚರಿಯೂ ಇಲ್ಲ ಎಂಬಂಥಾ ಚುಚ್ಚು ಮಾತುಗಳನ್ನಾಡಿದ್ದರು. ಇದರ ವಿರುದ್ಧ ಸಾನ್ಯಾ ಕೆಂಡವಾಗಿ ತಿರುಗೇಟು ನೀಡಿದ್ದಾಳೆ. ನಾವೀಗ ಆಧುನಿಕ ಕಾಲದಲ್ಲಿದ್ದೇವೆ. ನಮಗೆ ಬೇಕಾದ ಬಟ್ಟೆ ಹಾಕಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ನಿಮಗೆ ಬೇಕಾದ ಬಟ್ಟೆ ನೀವು ಹಾಕಿಕೊಳ್ಳಿ ಎಂಬರ್ಥದಲ್ಲಿ ಸಿಟ್ಟು ಹೊರ ಹಾಕಿದ್ದಾಳೆ. ಈ ವಿಚಾರದಲ್ಲಿ ನಮ್ಮ ಸಹಮತ ಸಾನ್ಯಾಗಿದೆ. ಹೆಣ್ಣುಮಕ್ಕಳ ಬಗ್ಗೆ ಹೀಗೆ ಮನಬಂದಂತೆ ಮಾತಾಡುವುದನ್ನು ನಾಗರಿಕ ಸಮುದಾಯ ಎಂದಿಗೂ ಸಹಿಸಲು ಸಾಧ್ಯವಿಲ್ಲ.
ಆದರೆ… ತನ್ನ ತಾಯಿ ಮಾಡರ್ನ್ ಬಟ್ಟೆ ಹಾಕಿದ್ದನ್ನು ಲೇವಡಿ ಮಾಡಿದವರ ವಿರುದ್ಧ ತಿರುಗಿ ಬಿದ್ದಿರೋ ಸಾನ್ಯಾ, ಕೆಲವೊಮ್ಮೆ ತಾನೇ ಖುದ್ದಾಗಿ ಅಂಥಾ ಮನಃಸ್ಥಿಯವರ ವಕ್ತಾರಿಕೆ ವಹಿಸಿದವಳಂತೆ ನಡೆದುಕೊಳ್ಳುತ್ತಾಳೆ. ಈಗ್ಗೆ ವರ್ಷಗಳ ಹಿಂದೆ ನಡೆದಿದ್ದೊಂದು ಘಟನೆ ಮತ್ತು ಇತ್ತೀಚಿನ ದಿನಗಳಲ್ಲಿ ಆಕೆ ನಡೆದುಕೊಳ್ಳುತ್ತಿರುವ ರೀತಿಗಳೆಲ್ಲವೂ ಮೇಲ್ಕಂಡ ಮಾತುಗಳಿಗೆ ತಾಜಾ ಉದಾಹರಣೆಯಂತಿವೆ. ರಿಯಾಲಿಟಿ ಶೋವೊಂದರಲ್ಲಿ ಸಾನ್ಯಾ ಮಹಿಶಾಸುರ ಮರ್ಧಿನಿಯ ಅವತಾರದಲ್ಲಿ ಡ್ಯಾನ್ಸ್ ಮಾಡಿದ್ದಳು. ಆ ವೇಶ ಧರಿಸಿದ್ದ ಸಂದರ್ಭದಲ್ಲಿ ಸಾನ್ಯಾ ಮೈ ಮೇಲೆ ಸಾಕ್ಷಾತ್ತು ಕಾಮಾಕ್ಯ ದೇವಿಯೇ ಆವಾಹನೆಯಾಗಿದ್ದಾಳೆಂಬಂತೆ ವರ್ತಿಸಿದ್ದಳು. ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ನೆಟ್ಟಿಗರೆಲ್ಲ ಸಾರಾಸಗಟಾಗಿ ಇದೊಂದು ಪ್ರಚಾರದ ಗಿಮಿಕ್ಕೆಂದು ಷರಾ ಬರೆದಿದ್ದರು.
ಇಂಥಾ ಪ್ರಕರಣಗಳಿಂದ ಟಿಆರ್ಪಿ ಗಿಟ್ಟಿಸಿಕೊಳ್ಳುವ ದರ್ದಿನ ಕೆಲ ಮಾಧ್ಯಮಗಳು ಅಭಿನವ ಕಾಮಾಕ್ಯ ದೇವಿ ಸಾನ್ಯಾಳನ್ನು ಕೂರಿಸಿಕೊಂಡು ಪ್ಯಾನಲ್ ಡಿಸ್ಕಷನ್ ನಡೆಸಿದ್ದವು. ಈ ಸಂದರ್ಭದಲ್ಲಿ ಸಾನ್ಯಾ ಸಾಕ್ಷಾತ್ತು ತನ್ನ ಚಿಕ್ಕಮ್ಮ ರೂಪಾ ಅಯ್ಯರ್ರನ್ನು ಆವಾಹಿಸಿಕೊಂಡಂತೆ ಮುಟ್ಟು, ಯೋನಿ ಪೂಜೆ ಅಂತೆಲ್ಲ ಬಡಬಡಿಸಿದ್ದಳು. ಒಂದು ಕಾಲದಲ್ಲಿ ಮುಟ್ಟಾದ ಮಹಿಳೆಯನ್ನು ಮನೆಯ ಹೊರಗೆ ಮೂರುದಿನಗಳ ಕಾಲ ಕೂಡಿಟ್ಟು, ಆಕೆ ಮೈಲಿಗೆಯವಳೆಂಬಂತೆ ನೋಡಲಾಗುತ್ತಿತ್ತಲ್ಲಾ? ಅದಕ್ಕೂ ವೈಜ್ಞಾನಿಕ ಕಾರಣಗಳಿವೆ ಎಂಬರ್ಥದಲ್ಲಿ ಕಾಮಿಡಿ ಮಾಡಿದ್ದಳು. ಹೀಗೆ ಒಮ್ಮೊಮ್ಮೆ ಸಂಸ್ಕøತಿಯ ವಕ್ತಾರೆಯಂತೆ ಕಾಣಿಸಿಕೊಳ್ಳುವ ಈಕೆ ತನ್ನಮ್ಮನೊಂದಿಗೆ ತುಂಡು ಬಟ್ಟೆ ಉಟ್ಟು ಪೋಸು ಕೊಡೋದೂ ಕೂಡಾ ಕೆಟ್ಟ ಕಮೆಂಟುಗಳಿಗೆ ಉತ್ತೇಜನ ಕೊಡಬಹುದೇನೋ…
ಈಕೆಯ ಚಿಕ್ಕಮ್ಮ ರೂಪಾ ಅಂತೂ ಇದೀಗ ಸನಾತನ ಧರ್ಮ ರಕ್ಷಕಿಯ ಅವತಾರವೆತ್ತಿದ್ದಾರೆ. ಸಾನ್ಯಾ ಆಗಲಿ, ಆಕೆಯ ಚಿಕ್ಕಮ್ಮನೇ ಆಗಲಿ; ಹೀಗೆ ಬಿಡುಬೀಸಾಗಿ ಮಾತಾಡುತ್ತಾ, ನಾನಾ ಸಂಕೋಲೆಗಳಿಂದ ಮುಕ್ತವಾಗಿರೋದರ ಹಿಂದೊಂದು ಹೋರಾಟದ ಕಥೆಯಿದೆ. ಅದರ ಫಲವಾಗಿ ಸಿಕ್ಕ ಸ್ವಾತಂತ್ರ್ಯವನ್ನು ಮತ್ತೆ ಮೌಢ್ಯಗಳ ಸಂಕೋಲೆ ಸೃಷ್ಟಿಸಲು ಬಳಸಿಕೊಳ್ಳುವುದನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿಯ ಕೋಲಾರ ಕ್ಷೇತ್ರ ಸಂಸದ ಮುನಿಸ್ವಾಮಿ ಎಂಬ ಮತಿಗೇಡಿಯೊಬ್ಬ ಕುಂಕುಮವಿಡದ ಮಹಿಳೆಯನ್ನು ನಿಂದಿಸಿದ್ದನಲ್ಲಾ? ಅದು ಕೂಡಾ ಈ ಸಮಾಜವನ್ನು ಮತ್ತೆ ಶಿಲಾಯುಗಕ್ಕೆ ಕೊಂಡೊಯ್ಯುವ ಹುನ್ನಾರದ ಭಾಗವೇ. ಸಾನ್ಯಾ ಈ ಸೂಕ್ಷ್ಮಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಅದು ಬಿಟ್ಟು ಕೆಲ ವಾಹಿನಿಗಳಲ್ಲಿ ಸಾಧ್ವಿಯಂತೆ ಪೋಸುಕೊಡುತ್ತಾ, ಮತ್ತೆ ಕೆಲವೊಮ್ಮೆ ಬಿಕಿನಿಯಂಥಾದ್ದರಲ್ಲಿ ಕಾಣಿಸಿಕೊಂಡರೆ ನಿಜಕ್ಕೂ ನಗೆಪಾಟಲಿಗೀಡಾಗಬೇಕಾಗುತ್ತೆ!