ಡ್ರಗ್ಸ್ ನಶೆಯೆಂಬುದೀಗ ಒಂದಿಡೀ ದೇಶವನ್ನೇ ಅಪಾದಮಸ್ತಕ ಆವರಿಸಿಕೊಂಡಿದೆ. ಆದರೆ, ನಮ್ಮ ರಾಜ್ಯದಲ್ಲಿ ಪೊಲೀಸರೇಕೋ ಚಿತ್ರರಂಗದ ಮಂದಿಯನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಂದಷ್ಟು ಪ್ರಶ್ನೆಗಳಿರೋದು ಸತ್ಯ. ಆದರೆ, ಹಾಗೆ ಚಿತ್ರರಂಗ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯ ಪ್ರಧಾನ ಟಾರ್ಗೆಟ್ ಆಗಿರೋದಕ್ಕೂ ಒಂದಷ್ಟು ನಿಖರ ಕಾರಣಗಳಿದ್ದಾವೆಂಬುದೂ ಅಷ್ಟೇ ಸತ್ಯ. ಯಾಕೆಂದರೆ, ಕಾಸು, ಖ್ಯಾತಿಯ ಮದವೇರಿದ ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗಗಳಲ್ಲಿಯೂ ನಶೆಯ ರುದ್ರನರ್ತನ ಸಾಂಘವಾಗಿಯೇ ನಡೆಯುತ್ತಿದೆ. ಅದರಲ್ಲಿಯೂ ಬಾಲಿವುಡ್ನಲ್ಲಿಯಂತೂ ಡ್ರಗ್ಸ್ ಚಟ ಮಾಮೂಲಿ ಎಂಬಂತಾಗಿದೆ. ಆ ಚಟಕ್ಕೆ ದಾಸಾನುದಾಸನಾಗಿ, ಒಂದು ಹಂತದಲ್ಲಿ ತನ್ನ ಬದುಕನ್ನೇ ಅಧ್ವಾನವೆಬ್ಬಿಸಿಕೊಂಡಿದ್ದಾತ ಸಂಜಯ್ ದತ್. ಇದೀಗ ಖುದ್ದು ಅವರೇ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವಂಥಾ ಮಾತುಗಳನ್ನಾಡಿದ್ದಾರೆ.
ಸಂಜಯ್ ದತ್ನದ್ದು ವರ್ಣರಂಜಿತ ವ್ಯಕ್ತಿತ್ವ. ಕೇವಲ ಹೆಂಗಳೆಯರ ವಿಚಾರದಲ್ಲಿ ಮಾತ್ರವಲ್ಲ; ಬದುಕಿನ ನಾನಾ ಮಜಲುಗಳಲ್ಲಿಯೂ ಆತನೊಬ್ಬ ಸ್ವೇಚ್ಛೆಯನ್ನೇ ಧರಿಸಿಕೊಂಡಂತೆ ಬದುಕಿದ ಆಸಾಮಿ. ಒಂದು ಹಂತದಲ್ಲಿ ಸಂಜು ಬಾಬಾಗೆ ಡ್ರಗ್ಸ್ನ ರುಚಿ ಹತ್ತಿಕೊಂಡಿತ್ತು. ಸಾಮಾನ್ಯವಾಗಿ, ಈ ಡ್ರಗ್ಸ್ ಚಟದ ವಿಚಾರದಲ್ಲಿ ಒಂದಷ್ಟು ಹಂತಗಳಿರುತ್ತವೆ. ಅದರಲ್ಲಿ ಕಟ್ಟ ಕಡೆಯ ಹಂತ ತಲುಪಿಕೊಂಡು ಬೋಧ ತಪ್ಪಿ ಬೀಳುವ ಮಟ್ಟಕ್ಕೆ ನಶೆಯೇರಿಸಿಕೊಂಡಿದ್ದಾತ ಸಂಜಯ್ ದತ್. ಇಂಥಾ ಸಂಜಯ್ ಇದೀಗ ಡ್ರಗ್ಸ್ ನಶೆಯೆಂಬುದು ಎಷ್ಟು ವ್ಯರ್ಥ ಮತ್ತು ಅದು ಬದುಕನ್ನು ಹೇಗೆಲ್ಲ ಹಾಳುಗೆಡವುತ್ತದೆಂಬುದರ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.
ಡ್ರಗ್ಸ್ ಚಟದ ಉತ್ತುಂಗದ ದಿನಗಳಲ್ಲಿ ಸಂಜಯ್ಗೆ ಮೈಮೇಲೆ ಪ್ರಜ್ಞೆಯೇ ಇರುತ್ತಿರಲಿಲ್ಲವಂತೆ. ಅದರ ನಡುವೆ ತಿಂಡಿ, ಊಟದಂಥವುಗಳೂ ಗಮನಕ್ಕೆ ಬಾರದಷ್ಟರ ಮಟ್ಟಿಗೆ ಆತ ಡ್ರಗ್ಸ್ಗೆ ವಶವಾಗಿದ್ದರು. ಅದೆಷ್ಟೋ ವರ್ಷಗಳ ಕಾಲ ನಶೆಯಲ್ಲಿ ಮಿಂದೆದ್ದ ಬಳಿಕ, ಅದೊಂದು ದಿನ ಜ್ಞಾನೋದಯವಾಗುವ ಸರದಿ ಬಂದಿತ್ತಂತೆ. ಆ ದಿನ ಸಂಜಯ್ಗೆ ಎಚ್ಚರವಾಗಿ, ಮಂಪರುಗಣ್ಣಲ್ಲಿ ಎದ್ದು ಅಡುಗೆ ಕೆಲಸದವನ ಬಳಿ ಊಟ ಹಾಕುವಂತೆ ಕೇಳಿದ್ದರಂತೆ. ಸಂಜಯ್ ಊಟ ಮಾಡುತ್ತಿರಬೇಕಾದರೆ ಅಲ್ಲೇ ನಿಂತಿದ್ದ ಅಡುಗೆಯವನ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ಅದನ್ನು ಗಮನಿಸಿದ ಸಂಜು ಯಾಕೆಂದು ಕೇಳಿದಾಗ, ಆತ ‘ನೀವು ಊಟ ಮಾಡದೆ ಇಂದಿಗೆ ಮೂರು ದಿನವಾಯ್ತು’ ಅಂದಿದ್ದನಂತೆ. ಅದು ಸಂಜಯ್ಗೆ ಆ ಕ್ಷಣದವರೆಗೂ ಅರಿವಿಗೇ ಬಂದಿರಲಿಲ್ಲ. ಆ ಕ್ಷಣದಲ್ಲಿ ನಶೆಯೆಂಬುದು ತನ್ನನ್ನು ಯಾವ ಪಾತಾಳಕ್ಕಿಳಿಸಿಬಿಟ್ಟಿದೆ ಎಂಬ ದಿಕ್ಕಿನಲ್ಲಿ ಆತ ಆಲೋಚಿಸಿದ್ದರಂತೆ. ಆ ಕ್ಷಣದಿಂದಲೇ ಡ್ರಗ್ಸ್ ಮುಟ್ಟದಿರುವ ತೀರ್ಮಾನಕ್ಕೆ ಬಂದಿದ್ದರಂತೆ. ಹಾಗೆ ಹೊರ ಬಂದ ನಂತರ ಬದುಕು ನಿಜಕ್ಕೂ ಸುಂದರವೆನ್ನಿಸಿ, ಡ್ರಗ್ಸ್ ನಶೆ ಕ್ಷಣಿಕ, ಅದು ವ್ಯರ್ಥ ಅನಾಹುತ ಅನ್ನಿಸಿತ್ತಂತೆ. ನಶೆಗೆ ವಶವಾದ ಯುವ ಜನಾಂಗ ಸಂಜು ಬಾಬಾನ ಅನುಭವಗಳತ್ತ ಗಮನಹರಿಸೋದೊಳಿತು.