ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಆಗಮಿಸಿದ್ದ ಹುಡುಗಿ ಸಂಜನಾ ಆನಂದ್. ಭಿನ್ನವಾದ ಕಥೆ, ಅದಕ್ಕೆ ತಕ್ಕುದಾದ ಪಾತ್ರದ ಮೂಲಕ ಸಂಜನಾ ಆ ನಂತರದ ದಿನಗಳಲ್ಲಿ ನಾಯಕಿಯಾಗಿ ಕಾಲೂರಿ ನಿಂತುಕೊಂಡಿದ್ದಳು. ಬಹುಶಃ ಪ್ರತಿಭೆಯೆಂಬುದು ಇರದೇ ಹೋಗಿದ್ದರೆ ಸಾಲು ಸಾಲು ಅವಕಾಶಗಳು ಆಕೆಯನ್ನು ಅರಸಿ ಬರಲು ಸಾಧ್ಯವಾಗುತ್ತಿರಲಿಲ್ಲವೇನೋ. ತಾನಾಯಿತು, ತನ್ನ ಸಿನಿಮಾವಾಯಿತೆಂಬ ಮನಃಸ್ಥಿತಿಯ ಸಂಜನಾ, ನೋಡ ನೋಡುತ್ತಲೇ ಎಲ್ಲರೂ ಅಚ್ಚರಿ ಪಡುವಂಥಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗಿದ್ದಳು. ಸಲಗ ಚಿತ್ರದ ಮೂಲಕ ಮತ್ತಷ್ಟು ಭದ್ರವಾಗಿ ನೆಲೆ ಕಂಡುಕೊಂಡು, ಇದೀಗ ತೆಲುಗಿನಲ್ಲಿಯೂ ಬಹುಬೇಡಿಕೆಯ ನಾಯಕಿಯಾಗಿ ಮಿಂಚುತ್ತಿದ್ದಾಳೆ. ಹೀಗೆ ಪರಭಾಷೆಗಳಲ್ಲಿಯೂ ಅವಕಾಶಗಳ ಸುರಿಮಳೆಯಾಗುತ್ತಿರುವಾಗಲೇ ಸಂಜನಾ ಕಿಸ್ ಖ್ಯಾತಿಯ ವಿರಾಟ್ಗೆ ಜೋಡಿಯಾಗಿರುವ ಸುದ್ದಿ ಬಂದಿದೆ!
ಕನ್ನಡದ ಮಟ್ಟಿಗೆ ಹೇಳುವುದಾದರೆ, ಸಂಜನಾ ಇದೀಗ ಒಂದಷ್ಟು ಹೊಸಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾಳೆ. ಆ ಸಾಲಿಗೆ ವಿರಾಟ್ ನಾಯಕನಾಗಿರುವ ಹೊಸಾ ಚಿತ್ರವೂ ಸೇರ್ಪಡೆಗೊಂಡಿದೆ. ಅಂದಹಾಗೆ, ಈ ಚಿತ್ರವನ್ನು ದಿನಕರ್ ತೂಗುದೀಪ ನಿರ್ದೇಶನ ಮಾಡಲಿದ್ದಾರೆ. ಖುದ್ದು ದಿನಕರ್ ಅವರೇ ನಾಯಕಿಯ ಪಾತ್ರಕ್ಕೆ ಸಂಜನಾಳನ್ನು ಆಯ್ಕೆ ಮಾಡಿದ್ದಾರೆ. ದಿನಕರ್ ಪಾಲಿಗೆ ನಿರ್ದೇಶನವೆಂಬುದು ಪಕ್ಕಾ ಪಂಚವಾರ್ಶಿಕ ಯೋಜನೆ. ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾದತ್ತ ಸಾಗಿ ಬರಲು ಅವರು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ವರ್ಷಾಂತರಗಳ ಹಿಂದೆ ಲೈಫ್ ಜೊತೆ ಒಂದು ಸೆಲ್ಫಿ ಎಂಬ ಚಿತ್ರವ್ನ್ನು ನಿರ್ದೇಶನ ಮಾಡಿದ್ದ ದಿನಕರ್, ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ಕಂಡಿರಲಿಲ್ಲ. ಅದಾದ ನಂತರ ಸುದೀರ್ಘವಾದ ಗ್ಯಾಪಲ್ಲಿ ಚೆಂದದ್ದೊಂದು ಕಥೆ ರೆಡಿ ಮಾಡಿಕೊಂಡು ಹೊಸಾ ಚಿತ್ರಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಈ ಬಗೆಗಿನ ಉಳಿಕೆ ಮಾಹಿತಿಗಳು ಇನ್ನಷ್ಟೇ ಜಾಹೀರಾಗಬೇಕಿವೆ.
ಇದುವರೆಗೂ ಸಂಜನಾ ನಟಿಸಿರೋದು ಕಡಿಮೆ ಸಿನಿಮಾಗಳಲ್ಲಿಯೇ ಆದರೂ ಅದರಲ್ಲಿ ಬಹುಪಾಲು ಸಿನಿಮಾಗಳು ಗೆದ್ದಿವೆ. ಆ ಸಾಲಿಗೆ ದುನಿಯಾ ವಿಜಯ್ ನಿರ್ದೇಶನ ಮಾಡಿ ನಟಿಸಿದ್ದ ಸಲಗ ಕೂಡಾ ಸೇರಿಕೊಂಡಿದೆ. ಈ ಮೂಲಕ ಸಂಜನಾ ಕಮರ್ಶಿಯಲ್ ಹಾದಿಯಲ್ಲಿಯೂ ತನ್ನನ್ನು ತಾನು ಫ್ರೂವ್ ಮಾಡಿಕೊಂಡಿದ್ದಾಳೆ. ಇದೆಲ್ಲದರ ಜೊತೆಜೊತೆಗೇ ಹನಿಮೂನ್ ಎಂಬ ವೆಬ್ ಸೀರೀಸ್ ಮೂಲಕವೂ ಹೆಸರು ಮಾಡಿ, ತೆಲುಗಿನಲ್ಲಿಯೂ ಅವಕಾಶಗಳನ್ನು ಪಡೆದುಕೊಂಡಿದ್ದಾಳೆ. ಸದ್ಯ ತೆಲುಗಿನಲ್ಲಿ ಆಕೆ ನಟಿಸುತ್ತಿರುವ ಎರಡನೇ ಚಿತ್ರದ ಚಿತ್ರೀಕರಣವೂ ನಡೆಯುತ್ತಿದೆ.
ಇದೀಗ ತೆಲುಗು ಚಿತ್ರದ ಶೂಟಿಂಗಿನಲ್ಲಿರುವಾಗಲೇ ಸಂಜನಾಗೆ ವಿರಾಟ್ಗೆ ಜೋಡಿಯಾಗೋ ಅವಕಾಶ ಕೂಡಿ ಬಂದಿದೆ. ಆ ಹಂತದಲ್ಲಿಯೇ ಕರೆ ಮಾಡಿದ್ದ ದಿನಕರ್ ಇಡೀ ಚಿತ್ರದ ಒಂದೆಳೆ ಸ್ಟೋರಿ ಹೇಳಿ, ಆಕೆಯ ಪಾತ್ರದ ಬಗ್ಗೆ ವಿವರಿಸಿದ್ದಾರಂತೆ. ಅದು ಸಂಜನಾಗೆ ಹಿಡಿಸಿದೆ. ಆದ್ದರಿಂದಲೇ ಒಪ್ಪಿಗೆ ಸೂಚಿಸಿದ್ದಾಳೆ. ಎಲ್ಲವೂ ಅಂದುಕೊಂಡಂತೆಯೇ ಆದರೆ, ಸಂಜನಾ ಪಾಲಿಗೆ ಈ ಸಿನಿಮಾ ಮೂಲಕ ಮತ್ತೊಂದು ಗೆಲುವು ದಕ್ಕಬಹುದು. ಈ ಬಾರಿ ದಿನಕರ್ ಮುಂದೆಯೂ ಸವಾಲುಗಳಿದ್ದಾವೆ. ಓರ್ವ ನಿರ್ದೇಶಕನಾಗಿ ಒಂದು ಮಹತ್ತದವಾದ ಗೆಲುವು ಪಡೆದುಕೊಳ್ಳುವ ಅನಿವಾರ್ಯತೆಯೂ ಅವರ ಮುಂದಿದೆ. ಅದನ್ನವರು ಸಮರ್ಥವಾಗಿ ನಿಭಾಯಿಸಿದ್ದರೆ ಕನ್ನಡ ಪ್ರೇಕ್ಷಕರಿಗೆ ಒಂದೊಳ್ಳೆ ಚಿತ್ರ ನೋಡಲು ಸಿಗೋದಂತೂ ಗ್ಯಾರೆಂಟಿ!