ಚಲನ ಚಿತ್ರಗಳು ಮಾಡೋ ಮೋಡಿಯೇ ವಿಚಿತ್ರವಾದದ್ದು. ಯಾವುದೋ ಚಿತ್ರದಲ್ಲಿನ ಪಾತ್ರಗಳನ್ನು ಅನುಕರಿಸಲು ನೋಡಿ ಜೀವ ಕಳೆದುಕೊಂಡವರ ಅನೇಕ ಉದಾಹರಣೆಗಳು ಸಿಗುತ್ತವೆ. ಆದರೆ ಇಂಥಾ ಅನುಕರಣೆಯನ್ನೇ ಅವಕಾಶದ ಹೆಬ್ಬಾಗಿಲಾಗಿಸಿಕೊಂಡ ಉದಾಹರಣೆಗಳು ಮಾತ್ರ ವಿರಳ. ಪಾಕಿಸ್ತಾನದ ಕರಾಚಿಯ ಮಹಮದ್ ಸಮೀರ್ ಎಂಬ ಹುಡುಗ ಇಂಥಾ ವಿರಳ ಉದಾಗರಣೆಗಳ ಸಾಲಿನಲ್ಲಿ ಒಬ್ಬನಾಗಿ ದಾಖಲಾಗಿದ್ದಾನೆ.
ಈ ಹುಡುಗನಿಗೆ ಈಗಿನ್ನೂ ಹದಿನಾಲಕ್ಕು ವರ್ಷ ವಯಸ್ಸು. ಈತ ತನ್ನ ತಲೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ತಿರುಗಿಸೋ ಕಲೆಯ ಮೂಲಕ ಜಗತ್ತಿನಾಧ್ಯಂತ ಸದ್ದು ಮಾಡಿದ್ದಾನೆ. ಇದಲ್ಲದೆ ಹಾಲಿವುಡ್ ಚಿತ್ರವೊಂದರಲ್ಲಿ ನಟಿಸೋ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾನೆ. ಸಾಮಾನ್ಯವಾಗಿ ಕತ್ತನ್ನು ಕೊಂಚ ಆಚೀಚೆ ತಿರುಗಿಸೋ ಸಾಹಸ ಮಾಡಿದರೂ ಉಳುಕಿ ನೋವಾಗುತ್ತೆ. ಆದರೆ ಈ ಹುಡುಗ ತನ್ನ ಕತ್ತನ್ನು ೧೮೦ ಡಿಗ್ರಿಗೆ ಸಲೀಸಾಗಿ ತಿರುಗಿಸುತ್ತಾನೆ. ಅಂದರೆ ಸಂಪೂರ್ಣವಾಗಿ ಬೆನ್ನಿನ ಮಧ್ಯ ಭಾಗಕ್ಕೆ ಮುಖ ತಿರುಗಿಸುತ್ತಾನೆ!
ಈತ ಇಂಥಾದ್ದೊಂದು ವಿಚಿತ್ರ ಅಭ್ಯಾಸ ಮಾಡಿಕೊಂಡಿದ್ದು ಹಾಲಿವುಡ್ನ ಹಾರರ್ ಚಿತ್ರಗಳನ್ನು ನೋಡಿಯಂತೆ. ಅದರಲ್ಲಿ ದೆವ್ವಗಳ ತಲೆ ಏಕಾಏಕಿ ಬೆನ್ನಿನತ್ತ ತಿರುಗಿಕೊಳ್ಳುತ್ತದಲ್ಲಾ? ಅದನ್ನು ಕಂಡು ಅದರಂತೆಯೇ ಮಾಡಲು ಪ್ರಯತ್ನಿಸಿದ ಸಮೀರ್ ಅದರಲ್ಲಿ ಯಶ ಕಂಡಿದ್ದಲ್ಲದೇ ಹಾಲಿವುಡ್ ಚಿತ್ರದಲ್ಲಿ ನಟಿಸೋ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾನೆ!