ಮೀನುಗಾರಿಕಾ ವೃತ್ತಿ ನಡೆಸುವವರನ್ನು ಕಡಲ ಮಕ್ಕಳೆಂದೇ ಕರೆಯೋದು ವಾಡಿಕೆ. ಆದರೆ ಕಡಲಿಗಿಳಿದವರು ಮತ್ತೆ ಸುರಕ್ಷಿತವಾಗಿ ಗೂಡು ಸೇರಿಕೊಳ್ಳುತ್ತಾರೆಂಬುದಕ್ಕೆ ಯಾವ ಗ್ಯಾರೆಂಟಿಯೂ ಇಲ್ಲ. ನಮ್ಮದೇ ದಕ್ಷಿಣ ಕನ್ನಡದ ಕರಾವಳಿ ತೀರದಲ್ಲಿ ನಾಪತ್ತೆಯಾದ ಅದೆಷ್ಟೋ ಮೀನುಗಾರರು ಇಂದಿಗೂ ಪತ್ತೆಯಾಗಿಲ್ಲ. ಅದು ಕಡಲ ಗರ್ಭದ ಕರಾಳ ನಿಗೂಢ. ಹೀಗೆ ಮೀನು ಹಿಡಿಯಲು ತೆರಳಿದವರ ಬದುಕಿನ ಬೆಚ್ಚಿ ಬೀಲಿಸೋ ಕಥನಗಳಿಗೆ, ದುರಂತಗಳಿಗೆ ಕೊನೆ ಮೊದಲಿಲ್ಲ. ಈಗ ಹೇಳ ಹೊರಟಿರೋದು ಅಂಥಾದ್ದೇ ಕಥೆ. ವಿಶೇಷವೆಂದರೆ, ಅದರ ಕ್ಲೈಮ್ಯಾಕ್ಸು ದುರಂತವಲ್ಲ.
ಕಣ್ಣು ಹಾಯಿಸಿದಷ್ಟೂ ದೂರ ನೀರಲ್ಲದೆ ಮತ್ತೇನೂ ಕಾಣಿಸದಂಥಾ ಕಡಲು. ಅದರ ನಡುವೆ ಬಿರುಗಾಳಿಗೆ ಸಿಕ್ಕು ಕೆಟ್ಟು ನಿಂತ ನಾವೆ. ಅದರೊಳಗೆ ಅದುವರೆಗಿನ ಶ್ರಮದ ಫಲವಾಗಿ ಗುಡ್ಡೆಬಿದ್ದ ಐದು ಕ್ವಿಂಟಾಲಿನಷ್ಟು ಮೀನಿನ ರಾಶಿ ಮತ್ತು ಅದರ ಇಕ್ಕೆಲದಲ್ಲಿ ಯಾವ ದಿಕ್ಕೂ ತೋಚದೆ ಕಂಗಾಲಾಗಿ ನಿಂತ ಎರಡು ಜೀವಗಳು… ಇವಿಷ್ಟು ವಿವರಗಳೇ ಅದೆಂಥಾ ಕಠೋರ ಕ್ಷಣಗಳೆಂಬುದನ್ನು ಯಾರಿಗಾದರೂ ಮನದಟ್ಟು ಮಾಡಿಸುತ್ತವೆ. ಅಂಥಾದ್ದೊಂದು ಘೋರ ಸ್ಥಿತಿಯಲ್ಲಿ ಸಮುದ್ರದ ನಡುವಲ್ಲಿ ತಿಂಗಳು ಕಳೆದಾಗಲೇ ಇಬ್ಬರಲ್ಲೊಬ್ಬ ಸತ್ತು ಮಲಗಿದರೆ, ಜೀವವಿರೋ ಒಬ್ಬನ ಪಾಡೇನಾಗ ಬೇಡ? ಅದು ಕಲ್ಪಿಸಿಕೊಳ್ಳಲೂ ಆಗದ ನರಕ.
ಬಹುಶಃ ಆತ್ಮಬಲ ಇಲ್ಲದ ಯಾರೇ ಆದರೂ ಅದಾಗಲೇ ಬೋರಲಾದ ಒಂದು ಹೆಣದ ಪಕ್ಕದಲ್ಲಿ ಮತ್ತೊಂದಾಗಿ ನಾಮಾವಶೇಷವಾಗೋದಕ್ಕಿಂತ ಬೇರ್ಯಾವ ದಾರಿಯೂ ಕಾಣಿಸೋದಿಲ್ಲ. ಆದರೆ ಆ ಮೀನುಗಾರ ಮಾತ್ರ ಮತ್ತೆ ತನ್ನವರನ್ನು ಸೇರಿಕೊಳ್ಳುವ ಆಸೆಯಿಂದ, ಹೇಗಾದರೂ ಈ ಪಾಪಿ ವಿಧಿಗೆದುರಾಗಿ ನಿಂತು ಜೀವ ಉಳಿಸಿಕೊಳ್ಳಬೇಕೆಂಬ ಛಲದಿಂದ ಜೀವವುಳಿಸಿಕೊಂಡಿದ್ದ. ಒಂದಲ್ಲ, ಎರಡಲ್ಲ; ಬರೋಬ್ಬರಿ ನಾನೂರಮೂವತ್ತೆಂಟು ದಿನಗಳ ಕಾಲ ನೀರ ರಾಶಿಯ ನಡುವೆ ಕೃಷ ದೋಣಿಯಲ್ಲಿ ಒಬ್ಬನೇ ದಿನಗಳೆದ. ಆತ ಜೋಸ್ ಸಾಲ್ವಡಾರ್ ಅಲ್ವಾರೆಂಗ!
ಹಾಗೆ ಫೆಸಿಫಿಕ್ ಮಹಾಸಾಗರದ ನಡುವಲ್ಲಿ ಅಚ್ಚರಿದಾಯಕ ಸಾಹಸ ನಡೆಸಿದ ಜೋಸ್ ಮೆಕ್ಷಿಕೋದವನು. ಮೂಲತಃ ಲೇಖಕನಾಗಿಯೂ ಹೆಸರು ಮಾಡಿದ್ದ ಜೋಸ್ ಬದುಕಿಗಾಗಿ ತನ್ನ ಕುಲ ಕಸುಬಾಗಿದ್ದ ಮೀನುಗಾರಿಕೆಯನ್ನೇ ನೆಚ್ಚಿಕೊಂಡಿದ್ದ. ಆಳ ಸಮುದ್ರದ ಮೀನುಗಾರಿಕೆಯಲ್ಲಿ ಪರಿಣತಿಯನ್ನೂ ಹೊಂದಿದ್ದ. ಇಂಥಾ ಜೋಸ್ ಪಾಲಿಗೆ ೨೦೧೨ರ ನವೆಂಬರ್ ೧೭ ಕರಾಳ ದಿನ. ಅಂದು ಮೂವತ್ತು ಗಂಟೆಗಳಷ್ಟು ಸುದೀರ್ಘಾವಧಿಯ ಆಳ ಸಮುದ್ರ ಮೀನುಗಾರಿಕೆಗಾಗಿ ಆತ ಹೊರಟಿದ್ದ. ಅವನ ಜೊತೆ ಮೀನುಗಾರಿಕೆಗೆ ಹೊಸಬನಾದ ಕಾರ್ಡೋಬಾ ಎಂಬಾತನೂ ಇದ್ದ. ಅದು ನೀಲಾಕಾಶವೂ ಕಾಣಿಸುವಂಥಾ ಫೈಬರ್ ಗ್ಲಾಸಿನ ಹೊದಿಕೆಯಿದ್ದ ಚೆಂದದ ಬೋಟು. ಅದರಲ್ಲಿ ಸಮುದ್ರದ ಬಹುದೂರ ತಲುಪಿಕೊಂಡು ಐದು ದಿನಗಳ ಕಾಲ ಮೀನುಗಾರಿಕೆ ನಡೆಸಿದ್ದ ಜೋಸ್ಗೆ ನಡು ಸಮುದ್ರದಲ್ಲಿ ಚಂಡಮಾರುತದ ಸ್ವರೂಪದಲ್ಲಿ ಆಘಾತ ಕಾದಿತ್ತು.
ಅನಿರೀಕ್ಷಿತವಾಗಿ ರಕ್ಕಸ ಮಾರುತ ಬಂದಪ್ಪಳಿಸಿದ್ದ ರೀತಿಗೆ ಹಡಗು ನಜ್ಜುಗುಜ್ಜಾಗಿ ಹೋಗಿತ್ತು. ಮೋಟಾರ್ ಸೇರಿದಂತೆ ಎಲ್ಲವೂ ಹಾಳಾಗಿ ಬೋಟು ಆಳ ಸಮುದ್ರದಲ್ಲಿ ಕೆಟ್ಟು ನಿಂತಿತ್ತು. ಬಿರುಗಾಳಿಯೆಲ್ಲ ತಣ್ಣಗಾಗುವ ಹೊತ್ತಿಗೆಲ್ಲ ದಿಕ್ಕೆಟ್ಟ ಬೋಟು ಎತ್ತತ್ತಲೋ ಚಲಿಸಿ ಮತ್ತೆಲ್ಲೋ ನೀಮತುಕೊಂಡಿತ್ತು. ಸುತ್ತ ನೋಡಿದರೆ ಭೂಮಿ ಯಾವ ದಿಕ್ಕಿಗಿದೆ ಅಂತಲೂ ಗೊತ್ತಾಗದ ಸ್ಥಿತಿ… ಅಲ್ಲಿಂದ ಭೂಮಿ ಮೇಲಿನ ಎಲ್ಲ ಸಂಪರ್ಕವೂ ಕಡಿತಗೊಂಡಿತ್ತು. ಬೋಟು ತುಂಬಿದ್ದ ಹಸಿ ಮೀನಿನ ಹೊರತಾಗಿ ಆಹಾರಕ್ಕೆ ಯಾವ ದಿಕ್ಕೂ ಇರಲಿಲ್ಲ. ಸಣ್ಣದೊಂದು ಮಿಣುಕು ದೀಪವೂ ಇಲ್ಲದೇ ರಾತ್ರಿ ಕಳೆಯುವ ಪರಿಸ್ಥಿತಿ.
ಒಂದೆರಡು ದಿನ ಹೇಗೋ ಕಳೆಯಿತು. ಆ ನಂತರದಲ್ಲಿ ಮೆಲ್ಲಗೆ ನರಕ ದರ್ಶನವಾಗಲಾರಂಭಿಸಿತ್ತು. ಸುತ್ತ ನೀರಿದ್ದರೂ ಬಾಯಾರಿದಾಗ ಹನಿ ನೀರೂ ಇಲ್ಲದ ಸ್ಥಿತಿ. ಕಡೆಗೆ ಜೋಸ್ ತನ್ನ ಸಹವರ್ತಿಯೊಂದಿಗೆ ಜೆಲ್ಲಿ ಫಿಶ್ ತಿಂದು ಆಮೆಯ ರಕ್ತವನ್ನು ಕುಡಿದು ಜೀವವುಳಿಸಿಕೊಳ್ಳಲು ಪ್ರಯತ್ನಿಸಿದ್ದ. ಆಮೆಯ ರಕ್ತ ಸಿಗದೇ ಹೋದಾಯ ಬಾಯಾರಿಕೆ ತಡೆಯಲಾಗದೆ ತನ್ನದೇ ಉಚ್ಚೆಯನ್ನೇ ಕುಡಿಯಬೇಕಾದ ದುಃಸ್ಥಿತಿಯೂ ಬಂದೊದಗಿ ಬಿಟ್ಟಿತ್ತು. ಹಾಗೆ ನಾಲಕ್ಕು ತಿಂಗಳು ಜೊತೆಗಾರ ಕಾರ್ಡೋಬಾನೊಂದಿಗೆ ಕಳೆದ ಜೋಸ್ಗೆ ಮತ್ತೊಂದು ಮಹಾ ಆಘಾತ ಎದುರಾಗಿತ್ತು. ಸರಿಯಾದ ಆಹಾರವಿಲ್ಲದೆ ಸೊರಗುತ್ತಿದ್ದ ಕಾರ್ಡೋಬಾ ಉಸಿರು ನಿಲ್ಲಿಸಿದ್ದ.
ಅದುವರೆಗೆ ಎಂಥಾ ಪರಿಸ್ಥಿತಿ ಬಂದರೂ ಜೊತೆಗೊಬ್ಬ ಇದ್ದಾನೆಂಬ ಧೈರ್ಯ ಜೋಸ್ಗಿತ್ತು. ಆತನೂ ಸತ್ತು ಮಲಗಿದಾಗ ಜೋಸ್ ಮಾನಸಿಕ ಸ್ಥಿಮಿತ ಕಳೆದುಕೊಂಡಂತಾಗಿದ್ದ. ಹೆಚ್ಚೂಕಮ್ಮಿ ಒಂದು ವಾರ ಜೊತೆಗಾರನ ಹೆಣವನ್ನು ಮಗ್ಗುಲಲ್ಲಿಟ್ಟುಕೊಂಡು ಭೋರಿಟ್ಟು ಅತ್ತಿದ್ದ. ಕಡೆಗೂ ಭಾರವಾದ ಮನಸಿನಿಂದಲೇ ಅನಿವಾರ್ಯವಾಗಿ ಹೆಣವನ್ನು ಸಮುದ್ರಕ್ಕೆಸೆದವನ ಮುಂದೆ ದುರ್ಭರ ಒಂಟಿತನದ ಹೊರತಾಗಿ ಬೇರೇನೂ ಕಾಣಿಸುತ್ತಿರಲಿಲ್ಲ. ಹಾಗೆ ಎಲ್ಲ ದಾರಿಗಳೂ ಮುಚ್ಚಿಕೊಂಡಾಗ ಆತನಿಗೆ ಬದುಕೋ ಆಸೆ ತೀವ್ರವಾಗಿತ್ತು. ಅದೆಷ್ಟೋ ತಿಂಗಳ ನಂತರ ಹೇಗೋ ಬೋಟನ್ನು ತಕ್ಕಮಟ್ಟಿಗೆ ರಿಪೇರಿ ಮಾಡಿಕೊಂಡು ಮನಬಂದತ್ತ ಚಲಿಸಲಾರಂಭಿಸಿದ್ದ.
ಅದೇನು ಕಡಿಮೆ ಯಾನವಲ್ಲ. ನಾನೂರ ಮೂವತ್ತೆರಡು ದಿನಗಳ ಕಾಲವೂ ಅದು ಮುಂದುವರೆದಿತ್ತು. ಇನ್ನೇನು ತನಗೂ ಸಾವೇ ಗತಿ ಎಂಬಂಥಾ ನಿರಾಸೆ ಕವಿದ ಘಳಿಗೆಯಲ್ಲಿ, ನಾನೂರಾ ಮೂವತ್ತೆರಡನೇ ದಿನ ಅವನ ಕಣ್ಣ ಮುಂದೆ ಅಚ್ಚರಿಗಳು ಹಾದು ಹೋಗಲಾರಂಭಿಸಿದ್ದವು. ಕಣ್ಣಳತೆಯಲ್ಲಿಯೇ ಪರ್ವತಗಳು ಕಾಣರಂಭಿಸಿದ್ದವು. ಅದುವರೆಗೂ ಮೀನುಗಾರಿಕೆಯಲ್ಲಿ ಭಾರೀ ಅನುಭವ ಹೊಂದಿದ್ದ ಜೋಸ್ಗೆ ತಾನು ಮಾರ್ಷಲ್ ಐಲ್ಯಾಂಡ್ಸ್ ಸರಹದ್ದಿನಲ್ಲಿದ್ದೇನೆಂಬ ಅರಿವಾಗಲಾರಂಭಿಸಿತ್ತು.
ಕಡೆಗೂ ಆತ ನಾನೂರ ಮೂವತ್ತೆರಡು ದಿನಗಳ ನಂತರ, ೨೦೧೪ರ ಒಂದು ದಿನ ನೆಲದ ಮೇಲೆ ಕಾಲಿಟ್ಟಿದ್ದ. ಒಂದಷ್ಟು ಕಾಲ ಆ ಬೀಚಿನ ಮೇಲೆ ನಿತ್ರಾಣವಾಗಿ ನಡೆದು ಕಣ್ಣು ಮಂಜಾಗಿ ಅಲ್ಲಿಯೇ ಕುಸಿದು ಬಿದ್ದಿದ್ದ ಜೋಸ್ ಅದೇ ಪ್ರದೇಶದಲ್ಲಿ ವಾಸವಿದ್ದ ಮೀನುಗಾರ ಜೋಡಿಯ ಕಣ್ಣಿಗೆ ಬಿದ್ದಿದ್ದ. ಆ ದಂಪತಿ ತಮ್ಮ ಜೋಪಡಿಗೆ ಜೋಸ್ನನ್ನು ಕರೆದೊಯ್ದು ಉಪಚಾರ ಮಾಡಿದ್ದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರು. ನಂತರ ಜೋಸ್ನನ್ನು ಅಧಿಕಾರಿಗಳು ಮನೆಗೆ ತಲುಪಿಸಿದ್ದರು. ಕಡೆಗೂ ಜೋಸ್ ಹದಿನಾಲಕ್ಕು ತಿಂಗಳ ರೌರವ ನರಕವನ್ನು ಜಯಿಸಿಕೊಂಡು ತನ್ನ ಮಡದಿ ಮಕ್ಕಳು ಮತ್ತು ಹೆತ್ತವರನ್ನು ಸೇರಿಕೊಂಡಿದ್ದಾನೆ.