ಸುಡುವ ಮರಳಿನ ಮೇಲೂ ಹರಡಿಕೊಂಡ ಹಿಮ!
ಮರುಭೂಮಿ ಎಂಬ ಹೆಸರು ಕೇಳಿದೇಟಿಗೆ ಎದೆಯೆಲ್ಲ ಬಿಸಿಲು ತುಂಬಿಕೊಂಡು ಬಾಯಾರಿದಂಥಾ ಫೀಲ್ ಹುಟ್ಟೋದು ಸಹಜ. ಎತ್ತಲಿಂದ ಯಾವ ದಿಕ್ಕಿನತ್ತ ಕಣ್ಣು ಹಾಯಿಸಿದರೂ ಮರಳು ರಾಶಿ ಬಿಟ್ಟರೆ ಬೇರೇನೂ ಇಲ್ಲದ ಇಂಥಾ ಮರುಭೂಮಿಯಲ್ಲಿ ಮಳೆ ಬೀಳಬೇಕೆಂಬುದು ರೊಮ್ಯಾಂಟಿಕ್ ಕಲ್ಪನೆ. ಇದೀಗ ಇಡೀ ವಿಶ್ವದಲ್ಲೇ ದೊಡ್ಡ ಮರುಭೂಮಿ ಎಂಬ ಖ್ಯಾತಿ ಹೊಂದಿರೋ ಸಹಾರಾದಲ್ಲಿ ಅಂಥಾ ರೊಮ್ಯಾಂಟಿಕ್ ಕಲ್ಪನೆಯೂ ನಿಜವಾಗಿದೆ. ಇದೀಗ ಸಹರಾ ಮೈ ತುಂಬಾ ಹಿಮ ಹೊದ್ದುಕೊಂಡು ಅಕ್ಷರಶಃ ಹಿಮಾಲಯದಂತೆ ಕಂಗೊಳಿಸುತ್ತಿದೆ!
ಭೂಮಿಯಿಂದೆದ್ದ ಹಬೆ ಮರಳ ಕಣಗಳನ್ನೂ ಬಿಸಿ ಮಾಡುವಂಥಾ ವಾತಾವರಣವಿರೋ ಸಹಾರಾ ಮರುಭೂಮಿಯಲ್ಲಿ ಹಿಮ ನಿಲ್ಲೋದು ಹೇಗೆ ಸಾಧ್ಯ ಎಂಬ ಅಚ್ಚರಿ ಕಾಡೋದು ಸಹಜ. ಆದರೆ ಇಂಥಾದ್ದೊಂದು ಆಘಾತಕಾರಿ ಬೆಳವಣಿಗೆ ಸಹಾರಾ ಮರುಭೂಮಿಯಲ್ಲಿ ಕಾಣಿಸಲು ಶುರುವಾದದ್ದಕ್ಕೆ ಇದು ಮೂರನೇ ವರ್ಷ. ೨೦೧೬ರಲ್ಲಿಯೇ ಮೊದಲ ಸಲ ಚಳಿಗಾಲದಲ್ಲಿ ಬೆಳಗ್ಗೆ ಇಡೀ ಮರುಭೂಮಿಯ ತುಂಬಾ ಹಿಮ ಹರಡಿಕೊಂಡು ಅಲ್ಲಿನ ಜನ ಬೆಚ್ಚಿ ಬಿದ್ದಿದ್ದರು!
ಅದಾದ ಮಾರನೇ ವರ್ಷವೂ ಚಳಿಗಾಲದಲ್ಲಿ ಇದೇ ರೀತಿ ಮರುಭೂಮಿ ಮಂಜಿನ ಹೊಕೆಯಲ್ಲಿ ಕಂಗೊಳಿಸಿತ್ತು. ಇದೀಗ ಈ ವರ್ಷ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಹಾರಾ ಮರುಭೂಮಿಗೆ ಮಂಜಿನ ಹೊದಿಕೆ ಬಿದ್ದಿದೆ. ಇದೀಗ ಸಹಾರಾ ಇದು ಹಿಮಾಲಯವೇನೋ ಎಂಬ ಫೀಲ್ ಹುಟ್ಟಿಸುವಂತೆ ಬೆಳಗಿನ ಸಂದರ್ಭದಲ್ಲಿ ಹಿಮದಿಂದ ಆವೃತವಾಗಿದೆ. ದಿನಾ ಬೆಳಗ್ಗೆ ಹದಿನಾರು ಇಂಚಿನಷ್ಟು ಹಿಮ ಬೀಳುತ್ತದೆ ಎಂದರೆ ಸಹಾರಾದ ಪ್ರಸ್ತುತ ವಾತಾವರಣ ಹೇಗಿರ ಬಹುದೆಂದು ಯಾರಿಗಾದರೂ ಅಂದಾಜು ಸಿಗುತ್ತದೆ.
ಈಗ್ಗೆ ೩೯ ವರ್ಷಗಳ ಹಿಂದೆ ಅಲ್ಜೀರಿಯಾದ ಮರುಭೂಮಿಯೊಂದರಲ್ಲಿ ಹೀಗೆಯೇ ಹಿಮ ಬಿದ್ದಿತ್ತಂತೆ. ಆದರೆ ಅದು ಆ ನಂತರದಲ್ಲಿ ಪುನರಾವರ್ತನೆಯಾಗಿರಲಿಲ್ಲ. ಆದರೆ ಸಹಾರಾದಲ್ಲಿ ಮಾತ್ರ ೨೦೧೬ರಿಂದ ಈ ವರ್ಷದ ತನಕ ಪ್ರತೀ ಚಳಿ ಗಾಲದಲ್ಲಿಯೂ ತಪ್ಪದೇ ಹಿಮ ಬೀಳುತ್ತಿದೆ. ಅದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರೋದು ವಿಶೇಷ.
ಇದು ಜಾಗತಿಕವಾಗಿ ಹವಮಾನ ಏರಿಳಿತವಾಗಿದ್ದರಿಂದ ಆಗುತ್ತಿರೋ ವಿಸ್ಮಯ. ವಾತಾವರಣವೆಂಬುದು ವಿಶ್ವಾಧ್ಯಂತ ಕಲುಷಿತವಾಗುತ್ತಿದೆ. ಅದರ ಪರಿಣಾವಾಗಿ ಖುತುಮಾನಗಳೇ ಏರುಪೇರಾಗುತ್ತಿವೆ. ಇದು ಹೀಗೆಯೇ ಮುಂದುವರೆದರೆ ಮುಂದೆಂದೋ ಮರುಭೂಮಿಯಲ್ಲಿ ಮಳೆಯಾಗಿ ಮಿಕ್ಕ ಭೂಪ್ರದೇಶಗಳೆಲ್ಲವೂ ಮರಳುಗಾಡಾದರೂ ಆದೀತು!