ಉನ್ನತ ಹುದ್ದೆಗೇರಿದವಳಿಗೆ ಬೀದಿಯೇ ಮನೆಯಾಗಿತ್ತು!
ಸಣ್ಣದೊಂದು ಅವಮಾನವಾಗುತ್ತೆ… ನಾವು ಅದರೆದುರು ಅದಾಗ ತಾನೇ ಕಣ್ಣು ಬಿಟ್ಟ ಪುಟ್ಟ ಬೆಕ್ಕಿನಂತೆ ಮುದುರಿಕೊಳ್ತೀವಿ. ಎಲ್ಲಿ ಸೋಲೆದುರಾಗುತ್ತೋ ಅನ್ನೋ ಭಯವೇ ಒಂದಷ್ಟು ಗೆಲುವುಗಳನ್ನ ಆರಂಭದಲ್ಲೇ ಹೊಸಕಿ ಹಾಕುತ್ತೆ. ನಮಗೆಲ್ಲ ನಮ್ಮ ಬಲಹೀನತೆಗಳನ್ನ ಬಚ್ಚಿಟ್ಟುಕೊಳ್ಳೋದಕ್ಕೆ ಸಾವಿರ ಕಾರಣಗಳು ಸಿಗುತ್ವೆ. ಈ ಕಾರಣಗಳಿಂದಲೇ ಗೆಲುವೆಂಬುದು ಸಾವಿರ ಗಾವುದ ದೂರ ನಿಂತು ಬಿಟ್ಟಿದೆ ಅನ್ನೋ ವಾಸ್ತವವನ್ನ ಮರೆ ಮಾಚೋದೂ ಸಹ ಸಲೀಸು ನಮಗೆ. ನಮ್ಮ ಉತ್ಸಾಹ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಹುಲ್ಲಿನ ಬಣವೆಯಂತೆ ಧಗಧಗಿಸುತ್ತೆ. ಕ್ಷಣಾರ್ಧದಲ್ಲಿಯೇ ಬೂದಿ ಮಾತ್ರವೇ ಎದುರಿಗುಳಿಯುತ್ತೆ. ಇಂಥಾ ಮನಸ್ಥಿತಿಗಳಿಗೆ ನಾಚಿಕೆಯಾಗುವಂಥ, ಎಂಥವರನ್ನೂ ಬಡಿದೆಬ್ಬಿಸಿ ಸಾಧನೆಯತ್ತ ಮುನ್ನುಗ್ಗುವಂತೆ ಮಾಡುವಂಥ ಒಂದಷ್ಟು ಸತ್ಯ ಘಟನೆಗಳು ನಮ್ಮ ನಡುವಲ್ಲಿವೆ. ಅಂಥಾ ಅಪರೂಪದ ಒಂದಷ್ಟು ವ್ಯಕ್ತಿತ್ವಗಳೂ ಇದ್ದಾವೆ. ಇದೀಗ ಹೇಳ ಹೊರಟಿರೋದು ರೂಬಿ ಅನ್ನೋ ಅಚ್ಚರಿದಾಯಕ ಹೆಣ್ಣುಮಗಳೊಬ್ಬಳ ಸಾಧನೆಯ ಬಗ್ಗೆ…
ಆಕೆ ರೂಬಿ ಮಲಿಕ್. ಈವತ್ತಿಗೆ ಇಡೀ ದೇಶವೇ ಈ ಹುಡುಗಿ ಏರಿದ ಎತ್ತರ ಕಂಡು ಬೆರಗಾಗುತ್ತಿದೆ. ಇಂಟರೆಸ್ಟಿಂಗ್ ವಿಷ್ಯ ಅಂದ್ರೆ ಹೀಗೆ ಜನ ಆಶ್ಚರ್ಯಚಕಿತರಾಗಿರೋದಕ್ಕೆ ಕಾರಣವಾಗಿರೋದು ರೂಬಿ ಎದ್ದು ಬಂದಿರೋ ಪಾತಾಳ. ಈ ಸ್ಟೋರಿಯನ್ನ ಕಂಪ್ಲೀಟಾಗಿ ಕೇಳಿದ್ರೆ ನಿಮಗೂ ಕೂಡಾ ಈ ಮಾತು ಅತಿಶಯ ಅನ್ನಿಸಲಿಕ್ಕಿಲ್ಲ. ರೂಬಿ ಜಾರ್ಖಂಡ್ ರಾಜ್ಯದ ಸಿವಿಲ್ ಜ್ಯೂನಿಯರ್ ಜಡ್ಜ್ ಆಗಿ ಆಯ್ಕೆಯಾಗಿದ್ದಾರೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶೆಯರಾಗೋ ಮಹಿಳೆಯರ ಸಂಖ್ಯೆ ಕಡಿಮೆ. ಆ ಹಾದಿಯಲ್ಲಿ ಜಾರ್ಖಂಡ್ ಒಂದಷ್ಟು ಬದಲಾವಣೆಯ ಹಾದಿಯಲ್ಲಿದೆ. ಹರ್ಯಾಣಾದ ಈ ಹುಡುಗಿ ರೂಬಿ ಜಾರ್ಖಂಡ್ನಲ್ಲಿ ನ್ಯಾಯಾಧೀಶೆಯಾಗೋ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾಳೆ.
ರೂಬಿಯ ಬದುಕು ಬೇರು ಬಿಟ್ಟುಕೊಂಡಿದ್ದ ಪಾತಾಳ ಮತ್ತು ಆಕೆ ಇಂದು ಏರಿರೋ ಎತ್ತರ ಒಂದಕ್ಕೊಂದು ತಾಳೆಯಾಗುವಂಥಾದ್ದಲ್ಲ. ಸುಮ್ಮನೆ ಕೇಳಿಸಿಕೊಂಡರೆ ಸಿನಿಮ್ಯಾಟಿಕ್ ಅನ್ನಿಸಿ ಬಿಡುವಂಥಾ ಅಪರೂಪದ ಕಥಾನಕವಿದು. ಇಲ್ಲಿನ ದಾರ ನೇಯುವ ಬಡ ಕುಟುಂಬದಲ್ಲಿ ಹುಟ್ಟಿದ್ದವರು ರೂಬಿ. ಬಡತನವನ್ನು ಬೆನ್ನಿಗೆ ಕಟ್ಟಿಕೊಂಡಂತೆ ಹುಟ್ಟಿದ್ದ ರೂಬಿ ಕಣ್ಣು ಬಿಡುತ್ತಲೇ ಸಂಕಟಗಳು ಸುತ್ತಿಕೊಳ್ಳಲಾರಂಭಿಸಿದ್ವು. ತೀರಾ ಎಳೇ ವಯಸ್ಸಿನಲ್ಲಿಯೇ ತಂದೆಯೂ ಇಲ್ಲವಾಗಿದ್ದರು. ಹೇಳಿ ಕೇಳಿ ಅವರು ವಾಸವಿದ್ದದ್ದು ಕೊಳಚೆ ಪ್ರದೇಶವೊಂದರಲ್ಲಿ. ಸಣ್ಣಗೊಂದು ಮಳೆ, ಸುಮ್ಮನೊಂದು ಗಾಳಿ ಬೀಸಿದರೂ ಉದುರಿಕೊಳ್ಳುವಂಥ ಜೋಪಡಿಯೇ ಅವರ ಬದುಕಿಗಿದ್ದ ಆಸರೆ. ಪಾರಂಪರಿಕವಾಗಿ ಬಂದ ದಾರ ನೇಯುವ ಕಾಯಕವೊಂದೇ ತುತ್ತಿನ ಮೂಲ.
ಇಂಥಾ ಕಡುಗಷ್ಟದಲ್ಲಿಯೂ ರೂಬಿಯ ಅಮ್ಮ ಸಂಸಾರವನ್ನ ಸಂಭಾಳಿಸಿದ್ರು. ಎಳೇ ವಯಸ್ಸಿನಿಂದಲೇ ಓದಿನಲ್ಲಿ ಮುಂದಿದ್ದ ರೂಬಿ ಆಗಿನಿಂದಲೇ ಒಂದಷ್ಟು ಕೆಲಸ ಕಾರ್ಯ ಮಾಡಿ ಅಮ್ಮನಿಗೆ ನೆರವಾಗುತ್ತಿದ್ದಳು. ಆ ಬಲದಿಂದಲೇ ಚೆಂದಗೆ ಓದುತ್ತಾ ಸಾಗಿ ಬಂದ ಆಕೆಗೆ ಲಾಯರ್ ಆಗಬೇಕನ್ನೋ ಕನಸಿತ್ತು. ಕಡೆಗೂ ಕಷ್ಟಪಟ್ಟು ಎಲ್ಎಲ್ಬಿ ಮಾಡಿಕೊಂಡಿದ್ದ ರೂಬಿಗೆ ನ್ಯಾಯಾಧೀಶೆಯಾಗೋ ಕನಸೂ ಚಿಗುರಿಕೊಂಡಿತ್ತು. ಮನೆಯಲ್ಲಿ ಕಿತ್ತು ತಿನ್ನೋ ಬಡತನವಿದ್ದರೂ ಅದಕ್ಕಾಗಿ ತಯಾರಿ ನಡೆಸಲಾರಂಭಿಸಿದ್ಲು. ವಠಾರದ ಗೌಜಿನಿಂದ ದೂರ ಬಂದು ಫುಟ್ಪಾತಿನಲ್ಲಿಯೇ ಓದಲಾರಂಭಿಸಿದ್ದಳು. ಕಡೆಗೂ ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಜಾರ್ಖಂಡ್ನ ಜ್ಯೂನಿಯರ್ ಜಡ್ಜ್ ಎಕ್ಸಾಮ್ಗೆ ರೆಡಿಯಾಗಲಾರಂಭಿಸಿದ್ಲು. ಆದ್ರೆ ಇನ್ನೇನು ಪರೀಕ್ಷೆ ಹತ್ತಿರದಲ್ಲಿಯೇ ಇದೆ ಅನ್ನೋವಾಗ್ಲೇ ಎದುರಾಗಿದ್ದದ್ದು ಮರ್ಮಾಘಾತ.
ಹರ್ಯಾಣದ ಸ್ಲಂನಲ್ಲಿ ರೂಬಿ ಸಂಸಾರ ವಾಸವಾಗಿತ್ತಲ್ಲಾ? ಏಕಾಏಕಿ ಸರ್ಕಾರ ಆ ಸ್ಲಂ ಮನೆಗಳನ್ನೆಲ್ಲ ನೆಲಸಮ ಮಾಡಿ ಬಿಟ್ಟಿತ್ತು. ರೂಬಿಯ ಪುಟ್ಟ ಗುಡಿಸಲೂ ಕೂಡಾ ಇಲ್ಲವಾಗಿತ್ತು. ಇನ್ನೇನು ಕೆಲವೇ ದಿನಗಳು ಮಾತ್ರವೇ ಪರೀಕ್ಷೆಗೆ ಉಳಿದುಕೊಂಡಿತ್ತು. ಅಷ್ಟರಲ್ಲಿಯೇ ಸೂರಿಗೂ ದಿಕ್ಕಿಲ್ಲದ ಪರಿಸ್ಥಿತಿ ಬಂದೊದಗಿತ್ತು. ಅಂಥಾ ಸ್ಥಿತಿಯಲ್ಲಿ ಯಾರೇ ಆಗಿದ್ರೂ ಪರೀಕ್ಷೆಯ ಆಸೆಯನ್ನೇ ಕೈ ಬಿಡುತ್ತಿದ್ರೇನೋ. ಆದ್ರೆ ಗಟ್ಟಿಗಿತ್ತು ರೂಬಿ ಮಾತ್ರ ಮತ್ತದೇ ಫುಟ್ಪಾತುಗಳಲ್ಲಿ ವ್ಯಾಸಂಗ ಮಾಡಲಾರಂಭಿಸಿದ್ಲು. ಅದೆಷ್ಟೋ ದಿನ ಫುಟ್ಪಾತಲ್ಲಿಯೆ ಅಮ್ಮ ಮತ್ತು ಸಹೋದರನನ್ನು ಅವುಚಿಕೊಂಡು ಮಲಗಿ ಕಳೆದಿದ್ಲು. ಅದೇ ಸ್ಥಿತಿಯಲ್ಲಿ ಸೀದಾ ಹೋಗಿ ಎಕ್ಸಾಂ ಬರೆದು ಆಯ್ಕೆಯಾಗಿದ್ಲು. ಈ ಹುಡುಗಿ ಹೀಗೆ ಬಡತನದ ಪಾತಳಿಯಿಂದ ಆಕಾಶದೆತ್ತರಕ್ಕೆ ಜಿಗಿದ ಪರಿ ಕಂಡು ಎಲ್ಲರೂ ಶಹಬ್ಬಾಸ್ ಅನ್ನುತ್ತಿದ್ದಾರೆ.
ಇದು ಯಾರೇ ಆದ್ರೂ ಶಹಬ್ಬಾಸ್ ಅನ್ನಲೇಬೇಕಾದ ಸಾಧನೆ. ಯಾಕಂದ್ರೆ ಎಲ್ಲ ಸವಲತ್ತುಗಳಿದ್ರೂ ಇಂಥಾ ಸಾಧನೆ ಮಾಡೋದು ಅಸಾಧ್ಯ. ಆದ್ರೆ ಬದುಕು ನೆತ್ತಿ ಮೇಲಿನ ಮುರುಕು ಸೂರನ್ನು ಕಿತ್ತುಕೊಂಡರೂ, ಫುಟ್ಪಾತಿಗೆ ಬಿದ್ದರೂ ಎದ್ದು ನಿಂತು ಗೆದ್ದ ರೂಬಿ ಎಲ್ಲರಿಗೂ ಸ್ಫೂರ್ತಿ. ಈವತ್ತಿಗೂ ಆಕೆಯ ಕುಟುಂಬ ಮುರುಕು ಜೋಪಡಿಯಲ್ಲಿಯೇ ಇದೆ. ಅದಾಗಲೇ ರೂಬಿ ನ್ಯಾಯಾಧೀಶೆಯಾಗಿ ಛಾರ್ಜ್ ತೆಗೆದುಕೊಂಡಿದ್ದಾರೆ. ಬದುಕನ್ನು ಸರಿಪಡಿಸಿಕೊಳ್ಳುತ್ತಲೇ ಇಡೀ ವ್ಯವಸ್ಥೆಯನ್ನು ನ್ಯಾಯಮುಖಿಯಾಗಿಸೋ ಕನಸು ರೂಬಿಯದ್ದಾಗಿದೆ. ಈಕೆಯ ಕಥೆ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸದ್ದು ಮಾಡ್ತಿದೆ. ನಿಜಕ್ಕೂ ರೂಬಿಯಂಥಾ ಛಲಗಾರರು ಈ ನೆಲದ ನಿಜವಾದ ಆಸ್ತಿ.