ಕಾಂತಾರ ಬಂದ ನಂತರ ಹಠಾತ್ ಹವಾಮಾನ ಬದಲಾವಣೆ!
ಇಲ್ಲಿ ಯಾವುದೂ ಶಾಶ್ವತವಲ್ಲ. ಸೋಲಿನಿಂದ ಕಂಗೆಟ್ಟು ನಿಂತವರಿಗೂ ಕೂಡಾ ಸತತ ಪ್ರಯತ್ನಕ್ಕೊಂದು ಗೆಲುವು ಒಲಿಯುತ್ತೆ. ಸಿಕ್ಕ ಗೆಲುವೊಂದನ್ನು ನೆತ್ತಿಗೇರಿಸಿಕೊಂಡು ಮೆರೆಯಲು ನಿಂತರೆ ಹೀನಾಯ ಸೋಲೊಂದು ಬಡಿಗೆಯೇಟು ಕೊಡುತ್ತೆ. ಹಾಗೆ ದಕ್ಕಿದ ಒಂದು ಗೆಲುವನ್ನು ಮುದ್ದುಮಾಡಿ, ಮೆರೆದು, ವಾಸ್ತವಕ್ಕೆ ಮರಳೋದರೊಳಗಾಗಿ ಸೋಲೆಂಬುದು ಹೆಬ್ಬಾಗಿಲ ಬಳಿಯೇ ಬಂದು ನಿಲ್ಲುತ್ತೆ. ಅದಕ್ಕಾಗಿಯೇ ಗೆಲುವನ್ನು ಮ್ಯಾನೇಜು ಮಾಡೋದೂ ಒಂದು ಕಲೆ ಅಂತ ತಿಳಿದವರು ಹೇಳಿದ್ದಾರೇನೋ… ದುರಂತವೆಂದರೆ, ಗಾಢ ಬೆಳಕಿನ ಪ್ರಭೆಯಲ್ಲಿ ಮೈಮರೆಯೋ ಸಿನಿಮಾ ಜಗತ್ತಿನ ಪ್ರಬೃತ್ತಿಗಳಿಗೆ ಈ ವಾಸ್ತವ ಅರಿವಾಗೋದೇ ಇಲ್ಲ. ಸೋಲಿನ ಶೀತಲ ಹಸ್ತ ಬೆನ್ನು ಸವರೋವರೆಗೂ ಮೆರೆದಾಡುತ್ತಾರೆ. ಗೆದ್ದಷ್ಟೇ ವೇಗವಾಗಿ ಪಾತಾಳ ಕಾಣುತ್ತಾರೆ. ಇಷ್ಟನ್ನೆಲ್ಲ ಈ ಕ್ಷಣದಲ್ಲಿ ಹೇಳಲು ಕಾರಣವಾಗಿರೋದು ನಮ್ಮದೇ ಕನ್ನಡ ಚಿತ್ರರಂಗದ ಈವತ್ತಿನ ವಾತಾವರಣ!
ನೀವೆಲ್ಲ ಮರೆತಿರಲಿಕ್ಕಿಲ್ಲ; ಕೆಜಿಎಫ್ ಎಂಬೊಂದು ಚಿತ್ರ ಅದೆಂಥಾ ದಾಖಲೆ ಬರೆಯಿತೆಂಬ ರೋಚಕ ವಿದ್ಯಮಾನವನ್ನ. ಆರಂಭದಲ್ಲಿ ಕಾಡಿಬೇಡಿ ಸೀರಿಯಲ್ಲುಗಳಲ್ಲಿ ನಟಿಸುತ್ತಿದ್ದ, ಕಡುಗಷ್ಟದಿಂದಲೇ ಚಿತ್ರರಂಗದಲ್ಲಿ ನಾಯಕನಾಗಿದ್ದ ಯಶ್ ಎಂಬ ಹುಡುಗ ಕೆಜಿಎಫ್ ಮೂಲಕ ಪ್ಯಾನಿಂಡಿಯಾ ಸ್ಟಾರ್ ಆಗಿಬಿಟ್ಟಿದ್ದ. ಅದು ನಿಜಕ್ಕೂ ರೋಮಾಂಚಕ ಗೆಲುವು. ಕನ್ನಡ ಚಿತ್ರರಂಗ ಲಕ್ಷ, ಕೋಟಿಗಳ ಬಜೆಟ್ಟಿಗೇ ಏದುಸಿರು ಬಿಡುತ್ತಿದ್ದಾಗ, ಮರಳಿ ಸಿಕ್ಕ ಒಂದಷ್ಟು ಬಾಬತ್ತನ್ನೇ ಹಣೆಗೊತ್ತಿಕೊಂಡು ತೃಪ್ತಿಪಡುತ್ತಿದ್ದಾಗ, ನೂರಾರು ಕೋಟಿ ವಹಿವಾಟಿನ ರುಚಿ ತೋರಿಸಿದ್ದದ್ದು ಇದೇ ಕೆಜಿಎಫ್. ಹೀಗೊಂದು ಅಭೂತಪೂರ್ವ ಯಶಸ್ಸು ಸಿಕ್ಕುತ್ತಲೇ ಸಹಜವಾಗೆಂಬಂತೆ ಯಶ್ ವರ್ತನೆಯಲ್ಲಿ ಬದಲಾವಣೆಗಳಾಗಿದ್ದವು. ಅಂಥಾ ಮಹಾ ಗೆಲುವಿನ ಮುಂದೆ ಅದೆಲ್ಲವೂ ಗೌಣವೆಂದೇ ಅನ್ನಿಸಿದ್ದು ಸುಳ್ಳೇನಲ್ಲ.
ಆ ನಂತರದಲ್ಲಿ ಕೆಜಿಎಫ್ನಂಥಾ ಸಿನಿಮಾವನ್ನು ಪ್ಯಾನಿಂಡಿಯಾ ಮಟ್ಟಕ್ಕೆ ಕೊಂಡೊಯ್ಯೋ ಛಾತಿ ಇರೋದು ತನಗೊಬ್ಬನಿಗೇ ಅಂತ ಯಶ್ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಅದಕ್ಕೆ ಸರಿಯಾಗಿ ಬೇರ್ಯಾವ ಸ್ಟಾರ್ಗಳೂ ಪ್ಯಾನಿಂಡಿಯಾ ಮಟ್ಟದಲ್ಲಿ ಮಿರುಗುವ ಪ್ರಯತ್ನ ಮಾಡಲಿಲ್ಲ. ಇತ್ತೀಚೆಗೆ ಬಂದಿದ್ದ ವಿಕ್ರಾಂತ್ ರೋಣ ಅಂಥಾದ್ದೊಂದು ನಿರೀಕ್ಷೆ ಮೂಡಿಸಿದ್ದದ್ದು ನಿಜ. ಈಗಾಗಲೇ ದೇಶವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರೋ ಸುದೀಪ್ಗೆ ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಸದ್ದು ಮಾಡೋದು ದೊಡ್ಡ ವಿಚಾರವೇನಲ್ಲ. ಆದರೆ ಅದಕ್ಕೆ ಬೇಕಾದ ಕಥೆ, ನಿರ್ದೇಶನವೆಲ್ಲ ಸಿಕ್ಕಬೇಕಷ್ಟೇ. ಅದು ವಿಕ್ರಾಂತ್ ರೋಣನ ರೂಪದಲ್ಲಿ ಸಾಧ್ಯವಾಗುತ್ತೆ ಅಂತಲೇ ಬಹುತೇಕರು ಅಂದುಕೊಂಡಿದ್ದರು. ಆದರೆ ನಿರ್ದೇಶಕ ಅನೂಪ್ ಭಂಡಾರಿ ಮಾಡಿದ್ದೇ ಬೇರೆ. ರಂಗಿತರಂಗದ ಡಾರ್ಕ್ ವರ್ಷನ್ನಿನಂತೆ ವಿಕ್ರಾಂತ್ ರೋಣನನ್ನು ರೂಪಿಸಿಬಿಟ್ಟಿದ್ದರು. ಆ ಚಿತ್ರ ಕರ್ನಾಟಕದಲ್ಲೇ ಬರಖತ್ತಾಗಲು ಸಾಧ್ಯವಾಗಲಿಲ್ಲ.
ಯಾವಾಗ, ಯಾವ ಸಿನಿಮಾಗಳೂ ಪ್ಯಾನಿಂಡಿಯಾ ಮಟ್ಟದಲ್ಲಿ ರೀಚ್ ಆಗಲು ಸಾಧ್ಯವಾಗಿಲ್ಲವೋ, ಆವಾಗ ರಾಕಿಭಾಯ್ ತಾನೇ ಕಿಂಗು ಅಂದುಕೊಂಡಿರಲಿಕ್ಕೂ ಸಾಕು. ಆದರೆ, ಈ ನಡುವೆ ಸದ್ದೇ ಇಲ್ಲದಂತೆ ರಿಶಭ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ರೆಡಿಯಾಗಿ ನಿಂತಿತ್ತು. ಆರಂಭಿಕವಾಗಿ ಕೇವಲ ಕರ್ನಾಟಕದಲ್ಲಿ ಮಾತ್ರವೇ ಬಿಡುಗಡೆಯಾಗಿದ್ದ ಕಾಂತಾರ, ಈವತ್ತಿಗೆ ಪ್ಯಾನಿಂಡಿಯಾ ಸಿನಿಮಾವಾಗಿಬಿಟ್ಟಿದೆ. ಎಲ್ಲ ಭಾಷೆಗಳಲ್ಲಿಯೂ ಅದನ್ನು ನೋಡಿದ ಮಂದಿ ಥ್ರಿಲ್ ಆಗಿದ್ದಾರೆ. ಹಾಗೆ ನೋಡಿದರೆ, ಕೆಜಿಎಫ್ಗೆ ಸಿಕ್ಕ ಪ್ರತಿಕ್ರಿಯೆಗಿಂತಲೂ ಕಾಂತಾರದ ಅಬ್ಬರ ಜೋರಾಗಿದೆ. ಇಲ್ಲಿ ಮತ್ತೊಂದು ವಿಚಾರವನ್ನು ಹೇಳಲೇಬೇಕು. ಡೊಡ್ಡ ಬಜೆಟ್ಟಿನ ಚಿತ್ರ ಮಾತ್ರವೇ ಪ್ಯಾನಿಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತೆ ಅನ್ನೋದೆಲ್ಲ ಭ್ರಮೆ. ಅದನ್ನು ಕಾಂತಾರ ಸಾಬೀತು ಮಾಡಿದೆ. ಸಿಕ್ಕ ಸೀಮಿತ ಬಜೆಟ್ಟಿನಲ್ಲಿಯೇ ರೂಪುಗೊಂಡ ಗಟ್ಟಿ ಕಂಟೆಂಟು ಸದ್ದು ಮಾಡಿದೆಯಷ್ಟೇ!
ಹವಾಮಾನವೆಂಬುದು ಹೀಗೆ ಹಠಾತ್ತಾಗಿ ಬದಲಾಗುತ್ತಲೇ, ಯಶ್ ಅದೇಕೋ ಮೌನ ತಾಳಿದಂತಿದೆ. ದೇಶಾದ್ಯಂತ ಸ್ಟಾರುಗಳು ಮೆಚ್ಚಿಕೊಳ್ಳುತ್ತಿರೋ ಕಾಂತಾರದ ಬಗ್ಗೆಯೂ ಅವರು ತುಟಿಬಿಚ್ಚಿಲ್ಲ. ಅವರೇಕೆ ಕಾಂತಾರದ ಬಗ್ಗೆ ಮಾತಾಡಿಲ್ಲ ಅಂತ ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿಯಾಗುತ್ತಿದೆ. ಹಾಗಾದರೆ, ಯಶ್ ಮುಂದಿನ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರಾ ಅಂತ ನೋಡ ಹೋದರೆ, ಆ ಬಗ್ಗೆ ಅವರಲ್ಲಿಯೇ ಗೊಂದಲವಿದ್ದಂತಿದೆ. ಯಾಕಂದ್ರೆ, ಕೆಜಿಎಫ್ ಗೆಲುವನ್ನು ಕಾಯ್ದುಕೊಂಡು ಹೋಗೋ ದರ್ದು ಅವರ ಮುಂದಿದೆ. ರಿಶಭ್ ಶೆಟ್ಟಿ ಸಣ್ಣ ಬಜೆಟ್ಟಿನ ಸಿನಿಮಾದಲ್ಲಿಯೇ ಸದ್ದು ಮಾಡಿದ ಪರಿ ಕಂಡು, ರಾಕಿ ಭಾಯ್ ಒಳಗೆ ಢವಢವ ಆರಂಭವಾಗಿರಲೂ ಬಹುದು.
ಸಿನಿಮಾ ಡೈಲಾಗುಗಳ ಮೂಲಕವೇ ಇತರೇ ಸ್ಟಾರ್ಗಳಿಗೆ ಟಾಂಗ್ ಕೊಡುತ್ತಾ ನಂದೇ ಹವಾ ಅಂತ ಎದೆ ಬಡಿದುಕೊಂಡಿದ್ದಾತ ಯಶ್. ಇದೀಗ ಅದೇ ಯಶ್ ಮುಂದೆ ಮುಂದೇನು ಎಂಬ ಪ್ರಶ್ನೆಯೊಂದು ಅಂಗಾತ ಮಲಗಿದಂತಿದೆ. ಕೆಜಿಎಫ್ ಅವತರಣಿಕೆಗಳಲ್ಲಿ ಯಶ್ ಮೆರೆದಾಡಿದ್ದು ನಿಜ. ದೇಶಾದ್ಯಂತ ಆತನನ್ನು ಜನ ಒಪ್ಪಿಕೊಂಡಿದ್ದೂ ನಿಜ. ಹಾಗಂತ ಮುಂದೆಯೂ ಕೆಜಿಎಫ್ ಸರಣಿಯನ್ನ ಮುಂದುವರೆಸಿದರೆ ಬಚಾವಾಗೋದು ಕಷ್ಟವಿದೆ. ಕಾಂತಾರ ಬಂದ ನಂತರ ಅದು ಮತ್ತಷ್ಟು ಸ್ಪಷ್ಟವಾಗಿದೆ. ಡಾರ್ಕ್ ಶೇಡಿನಲ್ಲೇ ಆಟವಾಡುತ್ತಾ ಸಾಗುತ್ತಿರುವ ಪ್ರಶಾಂತ್ ನೀಲ್ ಕೂಡಾ ಇದೀಗ ಕೊಂಚ ಅದುರಿದಂತಿದೆ. ನಿಷ್ಠುರವಾಗಿ ಹೇಳಬೇಕೆಂದರೆ, ಇನ್ನೊಂದು ಭಾಗದಲ್ಲೇನಾದರೂ ಕೆಜಿಎಫ್ ಬಂದರೆ, ಜನ ಬೋರೆದ್ದು ಹೋಗುತ್ತಾರೆ. ಒಂದು ಮೂಲದ ಪ್ರಕಾರ ಯಶ್ ಕೆಜಿಎಫ್ ಮೂರನೇ ಅಧ್ಯಾಯವನ್ನು ನಂಬಿ ಕೂತಿದ್ದರು. ಆದರೀಗ ಅದೂ ಮಂಕಾಗಿದೆ. ಯಾಕೆಂದರೆ; ಹಠಾತ್ತನೆ ಚಿತ್ರರಂಗದಲ್ಲಿ ಹವಾಮಾನ ಬದಲಾವಣೆಯಾಗಿದೆ!