ರಶ್ಮಿಕಾ ಮಂದಣ್ಣ ಮತ್ತು ಶೆಟ್ಟಿ ಗ್ಯಾಂಗಿನ ನಡುವೆ ಎಲ್ಲವೂ ಹಳಸಿಕೊಂಡಿದೆ ಎಂಬುದೀಗ ಖುಲ್ಲಂಖುಲ್ಲ ಜಾಹೀರಾಗಿದೆ. ಯಾವಾಗ ರಶ್ಮಿಕಾ ಹತ್ತಿದ ಏಣಿಯನ್ನೇ ಒದೆಯೋ ಚಾಳಿ ಆರಂಭಿಸಿದಳೋ, ಆಗಿನಿಂದಲೇ ಕನ್ನಡಿಗರು ಕೂಡಾ ಆಕೆಯ ಮೇಲಿಟ್ಟಿದ್ದ ಪ್ರೀತ್ಯಾಭಿಮಾನಗಳನ್ನು ಮರೆಯಲಾರಂಭಿಸಿದ್ದಾರೆ. ಆದರೆ, ಪರಭಾಷೆಗಳಲ್ಲಿನ ಗೆಲುವನ್ನೇ ಕೊಂಬಾಗಿಸಿಕೊಂಡಿರುವ ರಶ್ಮಿಕಾ ಮಾತ್ರ ಮತ್ತೆ ಮತ್ತೆ ತಿಮಿರು ಪ್ರದರ್ಶಿಸುತ್ತಲೇ ಇದ್ದಾಳೆ.
ರಶ್ಮಿಕಾ ಈಗ ಯಾವ ಎತ್ತರಕ್ಕೇರಿದರೂ ಅದಕ್ಕೆಲ್ಲ ಕಾರಣವಾಗಿರೋದು ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಎಂಬುದು ನಿರ್ವಿವಾದ. ಈ ಚಿತ್ರದಲ್ಲಿ ತನಗೆ ಅಚಾನಕ್ಕಾಗಿ ಅವಕಾಶ ಸಿಕ್ಕ ಬಗ್ಗೆ ಖುದ್ದು ರಶ್ಮಿಕಾಳೇ ರಂಗು ರಂಗಾಗಿ ಹೇಳಿಕೊಂಡಿದ್ದಳು. ಆದರೀಗ ಆಕೆ ತನ್ನ ಮೊದಲ ಸಿನಿಮಾದ ಬಗೆಗಾಗಾಗಲಿ, ಅವಕಾಶ ಕೊಟ್ಟ ರಕ್ಷಿತ್ ಮತ್ತು ರಿಷಬ್ ಶೆಟ್ಟಿ ಬಗೆಗಾಗಲಿ ಯಾವ ಸಂದರ್ಶನಗಳಲ್ಲಿಯೂ ಮಾತಾಡುತ್ತಿಲ್ಲ.
ಕಾಂತಾರ ವಿಚಾರದಲ್ಲಿಯೂ ದೌಲತ್ತು ತೋರಿಸಿದ್ದ ರಶ್ಮಿಕಾಗೀಗ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದಾರೆ. ಪರಭಾಷಾ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ರಶ್ಮಿಕಾ, ಸಮಂತಾ ಮುಂತಾದವರ ಫೋಟೋ ತೋರಿಸಿ, ಇದರಲ್ಲಿ ಯಾವ ನಟಿಯರ ಜೊತೆ ನಟಿಸಲು ಇಷ್ಟ ಪಡುತ್ತೀರೆಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಕೂಡಲೆ ಉತ್ತರಿಸಿದ ರಿಷಬ್ ರಶ್ಮಿಕಾಳಂಥಾ ನಟಿಯರು ತಮಗಿಷ್ಟವಾಗೋದಿಲ್ಲ ಅನ್ನೋದನ್ನ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. ಇದು ರಶ್ಮಿಕಾ ವಿರುದ್ಧದ ಟ್ರೋಲುಗಳಿಗೆ ಹೊಸಾ ಕಂಟೆಂಟು ಒದಗಿಸಿದೆ!