ಬಾಲಿವುಡ್ನ ಸ್ಟಾರ್ ನಟರ ಸಾಲಿನಲ್ಲಿ ರಣ್ಬೀರ್ ಕಪೂರ್ ಹೆಸರು ಕೂಡಾ ನಿರ್ಣಾಯಕವಾಗಿ ದಾಖಲಾಗುತ್ತದೆ. ಈವರೆಗೂ ಸಾಕಷ್ಟು ಚಿತ್ರಗಳಲ್ಲಿ ನಾನಾ ಪಾತ್ರ ನಿರ್ವಹಿಸಿರುವ ಆತ ದೇಶಾದ್ಯಂತ ತನ್ನದೇ ಆದ ಅಭಿಮಾನಿ ವರ್ಗವನ್ನೂ ಸಂಪಾದಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟಿ ಆಲಿಯಾಳನ್ನು ಮದುವೆಯಾಗಿ ಒಂದು ಮಗುವಿನ ಅಪ್ಪನೂ ಆಗಿರುವ ರಣ್ಬೀರ್ ಇದೀಗ ತನ್ನೊಳಗಿನ ವಿಚಿತ್ರವಾದ ಆಸೆಯೊಂದರ ಬಗ್ಗೆ ಬಹಿರಂಗವಾಗಿ ಮಾತಾಡಿದ್ದಾರೆ. ಅದರನ್ವಯ ಹೇಳುವುದಾದರೆ ಜೀವನದಲ್ಲಿ ಒಂದೇ ಒಂದು ಸಾರಿಯಾದರೂ ಭಯಾನಕ ಛಾಯೆಯಿರುವಂಥಾ ವಿಲನ್ ಪಾತ್ರ ಮಾಡಬೇಕೆಂಬುದು ರಣ್ಬೀರ್ ಕಪೂರ್ ಜೀವಮಾನದ ಆಸೆಯಂತೆ.
ಈ ಬಗ್ಗೆ ಆತ ಸಂದರ್ಶನವೊಂದರಲ್ಲಿ ಒಂದಷ್ಟು ಲವಲವಿಕೆ, ಉತ್ಸಾಹದಿಂದಲೇ ಮಾತಾಡಿದ್ದಾರೆ. ಜೀವನದಲ್ಲಿ ಒಂದು ಬಾರಿಯಾದರೂ ವಿಲನ್ ಪಾತ್ರವನ್ನು ಮಾಡಲೇ ಬೇಕು. ಅದು ಅಂತಿಂಥ ಪಾತ್ರವಾಗಿರಬಾರದು; ಸದಾ ಕಾಲವೂ ಅದು ನೋಡುಗರಲ್ಲಿ ನಡುಕ ಹುಟ್ಟಿಸಬೇಕು. ಅದರ ಪ್ರಭಾವ ಹೇಗಿರಬೇಕೆಂದರೆ, ಮಕ್ಕಳು ರಚ್ಚೆ ಹಿಡಿದಾಗ ಭಾರತೀಯ ತಾಯಂದಿರು ರಣಬೀರ್ ಮಾಮಾ ಬರ್ತಾನೆ ಅಂತ ಹೆದರಿಸುವಂತಿರಬೇಕೆಂಬುದು ರಣ್ಬೀರ್ ಅಭಿಲಾಶೆಯಂತೆ. ಈತನ ಈ ಅಭಿಪ್ರಾಯಕ್ಕೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಒಳ್ಳೆ ಅಭಿಪ್ರಾಯಗಳು ಹರಿದು ಬರುತ್ತಿವೆ.
ಸಾಮಾನ್ಯವಾಗಿ ಒಂದು ಹಂತಕ್ಕೇರಿದ ನಾಯಕ ನಟರು ತಮ್ಮ ಹೀರೋಗಿರಿಯಿಂದ ಆಚೀಚೆ ಹೊರಳಿಕೊಳ್ಳಲು ಇಚ್ಛಿಸೋದಿಲ್ಲ. ಇಮೇಜು ಮಣ್ಣು ಮಸಿ ಅಂತೆಲ್ಲ ಹೊಸಾ ಪಾತ್ರ, ಸಾಧ್ಯತೆಗಳಿಗೆ ಒಡ್ಡಿಕೊಳ್ಳೋದನ್ನೇ ನಿಲ್ಲಿಸಿ ಜಡವಾಗಿ ಬಿಡುತ್ತಾರೆ. ಒಂದೇ ಥರದ ಬಿಲ್ಡಪ್ ಪಾತ್ರಗಳಿಗೆ ಮಾತ್ರವೇ ಸೀಮಿತವಾಗಿ ಕಳೆದು ಹೋಗುತ್ತಾರೆ. ಅದರ ನಡುವೆ ಎಲ್ಲೋ ಹೀಗೊಂದಷ್ಟು ಮಂದಿ ಹೀರೋಗಿರಿಯಾಚೆಗಿನ ಪಾತ್ರಗಳಿಗೆ ಹಂಬಲಿಸುತ್ತಾರೆ, ಧ್ಯಾನಿಸುತ್ತಾರೆ. ಇದೀಗ ರಣ್ಬೀರ್ ವಿಲನ್ ಪಾತ್ರದ ಬಗ್ಗೆ ಒಲವು ತೋರಿರೋದರಿಂದ ಮುಂದಿನ ದಿನಗಳಲ್ಲಿ ಆತನಿಗಾಗಿ ಅಂಥಾದ್ದೇ ಪಾತ್ರಗಳು ಸೃಷ್ಟಿಯಾಗೋ ಸಾಧ್ಯತೆಗಳಿದ್ದಾವೆ.