ರಮೇಶ್ ಅರವಿಂದ್ ಸಾರಥ್ಯದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಆವೃತ್ತಿ ಶುರುವಾಗಿದೆ. ಕಳೆದ ಸೀಜನ್ನಿನ ಒಂದಷ್ಟು ಅಧ್ವಾನಗಳನ್ನು ಕಂಡಿದ್ದವರಿಗೆಲ್ಲ ಈ ಶೋನ ಮೇಲೆ ಹೇಳಿಕೊಳ್ಳುವಂಥಾ ಮೋಹ ಉಳಿದುಕೊಂಡಿರಲಿಲ್ಲ. ರಮೇಶ್ ಅರವಿಂದ್ ಆ ಕಾರ್ಯಕ್ರಮ ನಡೆಸಿ ಕೊಡುವ ರೀತಿ, ಸಾಧಕರೆನ್ನಿಸಿಕೊಂಡವರ ಬದುಕಿನ ಸೂಕ್ಷ್ಮಗಳನ್ನು ಕಲೆ ಹಾಕಿ ಅವರನ್ನೇ ಅಚ್ಚರಿಗೀಡು ಮಾಡುವ ಕಸುಬುದಾರಿಕೆಗಳೆಲ್ಲ ಒಂದಷ್ಟು ಆಕರ್ಷಣೆ ಉಳಿಸಿಕೊಂಡಿದ್ದದ್ದು ನಿಜ. ಝೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ ಈ ಬಾರಿ ಅದೇನೋ ಹೊಸತನ ತುಂಬಿರುತ್ತಾರೆ, ಈ ಕಾರ್ಯಕ್ರಮ ಮತ್ತೊಂದಷ್ಟು ಹೊಳಪುಗಟ್ಟಿಕೊಂಡು ಬರುತ್ತದೆಂಬಂಥಾ ಕೃಶವಾದ ನಿರೀಕ್ಷೆಗಳೂ ಇದ್ದವು. ಇದೆಲ್ಲದರ ಒಡ್ಡೋಲಗದಲ್ಲೀಗ ವೀಕೆಂಡ್ ವಿತ್ ರಮೇಶ್ ಶುರುವಾಗಿದೆ. ಆರಂಭದ ಎಪಿಸೋಡಿಗೆ ಪ್ರೇಕ್ಷಕರ ಮುನಿಸು ಮುತ್ತಿಕೊಂಡಿದೆ!
ಈ ಕಾರ್ಯಕ್ರಮವನ್ನು ಪ್ರೀತಿಯಿಂದ ನೋಡುವ ಪ್ರೇಕ್ಷಕರಲ್ಲಿಯೇ ಇಂಥಾದ್ದೊಂದು ಮುನಿಸು ಮಡುಗಟ್ಟಿಕೊಳ್ಳಲು ಪ್ರಧಾನ ಕಾರಣವಾಗಿರುವಾಕೆ ಪುರಾತನ ನಟಿ ರಮ್ಯಾ. ನಟಿಸಿರೋದು ಸಲೀಸಾಗಿ ಲೆಕ್ಕವಿಟ್ಟುಕೊಳ್ಳುವಷ್ಟೇ ಚಿತ್ರಗಳಲ್ಲಾದರೂ, ಈಕೆ ಸಂಪಾದಿಸಿಕೊಂಡ ಅಭಿಮಾನಿ ಬಳಗ ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಬಹುಶಃ ಕನ್ನಡ ಮಟ್ಟಿಗೆ ನಟಿಯೊಬ್ಬಳು ಸೃಷ್ಟಿಸಿದ ದಾಖಲೆಯದು. ಈವತ್ತಿಗೆ ರಮ್ಯಾ ರಾಜಕಾರಣಿಯಾಗಿ ಬದಲಾಗಿದ್ದಾರೆ. ಒಂದು ಪಕ್ಷದಲ್ಲಿ ಅಧಿಕೃತವಾಗಿ ಗುರುತಿಸಿಕೊಂಡಿದ್ದಾರೆ. ಈ ಭೂಮಿಕೆಯಲ್ಲಿ ಒಂದು ವರ್ಷ ಆಕೆಯನ್ನು ಶತಾಯಗತಾಯ ವಿರೋಧಿಸುತ್ತಿದೆ; ಸಮಯ ಸಿಕ್ಕಾಗೆಲ್ಲ ಶಕ್ತ್ಯಾನುಸಾರ ಹಳಿಯುತ್ತಿದೆ. ಹಾಗೆ ವಿರೋಧಿಸಲೇಬೇಕೆಂದು ಟೊಂಕ ಕಟ್ಟಿ ನಿಂತವರೊಳಗೂ ಒಂದು ಅಭಿಮಾನದ ಛಳುಕು ಜಾಗೃತವಾಗಿರುವಂತೆ ನೋಡಿಕೊಂಡಿರುವಾಕೆ ರಮ್ಯಾ!
ಇಂಥಾ ರಮ್ಯ ಇದೀಗ ವೀಕೆಂಡ್ ವಿತ್ ರಮೇಶ್ ಶೋನ ಐದನೇ ಆವೃತ್ತಿಯ ಮೊದಲ ಅತಿಥಿಯಾಗಿದ್ದಾರೆ. ಆ ಭಾಗದ ಕಾರ್ಯಕ್ರಮ ಕೂಡಾ ಪ್ರಸಾರವಾಗಿದೆ. ಈಕೆ ಮೊದಲ ಅತಿಥಿ ಎಂಬ ವಿಚಾರ ಜಾಹೀರಾದಾಕ್ಷಣ ಯಾವ ಪ್ರೇಕ್ಷಕರು ಖುಷಿಗೊಂಡಿದ್ದರೋ, ಅದೇ ಮಂದಿ ಕಾರ್ಯಕ್ರಮ ನೋಡಿ ನಖಶಿಖಾಂತ ಕೋಪಗೊಂಡಿದ್ದಾರೆ. ಅದಕ್ಕೆ ಕಾರಣವಾಗಿರೋದು ಸಾಧಕರ ಸೀಟಿನಲ್ಲಿ ಕುಕ್ಕರಿಸಿದ್ದ ರಮ್ಯಾ ಕಡೆಯಿಂದ ಕಾಣಿಸಿಕೊಂಡಿದ್ದ ತಿರ್ಕೆ ದೌಲತ್ತು ಮತ್ತು ಆಕೆಯ ಅಗಾಧ ಇಂಗ್ಲಿಂಷ್ ವ್ಯಾಮೋಹ. ಅಷ್ಟಕ್ಕೂ ಈವತ್ತಿಗೆ ರಮ್ಯಾ ಏನೇ ಆಗಿದ್ದರೂ, ಯಾವ ಎತ್ತರಕ್ಕೆ ತಲುಪಿಕೊಂಡಿದ್ದರೂ ಅದಕ್ಕೆ ಮೂಲ ಕಾರಣ ಕರ್ನಾಟಕ ಮತ್ತು ಕನ್ನಡಿಗರೇ. ರಮ್ಯಾ ನಟಿಯಾಗಿ ಮೆರೆದಿದ್ದರ ಹಿಂದೆ ಕನ್ನಡತನದ ಋಣವಿದೆ. ಕನ್ನಡಿಗರೆಲ್ಲರು ಮನದುಂಬಿ ಹಾರೈಸಿ, ಪ್ರೋತ್ಸಾಹಿಸಿದ್ದರಿಂದಲೇ ಆಕೆ ಇಂದು ಸಾಧಕರ ಸೀಟಿನಲ್ಲಿ ಕೂತು ಮೆರೆಯುವಂತೆ ಮಾಡಿದೆ.
ಇಂಥಾ ಅಗಾಧ ಪ್ರೀತಿಯನ್ನು ಹಾಸಿ ಹೊದ್ದು ಸಾಧಕರ ಸೀಟೇರಿ ಕೂತ ರಮ್ಯಾಳ ಮಾತು, ವರ್ತನೆಗಳಲ್ಲಿ ಆ ಋಣ ಭಾರದ ಲವಲೇಶವೂ ಕಾಣಿಸಿಲ್ಲ. ಅಮೆರಿಕದಲ್ಲಿ ಹುಟ್ಟಿ, ಅಲ್ಲೇ ಬೆಳೆದು ಸೀದಾ ಸಾಧಕರ ಸೀಟಿಗೆ ಧೊಪ್ಪನೆ ಉದುರಿಕೊಂಡಿದ್ದಾಳೇನೋ ಎಂಬಂತೆ ರಮ್ಯಾ ತಿರ್ಕೆ ದೌಲತ್ತು ಪ್ರದರ್ಶಿಸಿದ್ದಾಳೆ. ಕಾಲ ಮೇಲೆ ಕಾಲು ಹಾಕಿಕೊಂಡೇ ಕಾರ್ಯಕ್ರಮ ಮುಗಿಸಿಕೊಂಡಿದ್ದಾಳೆ. ಇರಲಿ, ರಮ್ಯಾ ತನ್ನ ಸ್ವಂತ ಕಾಲ ಮೇಲೆ ತನ್ನದೇ ಕಾಲು ಹಾಕಿ ಕುಂತರೆ ತಪ್ಪೇನು ಅಂತೊಂದು ವಾದ ಮೂಡಿಕೊಳ್ಳಬಹುದು. ಅವಳದ್ದೇ ಕಾಲು, ರಾಘವೇಂದ್ರ ಹುಣಸೂರನ ಕೆಂಪು ಚೇರು… ಅದರ ಕಥೆ ಹಾಳು ಬಿದ್ದು ಹೋಗಲಿ. ನೆಟ್ಟಗೆ ಕನ್ನಡ ಮಾತಾಡಲು ಈಕೆಗೇನು ರೋಗ? ಹಾಗಂತ ಪ್ರೇಕ್ಷಕರೇ ಆಕ್ರೋಶಗೊಂಡು ಪ್ರಶ್ನಿಸುತ್ತಿದ್ದಾರೆ!
ಯಾವ್ಯಾವ ಭಾಷೆಯಿಂದ ಬಂದ ನಟಿಯರೂ ಕೂಡಾ ಕನ್ನಡಿಗರ ಪ್ರೀತಿಯನ್ನು ಸ್ಮರಿಸುತ್ತಾರೆ. ಕಷ್ಟಪಟ್ಟು ಕನ್ನಡ ಕಲಿತು ಮಾತಾಡುತ್ತಾರೆ. ಕೆಲವರಂತೂ ಕನ್ನಡದಲ್ಲಿಯೇ ಶುಭಾಶಯ ಕೋರುವ, ಅಭಿಪ್ರಾಯ ಹಂಚಿಕೊಳ್ಳುವ ಅಭಿಮಾನವನ್ನೂ ಪ್ರದರ್ಶಿಸುತ್ತಾರೆ. ಹಾಗಿರುವಾಗ, ಕನ್ನಡದ ಹುಡುಗಿ ರಮ್ಯಾಗೆ ನೆಟ್ಟಗೆ ಕನ್ನಡ ಮಾತಾಡಲೇನು ನೋವಿದೆಯೋ ಭಗವಂತನೇ ಬಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಂತೂ ಆಕೆ ಇಂಗ್ಲಿಷಿನಲ್ಲಿಯೇ ಪುಂಗಿದ್ದಾಳೆ. ನಡುವಲ್ಲೊಂದಿಷ್ಟು ಕನ್ನಡ ಪದಗಳನ್ನು ಉಸುರಿದ್ದಾಳೆ. ಇದು ತಿರ್ಕೆ ದೌಲತ್ತಲ್ಲದೆ ಬೇರೇನೂ ಅಲ್ಲ. ರಮ್ಯಾ ತನ್ನನ್ನು ತಾನು ಮಹಾನ್ ಸಾಧಕಿ ಅಂದುಕೊಂಡಿರಬಹುದು. ಹೋದಲ್ಲಿ ಬಂದಲ್ಲಿ ಆಕೆಗೆ ಬಿಲ್ಡಪ್ಪುಗಳೂ ಸಿಗುತ್ತಿರಬಹುದು. ಅದೆಲ್ಲವೂ ಕನ್ನಡಿಗರು ನೀಡಿದ ಪ್ರೀತಿಯ ಭಿಕ್ಷೆ ಎಂಬ ಖಬರಿದ್ದರೆ ಒಳಿತು!